More

    ಸರ್ಕಾರಿ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿ

    ಕೆ.ಆರ್.ನಗರ: ಸರ್ಕಾರದ ಜನಪರವಾದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಶಾಸಕ ಡಿ.ರವಿಶಂಕರ್ ಸೂಚನೆ ನೀಡಿದರು.

    ಪಟ್ಟಣದ ತಾಲೂಕು ಪಂಚಾಯಿತಿಯ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರ ಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕು ಬರ ಪರಿಹಾರ ಪಟ್ಟಿಗೆ ಸೇರ್ಪಡೆಯಾಗಿದ್ದು, ರೈತರಿಗೆ ಸವಲತ್ತು ತಲುಪಿಸಬೇಕು ಎಂದರು.

    ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಕೆ.ಆರ್.ನಗರ ಜಿಲ್ಲೆಯಲ್ಲಿ 9 ಮತ್ತು ರಾಜ್ಯದಲ್ಲಿ 203 ನೇ ಸ್ಥಾನದಲ್ಲಿರುವುದು ತಲೆ ತಗ್ಗಿಸುವ ವಿಚಾರ. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಸ್ಥಾನಕ್ಕೇರುವಂತೆ ಮಾಡಬೇಕು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯ ಶಿಕ್ಷಕರ ಸಭೆ ಕರೆಯಬೇಕೆಂದು ಬಿಇಒ ಆರ್.ಕೃಷ್ಣಪ್ಪ ಅವರಿಗೆ ಕಟ್ಟಪ್ಪಣೆ ಮಾಡಿದರು.

    ಸರ್ಕಾರಿ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆ ಸಂಬಂಧ ಕರೆಯಲಾಗುವ ಸಭೆಗೆ ಕೆಲವು ತಾಲೂಕು ಮಟ್ಟದ ಅಧಿಕಾರಿಗಳು ಗೈರಾಗುತ್ತಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ತಿಳಿಸಿದರು. ಇದಕ್ಕೆ ದನಿಗೂಡಿಸಿದ ಡಿಸಿ ರಾಜೇಂದ್ರ, ಈ ವಿಚಾರದಲ್ಲಿ ಯಾರನ್ನೂ ಕ್ಷಮಿಸುವ ಪ್ರಶ್ನೆ ಇಲ್ಲ. ಸಭೆ ಮತ್ತು ಕಾರ್ಯಕ್ರಮ ಗಳಿಗೆ ಗೈರಾದವರ ಪಟ್ಟಿ ಪಡೆದು ಅವರಿಗೆ ಶೋಕಾಸ್ ನೋಟಿಸ್ ನೀಡುವಂತೆ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಅವರಿಗೆ ಆದೇಶಿಸಿದರು.

    ರೈತರು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಪೊಲೀಸ್ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ನೊಂದ ಕುಟುಂಬದವರಿಗೆ ಪರಿಹಾರ ಕೊಡಿಸಲು ಸಹಾಯ ಮಾಡಬೇಕು. ಆರೋಗ್ಯ ಇಲಾಖೆಯವರು ಶವ ಪರೀಕ್ಷೆ ಸೇರಿದಂತೆ ದಾಖಲಾತಿ ನೀಡಲು ವಿಳಂಬ ಮಾಡಬಾರದು ಎಂದು ತಾಕೀತು ಮಾಡಿದರು.
    ಅಧಿಕಾರಿಗಳು ನಮ್ಮ ವೇಗಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಸರ್ಕಾರ ಕಚೇರಿ ಸಮಯವನ್ನು ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ನಿಗದಿ ಮಾಡಿದ್ದು, ಕೆಲವು ಅಧಿಕಾರಿಗಳು ಮನ ಬಂದಂತೆ ಕಚೇರಿಗೆ ಆಗಮಿಸುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಶಾಸಕರು ಹೇಳಿದರು.

    ಅಬಕಾರಿ ನಿರೀಕ್ಷಕಿಗೆ ತರಾಟೆ: ಆರು ತಿಂಗಳಿನಿಂದ ಸರ್ಕಾರಿ ಕಾರ್ಯಕ್ರಮಗಳಿಗೆ ಸತತವಾಗಿ ಗೈರಾಗಿದ್ದ ಅಬಕಾರಿ ನಿರೀಕ್ಷಕಿ ಶೈಲಜಾ ಅವರನ್ನು ಶಾಸಕ ಡಿ.ರವಿಶಂಕರ್ ತರಾಟೆಗೆ ತೆಗೆದುಕೊಂಡರು. ತಕ್ಷಣ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಮತ್ತೆ ಇದು ಪುನರಾವರ್ತನೆಯಾದರೆ ಕಠಿಣ ಕ್ರಮ ಕೈಗೊಂಡು ಅಮಾನತುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಆ ನಂತರ ಶಾಸಕರು ಇಲಾಖಾವಾರು ಅಧಿಕಾರಿಗಳಿಂದ ಮಾಹಿತಿ ಪಡೆದು ಹಲವು ಸಲಹೆ ಸೂಚನೆ ನೀಡಿದರಲ್ಲದೆ, ಯಾವುದೇ ಸಮಸ್ಯೆಗಳಿದ್ದರು ನನ್ನ ಗಮನಕ್ಕೆ ತನ್ನಿ ಎಂದು ಹೇಳಿದರು.

    ತಾಪಂ ಇಒ ಜಿ.ಕೆ.ಹರೀಶ್, ತಾಲೂಕು ಅರೋಗ್ಯಾಧಿಕಾರಿ ಡಾ.ಡಿ.ನಟರಾಜು, ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ನಾಗೇಂದ್ರ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜಾರಾಂ ವೈಲಾಯ, ವಿನುತ್, ಅರ್ಕೇಶ್ವರಮೂರ್ತಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts