More

    ಬ್ರಿಟಿಷ್​​ ಸಂಸದೆ ಡೆಬ್ಬಿ ಅಬ್ರಾಹಮ್ಸ್ ವೀಸಾ ರದ್ದತಿಗೆ ಕಾರಣ ತಿಳಿಸಿದ ಕೇಂದ್ರ ಸರ್ಕಾರ

    ನವದೆಹಲಿ: ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರಿಂದ ಬ್ರಿಟಿಷ್​​ ಸಂಸದೆ ಡೆಬ್ಬಿ ಅಬ್ರಾಹಮ್ಸ್ ಅವರಿಗೆ ವೀಸಾ ನಿರಾಕರಿಸಲಾಗಿದೆ ಎಂದು​ ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

    ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಪ್ರಧಾನಿ ಮೋದಿ ಸರ್ಕಾರದ ಕ್ರಮವನ್ನು ಡೆಬ್ಬಿ ಅಬ್ರಾಹಮ್ಸ್ ಟೀಕಿಸಿದ್ದರು. ಅಲ್ಲದೆ, ಕಾಶ್ಮೀರಕ್ಕೆ ಭೇಟಿ ನೀಡಿದ್ದ ನಿಯೋಗದ ನೇತೃತ್ವವನ್ನು ವಹಿಸಿದ್ದರು. ಅವರಿಗೆ ಭಾರತ ಪ್ರವೇಶ ನಿರಾಕರಿಸಿದ ಬೆನ್ನಲ್ಲೇ ವಿವಾದದ ಕಿಡಿ ಹೊತ್ತಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಸ್ಪಷ್ಟನೆ ನೀಡಿದೆ.

    ಸ್ನೇಹಿತರನ್ನು ಹಾಗೂ ತಮ್ಮ ಕುಟುಂಬದವರನ್ನು ಭೇಟಿಯಾಗಲು ಎಮಿರೇಟ್ಸ್​ ವಿಮಾನದಿಂದ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೋಮವಾರ ಬಂದಿಳಿದಿದ್ದ ಡೆಬ್ಬಿ ಅಬ್ರಾಹಮ್ಸ್​ರನ್ನು ವಾಪಸ್​ ಕಳುಹಿಸಲಾಗಿತ್ತು. ಬಳಿಕ ವಿವಾದ ಉಂಟಾದ ಹಿನ್ನೆಲೆಯಲ್ಲಿ ಅವರ ವೀಸಾವನ್ನು ಮೊದಲೇ ರದ್ದು ಮಾಡಲಾಗಿತ್ತು. ಅಲ್ಲದೆ, ಫೆ. 14ರಂದೇ ವೀಸಾ ರದ್ದು ಕುರಿತು ಅವರಿಗೆ ತಿಳಿಸಲಾಗಿತ್ತು ಎಂದು ಗೃಹ ಸಚಿವಾಲಯ ಹೇಳಿದೆ.

    ಡೆಬ್ಬಿ ಅಬ್ರಾಹಮ್ಸ್​ ಅವರಿಗೆ ಕಳೆದ ಅಕ್ಟೋಬರ್​​ 7ರಂದು ಇ-ಬಿಸಿನೆಸ್​ ವೀಸಾವನ್ನು ನೀಡಲಾಗಿತ್ತು. ಬಿಸಿನೆಸ್​ ಸಭೆಗಳಲ್ಲಿ ಭಾಗವಹಿಸಲು ಅಕ್ಟೋಬರ್​ 5, 2020ರವರೆಗೂ ವೀಸಾಗೆ ಮಾನ್ಯತೆಯನ್ನು ಹೊಂದಿತ್ತು. ಆದರೆ, ರದ್ದು ಮಾಡಲಾಗಿದ್ದು ವೀಸಾ ನೀಡುವುದು ಮತ್ತು ರದ್ದು ಮಾಡುವುದು ದೇಶದ ಸಾರ್ವಭೌಮ ಹಕ್ಕಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

    ಡೆಬ್ಬೀ ಅಬ್ರಾಹಮ್ಸ್​ ಅವರ ಚಟುವಟಿಕೆ ಭಾರತದ ಹಿತಾಶಕ್ತಿಗೆ ವಿರುದ್ಧವಾಗಿದೆ. ಈ ಕಾರಣದಿಂದಾಗಿ ಫೆ. 14ರಂದು ವೀಸಾ ಮಾನ್ಯತೆ ರದ್ದು ಮಾಡಲಾಗಿದೆ ಎಂದು ತಿಳಿಸಿದೆ.

    ವೀಸಾ ರದ್ದು ಕುರಿತು ಭಾರತ ಸರ್ಕಾರದ ವಿರುದ್ಧ ಕಿಡಿಕಾರಿದ್ದ ಡೆಬ್ಬಿ ಅಬ್ರಾಹಮ್ಸ್​, ನನ್ನನ್ನು ಒಬ್ಬ ಕ್ರಿಮಿನಲ್​ರಂತೆ ನಡೆಸಿಕೊಂಡರು. ಅಧಿಕಾರಿಗಳು ನನ್ನ ಜತೆ ಕೆಟ್ಟದಾಗಿ ನಡೆದುಕೊಂಡರು ಎಂದು ಆರೋಪಿಸಿದ್ದರು. ಅಲ್ಲದೆ, ವೀಸಾ ರದ್ದು ಕುರಿತು ಮೊದಲೇ ತಿಳಿಸದೇ ವಿಮಾನ ನಿಲ್ದಾಣದಿಂದಲೇ ನನ್ನನ್ನು ವಾಪಸ್​ ಕಳುಹಿಸಿದರು ಎಂದು ದೂರಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts