More

    ಬ್ರಿಟನ್​ನಲ್ಲಿ ವೈರಸ್ ತೀವ್ರ: ವೇಗವಾಗಿ ಹರಡುತ್ತಿದೆ ರೂಪಾಂತರಗೊಂಡ ಸೋಂಕು

    ಲಂಡನ್/ನವದೆಹಲಿ: ಬ್ರಿಟನ್​ನಲ್ಲಿ ಕರೊನಾ ಅಟ್ಟಹಾಸ ಉಲ್ಬಣಿಸಿದ್ದು, ಹೊಸ ರೂಪಾಂತರ ವೈರಸ್ ವ್ಯಾಪಕವಾಗಿ ಪಸರಿಸುತ್ತಿದೆ. ಪರಿಸ್ಥಿತಿ ಈಗಾಗಲೇ ಕೈಮೀರಿದ್ದು, ಬ್ರಿಟನ್​ನಾದ್ಯಂತ ಸೋಂಕು ಪಸರಿಸಿದೆ. ಹೊಸ ವೈರಸ್ ಮೊದಲಿನದಕ್ಕಿಂತಲೂ ಶೇಕಡ 70ರಷ್ಟು ವೇಗವಾಗಿ ಪಸರಿಸುತ್ತಿದ್ದು, ಭಾರಿ ಆತಂಕ ಎದುರಾಗಿದೆ.

    ಮುಂಜಾಗ್ರತಾ ಕ್ರಮವಾಗಿ ಹಲವು ರಾಷ್ಟ್ರಗಳು ಬ್ರಿಟನ್​ಗೆ ವಿಮಾನ ಸಂಚಾರ ನಿರ್ಬಂಧಿಸಿವೆ. ಪರಿಸ್ಥಿತಿ ತೀವ್ರ ಆತಂಕ ಮೂಡಿಸಿರುವ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಲಂಡನ್​ನಲ್ಲಿ ತುರ್ತು ಸಭೆ ಕರೆದಿದ್ದು, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರ್ಚಚಿಸಲಿದ್ದಾರೆ. ಹೊಸ ರೂಪಾಂತರ ವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದ್ದು, ಸೋಂಕು ಪಸರಿಸದಂತೆ ತಡೆಯಲು ಯುರೋಪಿನಾದ್ಯಂತ ಹೆಚ್ಚು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಸೂಚಿಸಿದೆ. ಬ್ರಿಟನ್​ನಾದ್ಯಂತ ಈಗಾಗಲೇ ಕಠಿಣ ಲಾಕ್​ಡೌನ್ ನಿಯಮಗಳನ್ನು ಜಾರಿಗೊಳಿಸಲಾಗಿದ್ದು, ಜನರಿಗೆ ಮನೆಯಿಂದ ಹೊರಬರದಂತೆ ಆದೇಶಿಸಲಾಗಿದೆ. ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನೂ ಬಹುತೇಕ ಸ್ಥಗಿತಗೊಳಿಸಲಾಗಿದ್ದು, ಸೋಂಕು ಪಸರಿಸುವಿಕೆಯನ್ನು ಹಿಡಿತಕ್ಕೆ ತರಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

    ಇಟಲಿ, ಬೆಲ್ಜಿಯಂ, ಭಾರತ, ದಕ್ಷಿಣ ಆಫ್ರಿಕಾ, ಅಮೆರಿಕ, ನೆದರ್ಲೆಂಡ್, ಜರ್ಮನಿ ಸೇರಿ ಹಲವು ದೇಶಗಳು ಬ್ರಿಟನ್​ನಿಂದ ಬರುವ ಹಾಗೂ ಅಲ್ಲಿಗೆ ತೆರಳುವ ವಿಮಾನಗಳ ಸಂಚಾರವನ್ನು ರದ್ದುಗೊಳಿಸಿವೆ. ಇನ್ನೂ ಹಲವು ದೇಶಗಳು ಈ ಕ್ರಮ ಜರುಗಿಸುವ ಚಿಂತನೆಯಲ್ಲಿವೆ. ಹೊಸ ರೂಪಾಂತರ ವೈರಸ್ ಪಸರಿಸುವಿಕೆ ಈಗಾಗಲೇ ಕೈಮೀರಿದ್ದು, ಪರಿಸ್ಥಿತಿ ಕಠಿಣವಾಗಿದೆ ಎಂದು ಬ್ರಿಟನ್​ನ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಯುರೋಪ್​ನ ಹಲವು ರಾಷ್ಟ್ರಗಳು ಕ್ರಿಸ್​ವುಸ್​ಗೆ ಲಾಕ್​ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸುವ ಚಿಂತನೆಯನ್ನೂ ಕೈಬಿಟ್ಟಿವೆ. ಮೂಲ ವೈರಸ್​ಗಿಂತ ಹೊಸ ವೈರಸ್ ಸೌಮ್ಯವಾಗಿಲ್ಲ. ಅದು ತೀವ್ರವಾಗಬಹುದು ಎಂದು ಹಲವು ತಜ್ಞರು ಎಚ್ಚರಿಕೆ ನೀಡಿದ್ದಾರೆ.

    ಬ್ರಿಟನ್​ನಲ್ಲಿ ವೈರಸ್ ತೀವ್ರ: ವೇಗವಾಗಿ ಹರಡುತ್ತಿದೆ ರೂಪಾಂತರಗೊಂಡ ಸೋಂಕು

    ಭಾರತ ಭಯಪಡುವ ಅಗತ್ಯವಿಲ್ಲ

    ಬ್ರಿಟನ್​ನಲ್ಲಿ ವರದಿಯಾಗಿರುವ ಹೊಸ ರೂಪಾಂತರ ವೈರಸ್ ಬಗ್ಗೆ ಭಾರತ ಸರ್ಕಾರ ಎಚ್ಚರಿಕೆ ವಹಿಸಿದ್ದು, ಜನರು ಭಯಪಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ. ಕಾಲ್ಪನಿಕ ಸನ್ನಿವೇಶಗಳು ಮತ್ತು ವಿಷಯಗಳಿಂದ ಭೀತಿಗೆ ಒಳಗಾಗಬೇಡಿ. ಸರ್ಕಾರ ಸಂಪೂರ್ಣ ಎಚ್ಚರವಾಗಿದೆ. ಕಳೆದೊಂದು ವರ್ಷದಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಈ ಕುರಿತು ಸೋಮವಾರ ಸಭೆ ನಡೆಸಿ ರ್ಚಚಿಸಲಾಗಿದೆ. ಜನರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಹರ್ಷವರ್ಧನ್ ಹೇಳಿದ್ದಾರೆ.

    ಬ್ರಿಟನ್​ನಿಂದ ಮರಳಿದವರಲ್ಲಿ ಸೋಂಕು

    ಹೊಸದಾಗಿ ಪಸರಿಸುತ್ತಿರುವ ಸೋಂಕು ಬ್ರಿಟನ್​ನಿಂದ ಇತ್ತೀಚೆಗೆ ಮರಳಿದ್ದ ನೆದರ್ಲೆಂಡ್​ನ ಓರ್ವ ಹಾಗೂ ಇಟಲಿಯ ಓರ್ವ ಪ್ರಜೆಯಲ್ಲಿ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಅವರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದ್ದು, ಬ್ರಿಟನ್​ಗೆ ಇತ್ತೀಚೆಗೆ ಪ್ರಯಾಣ ಕೈಗೊಂಡಿದ್ದವರಿಗಾಗಿ ಶೋಧ ನಡೆಸಲಾಗುತ್ತಿದೆ.

    ಬ್ರಿಟನ್​ನ ಸ್ಥಿತಿಗತಿ

    ಬ್ರಿಟನ್​ನಲ್ಲಿ ಮಾರ್ಚ್ ಮಧ್ಯಭಾಗದಲ್ಲಿ ಕರೊನಾ ಪ್ರಕರಣಗಳು ಉಲ್ಬಣಿಸಿ ಜೂನ್ ಅಂತ್ಯದ ವೇಳೆಗೆ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿದ್ದವು. ಈ ಅವಧಿಯಲ್ಲಿ ಒಂದೇ ದಿನ ಗರಿಷ್ಠ 8 ಸಾವಿರ ಪ್ರಕರಣಗಳನ್ನು ಮಾತ್ರ ಬ್ರಿಟನ್ ದಾಖಲಿಸಿತ್ತು. ಆದರೆ ಆಗಸ್ಟ್ ಅಂತ್ಯದಿಂದ ಮತ್ತೆ ಉಲ್ಬಣಗೊಂಡ ಕರೊನಾ ದಿನೇದಿನೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸುತ್ತಾ ಹೋಯಿತು. ಪ್ರತಿದಿನ 35 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದರಿಂದಾಗಿ ಒಟ್ಟು ಪ್ರಕರಣಗಳು ಈವರೆಗೆ 20 ಲಕ್ಷದ ಗಡಿ ದಾಟಿವೆ. ಭಾನುವಾರ 35 ಸಾವಿರ ಹೊಸ ಪ್ರಕರಣಗಳು ವರದಿಯಾಗಿವೆ. ಈವರೆಗೆ 67 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಸದ್ಯ ಪ್ರತಿದಿನದ ಮರಣ ಪ್ರಮಾಣ ಸರಾಸರಿ 500 ಇದೆ.

    ಮಾರಕ ಎಂಬುದಕ್ಕೆ ಪುರಾವೆಗಳಿಲ್ಲ

    ಬ್ರಿಟನ್​ನಲ್ಲಿ ವೈರಸ್ ತೀವ್ರ: ವೇಗವಾಗಿ ಹರಡುತ್ತಿದೆ ರೂಪಾಂತರಗೊಂಡ ಸೋಂಕುಬ್ರಿಟನ್​ನಲ್ಲಿ ಪತ್ತೆಯಾಗಿರುವ ಕರೊನಾದ ರೂಪಾಂತರ ಸೋಂಕು ಮಾರಕ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಅಮೆರಿಕದ ಸರ್ಜನ್ ಜನರಲ್, ಭಾರತ ಮೂಲದ ವಿವೇಕ್ ಮೂರ್ತಿ ಹೇಳಿದ್ದಾರೆ. ಈಗಾಗಲೇ ಅಭಿವೃದ್ಧಿಪಡಿಸಲಾಗಿರುವ ಲಸಿಕೆಗಳು ಹೊಸ ಪ್ರಭೇದದ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನುವುದಕ್ಕೆ ಕಾರಣಗಳಿಲ್ಲ. ಹೊಸ ಸೋಂಕು ಹೆಚ್ಚು ಸಾಂಕ್ರಾಮಿಕವಾಗಿದ್ದು, ವೇಗವಾಗಿ ಹರಡುತ್ತಿದೆ. ಆದರೆ ಇದು ಪಸರಿಸುತ್ತಿರುವಷ್ಟು ಮಾರಕವಾಗಿಲ್ಲ ಎಂದು ವಿವೇಕ್ ಮೂರ್ತಿ ಹೇಳಿದ್ದಾರೆ.

    ಭಾರತದಿಂದ ವಿಮಾನ ಸಂಚಾರ ನಿರ್ಬಂಧ

    ಬ್ರಿಟನ್​ನಲ್ಲಿ ವೈರಸ್ ತೀವ್ರ: ವೇಗವಾಗಿ ಹರಡುತ್ತಿದೆ ರೂಪಾಂತರಗೊಂಡ ಸೋಂಕುಬ್ರಿಟನ್​ನಲ್ಲಿ ಉಂಟಾಗಿರುವ ವೈರಸ್ ಬಿಕ್ಕಟ್ಟಿನಿಂದಾಗಿ ಭಾರತವೂ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿದೆ. ಮಂಗಳವಾರ ರಾತ್ರಿ 12ರಿಂದ ಡಿಸೆಂಬರ್ 31ರವರೆಗೆ ಬ್ರಿಟನ್​ನಿಂದ ಬರುವ ಹಾಗೂ ತೆರಳುವ ವಿಮಾನಗಳನ್ನು ರದ್ದುಪಡಿಸಲಾಗಿದೆ. ಮಂಗಳವಾರ ರಾತ್ರಿ 12ರ ಒಳಗೆ ಬ್ರಿಟನ್​ನಿಂದ ಬರುವ ವಿಮಾನಗಳ ಪ್ರಯಾಣಿಕರಿಗೆ ಕರೊನಾ ಆರ್​ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯವಾಗಿದ್ದು, ಅವರನ್ನು 7 ದಿನಗಳ ಕಾಲ ಕ್ವಾರಂಟೈನ್​ಗೆ ಒಳಪಡಿಸಲಾಗುತ್ತದೆ.

    ಹೊಸ ವೈರಸ್ ಬಗ್ಗೆ ಯಾಕಿಷ್ಟು ಆತಂಕ?

    ಬ್ರಿಟನ್ ಹಾಗೂ ಅಮೆರಿಕದ ತಜ್ಞರ ಪ್ರಕಾರ, ಹೊಸ ರೂಪಾಂತರ ವೈರಸ್ ಹೆಚ್ಚು ವೇಗ ಹಾಗೂ ಸುಲಭವಾಗಿ ಒಬ್ಬರಿಂದೊಬ್ಬರಿಗೆ ಹರಡುತ್ತಿದೆ ಎನ್ನಲಾಗಿದೆ. ಆದಾಗ್ಯೂ ಇದು ಹೆಚ್ಚು ಮಾರಕವಾಗಿದೆಯೇ ಎಂಬ ಬಗ್ಗೆ ತಕ್ಷಣಕ್ಕೆ ಯಾವುದೇ ಪುರಾವೆಗಳು ಲಭಿಸಿಲ್ಲ. ಡಿಸೆಂಬರ್ ಅಂತ್ಯದ ವೇಳೆಗೆ ಬ್ರಿಟನ್​ನಲ್ಲಿ ಶೇಕಡ 60ರಷ್ಟು ಹೊಸ ಸೋಂಕು ಪ್ರಕರಣಗಳು ವರದಿಯಾಗುವ ಸಾಧ್ಯತೆ ಇದೆ. ತಜ್ಞರು ವ್ಯಕ್ತಪಡಿಸಿರುವ ಪ್ರಮುಖ ಆತಂಕವೆಂದರೆ ವೈರಸ್ ರೂಪಾಂತರಗೊಂಡಾಗ ಅದು ತನ್ನ ಮೇಲ್ಮೈನ ಪ್ರೋಟಿನ್​ಗಳನ್ನು ಬದಲಾಯಿಸುವ ಮೂಲಕ ಲಸಿಕೆ ಅಥವಾ ಪ್ರತಿಕಾಯಗಳಿಂದ ರಕ್ಷಣೆ ಪಡೆಯಬಹುದು ಎನ್ನುವುದು. ಈ ಮೊದಲು ಕಳೆದ ಏಪ್ರಿಲ್​ನಲ್ಲಿ ಸ್ವೀಡನ್​ನಲ್ಲಿ ಕರೊನಾದ ಮೊದಲ ರೂಪಾಂತರ ವೈರಸ್ ಪತ್ತೆ ಮಾಡಲಾಗಿತ್ತು. ಅದು ಮೂಲ ವೈರಸ್​ಗಿಂತ ಎರಡು ಪಟ್ಟು ಹೆಚ್ಚು ಸಾಂಕ್ರಾಮಿಕ ಎಂದು ತಜ್ಞರು ಹೇಳಿದ್ದರು. ಬಳಿಕ ಬ್ರಿಟನ್, ಫ್ರಾನ್ಸ್, ಅಮೆರಿಕ ಸೇರಿ ಹಲವು ದೇಶಗಳಲ್ಲಿ ರೂಪಾಂತರ ವೈರಸ್​ಗಳು ಪತ್ತೆಯಾಗಿದ್ದವಾದರೂ ಅವು ಅಷ್ಟೊಂದು ಮಾರಕವಾಗಿರಲಿಲ್ಲ. ಸದ್ಯ ಅಸ್ತಿತ್ವದಲ್ಲಿರುವ ಲಸಿಕೆಗಳಿಗೆ ಹೊಸ ರೂಪಾಂತರ ವೈರಸ್​ಗಳು ನಿರೋಧಕವಾಗಿರುವ ಸಾಧ್ಯತೆ ಕಡಿಮೆ ಎಂದು ಅಮೆರಿಕದ ತಜ್ಞರು ಹೇಳಿದ್ದಾರೆ.

    ವಾಪಸ್​ ಬಂದ್ರು ರಂಗೀಲಾ ಬೆಡಗಿ ಊರ್ಮಿಳಾ ಮಾತೊಂಡ್ಕರ್​…

    ಕರೊನಾ ಲಸಿಕೆ ವಿಜ್ಞಾನಿಯ ದುರಂತ ಅಂತ್ಯ! 14ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟರಾ ವಿಜ್ಞಾನಿ?

    ಮಲತಾಯಿಯನ್ನೇ ರೇಪ್​ ಮಾಡಿದ ಕಾಮುಕ ಮಗ! ವಿಚಾರ ಹೊರಬರದಿರುವಂತೆ ನೋಡಿಕೋ ಎಂದ ಕುಟುಂಬಸ್ಥರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts