More

    ಸೇತುವೆ ಕಾಮಗಾರಿ ನಿಧಾನಗತಿ

    ಪ್ರವೀಣ್‌ರಾಜ್ ಕೊಲ ಕಡಬ
    ಎಲ್ಲವೂ ಅಂದುಕೊಂಡಂತೆ ಕೆಲಸ ನಡೆದಿದ್ದರೆ ಮುಂದಿನ ಮಾರ್ಚ್‌ನಲ್ಲಿ ಕಡಬ ತಾಲೂಕು ಕಡ್ಯ ಕೊಣಾಜೆ ಗ್ರಾಮದಲ್ಲಿ ಹರಿಯುವ ಗುಂಡ್ಯ ಹೊಳೆಗೆ ಉದನೆಯಲ್ಲಿ ಅಡ್ಡಲಾಗಿ ಸರ್ವಋತು ಸೇತುವೆ ಸಂಚಾರಕ್ಕೆ ಸಿದ್ಧವಾಗಿರುತ್ತ್ತಿತ್ತು. ಆದರೆ ಸೇತುವೆಯ ಪಿಲ್ಲರ್ ಕಾಮಗಾರಿಯಷ್ಟೆ ಸದ್ಯ ಪೂರ್ಣಗೊಂಡಿದ್ದು, ಉಳಿದ ಕೆಲಸ ಮುಂದುವರಿದಿಲ್ಲ. ಸರ್ವಋತು ಸೇತುವೆಯ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

    ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ 9.6 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸರ್ವಋತು ಸೇತುವೆ ಕಾಮಗಾರಿಗೆ 2017ರ ಡಿ.5ರಂದು ಅಂದಿನ ಸಚಿವ ಬಿ.ರಮಾನಾಥ ರೈ ಶಂಕುಸ್ಥಾಪನೆ ನೆರವೇರಿಸಿದ್ದರು. ಕಾಸರಗೋಡಿನ ಸಂಸ್ಥೆ ಗುತ್ತಿಗೆ ವಹಿಸಿಕೊಂಡು ಕಾಮಗಾರಿ ಕೈಗೆತ್ತಿಕೊಂಡಿದೆ.

    ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ನ್ನು ಕಡ್ಯ ಕೊಣಾಜೆ ಅಥವಾ ನೂಜಿಬಾಳ್ತಿಲದಿಂದ ಸಂಪರ್ಕಿಸಲು ಗುಂಡ್ಯ ಹೊಳೆಗೆ ಸೇತುವೆ ನಿರ್ಮಿಸಲು ಬಹುಕಾಲದಿಂದ ಆ ಭಾಗದ ಜನ ಆಗ್ರಹಿಸಿದ್ದರು. ನೂತನ ಕಡಬ ತಾಲೂಕನ್ನು ಸಂಪರ್ಕಿಸಲು ಉದನೆ, ಶಿರಾಡಿ, ಗುಂಡ್ಯ ಭಾಗದ ಜನತೆ ಈ ಸೇತುವೆ ಮೂಲಕ ಸಂಪರ್ಕ ಕಂಡುಕೊಳ್ಳಬಹುದು.
    ಶಂಕುಸ್ಥಾಪನೆ ಆಗಿ ಎರಡು ವರ್ಷ ಕಳೆದರೂ ಸೇತುವೆ ಕೆಲಸ ಪೂರ್ಣವಾಗದೆ ಪಿಲ್ಲರ್ ಕೆಲಸಗಳು ಮಾತ್ರ ಪೂರ್ಣಗೊಂಡಿವೆ. ಮಧ್ಯದಲ್ಲಿ 4 ಪಿಲ್ಲರ್‌ಗಳ ಎರಡೂ ಬದಿ ಆಧಾರ ಪಿಲ್ಲರ್ ಕಾಮಗಾರಿ ಪೂರ್ಣಗೊಂಡಿದೆ. ಸೇತುವೆ ಕೆಲಸ ನಿರೀಕ್ಷಿತ ವೇಗ ಪಡೆದಿಲ್ಲ ಎಂಬುದು ಗ್ರಾಮಸ್ಥರ ಆರೋಪ.

    ಪ್ರಯಾಣಕ್ಕೆ ತೂಗುಸೇತುವೆ: ಗುಂಡ್ಯ ಹೊಳೆಗೆ ತೂಗುಸೇತುವೆ ನಿರ್ಮಾಣವಾಗುವ ಮೊದಲು ಜನ ಹೊಳೆ ದಾಟಲು ನಾಡದೋಣಿ ಬಳಸುತ್ತಿದ್ದರು. ಮಳೆಗಾಲದಲ್ಲೂ ಅಪಾಯಕಾರಿಯಾಗಿ ದೋಣಿಯಲ್ಲೇ ಪ್ರಯಾಣಿಸುತ್ತಿದ್ದ ಜನರ ಆಗ್ರಹಕ್ಕೆ ಉದನೆಯಲ್ಲಿ 25 ವರ್ಷಗಳ ಹಿಂದೆ ತೂಗುಸೇತುವೆ ನಿರ್ಮಾಣಗೊಂಡಿತ್ತು. ಆ ಮೂಲಕ ನಡೆದುಕೊಂಡು ಮತ್ತು ದ್ವಿಚಕ್ರ ವಾಹನಗಳು ಸಂಚರಿಸಲು ಮಾತ್ರ ಸಾಧ್ಯವಾಗುತ್ತಿದೆ. ಇಲ್ಲಿ ಸೇತುವೆ ನಿರ್ಮಾಣವಾಗಬೇಕೆಂಬ ಜನರ ಆಗ್ರಹಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿ ಸೇತುವೆ ಮಂಜೂರು ಮಾಡುವಲ್ಲಿ ಯಶಸ್ವಿಯಾಗಿದ್ದರು.

    ಗುಂಡ್ಯ ಹೊಳೆಗೆ ಸೇತುವೆ ನಿರ್ಮಾಣವಾಗುತ್ತಿರುವ ಬಳಿಯಲ್ಲೇ ತೂಗುಸೇತುವೆ ಇದ್ದು, ಸದ್ಯ ಜನ ತೂಗುಸೇತುವೆ ಮೂಲಕವೇ ಪ್ರಯಾಣಿಸುತ್ತಿದ್ದಾರೆ. ಶಿಥಿಲ ಸ್ಥಿತಿಯಲ್ಲಿರುವ ತೂಗುಸೇತುವೆ ಕಳೆದ ಮಳೆಗಾಲದಲ್ಲಿ ಮುಳುಗಿತ್ತು. ಆದಷ್ಟು ಬೇಗ ಸೇತುವೆ ಕಾಮಗಾರಿ ಪೂರ್ಣಗೊಂಡರೆ ಜನ ಸೇತುವೆಯಲ್ಲಿ ಪ್ರಯಾಣಿಸಲು ಸಹಕಾರಿಯಾಗಲಿದೆ. ಜತೆಗೆ ಈ ಭಾಗಕ್ಕೆ ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿ ಆದಲ್ಲಿ ಉದನೆ- ಪುತ್ತಿಗೆ- ಕಲ್ಲುಗುಡ್ಡೆ ಮೂಲಕ ಕಡಬ ತಾಲೂಕು ಕೇಂದ್ರ ಸಂಪರ್ಕಿಸಲು ಸಹಕಾರಿಯಾಗಲಿದೆ. ಉದನೆ- ಪುತ್ತಿಗೆ- ಕಡ್ಯ ಕೊಣಾಜೆ ಸಂಪರ್ಕ ರಸ್ತೆ ಅಭಿವೃದ್ಧಿಪಡಿಸಬೇಕು ಎಂಬುದು ಸ್ಥಳಿಯರ ಬೇಡಿಕೆ.

    ಉದನೆ ಸೇತುವೆ ಕಾಮಗಾರಿ ನಿಂತಿಲ್ಲ, ನಡೆಯುತ್ತಿದೆ. ಇದರ ಸೂಪರ್ ಸ್ಟ್ರಕ್ಚರ್ ಸ್ಟೀಲ್‌ನ ಫ್ಯಾಬ್ರಿಕೇಶನ್ ಕೆಲಸಗಳು ಧಾರವಾಡ ಫ್ಯಾಕ್ಟರಿಯಲ್ಲಿ ನಡೆಯುತ್ತಿದ್ದು, ಅಲ್ಲಿಂದ ಸೆಟ್‌ಗಳನ್ನು ತಂದು ಜೋಡಿಸುವ ಕೆಲಸ ಶೀಘ್ರ ನಡೆಸಲಾಗುವುದು. ಈ ತಿಂಗಳಲ್ಲಿ ಕೆಲಸ ಪುನಾರಂಭಗೊಳ್ಳಲಿದೆ.
    ಸಂಗಮೇಶ್ ಎಕ್ಸಿಕ್ಯೂಟಿವ್ ಇಂಜಿನೀಯರ್, ಕೆ.ಆರ್.ಡಿ.ಸಿ.ಎಲ್.
     
    ಬಹು ನಿರೀಕ್ಷಿತ ಉದನೆ ಸೇತುವೆ ಕಾಮಗಾರಿ ನಡೆಯುತ್ತಲೇ ಇದೆ. ಮಳೆಗಾಲ ಮುಗಿದಿದ್ದು, ಈ ತಿಂಗಳು ಸೇತುವೆ ಕಾಮಗಾರಿ ಪ್ರಾರಂಭವಾಗಲಿದೆ. ಉದನೆ- ಕಲ್ಲುಗುಡ್ಡೆ, ಉದನೆ- ಕೊಣಾಜೆ ರಸ್ತೆ ಅಭಿವೃದ್ಧಿಯಾಗಬೇಕಿದೆ.
    ಯಶೋಧರ ಗೌಡ ಉಪಾಧ್ಯಕ್ಷ, ಕಡ್ಯ ಕೊಣಾಜೆ ಗ್ರಾಮ ಪಂಚಾಯಿತಿ

    ಸೇತುವೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಒತ್ತಡ ಹೇರಿ ಸೇತುವೆ ಶೀಘ್ರ ಲೋಕಾರ್ಪಣೆಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು.
    ರಾಜೇಶ್, ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts