More

    ಬ್ರಿಟನ್ ರಾಜ ಕುಬೇರ: ಪ್ರಮುಖ ಆಸ್ತಿಗಳು ಯಾವುವು, ಮೌಲ್ಯ ಎಷ್ಟು?

    ಬ್ರಿಟನ್ ರಾಣಿ ಎಲಿಜಬೆತ್ ಅವರು ಸೆಪ್ಟೆಂಬರ್ 8ರಂದು ನಿಧನರಾದರು. ಅವರ ಮೊದಲ ಪುತ್ರ ಚಾರ್ಲ್ಸ್ ನೂತನ ದೊರೆಯಾಗಿ ನೇಮಕಗೊಂಡಿದ್ದಾರೆ. ರಾಜಪ್ರಭುತ್ವದ ಜತೆಗೆ ರಾಣಿಯ ಎಲ್ಲ ಆಸ್ತಿಗಳು ಹೊಸ ರಾಜನ ಪಾಲಾಗಲಿವೆ. ರಾಜಕುಟುಂಬಕ್ಕೆ ಸೇರಿದ ಪ್ರಮುಖ ಆಸ್ತಿಗಳು ಯಾವುವು? ಮೌಲ್ಯ ಎಷ್ಟು? ಮುಂತಾದ ವಿವರಗಳು ಇಲ್ಲಿವೆ.

    ರಾಜಪ್ರಭುತ್ವ ತೆರೆಮರೆಗೆ ಸರಿದು ಪ್ರಜಾಪ್ರಭುತ್ವ ವ್ಯವಸ್ಥೆ ರೂಪುಗೊಂಡ ನಂತರವೂ ಇಂಗ್ಲೆಂಡಿನಲ್ಲಿ ರಾಜಮನೆತನಕ್ಕೆ ಸ್ಥಾನಮಾನವನ್ನು ಮುಂದುವರಿಸಿಕೊಂಡು ಬರಲಾಗಿದೆ. ತಾಂತ್ರಿಕವಾಗಿ ಈಗಲೂ ಈ ದೇಶದ ಮುಖ್ಯಸ್ಥರು ರಾಜ ಅಥವಾ ರಾಣಿಯೇ ಆಗಿದ್ದಾರೆ. ಈ ರಾಜಮನೆತನಕ್ಕೆ ಸೇರಿದ ಸಂಪತ್ತಿನ ಪ್ರಮಾಣ ಅಪಾರ.ಇಂಗ್ಲೆಂಡಿನ ರಾಜಮನೆತನಕ್ಕೆ ಸೇರಿದ ಆಸ್ತಿಗಳಲ್ಲಿ ಪ್ರಮುಖವಾದುವುಗಳು: ಕ್ರೌನ್ ಎಸ್ಟೇಟ್, ಬಕಿಂಗ್​ಹ್ಯಾಮ್ ಪ್ಯಾಲೇಸ್, ಕೊಹಿನೂರ್ ವಜ್ರ, ಬಲ್ಮೊರಾಲ್ ಕೋಟೆ, ಕಾನ್​ವಾಲ್ ಡಚ್ಚಿ, ವಿಂಡ್ಸರ್ ಕೋಟೆ, ವೆಸ್ಟ್​ಮಿನಿಸ್ಟರ್ ಪ್ಯಾಲೇಸ್, ಹೈಡ್ ಪಾರ್ಕ್, ಗ್ರೀನ್​ವಿಚ್ ಪಾರ್ಕ್, ಲಂಡನ್ ಟವರ್, ಬ್ಲಾ್ಯಕ್ ಪ್ರಿನ್ಸಸ್ ರುಬಿ, ಲಂಕಾಸ್ಟರ್ ಡಚ್ಚಿ, ರಿಜೆಂಟ್ಸ್ ಪಾರ್ಕ್ ಮತ್ತು ಪ್ರಿಮೊರ್ಸ್ ಹಿಲ್, ಕೆನ್ಸಿಂಗ್ಟನ್ ಪ್ಯಾಲೇಸ್, ಹಿಲ್ಸ್​ಬರೋ ಕೋಟೆ, ಲಂಡನ್​ನ ಬ್ರಾಂಪ್ಟನ್ ಸ್ಮಶಾನ, ಸೇಂಟ್ ಜೇಮ್್ಸ ಪ್ಯಾಲೇಸ್, ರಿಚ್ಮಂಡ್ ಪಾರ್ಕ್ ಇತ್ಯಾದಿ.

    ಬಕಿಂಗ್​ಹ್ಯಾಮ್ ಅರಮನೆ: ಬ್ರಿಟಿಷ್ ರಾಜಪ್ರಭುತ್ವದ ಅತ್ಯಂತ ಪ್ರಸಿದ್ಧವಾದ ಅರಮನೆ ಬಕಿಂಗ್​ಹ್ಯಾಮ್ ಪ್ಯಾಲೇಸ್. ಇದನ್ನು ಮೂಲತಃ 1703 ರಲ್ಲಿ ಬಕಿಂಗ್​ಹ್ಯಾಮ್ ಪ್ರಾಂತ್ಯದ ಡ್ಯೂಕ್​ಗಾಗಿ (ಸಾಮಂತ ದೊರೆ ಅಥವಾ ರಾಜಕುಮಾರ) ನಿರ್ವಿುಸಲಾಯಿತು. 1761ರಲ್ಲಿ ದೊರೆ 3ನೇ ಜಾರ್ಜ್ ಇದನ್ನು ನಿವಾಸವನ್ನಾಗಿ ಮಾಡಿಕೊಂಡ. ಇಲ್ಲಿ ರಾಜ ಕುಟುಂಬವು ಸಂದರ್ಶಕರು ಮತ್ತು ಜನರನ್ನು ಭೇಟಿ ಮಾಡುತ್ತದೆ. ಇಂಗ್ಲೆಂಡ್ ರಾಜನ ಆಡಳಿತ ಕಚೇರಿಯಾಗಿ ಇದು ಕಾರ್ಯನಿರ್ವಹಿಸುತ್ತದೆ. ಈ ಅರಮನೆಯ ಮೌಲ್ಯ 490 ಕೋಟಿ ಡಾಲರ್ (39,200 ಕೋಟಿ ರೂಪಾಯಿ).

    ಕೊಹಿನೂರ್ ವಜ್ರ: ಕೊಹಿನೂರ್ ವಜ್ರ ಒಳಗೊಂಡ ಕಿರೀಟವು ಈಚೆಗೆ ನಿಧನರಾದ ರಾಣಿ 2ನೇ ಎಲಿಜಬೆತ್ ಅವರ ತಾಯಿಯಾದ ರಾಣಿ ಎಲಿಜಬೆತ್ ಅವರ ಕಿರೀಟವಾಗಿತ್ತು. ಈ ಕಿರೀಟದ ಬಲಬದಿಯಲ್ಲಿ ಕೊಹಿನೂರ್ ವಜ್ರ ಇದೆ. ಇದು ವಿಶ್ವದ ಅತಿದೊಡ್ಡ ವಜ್ರಗಳಲ್ಲಿ ಒಂದಾಗಿದೆ. ಇದು 1740ರ ದಶಕದಲ್ಲಿ ಭಾರತದ ಮೊಘಲ್ ಸಾಮ್ರಾಜ್ಯದಲ್ಲಿ ನವಿಲು ಸಿಂಹಾಸನದ ಭಾಗವಾಗಿತ್ತು ಎಂದು ಗುರುತಿಸಲಾಗಿದೆ. ರಾಣಿ ವಿಕ್ಟೋರಿಯಾ 1840ರ ದಶಕದಲ್ಲಿ ಕೊಹಿನೂರ್ ವಜ್ರವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಇರಾನ್, ಅಫ್ಘಾನಿಸ್ತಾನ, ಭಾರತ ಮತ್ತು ಪಾಕಿಸ್ತಾನದ ಸರ್ಕಾರಗಳು ವಜ್ರದ ಮೇಲೆ ಹಕ್ಕು ಸಾಧಿಸಿವೆ. ಭಾರತವು 1947ರಲ್ಲಿ ಸ್ವಾತಂತ್ರ್ಯ ಪಡೆದಾಗಿನಿಂದ ಇದನ್ನು ಹಿಂದಿರುಗಿಸುವಂತೆ ಒತ್ತಾಯಿಸಿದೆ. ಆದರೆ, 176 ವರ್ಷಗಳ ಹಿಂದಿನ ಒಪ್ಪಂದದ ಪ್ರಕಾರ ವಜ್ರದ ಮೇಲೆ ತನಗೆ ಕಾನೂನುಬದ್ಧ ಹಕ್ಕು ಇದೆ ಎಂದು ಬ್ರಿಟಿಷ್ ಸರ್ಕಾರ ಹೇಳುತ್ತಿದೆ.

    ಕ್ರೌನ್ ಎಸ್ಟೇಟ್: ಕ್ರೌನ್ ಎಸ್ಟೇಟ್ ಅನ್ನು ರಾಜಪ್ರಭುತ್ವದ ಸಾರ್ವಜನಿಕ ವಲಯದ ಕಂಪನಿ (ಪಿಎಲ್​ಸಿ) ಎಂದೂ ಕರೆಯಲಾಗುತ್ತದೆ. ಇದು ಬ್ರಿಟಿಷ್ ರಾಜನ ಎಲ್ಲಾ ಭೂಮಿ ಮತ್ತು ಹಿಡುವಳಿಗಳನ್ನು ನಿಯಂತ್ರಿಸುವ ನಿಗಮವಾಗಿದೆ. ರಾಜಮನೆತನವು ಕ್ರೌನ್ ಎಸ್ಟೇಟ್ ಮೇಲೆ ಸೀಮಿತ ಪ್ರಮಾಣದ ನಿಯಂತ್ರಣ ಹೊಂದಿದೆ. ರಾಜಪ್ರಭುತ್ವದ ಪರವಾಗಿ ಸ್ವತಂತ್ರ ಮಂಡಳಿ ಇದರ ನಿರ್ವಹಣೆ ಮಾಡುತ್ತದೆ. ವೇಲ್ಸ್, ಉತ್ತರ ಐರ್ಲೆಂಡ್ ಮತ್ತು ಇಂಗ್ಲೆಂಡ್​ನ ಸಾಕಷ್ಟು ಜಮೀನುಗಳು ಕ್ರೌನ್ ಎಸ್ಟೇಟ್​ಗೆ ಸೇರಿವೆ. ಕ್ರೌನ್ ಎಸ್ಟೇಟ್​ನ ಒಟ್ಟು ಮೌಲ್ಯ 3430 ಕೋಟಿ ಡಾಲರ್ (2,74,400 ಕೋಟಿ ರೂಪಾಯಿ) ಎಂದು ಅಂದಾಜಿಸಲಾಗಿದೆ.

    ಸಾವಯವ ಉತ್ಪನ್ನಗಳ ಕಂಪನಿ: ರಾಜಮನೆತನಕ್ಕೆ ಸೇರಿದ ಜಮೀನು, ಅರಮನೆ, ಕೋಟೆಗಳು ಮಾತ್ರವಲ್ಲದೆ, ದೊರೆ ಚಾರ್ಲ್ಸ್ ಉದ್ಯಮದಲ್ಲೂ ತೊಡಗಿಸಿಕೊಂಡು ಸಂಪತ್ತನ್ನು ವೃದ್ಧಿಸಿದ್ದಾರೆ. 80ರ ದಶಕದಿಂದಲೂ ಅವರು ಸಾವಯವ ಆಹಾರದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. 1990ರಲ್ಲಿ ಅವರು ‘ಡಚಿ ಒರಿಜಿನಲ್ಸ್’ ಎಂಬ ಕಂಪನಿಯನ್ನು ಡಚಿ ಆಫ್ ಕಾರ್ನ್​ವಾಲ್​ನಲ್ಲಿ ಬೆಳೆದ ಸಾವಯವ ಆಹಾರದ ಮಳಿಗೆಯಾಗಿ ಪ್ರಾರಂಭಿಸಿದರು. ಈಗ ಇದು ಪ್ರಿನ್ಸ್ ಆಫ್ ವೇಲ್ಸ್ ಚಾರಿಟಬಲ್ ಫಂಡ್ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. 2009ರಲ್ಲಿ ಕಂಪನಿಯು ವೈಟ್ರೊಸ್ ಕಂಪನಿ ಜತೆಗೂಡಿ ವೈಟ್ರೊಸ್ ಡಚಿ ಆರ್ಗಾನಿಕ್ಸ್ ಆಗಿದೆ. ಈ ಕಂಪನಿಯ ಎಲ್ಲ ಲಾಭವು ಧರ್ವರ್ಥ ನಿಧಿಗೆ ಹೋಗುತ್ತದೆ. 2021ರಲ್ಲಿ, ಈ ಕಂಪನಿ 32 ಕೋಟಿ ರೂಪಾಯಿ ಲಾಭ ಗಳಿಸಿದೆ. 2009 ರಿಂದ 280 ಕೋಟಿ ರೂಪಾಯಿ ದಾನ ನೀಡಿದೆ.

    ಡಚಿ ಆಫ್ ಕಾರ್ನ್​ವಾಲ್: ಡಚಿ ಎಂದರೆ ರಾಜಮನೆತನಕ್ಕೆ ಸೇರಿದ ಬೃಹತ್ ಹಿಡುವಳಿ. ಬ್ರಿಟನ್ ರಾಜಮನೆತನದ ಸದಸ್ಯರಿಂದ ನಿರ್ವಹಿಸಲ್ಪಡುವ ಡಚಿ ಆಫ್ ಕಾರ್ನ್​ವಾಲ್ ಸುಮಾರು 1,35,000 ಎಕರೆಗಳಷ್ಟು ವ್ಯಾಪಿಸಿದೆ. ಇದನ್ನು 1337ರಲ್ಲಿ 3ನೇ ಎಡ್ವರ್ಡ್ ದೊರೆ ತನ್ನ ಮಗ ವೇಲ್ಸ್​ನ ರಾಜಕುಮಾರ ಎಡ್ವರ್ಡ್​ಗಾಗಿ ಸ್ಥಾಪಿಸಿದರು. ಪಾರಂಪರಿಕವಾಗಿ, ಇದನ್ನು ವೇಲ್ಸ್ನ ರಾಜಕುಮಾರ ನಿರ್ವಹಿಸುತ್ತಾರೆ. ದೊರೆ 3ನೇ ಚಾರ್ಲ್ಸ್ ಅವರು ಡಚಿ ಆಫ್ ಕಾರ್ನ್​ವಾಲ್ ಅನ್ನು ಹೆಚ್ಚು ಲಾಭದಾಯಕವಾಗಿ ನಿರ್ವಹಿಸಿದ್ದಾರೆ. 2021ರಲ್ಲಿ ಇದರಿಂದ 208 ಕೋಟಿ ರೂಪಾಯಿ ಆದಾಯ ಬಂದಿದೆ. ಸಂಪೂರ್ಣ ಆಸ್ತಿಯು 10,400 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಡಚಿಯು ತೆರಿಗೆಗಳಿಂದ ವಿನಾಯಿತಿ ಪಡೆದಿದ್ದರೂ, ಚಾರ್ಲ್ಸ್ ಸ್ವಪ್ರೇರಣೆಯಿಂದ ತೆರಿಗೆ ಪಾವತಿ ಮಾಡಿದ್ದಾರೆ. ಈಗ ಡಚಿಯನ್ನು ರಾಜಕುಮಾರ ವಿಲಿಯಂ ನಿರ್ವಹಿಸುತ್ತಿದ್ದಾರೆ.

    ಲಂಡನ್ ಟವರ್: ಲಂಡನ್ ಗೋಪುರವನ್ನು ಅಧಿಕೃತವಾಗಿ ಹಿಸ್ ಮೆಜೆಸ್ಟಿಸ್ ರಾಯಲ್ ಪ್ಯಾಲೇಸ್ ಮತ್ತು ಫೋರ್ಟ್ರೆಸ್ ಆಫ್ ದಿ ಟವರ್ ಆಫ್ ಲಂಡನ್ ಎಂದು ಕರೆಯಲಾಗುತ್ತದೆ. ಇದು ಈಗ ವಸ್ತುಸಂಗ್ರಹಾಲಯವಾಗಿದೆ. ವಿಶ್ವ ಪಾರಂಪರಿಕ ತಾಣವಾಗಿದೆ. ಸುಮಾರು 6,48,000 ರೂಪಾಯಿ ಬೆಲೆಬಾಳುತ್ತದೆ.

    ಬಾಲ್ಮೋರಲ್ ಕ್ಯಾಸಲ್: ಬಾಲ್ಮೋರಲ್ ಕ್ಯಾಸಲ್ ಸ್ಕಾಟ್ಲೆಂಡ್​ನ ಅಬರ್ಡಿನ್​ಶೈರ್​ನಲ್ಲಿರುವ ನಿವಾಸವಾಗಿದೆ. ಇದನ್ನು 2ನೇ ಎಲಿಜಬೆತ್ ಖರೀದಿಸಿದರು. ಇನ್ನು ಇದನ್ನು ಚಾರ್ಲ್ಸ್ ಅವರಿಗೆ ವರ್ಗಾಯಿಸಲಾಗುತ್ತದೆ. ಫೋರ್ಬ್ಸ್ ನಿಯತಕಾಲಿಕೆ ಮಾಹಿತಿ ಪ್ರಕಾರ, ಈ ಆಸ್ತಿ 14 ಕೋಟಿ ಡಾಲರ್ (1120 ಕೋಟಿ ರೂಪಾಯಿ) ಮೌಲ್ಯದ್ದಾಗಿದೆ. ಈ ಕೋಟೆಯಲ್ಲಿಯೇ ರಾಣಿ ಎಲಿಜಬೆತ್ ನಿಧನ ಹೊಂದಿದರು.

    ಹೈಡ್ ಪಾರ್ಕ್: ರಾಜಮನೆತನದ ಆಸ್ತಿಗಳ ಜೊತೆಗೆ ಕ್ರೌನ್ ಎಸ್ಟೇಟ್ ನಿಗಮವು ಅನೇಕ ಉದ್ಯಾನಗಳ ಒಡೆತನ ಹೊಂದಿದೆ. ಇದರಲ್ಲಿ ಪ್ರಮುಖವಾದುದು ಹೈಡ್ ಪಾರ್ಕ್. ದೊರೆ 3ನೇ ಹೆನ್ರಿ ಇದನ್ನು ಬೇಟೆಯಾಡುವ ಸ್ಥಳವಾಗಿ ಪರಿವರ್ತಿಸಿದ್ದರು. ಸಾರ್ವಜನಿಕ ಪ್ರದರ್ಶನಗಳು, ಚರ್ಚೆಗಳು, ಭಾಷಣಗಳು ನಡೆಯುವ ಮುಕ್ತ ಪ್ರದೇಶ ಇಲ್ಲಿದೆ.

    ವೆಸ್ಟ್​ಮಿನಿಸ್ಟರ್ ಅರಮನೆ: ಲಂಡನ್​ನಲ್ಲಿರುವ ಇದನ್ನು ಬ್ರಿಟನ್ನಿನ ಸಂಸತ್ ಭವನ ಎಂದು ಗುರುತಿಸಬಹುದು. ಎಲಿಜಬೆತ್ ಟವರ್ ಎಂದೂ ಕರೆಯುತ್ತಾರೆ. ತಾಂತ್ರಿಕವಾಗಿ ಇಡೀ ಕಟ್ಟಡ ರಾಜಮನೆತನದ ಒಡೆತನದಲ್ಲಿದ್ದು, ಸಾಲವೊಂದಕ್ಕಾಗಿ ಬ್ರಿಟಿಷ್ ಸಂಸದೀಯ ಸರ್ಕಾರದ ಸ್ವಾಧೀನದಲ್ಲಿದೆ. ಶತಮಾನಗಳಿಂದ ಹೌಸ್ ಆಫ್ ಲಾರ್ಡ್ಸ್ ಮತ್ತು ಹೌಸ್ ಆಫ್ ಕಾಮನ್ಸ್​ಗೆ ನೆಲೆಯಾಗಿದೆ.

    ವಿಂಡ್ಸರ್ ಕೋಟೆ: ಲಂಡನ್​ನ ಹೊರಗಿನ ಬರ್ಕ್​ಷೈರ್​ನಲ್ಲಿರುವ ವಿಂಡ್ಸರ್ ಕ್ಯಾಸಲ್ ಅನ್ನು ವಿಲಿಯಂ ದಿ ಕಾಂಕರರ್ ನಿರ್ವಿುಸಿದ್ದಾರೆ. ವಿಲಿಯಂ ಅವರ ಪುತ್ರ 1ನೇ ಹೆನ್ರಿ ಅಧಿಕಾರ ವಹಿಸಿಕೊಂಡ ನಂತರ ಇದನ್ನು ನಿವಾಸವನ್ನಾಗಿ ಮಾಡಿಕೊಂಡರು. 1100ರಿಂದ ಇದು ಬ್ರಿಟಿಷ್ ರಾಜರ ಸ್ವಾಧೀನದಲ್ಲಿದೆ. ವಿಂಡ್ಸರ್ ಕ್ಯಾಸಲ್ 2ನೇ ಎಲಿಜಬೆತ್ ಅವರ ಪ್ರಾಥಮಿಕ ನಿವಾಸವಾಗಿತ್ತು. ಅಲ್ಲದೆ, ಎರಡನೆಯ ಮಹಾಯುದ್ಧದ ಸಮಯದಲ್ಲಿ ರಾಜಮನೆತನದ ಆಶ್ರಯದ ಸ್ಥಳವಾಗಿತ್ತು. ಇದು 4592 ಕೋಟಿ ರೂಪಾಯಿ ಮೌಲ್ಯದ್ದಾಗಿದೆ.

    ಆಸ್ಕರ್ ಜ್ಯೂರಿಯಾಗಿ ಪಾಲ್ಗೊಂಡ ಪವನ್ ಒಡೆಯರ್; ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಭಾಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts