More

    ಶಿಥಿಲ ಸೇತುವೆ ತೆರವಾಗದೆ ಸಮಸ್ಯೆ

    ಉಡುಪಿ: ಕೆಮ್ಮಣ್ಣು- ಪಡುಕುದ್ರು ಸಂಪರ್ಕಿಸುವ 60 ವರ್ಷದ ಹಿಂದಿನ ಸಂಪರ್ಕ ಕಲ್ಪಿಸುವ ಶಿಥಿಲ ಸೇತುವೆ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸೇತುವೆ ಮುರಿದು ಅಪಾಯಕಾರಿಮಟ್ಟಕ್ಕೆ ತಲುಪಿದ್ದು, ಯಾವಾಗ ಬೇಕಾದರೂ ಕುಸಿಯುವ ಸ್ಥಿತಿಯಲ್ಲಿದೆ. ಸೇತುವೆ ಕುಸಿಯುವ ಮುನ್ನ ಎಚ್ಚೆತ್ತು ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸಲು ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಲೋಕೋಪಯೋಗಿ ಇಲಾಖೆ ವತಿಯಿಂದ 60 ವರ್ಷ ಹಿಂದೆ ಸ್ವರ್ಣ ನದಿ ಒಳಹರಿವು ಹಿನ್ನೀರು ಪ್ರದೇಶದಲ್ಲಿರುವ ಕೆಮ್ಮಣ್ಣು- ಪಡುಕುದ್ರು ಸಂಪರ್ಕಿಸುವ ಪ್ರಮುಖ ಸೇತುವೆಯಾಗಿ ಇದನ್ನು ನಿರ್ಮಿಸಲಾಗಿತ್ತು. ಶಿಥಿಲಾವಸ್ಥೆಗೆ ತಲುಪಿ ಒಂದೊಂದೇ ಭಾಗಗಳು ಕುಸಿಯುವ ಹಂತದಲ್ಲಿವೆ. ಇದಕ್ಕೆ ಪರ್ಯಾಯವಾಗಿ 15 ವರ್ಷದ ಹಿಂದೆ ಹೊಸ ಸೇತುವೆಯನ್ನು ನಿರ್ಮಿಸಲಾಗಿದ್ದು, ಸ್ಥಳೀಯರು ಬಳಸುತ್ತಿದ್ದಾರೆ.

    ಕುಸಿದು ಬಿದ್ದರೆ ಅಪಾಯ: ಸೇತುವೆ ನದಿಗೆ ಕುಸಿದು ಬಿದ್ದಲ್ಲಿ ಪರಿಸರಕ್ಕೆ ಗಂಭಿರ ಹಾನಿ ಆಗಲಿದೆ ಹಾಗೂ ಸೇತುವೆಯ ಅಡಿಯಲ್ಲಿ ಸಂಚರಿಸುವ ದೋಣಿಗಳಿಗೆ, ನಾವಿಕರ ಜೀವಕ್ಕೆ ಅಪಾಯವಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಈ ಸೇತುವೆ 150 ಅಡಿಯಷ್ಟು ಉದ್ದವಿದ್ದು, 20 ರಿಂದ 25 ಅಡಿಯಷ್ಟು ಎತ್ತರವಿದೆ. ಈ ನೀರಿನಲ್ಲಿ ಸಣ್ಣ ಮೀನುಗಾರಿಕೆ ದೋಣಿ, ಸರಕು ದೋಣಿಗಳು ಸಾಗುತ್ತವೆ. ಒಂದು ವೇಳೆ ಸೇತುವೆ ಕುಸಿದಲ್ಲಿ ನೀರು ಹರಿಯಲು ತಡೆಯಾಗಿ ಸಮಸ್ಯೆಯಾಗಲಿದೆ ಎಂದು ನಾಗರಿಕರು ಹೇಳುತ್ತಾರೆ.

    ಪಿಡಬ್ಲೂೃಡಿ ಇಂಜಿನಿಯರ್ ಪರಿಶೀಲನೆ: ಕುಸಿದು ಬೀಳುವ ಹಂತದಲ್ಲಿರುವ ಕೆಮ್ಮಣ್ಣು- ಪಡುಕುದ್ರು ಶಿಥಿಲ ಸೇತುವೆಯ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಕೆಮ್ಮಣ್ಣು ಗ್ರಾಮ ಪಂಚಾಯಿತಿ ನೀಡಿದೆ. ಸಾರ್ವಜನಿಕರ ದೂರು ಆಧರಿಸಿ ಸೇತುವೆಯನ್ನು ಶೀಘ್ರ ತೆರವುಗೊಳಿಸಬೇಕು ಎಂದು ಪಿಡಬ್ಲೂೃಡಿಗೆ ತಿಳಿಸಿದ್ದೇವೆ. ಅದರಂತೆ ಇಲಾಖೆ ಇಂಜಿನಿಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಗ್ರಾಮ ಪಂಚಾಯಿತಿ ಪಿಡಿಒ ಕಮಲ ತಿಳಿಸಿದ್ದಾರೆ.

    ಸಂಪೂರ್ಣ ಕುಸಿದು ಬೀಳುವ ಹಂತದಲ್ಲಿರುವ ಕೆಮ್ಮಣ್ಣು-ಪಡುಕುದ್ರು ಹಳೆಯ ಸೇತುವೆಯನ್ನು ಶೀಘ್ರ ತೆರವುಗೊಳಿಸಬೇಕು. ಒಮ್ಮೆಕುಸಿದು ಬಿದ್ದರೆ ಸ್ಥಳೀಯ ದೋಣಿಗಳ ಸಾಗಾಟಕ್ಕೆ ಮತ್ತು ತೆರವುಗೊಳಿಸುವ ಕೆಲಸ ಅಸಾಧ್ಯವಾಗಲಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಳ್ಳಬೇಕು.
    ರಿಚರ್ಡ್ ಕೆಮ್ಮಣ್ಣು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts