More

    ದಾವಣಗೆರೆಯಲ್ಲಿ ಬುದ್ಧ ಬಸವ ಅಂಬೇಡ್ಕರ್ ಜಯಂತ್ಯುತ್ಸವ 

    ದಾವಣಗೆರೆ: ಗೌತಮಬುದ್ಧ ದೇವರೇ ಇಲ್ಲದ ಧರ್ಮವನ್ನು ಬೋಧಿಸಿದ. ಆತನ ಚಿಂತನೆ ಭಾರತವಲ್ಲದೆ ಇಡೀ ವಿಶ್ವಕ್ಕೆ ಅನ್ವಯವಾಗಲಿವೆ ಎಂದು ನಿವೃತ್ತ ಪ್ರಾಚಾರ್ಯ ಡಾ.ಎ.ಬಿ. ರಾಮಚಂದ್ರಪ್ಪ ತಿಳಿಸಿದರು.
    ಇಂಟರ್‌ನ್ಯಾಷನಲ್ ಫ್ರೆಂಡ್ಸ್ ಆಫ್ ಬುದ್ದಿಸ್ಟ್ ಸೋಷಿಯಲ್, ಎಜುಕೇಷನ್, ಕಲ್ಚರಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್‌ನಿಂದ ಭಾನುವಾರ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಬುದ್ಧ, ಬಸವ, ಅಂಬೇಡ್ಕರ್ ಜಯಂತ್ಯುತ್ಸವ, ಆರೋಗ್ಯ ಶಿಬಿರದಲ್ಲಿ ಮಾತನಾಡಿದರು.
    ಬುದ್ಧ ರಾಜಪ್ರಭುತ್ವ ಧಿಕ್ಕರಿಸಿ ಹೊರ ಬಂದ. ಜನಸಾಮಾನ್ಯರ ಸಂಕಷ್ಟ ಅರ್ಥ ಮಾಡಿಕೊಳ್ಳಲು ರಾಜಪ್ರಭುತ್ವ ತ್ಯಜಿಸಿದ ಬುದ್ಧ ಬೋಧಿಸಿದ ಧರ್ಮದಲ್ಲಿ ದೇವರೇ ಇಲ್ಲ. ಜನರ ಅತೀವ ಶೋಷಣೆ, ದುಸ್ಥಿತಿಗೆ ದೇವರು ಸಹ ಕಾರಣ ಎಂದು ಎಲ್ಲಿಯೂ ಪ್ರಸ್ತಾಪಿಸಲಿಲ್ಲ. ಬುದ್ಧ ಬೌದ್ಧ ಧರ್ಮ ಪ್ರಾರಂಭಿಸಿದ ನೆಲದಲ್ಲೇ ಬೌದ್ಧ ಧರ್ಮ ಅಷ್ಟಾಗಿ ಕಂಡುಬರಲಿಲ್ಲ. ಇದಕ್ಕೆ ನಾನಾ ಕಾರಣಗಳಿವೆ ಎಂದು ತಿಳಿಸಿದರು.
    ಬಸವಣ್ಣ ನವರು 12ನೇ ಶತಮಾನದಲ್ಲಿ ಪ್ರಾರಂಭಿಸಿದ ಶರಣ ಚಳವಳಿಯು ಕಾಯಕ ಧರ್ಮದ ಬಗ್ಗೆ ಬೋಧನೆ ಮಾಡಿದ್ದು, ಅಲ್ಲಿಯವರೆಗೆ ಯಾವುದೇ ಚಳವಳಿ ಕಾಯಕ ಸಂಸ್ಕೃತಿಯ ಬಗ್ಗೆ ಹೇಳಿರಲಿಲ್ಲ. ಜಾತಿ, ಮತ, ಪಂಥ ತಾರತಮ್ಯದ ವಿರುದ್ಧ ಹೋರಾಡಿದ ಬುದ್ದ, ಬಸವಣ್ಣ ಮತ್ತು ಅಂಬೇಡ್ಕರ್ ಅವರನ್ನು ಶುಷ್ಕವಾಗಿ ನೋಡಬಾರದು. ನೈಜತೆಯ ನೆಲೆಗಟ್ಟಿನ ಮೇಲೆ ಅನುಸರಿಸಬೇಕು ಎಂದು ಹೇಳಿದರು.
    ಧಾರವಾಡದ ಜ್ಞಾನಬುದ್ಧ ವಿಹಾರದ ಕಾರ್ಯದರ್ಶಿ ಎಫ್.ಎಚ್. ಜಕ್ಕಪ್ಪನವರ್ ಮಾತನಾಡಿ ಅಂಬೇಡ್ಕರ್ ಇಲ್ಲದೆ ಜೀವನವೇ ಇಲ್ಲ. ಅಂಬೇಡ್ಕರ್ ಪರಿಶಿಷ್ಟ ಸಮುದಾಯಕ್ಕೆ ಮೀಸಲು, ಜಾತಿ ಪ್ರಮಾಣ ಪತ್ರ ಇತರೆ ಅನುಕೂಲ ಕಲ್ಪಿಸಿದರು ಎಂದು ಸೀಮಿತವಾಗಿ ನೋಡುವುದು ಸರಿ ಅಲ್ಲ ಎಂದರು.
    ಭಾರತೀಯ ರಿಸರ್ವ್ ಬ್ಯಾಂಕ್, ದಾಮೋದರ ಕಣಿವೆ ನಿರ್ಮಾತೃ ಆಗಿದ್ದ ಅಂಬೇಡ್ಕರ್. ದೇಶದ ಮೊಟ್ಟ ಮೊದಲ ನೀರಾವರಿ ಇಂಜಿನಿಯರ್. ಅವರ ಜೀವನದಲ್ಲಿನ ತತ್ವ, ಆದರ್ಶಗಳನ್ನು ನಾವಿಂದು ಪಾಲಿಸಬೇಕು ಎಂದು ಹೇಳಿದರು.
    ಐಎನ್‌ಎಫ್‌ಬಿ ಟ್ರಸ್ಟ್ ಅಧ್ಯಕ್ಷ ಡಾ.ಎಚ್.ಆರ್.ಸುರೇಂದ್ರ ಮಾತನಾಡಿ ಬೌದ್ಧ ಧರ್ಮ ಸ್ವೀಕರಿಸುವುದು ಎಂದರೆ ಮತಾಂತರವಲ್ಲ. ಅಸ್ಪಶ್ಯರಿಗೆ ಶಿಕ್ಷಣ ನೀಡುವುದು ಮತ್ತು ಅವರನ್ನು ಕಾಪಾಡುವುದೇ ಆಗಿದೆ. ನಾವು ಕೃಷಿಯಲ್ಲಿ ಹಿಂದಿದ್ದೇವೆ. ವಯೋವೃದ್ಧರನ್ನು ಗೌರವದಿಂದ ಕಾಣುತ್ತಿಲ್ಲ. ಕರುಣೆ. ಪರಿಸರದಲ್ಲಿ ಶಿಕ್ಷಣ ಇದ್ಯಾವುದನ್ನೂ ನಾವು ಬಳಸುತ್ತಿಲ್ಲ. ಇದನ್ನು ಬೌದ್ಧ ಮತ ಎಚ್ಚರಿಸುತ್ತದೆ ಎಂದರು.
    ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈ ಭಾಗದಲ್ಲೂ ಬುದ್ಧ ವಿಹಾರ ಆಗಬೇಕು. ಈ ಬಗ್ಗೆ ಎಫ್.ಎಚ್. ಜಕ್ಕಪ್ಪನವರ್ ಸರ್ಕಾರದ ಗಮನ ಸೆಳೆಯಬೇಕು ಎಂದ ಅವರು, ಬೌದ್ಧ ಎಂದರೆ ಸಂಸ್ಕೃತಿ, ಸಾಂಪ್ರದಾಯಿಕ ಹಾಗೂ ಮನಶ್ಯಾಸ್ತ್ರವೂ ಆಗಿದೆ. ಕ್ರೂರತೆಯಿಂದ ಸಹಾನುಭೂತಿ, ಅಶಾಂತಿಯಿಂದ ನೆಮ್ಮದಿ ಕಡೆಗೆ ಇದು ಕರೆದೊಯ್ಯುತ್ತದೆ ಎಂದರು.
    ಟ್ರಸ್ಟ್ ಜಿಲ್ಲಾಧ್ಯಕ್ಷ ಡಿ.ಎನ್. ಹಾಲೇಶ್ ನಲ್ಕುದುರೆ ಅಧ್ಯಕ್ಷತೆ ವಹಿಸಿದ್ದರು. ಬಂತೇಜಿ ಬಿಕ್ಕುಣಿ ಬುದ್ಧಮ್ಮ ಸಾನ್ನಿಧ್ಯ ವಹಿಸಿದ್ದರು. ವಿಶ್ರಾಂತ ನ್ಯಾಯಾಧೀಶ ಡಿ.ಟಿ. ದೇವೇಂದ್ರನ್, ಡಾ. ಜಿ.ಟಿ. ಗೋವಿಂದಪ್ಪ ಉಪನ್ಯಾಸ ನೀಡಿದರು. ಆವರಗೆರೆ ರುದ್ರಮುನಿ, ಎ.ಡಿ. ಈಶ್ವರಪ್ಪ ತರರು ಇದ್ದರು. ಡಾ ಎ.ಬಿ. ರಾಮಚಂದ್ರಪ್ಪ ಸಂಪಾದಿಸಿ ಮಾನವ ಬಂಧುತ್ವ ವೇದಿಕೆ ಪ್ರಕಾಶಿಸಿದ ಮಹಾ ಬೆಳಕು ಪುಸ್ತಕ ಬಿಡುಗಡೆ ಮಾಡಲಾಯಿತು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts