More

    ಗ್ರಾಮಸ್ಥರಿಂದಲೇ ಸೇತುವೆ ನಿರ್ಮಾಣ, ಪಾಲೋಳಿ ಶಾಶ್ವತ ಸೇತುವೆ ಹೋರಾಟ ಸಮಿತಿ ನೇತೃತ್ವದಲ್ಲಿ ಕಾಮಗಾರಿ

    ಕಡಬ: ಕಡಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪಿಜಕಳ ಬಳಿಯ ಪಾಲೋಳಿ ಎಂಬಲ್ಲಿ ಗ್ರಾಮಸ್ಥರೇ ಒಟ್ಟಾಗಿ ಶ್ರಮದಾನದ ಮೂಲಕ ಕುಮಾರಧಾರಾ ನದಿಗೆ ನಿರ್ಮಿಸಿದ ತಾತ್ಕಾಲಿಕ ಸೇತುವೆ ದುರಸ್ತಿಗೊಂಡು ಗುರುವಾರ ಸಂಜೆ ವಾಹನ ಸಂಚಾರಕ್ಕೆ ಮುಕ್ತವಾಗಿದೆ.

    7 ವರ್ಷಗಳ ಹಿಂದೆ ಸ್ಥಳೀಯರು ಮಣ್ಣು , ಕಲ್ಲು, ಸಿಮೆಂಟ್ ಪೈಪು ಮುಂತಾದ ಪರಿಕರಗಳಿಂದ ನಿರ್ಮಿಸಿದ ತಾತ್ಕಾಲಿಕ ಸೇತುವೆಗೆ ಅಡಿಪಾಯ ಹಾಕಲಾಯಿತು. ಮಳೆಗಾಲದಲ್ಲಿ ನೆರೆ ನೀರಿಗೆ ಹಾನಿಯಾಗುತ್ತಿತ್ತು. ಬಳಿಕ ಪ್ರತಿ ಬೇಸಿಗೆ ಕಾಲದಲ್ಲಿ ಪುನರ್ ನಿರ್ಮಾಣ ಮಾಡಲಾಗುತ್ತಿದೆ. ಅಂತೆಯೇ ಈ ಬಾರಿಯೂ ತಾತ್ಕಾಲಿಕ ಸೇತುವೆ ರಚಿಸಲಾಗಿದೆ. ಈ ಸೇತುವೆ ಎಡಮಂಗಲ, ಪಿಜಕಳ ಹಾಗೂ ಕಡಬದ ಸಂಪರ್ಕ ಕೊಂಡಿ.

    ಈ ಬಾರಿಯೂ ಸೇತುವೆ ಪುನರ್ ನಿರ್ಮಾಣಕ್ಕೆ 40 ಸಾವಿರ ರೂ. ವೆಚ್ಚ ತಗುಲಿದೆ. ಎಡಮಂಗಲ ಹಾಗೂ ಕಡಬ ಭಾಗಗಳ ಗ್ರಾಮಸ್ಥರು, ದಾನಿಗಳು ಆರ್ಥಿಕ ನೆರವು ನೀಡಿದ್ದಾರೆ. ಶ್ರಮದಾನ ಮತ್ತು ಜೆಸಿಬಿ ಯಂತ್ರ ಮೂಲಕ ಪಾಲೋಳಿ ಶಾಶ್ವತ ಸೇತುವೆ ಹೋರಾಟ ಸಮಿತಿಯ ಮೇಲುಸ್ತುವಾರಿ ಮತ್ತು ಮಾರ್ಗದರ್ಶನದೊಂದಿಗೆ ಸೇತುವೆ ದುರಸ್ತಿಗೊಳಿಸಿ ವಾಹನ ಸಂಚಾರಕ್ಕೆ ಸಿದ್ಧಗೊಳಿಸಲಾಗಿದೆ.

    ಕಡಬ-ಎಡಮಂಗಲ ಹತ್ತಿರದ ದಾರಿ
    ಪಾಲೋಳಿ ಮತ್ತು ಎಡಮಂಗಲ ಪೇಟೆಯ ಮಧ್ಯೆ ಇರುವುದು ಕೇವಲ 2 ಕಿ.ಮೀ. ಅಂತರ. ಆದರೆ ಕುಮಾರಧಾರಾ ನದಿ ಹರಿಯುತ್ತಿರುವುದರಿಂದ ಪಾಲೋಳಿ- ಪಿಜಕ್ಕಳದ ಜನರು ಎಡಮಂಗಲ ತಲುಪಬೇಕಾದರೆ ಕಡಬ- ಕೋಡಿಂಬಾಳ- ಪುಳಿಕುಕ್ಕು ಮೂಲಕ 15 ಕಿ.ಮೀ.ಗಳಷ್ಟು ದೂರ ಸುತ್ತು ಬಳಸಿ ಪ್ರಯಾಣಿಸಬೇಕು. ಈ ಸೇತುವೆ ಮೂಲಕ ಬೇಸಿಗೆಯಲ್ಲಿ ಕಡಬದಿಂದ ಕೇವಲ 5 ಕಿ.ಮೀ. ಸಂಚರಿಸಿ ಎಡಮಂಗಲ ತಲುಪಬಹುದು.

    ಯುವಕರ ಕನಸು
    ಬೇಸಿಗೆಯಲ್ಲಿ ಉಪಯೋಗಿಸಬಹುದಾದ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡುವ ಕಲ್ಪನೆ ಸ್ಥಳೀಯ ಕುಮಾರಧಾರಾ ಯುವಕ ಮಂಡಲದ ಯುವಕರದ್ದು. ಅದರ ಫಲವಾಗಿ ಆರಂಭದಲ್ಲಿ ದಾನಿಗಳ ಆರ್ಥಿಕ ನೆರವಿನಿಂದ ಎಡಮಂಗಲ ಹಾಗೂ ಪಿಜಕಳ ಪರಿಸರದ ಜನರ ಶ್ರಮದಾನದ ಫಲವಾಗಿ 120 ಮೀ. ಉದ್ದ ಮತ್ತು 10 ಮೀ. ಆಗಲದ ಸೇತುವೆ ನಿರ್ಮಿಸಲಾಗಿತ್ತು. ಆದರೆ ಮಳೆಗಾಲದಲ್ಲಿ ನೀರಿನ ಹೊಡೆತಕ್ಕೆ ಸಿಲುಕಿ ಕೊಚ್ಚಿಹೋಗುವ ಸೇತುವೆಯನ್ನು ಪ್ರತೀ ಬೇಸಿಗೆಯಲ್ಲಿ ಊರವರು ಪುನರ್ ನಿರ್ಮಾಣ ಮಾಡುತ್ತಿದ್ದಾರೆ.

    ವಾಹನ ಸಂಚಾರಕ್ಕೆ ಅನುವು
    ಎಡಮಂಗಲ ದೇವಸ್ಥಾನದ ಪ್ರಧಾನ ಅರ್ಚಕ ಸೀತಾರಾಮಯ್ಯ ತೆಂಗಿನ ಕಾಯಿ ಒಡೆದು ತಾತ್ಕಾಲಿಕ ಸೇತುವೆ ಮೇಲೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪಾಲೋಳಿ ಶಾಶ್ವತ ಸೇತುವೆ ಹೋರಾಟ ಸಮಿತಿ ಅಧ್ಯಕ್ಷ ಸಾಂತಪ್ಪ ಗೌಡ ಪಿಜಕಳ ಶುಭಹಾರೈಸಿದರು. ಪಾಲೋಳಿ ಶಾಶ್ವತ ಸೇತುವೆ ಹೋರಾಟ ಸಮಿತಿ ಗೌರವಾಧ್ಯಕ್ಷ ಚಂದ್ರಶೇಖರ ಗೌಡ ಮರಕ್ಕಡ, ಉಪಾಧ್ಯಕ್ಷ ಜೋಸ್ ಕೇಂಜೂರು, ಕಾರ್ಯದರ್ಶಿ ಶ್ಯಾಮ್ ಥಾಮಸ್, ಖಜಾಂಚಿ ರವೀಂದ್ರ ನೂಚಿಲ ಮೊದಲಾದವರಿದ್ದರು.

    ಹಲವು ವರ್ಷಗಳಿಂದ ಪಾಲೋಳಿಯಲ್ಲಿ ಸರ್ವಋತು ಸೇತುವೆ ನಿರ್ಮಾಣವಾಗಬೇಕೆಂದು ಸರ್ಕಾರದ ಮುಂದೆ ಬೇಡಿಕೆಯಿಡುತ್ತಿದ್ದೇವೆ. ಕೆಲ ದಿನಗಳ ಹಿಂದೆ ಕಡಬದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸಚಿವ ಎಸ್.ಅಂಗಾರ ಅವರನ್ನು ಭೆೇಟಿಯಾಗಿ ನಮ್ಮ ಬೇಡಿಕೆಯನ್ನು ಮತ್ತೊಮ್ಮೆ ಮಂಡಿಸಿದ್ದೇವೆ.
    ಸಾಂತಪ್ಪ ಗೌಡ, ಅಧ್ಯಕ್ಷರು, ಶಾಶ್ವತ ಸೇತುವೆ ಹೋರಾಟ ಸಮಿತಿ

    ಸರ್ಕಾರದಿಂದ ಸರ್ವಋತು ಸೇತುವೆ ನಿರ್ಮಾಣ ಆಗಬೇಕೆಂಬ ಬಯಕೆ ನಮ್ಮೆಲ್ಲರದಾಗಿದೆ. ಶಾಶ್ವತ ಸೇತುವೆ ನಿರ್ಮಾಣವಾದರೆ ಈ ಭಾಗದ ಸಾರ್ವಜನಿಕರಿಗೆ ಬಹಳ ದೊಡ್ಡ ಪ್ರಯೋಜನವಾಗಲಿದೆ.
    ಕೇಂಜೂರು ಜೋಸ್ ಎ.ಜೆ., ಎಡಮಂಗಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts