More

    ಅಡಕೆ ಎಲೆಚುಕ್ಕಿ ರೋಗಕ್ಕೆ ಔಷಧ ಬೇಗ ತನ್ನಿ

    ಸಿದ್ದಾಪುರ: ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಸರಿಯಾದ ಮಾಹಿತಿ ನೀಡುವುದರೊಂದಿಗೆ ಇಲಾಖೆಯಿಂದ ಸಿಗಬಹುದಾದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

    ಪಟ್ಟಣದ ತಾಪಂ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ತಾಲೂಕಿನ ಅಡಕೆ ಬೆಳೆಗಾರರು ಎಲೆಚುಕ್ಕಿ ರೋಗದಿಂದ ಬೆಳೆ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಅವರಿಗೆ ರೋಗದ ಕುರಿತು ಸರಿಯಾದ ಮಾಹಿತಿ, ಮಾರ್ಗದರ್ಶನ ನೀಡುವುರೊಂದಿಗೆ ರೋಗ ಹತೋಟಿಗೆ ಬೇಕಾದ ಔಷಧ ನೀಡಬೇಕು. ಔಷಧ ಇಂದು ಬರುತ್ತದೆ, ನಾಳೆ ಬರುತ್ತದೆ ಎಂದು ಅವರಿಗೆ ಹಾರಿಕೆ ಉತ್ತರ ನೀಡುವುದು ಬೇಡ. ಈಗಾಗಲೇ ಸರ್ಕಾರದಿಂದ ರೋಗ ಹತೋಟಿಗಾಗಿ ಬಿಡುಗಡೆ ಅಗಿರುವ ಹಣವನ್ನು ಉಪಯೋಗಿಸಬೇಕು. ಶೀಲಿಂಧ್ರ ನಾಶಕ ಔಷಧ ಎಲ್ಲಿ ಸಿಗುತ್ತದೆಯೋ ಅಲ್ಲಿಗೆ ಹೋಗಿ ತೆಗೆದುಕೊಂಡು ಬನ್ನಿ. ಅದರ ಖರ್ಚು ನಾನು ನೀಡುತ್ತೇನೆ. ಕಂಪನಿಯವರು ಕಳುಹಿಸುವುದರೊಳಗಾಗಿ ಅಡಕೆ ತೋಟ ನಾಶವಾಗಿರುತ್ತದೆ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಅರುಣ ಎಚ್.ಜಿ. ಅವರಿಗೆ ಸೂಚಿಸಿದರು.

    ಎಲ್ಲ ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕರು ಶಾಲಾ ಅವಧಿಯಲ್ಲಿ ಶಾಲೆಯಲ್ಲಿಯೇ ಇರಬೇಕು. ಬಿಇಒ ಕಚೇರಿ ಕೆಲಸ ಇದ್ದರೆ ಅದನ್ನು ಬಿಆರ್‌ಸಿ, ಸಿಆರ್‌ಪಿ ಅವರ ಹತ್ತಿರ ಹೇಳಿ. ಕೆಲವು ಶಾಲೆಗೆ ಭೇಟಿ ನೀಡಿದಾಗ ಮುಖ್ಯಾಧ್ಯಾಪಕರೇ ಶಾಲೆಯಲ್ಲಿ ಇರುವುದಿಲ್ಲ. ಮುಂದಿನ ದಿನದಲ್ಲಿ ಹೀಗಾಗದಂತೆ ನೋಡಿಕೊಳ್ಳಬೇಕು ಎಂದು ಬಿಇಒ ಜಿ.ಐ. ಾಯ್ಕ ಅವರಿಗೆ ಭೀಮಣ್ಣ ನಾಯ್ಕ ಎಚ್ಚರಿಸಿದರು.

    ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ಸಮಯದಲ್ಲಿ ವ್ಯೆದ್ಯರು ಇರುವುದಿಲ್ಲ. ಒಮ್ಮೆ ಇದ್ದರೂ ರೋಗಿಗಳನ್ನು ಪರೀಕ್ಷೆ ಮಾಡದೇ ಬೇರೆ ಕಡೆ ಹೋಗುವಂತೆ ಶಿಫಾರಸು ಮಾಡುತ್ತಾರೆ. ಸಣ್ಣ-ಪುಟ್ಟ ಜ್ವರಗಳಿದ್ದರೂ ಹೀಗೆ ಮಾಡಿದರೆ ಹೇಗೆ. ಮುಂದೆ ಹಾಗೆ ಆಗದಂತೆ ನೋಡಿಕೊಳ್ಳಿ ಎಂದು ಡಾ.ಪ್ರಕಾಶ ಪುರಾಣಿಕ ಅವರಿಗೆ ಶಾಸಕ ಭೀಮಣ್ಣ ನಾಯ್ಕ ಸೂಚಿಸಿದರು.

    ಮಳೆ ಕಡಿಮೆ ಆಗಿದ್ದರಿಂದ ಮುಂದಿನ ದಿನದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳುವಂತೆ ಹಾಗೂ ಮುಂಜಾಗ್ರತೆಯಾಗಿ ಕ್ರಮ ಕೈಗೊಳ್ಳುವಂತೆ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ವಿವೇಕ ಹೆಗಡೆ ಅವರಿಗೆ ಶಾಸಕ ಭೀಮಣ್ಣ ನಾಯ್ಕ ಸೂಚಿಸಿದರು. ಎಲ್ಲ ಇಲಾಖೆ ಅಧಿಕಾರಿಗಳು ಜನಸಾಮಾನ್ಯರಿಗೆ ತೊಂದರೆ ಆಗದಂತೆ ಕಾರ್ಯನಿರ್ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.

    ತಾಪಂ ಆಡಳಿತಾಧಿಕಾರಿ ಪಿ.ಬಸವರಾಜ, ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ತಾಪಂ ಇಒ ದೇವರಾಜ ಹಿತ್ತಲಕೊಪ್ಪ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts