More

    ಮಹಾಭಾರತದ ಭೀಷ್ಮನಂತಾದ ಬಿಎಸ್‌ವೈ:ಆಯನೂರು ಟೀಕೆ

    ಶಿವಮೊಗ್ಗ: ಮಾಜಿ ಸಿಎಂ ಯಡಿಯೂರಪ್ಪ ಬಗ್ಗೆ ಅಪಾರ್ಥ ಬರುವ ರೀತಿಯಲ್ಲಿ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾತನಾಡಿದರೂ ಬಿಜೆಪಿಯವರು ಅದನ್ನು ಖಂಡಿಸದಿರುವುದು ಆಶ್ಚರ್ಯ ಮೂಡಿಸಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.

    ಶಿವಮೊಗ್ಗಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ನಾರಿ ಶಕ್ತಿಯ ಬಗ್ಗೆ ಸೊಗಸಾಗಿ ಮಾತನಾಡಿದರು. ಮಹಿಳೆಯರನ್ನು ದೇವಿ ಎಂದರು. ಆದರೆ ಕೆ.ಎಸ್.ಈಶ್ವರಪ್ಪ ಅವರು ಶೋಭಾ ಕರಂದ್ಲಾಜೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಪ್ರಶ್ನಿಸಲೇ ಇಲ್ಲ. ಯಡಿಯೂರಪ್ಪ ಈಗ ಮಹಾಭಾರತದ ಭೀಷ್ಮನಂತಾಗಿದ್ದಾರೆ. ಯಡಿಯೂರಪ್ಪ ಭೀಷ್ಮನಂತೆ ಅಸಹಾಯಕರಾಗಿದ್ದಾರೆ. ಅವರನ್ನು ರಕ್ಷಿಸಲು ಬಿಜೆಪಿಯಲ್ಲಿ ಯಾರೂ ಇಲ್ಲ. ನಾನು ಅವರ ಪ್ರೀತಿಯ ಶಿಷ್ಯನಾಗಿ ನೋವಿನಿಂದ ಈ ಮಾತನ್ನು ಹೇಳುತ್ತಿದ್ದೇನೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಮೋದಿ ರಾಜಕೀಯ ಜಾತ್ರೆ: ಶಿವಮೊಗ್ಗಕ್ಕೆ ನರೇಂದ್ರ ಮೋದಿ ಭೇಟಿ ನೀಡಿದ್ದು ರಾಜಕೀಯ ಜಾತ್ರೆಯಂತಾಯ್ತು. ಅದರಲ್ಲಿ ಜನರ ಬಗ್ಗೆ ಕಾಳಜಿಯಿರಲಿಲ್ಲ. ಅದು ಪ್ರತಿಷ್ಠೆಯ ಪ್ರದರ್ಶನವಾಯಿತು. ಮಲೆನಾಡಿನ ಸಮಸ್ಯೆಗಳಿಗೆ ಪರಿಹಾರ ಸಿಗಲಿಲ್ಲ. ಇಡೀ ಸಭೆಯಲ್ಲಿ ಪ್ರಧಾನಿ ಕಾಂಗ್ರೆಸ್ ಟೀಕಿಸುವುದಕ್ಕೆ ಸೀಮಿತರಾದರು ಎಂದು ಆಯನೂರು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
    ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದಂತೆ ವಿಐಎಸ್‌ಎಲ್ ಕಾರ್ಖಾನೆ ಪುನಶ್ಚೇತನ, ಶರಾವತಿ ಮುಳುಗಡೆ ಜನರ ಸಮಸ್ಯೆ, ಬರಗಾಲ, ಅಡಕೆ ಬೆಳೆಗಾರರ ಸಮಸ್ಯೆ ಬಗ್ಗೆ ಪ್ರಸ್ತಾಪವನ್ನೇ ಮಾಡಲಿಲ್ಲ. ಚುನಾವಣಾ ನೀತಿಸಂಹಿತೆ ಉಲ್ಲಂಘಿಸದೆ ಅವುಗಳ ಬಗ್ಗೆ ಪ್ರಸ್ತಾಪ ಮಾಡುವುದು ಸಾಧ್ಯವಿತ್ತು ಎಂದರು.
    ಈಶ್ವರಪ್ಪ ಸ್ಪರ್ಧಿಸಲ್ಲ:ಕೆ.ಎಸ್.ಈಶ್ವರಪ್ಪ ಬಿಜೆಪಿಯ ಕೆಲ ನಾಯಕರ ವಿರುದ್ಧ ಬಂಡಾಯ ಸಾರಿದ್ದಾರೆ. ಇದು ಆರಂಭ ಶೂರತ್ವ ಅಷ್ಟೇ. ಮುಂದಿನ ದಿನಗಳಲ್ಲಿ ಅವರು ಮತ್ತೆ ಬಿಜೆಪಿಗೆ ಶರಣಾಗುತ್ತಾರೆ. ಅವರಲ್ಲಿ ರಾಜಕೀಯ ಗುಂಡಿಗೆ ಇಲ್ಲ. ನೈಜ ಶಕ್ತಿಯೂ ಇಲ್ಲ. ಈಶ್ವರಪ್ಪ ಚುನಾವಣೆಗೆ ಸ್ಪರ್ಧಿಸಿದ್ದೇ ಆದರೆ ನನ್ನ ಮಾತನ್ನು ಹಿಂಪಡೆದು ಅವರಲ್ಲಿ ಕ್ಷಮೆ ಕೋರುತ್ತೇನೆ ಎಂದು ಆಯನೂರು ಮಂಜುನಾಥ್ ಸವಾಲು ಹಾಕಿದರು.
    ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ನಗರಪಾಲಿಕೆ ಮಾಜಿ ಸದಸ್ಯರಾದ ಧೀರರಾಜ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts