More

    ಸೇತುವೆ ಮುಗಿಯಲು ಇನ್ನೆಷ್ಟು ವರ್ಷ?

    ಮಾಂಜರಿ: ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಚೆಂದೂರ ಟೇಕ-ಟಾಕಳಿ ಮಾರ್ಗದ ಸೇತುವೆ ಕಾಮಗಾರಿ ಅರ್ಧಕ್ಕೆ ನಿಂತು ಐದು ವರ್ಷವಾಗುತ್ತ ಬಂದರೂ ಪೂರ್ಣಗೊಳಿಸಲು ಸರ್ಕಾರ ಮನಸ್ಸು ಮಾಡುತ್ತಿಲ್ಲ. ಸರ್ಕಾರದ ಈ ವಿಳಂಬ ಧೋರಣೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನೆರೆಯ ಮಹಾರಾಷ್ಟ್ರ ಹಾಗೂ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಚೆಂದೂರ ಟೇಕ- ಟಾಕಳಿ ಮಾರ್ಗದ ಸೇತುವೆ ನಿರ್ಮಾಣ ಕಾಮಗಾರಿಗೆ ರಾಜ್ಯ ಸರ್ಕಾರ 18.17 ಕೋಟಿ ರೂ. ಅನುದಾನ ಮಂಜೂರುಗೊಳಿಸಿದೆ. ಕಳೆದ 2013ರಲ್ಲಿ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ದಿಂದ ಮಂಜೂರಾಗಿದೆ. 2015ರಲ್ಲಿ ಕಾಮಗಾರಿ ಆರಂಭಗೊಂಡು ಈವರೆಗೆ ಶೇ. 20ರಷ್ಟು ಮಾತ್ರ ಕಾಮಗಾರಿ ಮುಗಿದಿದೆ. ಸೇತುವೆ ಪೂರ್ಣಗೊಳಿಸಲು ಸರ್ಕಾರಕ್ಕೆ ಇನ್ನೂ ಎಷ್ಟು ವರ್ಷ ಬೇಕು ಎಂಬುದು ಸ್ಥಳೀಯ ರೈತರ ಪ್ರಶ್ನೆ.

    ರಾಜ್ಯದ ಗಡಿ ಭಾಗದ ಜನರು ನೆರೆಯ ಮಹಾರಾಷ್ಟ್ರದ ಸುಕ್ಷೇತ್ರ ನರಸಿಂಹವಾಡಿ, ಖೇದರಾಪುರ ಹಾಗೂ ಮುಂತಾದ ಕಡೆಗಳಿಗೆ ಹೋಗಲು ಈ ಸೇತುವೆ ಅನುಕೂಲವಾಗಲಿದೆ. ಗಡಿ ಭಾಗದಲ್ಲಿ ಹತ್ತಾರು ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಭಾಗದ ರೈತರು ಬೆಳೆದ ಕಬ್ಬು ಸಾಗಾಟಕ್ಕೂ ಸೇತುವೆ ಅನುಕೂಲವಾಗುತ್ತಿತ್ತು. ಹೀಗಾಗಿಯೇ ಸರ್ಕಾರ ಮಹತ್ವದ ಈ ಸೇತುವೆಗೆ ಮಂಜೂರಾತಿಯನ್ನೂ ಕೊಟ್ಟಿತ್ತು. ಈ ಸೇತುವೆ ಮಂಜೂರಾದಾಗ ಎರಡು ರಾಜ್ಯದ ಗಡಿ ಭಾಗದ ಜನರು ಸಂತಸ ಪಟ್ಟಿದ್ದರು. ಆದರೆ, ಆ ಸಂತೋಷ ಕ್ಷಣಿಕ ಎಂಬಂತಾಗಿದೆ.

    ರೈತರ ಆರೋಪ: ಸೇತುವೆ ನಿರ್ಮಾಣಕ್ಕೆ ಆರಂಭದಲ್ಲಿ ಸ್ಥಳೀಯ ರೈತರು ವಿರೋಧ ವ್ಯಕ್ತಪಡಿಸಿದ್ದರು. ಸೇತುವೆ ನಿರ್ಮಾಣಕ್ಕೆ ರೈತರು ಕೊಡುವ ಜಮೀನಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕೆಂದು ರೈತರು ಬೇಡಿಕೆ ಇಟ್ಟಿದ್ದರು. ಆ ವೇಳೆಯಲ್ಲಿದ್ದ ಜಿಲ್ಲಾಧಿಕಾರಿ, ಸೇತುವೆ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ಸೂಕ್ತ ಪರಿಹಾರ ಒದಗಿಸಿ ಶೀಘ್ರವಾಗಿ ಸೇತುವೆ ಕಾಮಗಾರಿ ಮುಕ್ತಾಯಗೊಳಿಸಬೇಕು ಎಂದು ಕೆಆರ್‌ಡಿಸಿಎಲ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೆ, ಇನ್ನೂ ಸೇತುವೆ ಕಾಮಗಾರಿ ಮುಗಿದಿಲ್ಲ ಎಂದು ಗ್ರಾಮದ ರೈತರು ಆರೋಪಿಸಿದ್ದಾರೆ.

    ನೆರೆಯಲ್ಲಿ ಕೊಚ್ಚಿ ಹೋದ ಸಲಕರಣೆ

    ಅರ್ಧಕ್ಕೆ ಸ್ಥಗಿತಗೊಂಡಿದ್ದ ಸೇತುವೆ ಪೂರ್ಣಗೊಳಿಸಲು ಸರ್ಕಾರ ಒತ್ತಡ ಹಾಕಿದಾಗ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಲು ಸಿಮೆಂಟ್, ಕಬ್ಬಿಣ ಮುಂತಾದ ಸಲಕರಣೆ ತಂದು ನದಿ ಬದಿಯಲ್ಲಿ ಇಟ್ಟಿದ್ದರು. ಆದರೆ, ಮಳೆಗಾದಲ್ಲಿ ಭೀಕರ ಪ್ರವಾಹಕ್ಕೆ ಸೇತುವೆ ಸಲಕರಣೆಗಳು ಕೊಚ್ಚಿಕೊಂಡು ಹೋಗಿದ್ದರಿಂದ ಕಾಮಗಾರಿ ಆರಂಭಿಸಲು ವಿಳಂಬವಾಗಿದೆ ಎನ್ನುತ್ತಾರೆ ಕೆಆರ್‌ಡಿಸಿಎಲ್ ಅಧಿಕಾರಿಗಳು.

    ಸೇತುವೆ ನಿರ್ಮಾಣ ಮಾಡಲು ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದ್ದರಿಂದ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಭೂಸ್ವಾಧೀನ ಪ್ರಕ್ರಿಯೆ ಮುಕ್ತಾಯವಾಗಿ ಕಾಮಗಾರಿ ಆರಂಭ ಮಾಡುವಷ್ಟರಲ್ಲಿ ನೆರೆ ಬಂದಿದ್ದರಿಂದ ಸಾಧ್ಯವಾಗಿರಲಿಲ್ಲ. ಸದ್ಯ ಯಾವುದೇ ಸಮಸ್ಯೆಯಿಲ್ಲ. ಶೀಘ್ರವಾಗಿ ಕಾಮಗಾರಿ ಆರಂಭಿಸಿ ಮುಕ್ತಾಯಗೊಳಿಸಲು ಗುತ್ತಿಗೆದಾರರಿಗೆ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
    | ನಾರಾಯಣ ಕುರಂಧಕರ ಮುಖ್ಯ ಇಂಜಿನಿಯರ್ ಕೆಆರ್‌ಡಿಸಿಎಲ್ ಹುಬ್ಬಳ್ಳಿ

    ಚೆಂದೂರ ಟೇಕ- ಟಾಕಳಿ ಸೇತುವೆ 2013ರಲ್ಲಿ ಮಂಜೂರಾಗಿದೆ. ಆದರೆ, ಸರ್ಕಾರದ ನಿರ್ಲಕ್ಷೃದಿಂದಾಗಿ ಕಾಮಗಾರಿ ಈವರೆಗೂ ಮುಕ್ತಾಯವಾಗಿಲ್ಲ. ನದಿಯಲ್ಲಿ ನಾಲ್ಕು ಪಿಲ್ಲರ್ ನಿಲ್ಲಿಸಿ ಐದಾರು ವರ್ಷ ಕಳೆದಿವೆ. ಈಗಲಾದರೂ ಸರ್ಕಾರ ಸೇತುವೆ ನಿರ್ಮಾಣ ಮಾಡಿ ಜನರಿಗೆ ಅನುಕೂಲ ಕಲ್ಪಿಸಬೇಕು.
    | ಮನೋಜ ಖಿಚಡೆ ಚೆಂದೂರ ಟೇಕ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts