More

    ನಿಜಬೆಳಕು ತೋರಿದ ಮಹಾಜ್ಞಾನಿ ಬುದ್ಧ; ಇಂದು ಬುದ್ಧ ಪೂರ್ಣಿಮೆ

    | ಡಾ.ಸಂತೋಷ ಹಾನಗಲ್ಲ

    ಜಗತ್ತಿಗೆ ಕರುಣೆ ಮತ್ತು ಶಾಂತಿಯನ್ನು ತೋರಿದವ ಗೌತಮ ಬುದ್ಧ. ವೈಶಾಖ ಮಾಸದ ಹುಣ್ಣಿಮೆ ದಿನವೇ ಬುದ್ಧ ಜಯಂತಿ. ಸಿದ್ದಾರ್ಥ ಬುದ್ಧನಾಗಿದ್ದು ಇದೇ ದಿನ. ಸಿದ್ದಾರ್ಥ ಹುಟ್ಟಿದ್ದೂ ಇದೇ ದಿನ. ವೇದಕಾಲದ ಚಲನಶೀಲವಾದ ವರ್ಣವ್ಯವಸ್ಥೆ ಕಾಲಾನಂತರದಲ್ಲಿ ಜಡಗಟ್ಟಿತು. ಅದು ಕ್ರಮೇಣ ಸಂಘರ್ಷಕ್ಕೆ ನಾಂದಿಯಾಯಿತು. ಸ್ಪರ್ಶ- ಅಸ್ಪರ್ಶ

    ಭಾವನೆಗಳು ಬಲವಾಗಿ ಬೇರೂರಿದ್ದವು. ಇಂತಹ ಸಮಯ ದಲ್ಲಿ 2500 ವರ್ಷಗಳ ಹಿಂದೆ ಮನುಕುಲದ ಉದ್ಧಾರಕ್ಕಾಗಿ ಮಾನವಮೂರ್ತಿ ಮೈದಾಳಿತು. ಆತನೇ ಗೌತಮ ಬುದ್ಧ.

    ಆಚರಣೆ: ಬುದ್ಧ ಪೂರ್ಣಿಮೆ ದಿನ ಭಕ್ತರು ಬೌದ್ಧ ದೇವಾಲಯಗಳಿಗೆ ಭೇಟಿ ನೀಡಿ ಭಗವಾನ್ ಬುದ್ಧನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ (ಈ ಬಾರಿ ಕರೊನಾ ಕಾರಣದಿಂದ ಮನೆಗಳಲ್ಲೇ ಸೀಮಿತ ಆಚರಣೆ). ಮತ್ತು ಅಗತ್ಯ ಇರುವವರಿಗೆ ದಾನ ಮಾಡುತ್ತಾರೆ. ಕೆಲವು ಭಕ್ತರು ಉಪವಾಸವನ್ನೂ ಆಚರಿಸುತ್ತಾರೆ. ಜೊತೆಗೆ ಧ್ಯಾನ ಮಾಡುತ್ತಾರೆ. ಮತ್ತು ಪವಿತ್ರ ಗ್ರಂಥವನ್ನು ಓದುತ್ತಾರೆ.

    ನಿಜದ ಬೆಳಕಿಗಾಗಿ ಹಂಬಲ: ಬುದ್ಧ ಪೂರ್ಣಿಮಾ ಯಶಸ್ಸಿಗೆ ಉತ್ತಮ ದಾರಿಗಳೆಂದರೆ ಸರಿಯಾದ ತಿಳಿವಳಿಕೆ, ಚಿಂತನೆ, ಕ್ರಿಯೆ, ಮಾತು, ಮನಸ್ಸು, ಜೀವನೋಪಾಯ, ಪ್ರಯತ್ನ ಹಾಗೂ ಏಕಾಗ್ರತೆ. ಸಿದ್ದಾರ್ಥ ಎಲ್ಲವನ್ನೂ ಪಡೆದುಕೊಂಡಿದ್ದರೂ ಅವುಗಳನ್ನು ಲೆಕ್ಕಿಸದೆ ದುಃಖ ನಿವಾರಣೆಯನ್ನೇ ಗುರಿಯಾಗಿಟ್ಟುಕೊಂಡು ಎಲ್ಲವನ್ನೂ ತೊರೆದು, ನಿಜದ ಬೆಳಕಿಗಾಗಿ ಹಂಬಲಿಸಿ ಅಡಿಯಿಟ್ಟವನು. ಬೆಳಕನ್ನು ಕಂಡುಕೊಂಡು ಬೆಳಕಾಗಿ ಇಂದಿಗೂ ಮನುಕುಲವನ್ನು ಬೆಳಗುತ್ತಿದ್ದಾನೆ. ತನ್ನ ಧ್ಯೇಯದಲ್ಲಿ ಅಪಾರ ಶ್ರದ್ಧೆ, ಶಕ್ತಿಯಲ್ಲಿ ವಿಶ್ವಾಸ ಮತ್ತು ದೃಢಚಿತ್ತವನ್ನು ಸಂಪಾದಿಸಿದ. ಭಯಕ್ಕೆ ಕಾರಣಗಳು ಅಕುಶಲ ಕರ್ಮಗಳಾದ ದುಷ್ಟವಾಕ್ಯ, ಅಶುದ್ಧವಾದ ಮನಸ್ಸು ಎಂದು ಬೋಧಿಸತ್ವನಿಗೆ ಮನವರಿಕೆಯಾಯಿತು.

    ಜ್ಞಾನೋದಯದ ಪರಿ: ಅಂದು ವೈಶಾಖ ಶುದ್ಧ ಪೂರ್ಣಿಮೆ. ಬೋಧಿಸತ್ವ ನೈರಂಜರಾ ನದಿ ಪಕ್ಕದ ಅರಳಿಮರದ ಅಡಿಯಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದ. ಪರಿಶುದ್ಧವಾದ ಮನಸ್ಸು, ಧ್ಯಾನಮಾರ್ಗದಿಂದ ದೇಹದ ಬಯಕೆಗಳನ್ನಷ್ಟೇ ಅಲ್ಲದೆ ಮನಸ್ಸಿನಲ್ಲಿ ಏಳಬಹುದಾದ ಎಲ್ಲ ಬಗೆಯ ವಾಸನೆಗಳನ್ನು, ವಿವಿಧ ಬಗೆಯ ಆನಂದಗಳನ್ನು ಗೆದ್ದಿದ್ದ. ಪರಿಣಾಮ ಸತ್ಯವನ್ನು ಸ್ಪಷ್ಟವಾಗಿ ಕಂಡು ಅನುಭವಿಸಲು ಸಾಧ್ಯವಾಯಿತು. ಇದೇ ದುಃಖ ನಿರೋಧ ಎಂಬುದು ಆ ಮಹಾಚೇತನದ ಅರಿವಿಗೆ ಬಂತು. ಅದೊಂದು ಅಪೂರ್ವ ಅನುಭವ. ಆ ಅನುಭವ, ಆನಂದ ಅವನದೇ. ಅಸಾಧಾರಣ ಮಹಾಜ್ಯೋತಿಯೊಂದು ಎದೆಯಲ್ಲಿ ಬೆಳಗಿ ಬಾಳಿನ ಸತ್ಯವನ್ನು ಸ್ಪಷ್ಟವಾಗಿ ತೋರಿಸಿತು. ಅದೇ ‘ಬೋಧಿ’. ಬೋಧಿಯನ್ನು ಪಡೆದ ಸಿದ್ದಾರ್ಥ ಗೌತಮ ಬುದ್ಧನಾದ. ತಾನು ಪಡೆದ ಜ್ಞಾನ, ಅನುಭವಗಳನ್ನೂ ಸಹಜೀವಿ ಗಳೊಂದಿಗೆ ಹಂಚಿಕೊಳ್ಳಲು ಬುದ್ಧ ಜನರ ಬಳಿಗೆ ನಡೆದ.

    ‘ನಾನು ಹೇಳಿದೆ ಎಂಬ ಒಂದೇ ಕಾರಣಕ್ಕೆ ನನ್ನ ಮಾತುಗಳನ್ನು ನಂಬಬೇಡಿ. ಒರೆಗೆ ಹಚ್ಚಿ ಚಿನ್ನವೋ ಅಲ್ಲವೋ ಎಂದು ಪರೀಕ್ಷಿಸಿ. ಒಪ್ಪುವಂತೆ ನಿಮ್ಮ ಮತೀಯ ಒರೆಗಲ್ಲಿಗೆ ಉಜ್ಜಿ ನೋಡಿ. ನಿಮಗೆ ಸತ್ಯ ಎಂದು ಕಂಡುಬಂದರೆ ಅನುಸರಿಸಿ, ಇಲ್ಲ ಎಂದಾದಲ್ಲಿ ನೀವು ನಿಮ್ಮ ಮಾರ್ಗದಲ್ಲಿ ಮುಂದುವರಿಯಿರಿ’ ಎಂಬ ಉದಾತ್ತ ಚಿಂತನೆ ಬುದ್ಧನದು. ಸ್ವಾಮಿ ವಿವೇಕಾನಂದರು ಬುದ್ಧನನ್ನು ಕುರಿತು- ‘ಬುದ್ಧ ವೇದಕ್ಕಾಗಲೀ, ಜಾತಿಗಾಗಲೀ, ಆಚಾರಕ್ಕಾಗಲೀ ಬಾಗಲಿಲ್ಲ. ವಿಚಾರ ನಿಮ್ಮನ್ನು ಒಯ್ಯುವವರೆಗೆ ನಿರ್ಭಯವಾಗಿ ಅನುಸರಿಸಿ ಎಂದನು. ಸತ್ಯಾನ್ವೇಷಣೆಯಲ್ಲಿ ಇಂತಹ ದಿಟ್ಟತನ ಮತ್ತು ಪ್ರಪಂಚದ ಸರ್ವರ ಮೇಲೆಯೂ ಪ್ರೇಮ ಇದ್ದಂತಹ ಮತ್ತೊಬ್ಬ ವ್ಯಕ್ತಿಯನ್ನು ಪ್ರಪಂಚ ಮತ್ತೆಂದೂ ಕಂಡಿಲ್ಲ. ಧಾರ್ವಿುಕ ಪ್ರಪಂಚದಲ್ಲಿ ವಾಷಿಂಗ್​ಟನ್ ಇದ್ದಂತೆ’ ಎಂದಿದ್ದಾರೆ.

    ‘ಬುದ್ಧನ ದುಃಖ ಲೌಕಿಕ ದುಃಖವೇ ಹೊರತು ಜನ್ಮಾಂತರ ಗಳದ್ದಲ್ಲ. ಅದು ಮನಸ್ಸಿಗೆ ಅಂಟಿಕೊಳ್ಳುವ ವಿಚಾರಗಳೇ ಹೊರತು ಬೇರೇನೂ ಅಲ್ಲ. ಹುಟ್ಟು ಕೂಡ ಒಂದು ದುಃಖ ಎನ್ನುವ ಕಲ್ಪನೆ, ಬೌದ್ಧ ಧರ್ಮದ ನಂತರ ಸೇರಿರಬೇಕು’ ಎಂದು ಬಾಬಾಸಾಹೇಬ ಅಂಬೇಡ್ಕರ್ ಅಭಿಪ್ರಾಯಪಡುತ್ತಾರೆ. ಅಂತಿಮವಾಗಿ ಬುದ್ಧನ ಸಂದೇಶವಾದ, ‘ಜಗತ್ತಿನಲ್ಲಿ ದುಃಖವಿದೆ. ಇದು ಮನುಷ್ಯರು ಮನುಷ್ಯರಿಗೆ ಮಾಡುವ ಅನ್ಯಾಯದ ಫಲ. ಆದರೆ ಅದಕ್ಕೆ ಪರಿಹಾರ ಮನುಷ್ಯನಲ್ಲೇ ಇದೆ. ಹಾಗಾಗಿ ಇತರರ ಜತೆ ಋಜುತನದಿಂದ ನಡೆದುಕೊಳ್ಳಬೇಕು. ಆ ಮೂಲಕ ಭೂಮಿಯನ್ನು ಋಜುತನದ ಸಾಮ್ರಾಜ್ಯವನ್ನಾಗಿ ಮಾಡಬೇಕು’ ಎಂಬುದನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಆ ಮಹಾ ಬುದ್ಧನಿಗೆ ನಿಜವಾದ ಕಾಣಿಕೆ ಸಲ್ಲಿಸಿದಂತಾಗುತ್ತದೆ.

    (ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪನಿರ್ದೇಶಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts