More

    ಉಳಿಯ ಸೇತುವೆ ಮುಳುಗಡೆ ಭೀತಿ

    ಅನ್ಸಾರ್ ಇನೋಳಿ ಉಳ್ಳಾಲ
    ಹರೇಕಳದಲ್ಲಿ ನಿರ್ಮಾಣವಾಗುತ್ತಿರುವ ಡ್ಯಾಂ ಕಂ ಬ್ರಿಡ್ಜ್ ನಿರ್ಮಾಣ ನಿಟ್ಟಿನಲ್ಲಿ ನೀರು ನಿಲ್ಲಿಸಿರುವ ಪರಿಣಾಮ ಉಳಿಯ ಜನರು ನಿರ್ಮಿಸಿದ್ದ ಕಬ್ಬಿಣದ ತಾತ್ಕಾಲಿಕ ಸೇತುವೆ ಮುಳುಗಡೆ ಹಂತ ತಲುಪಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

    ಪಾವೂರು ಗ್ರಾಮಕ್ಕೊಳಪಟ್ಟ ಉಳಿಯ ಪುಟ್ಟ ದ್ವೀಪವಾಗಿದ್ದು, ನೇತ್ರಾವತಿ ನದಿಯ ಮಧ್ಯದಲ್ಲಿದೆ. ಅಗತ್ಯ ಕೆಲಸ, ಸಾಮಗ್ರಿಗಳು ಬೇಕಾದಲ್ಲಿ ಇಲ್ಲಿನ ಜನ ಅತ್ತ ಅಡ್ಯಾರ್ ಮೂಲಕ, ಇಲ್ಲವೇ ಇತ್ತ ಪಾವೂರು ಆಗಿ ನಗರಕ್ಕೆ ಹೋಗಬೇಕಾಗುತ್ತದೆ. ಎರಡೂ ಕಡೆಗಳಿಂದ ಹೋಗಬೇಕಾದರೂ ನೇತ್ರಾವತಿ ನದಿ ದಾಟಲೇಬೇಕು. ಹಿಂದೆ ಇಲ್ಲಿ 54 ಮನೆಗಳಿದ್ದು, ಇಲ್ಲಿನವರು ಮೀನುಗಾರಿಕೆ ನಂಬಿ ಜೀವನ ಸಾಗಿಸುತ್ತಿದ್ದರು. ಕ್ರೈಸ್ತರೇ ಹೆಚ್ಚಾಗಿ ವಾಸವಿದ್ದು, ಪುಟ್ಟ ಚರ್ಚ್ ಕೂಡಾ ಇಲ್ಲಿದೆ.

    ಕುಟುಂಬಗಳು ವಲಸೆ: ಇಲ್ಲಿಂದ ನಗರದ ಶಾಲೆ, ಕಾಲೇಜು, ಕೆಲಸಗಳಿಗೆ ಹೋಗಬೇಕಾದರೆ ನದಿಯನ್ನೇ ದಾಟಬೇಕಿದ್ದು, ಮಳೆಗಾಲದಲ್ಲಿ ನದಿ ದಾಟುವುದು ಕಷ್ಟ. ಅಲ್ಲದೆ ದ್ವೀಪವೂ ಭಾಗಶಃ ಮುಳುಗುತ್ತಿತ್ತು. ಹಿಂದೆ ಇಲ್ಲಿ ಪ್ರಾಥಮಿಕ ಶಾಲೆ ಇತ್ತಾದರೂ ಶಿಕ್ಷಕರು ಬರಲು ಕಷ್ಟವಾಗಿ ಮುಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿಗೆ ಸೇತುವೆ ನಿರ್ಮಿಸಬೇಕೆನ್ನುವ ಸ್ಥಳೀಯರ ಹಲವು ವರ್ಷಗಳ ಬೇಡಿಕೆ ಈಡೇರಲೇ ಇಲ್ಲ. ಇದರಿಂದ ಬೇಸತ್ತ 24 ಕುಟುಂಬಗಳು ನಗರಕ್ಕೆ ವಲಸೆ ಹೋಗಿದ್ದು, ಪ್ರಸ್ತುತ 30 ಕುಟುಂಬಗಳು ವಾಸವಿದೆ.

    ಸ್ಥಳೀಯರೇ ನಿರ್ಮಿಸಿದ ಸೇತುವೆ: 1993ರಿಂದ ಇಲ್ಲಿ ಸ್ಥಳೀಯರೇ ಹಣ ಸಂಗ್ರಹಿಸಿ ಬೇಸಿಗೆ ಕಾಲದ ಅನುಕೂಲಕ್ಕಾಗಿ ಬಿದಿರಿನ ತಾತ್ಕಾಲಿಕ ಸೇತುವೆ ನಿರ್ಮಿಸುತ್ತಿದ್ದರು. ಆದರೆ ಅದು ಬೇಗನೇ ಮುರಿದು ಬೀಳುವುದು, ನಂತರದ ವರ್ಷ ಉಪಯೋಗಕ್ಕೆ ಬಾರದ ಕಾರಣ ಕಳೆದ ಮೂರು ವರ್ಷಗಳಿಂದ ಕಬ್ಬಿಣದ ಪೈಪ್, ಹಲಗೆಗಳನ್ನು ಬಳಸಿ ಸೇತುವೆ ನಿರ್ಮಿಸುತ್ತಿದ್ದು, ಇದಕ್ಕೆ 20 ಲಕ್ಷ ಖರ್ಚು ರೂ. ಮಾಡಿದ್ದಾರೆ. ಎರಡು ವರ್ಷಗಳ ಹಿಂದೆ ಕಿಡಿಗೇಡಿಗಳು ಈ ಸೇತುವೆಗೆ ಹಾನಿ ಮಾಡಿದ್ದು ಸುದ್ದಿಯಾಗಿತ್ತು.

    ಮರಳುಗಾರಿಕೆ ನಿಷೇಧಿಸಿದ್ದ ಡಿಸಿ: ಉಳಿಯದ ಆಸುಪಾಸಿನಲ್ಲಿ ನಡೆಯುತ್ತಿದ್ದ ಮರಳುಗಾರಿಕೆ ಸ್ಥಳೀಯರಲ್ಲಿ ಭೀತಿ ಹುಟ್ಟಿಸಿತ್ತು. ಈ ನಿಟ್ಟಿನಲ್ಲಿ ಅಂದಿನ ಜಿಲ್ಲಾಧಿಕಾರಿ ಎ. ಬಿ.ಇಬ್ರಾಹಿಂ ಆಸುಪಾಸಿನಲ್ಲಿ ಮರಳುಗಾರಿಕೆ ನಿಷೇಧಿಸಿದ್ದರು. ಕೆಲವು ವರ್ಷಗಳ ಹಿಂದೆ ಅಡ್ಯಾರ್‌ನ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಕೈಗೊಂಡು ಸುದ್ದಿಯಾದಾಗ ಆಗಿನ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ ಭೇಟಿ ನೀಡಿ ಅಲ್ಲೇ ಅಧಿಕಾರಿಗಳ ಸಭೆ ನಡೆಸಿದ್ದರು. ಬಳಿಕ ಸ್ಥಳೀಯರ ಬಳಕೆಗಾಗಿ 8 ಲಕ್ಷ ರೂ.ನ ಬೋಟ್ ಮತ್ತು ತೆರೆದ ಬಾವಿಯ ವ್ಯವಸ್ಥೆ ಮಾಡಿದ್ದರು.

    ಡ್ಯಾಂನಿಂದ ಮುಳುಗುವ ಹಂತ: ಇದೀಗ ಹರೇಕಳದಲ್ಲಿ ಡ್ಯಾಂ ಕಂ ಬ್ರಿಡ್ಜ್ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ನೀರು ನಿಲ್ಲಿಸಲಾಗಿದೆ. ಇದರಿಂದಾಗಿ ಉಳಿಯದ ತಾತ್ಕಾಲಿಕ ಸೇತುವೆ ಮುಳುಗುವ ಹಂತದಲ್ಲಿದ್ದು, ಈಗಲೇ ನೀರು ಸೇತುವೆಯನ್ನು ಮೀರಿದೆ. ಮುಂದಕ್ಕೆ ಇನ್ನೂ ಒಂದು ಮೀಟರ್ ಎತ್ತರಕ್ಕೆ ನೀರು ನಿಲ್ಲಲಿದೆ ಎಂದು ಡ್ಯಾಂ ನಿರ್ಮಿಸುತ್ತಿರುವ ಗುತ್ತಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಬೇಸಿಗೆಯಲ್ಲೇ ಸೇತುವೆ ಮುಳುಗಿದೆ. ಮಳೆಗಾಲದಲ್ಲಿ ದ್ವೀಪವೇ ಮುಳುಗುವ ಭೀತಿ ಸ್ಥಳೀಯರದ್ದಾಗಿದೆ. ಅಲ್ಲದೆ ಮೀನುಗಾರಿಕೆಯೂ ಸಾಧ್ಯವಾಗುತ್ತಿಲ್ಲ. ಹಲವು ಬಾರಿ ಮಳೆಗಾಲದಲ್ಲಿ ವಾಸಸ್ಥಾನ ವರ್ಗಾಯಿಸುವ ಸ್ಥಳೀಯರು, ಈ ಬಾರಿ ಮಳೆಗಾಲಕ್ಕೆ ಮೊದಲೇ ಉಳಿಯ ಬಿಡುವ ಆತಂಕ ಎದುರಿಸುತ್ತಿದ್ದಾರೆ. ಅದಲ್ಲದೆ ಪಾವೂರು ಕಡವಿನ ಬಳಿ ಅಜುರುಳಿಯ ಎನ್ನುವ ಪ್ರದೇಶವೂ ಮುಳುಗುವ ಅಪಾಯದಲ್ಲಿದ್ದು, ಇಲ್ಲಿ ವಾಸವಿರುವ ಹತ್ತು ಕುಟುಂಬಗಳಲ್ಲೂ ಆತಂಕ ಮನೆಮಾಡಿದೆ.

    ಡ್ಯಾಂ ನಿರ್ಮಾಣಕ್ಕಾಗಿ ನೀರು ನಿಲ್ಲಿಸಿರುವುದರಿಂದ ಆಗಿರುವ ತೊಂದರೆ ಬಗ್ಗೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಈಗಲೇ ನಮ್ಮ ಸೇತುವೆ ಮುಳುಗುವ ಹಂತದಲ್ಲಿದೆ. ಹೀಗೇ ಮುಂದುವರಿದರೆ ಮಳೆಗಾಲದಲ್ಲಿ ಉಳಿಯ ಮಾತ್ರವಲ್ಲದೆ ನದಿಬದಿಯ ಮನೆಗಳು ಮುಳುಗಿ ಅನಾಹುತ ಆಗುವ ಆತಂಕ ಇದೆ.
    ಫಾ.ಜೆರಾಲ್ಡ್ ಲೋಬೋ, ಧರ್ಮಗುರು, ಉಳಿಯ ಇನ್ಫೆಂಟ್ ಜೀಸಸ್ ಚರ್ಚ್

    ಸೇತುವೆ ನಿರ್ಮಿಸುವಂತೆ ಹಲವು ವರ್ಷಗಳಿಂದ ಮಾಡಿದ ಮನವಿ ಪ್ರಯೋಜನವಾಗಿಲ್ಲ. ಸೇತುವೆಗೆ ಒಂದೂವರೆ ಕೋಟಿ ರೂ. ಅನುದಾನ ಮೀಸಲಿಟ್ಟ ಬಗ್ಗೆ ಶಾಸಕರ ಹೇಳಿಕೆ ಪತ್ರಿಕೆಗಳಲ್ಲಿ ಬಂದರೂ ಅದರ ಸುದ್ದಿಯಿಲ್ಲ. ಡ್ಯಾಂನಿಂದ ಸೇತುವೆ ಮುಳುಗಿದ್ದು, ನೀರು ಹೆಚ್ಚಾಗಿರುವುದರಿಂದ ಮೀನುಗಾರಿಕೆ ನಡೆಸಲು ಸಾಧ್ಯವಾಗುತ್ತಿಲ್ಲ
    ಗಿಲ್ಬರ್ಟ್ ಡಿಸೋಜ, ಉಪಾಧ್ಯಕ್ಷ, ಇನ್ಫೆಂಟ್ ಜೀಸಸ್ ಚರ್ಚ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts