More

    ಲಂಚ ಕೊಟ್ಟರೆ ಗಣಿಗಾರಿಕೆಗೆ ಅಸ್ತು..!

    ಬೆಳಗಾವಿ: ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಬೇಕಿದ್ದ ಅಧಿಕಾರಿಗಳೇ ಹಣದಾಸೆಗಾಗಿ ಸರ್ಕಾರಿ ನಿಯಮಗಳನ್ನೆಲ್ಲ ಗಾಳಿಗೆ ತೂರಿ, ಮನಬಂದಂತೆ ಪರವಾನಗಿ ನೀಡುತ್ತಿದ್ದಾರೆ. ಬರ ಹಾಗೂ ಪ್ರವಾಹದಿಂದ ತತ್ತರಿಸಿದ್ದ ಗಡಿಜಿಲ್ಲೆ ಅಕ್ರಮ ಗಣಿಗಾರಿಕೆಯಿಂದ ಅದುರುತ್ತಿದೆ.

    ಗಣಿಗಾರಿಕೆ ಆರಂಭಿಸಲು ಪರಿಸರ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರ ವಿಧಿಸಿರುವ ಕಾನೂನು ಪಾಲನೆಯಾದರೆ ಮಾತ್ರ ಪರವಾನಗಿ ನೀಡಬೇಕು. ಆದರೆ, ತಮ್ಮ ಕೈ ಬಿಸಿ ಮಾಡಿದರೆ ಸಾಕು, ನಿಯಮ ಪಾಲನೆಯಾಗದಿದ್ದರೂ ಪರವಾಗಿಲ್ಲ ಪರವಾನಗಿ ಮಾತ್ರ ಸುಲಭವಾಗಿ ಲಭ್ಯವಾಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಗಣಿಗಾರಿಕೆ ನಡೆಯುತ್ತಿದೆ.

    ಜಿಲ್ಲೆಯ 10 ತಾಲೂಕುಗಳಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಒಟ್ಟು 251 ಪರವಾನಗಿ ನೀಡಲಾಗಿದೆ. ಕಳೆದ ವರ್ಷ ಪ್ರವಾಹ ಸಂದರ್ಭದಲ್ಲಿ ಹಾನಿಯಾದ ರಸ್ತೆ ಹಾಗೂ ಸೇತುವೆ ಸೇರಿ ಇನ್ನಿತರ ಸಾರ್ವಜನಿಕ ಆಸ್ತಿ ದುರಸ್ತಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಸಹಜವಾಗಿಯೇ ಗಣಿಗಾರಿಕೆಗೆ ಮೊದಲಿಗಿಂತಲೂ ಹೆಚ್ಚಿನ ಬೇಡಿಕೆ ಬಂದಿದೆ. ಹೀಗಾಗಿ, ಪರವಾನಗಿ ನವೀಕರಣ ಹಾಗೂ ಪುನರ್ ಕಾರ್ಯಾರಂಭಗೊಳಿಸಲು ನಿತ್ಯ ಹತ್ತಾರು ಮಾಲೀಕರು ಕಚೇರಿ ಮಟ್ಟೇಲಿರುತ್ತಿದ್ದು, ಅಧಿಕಾರಿಗಳ ದುಂಬಾಲು ಬೀಳುತ್ತಿದ್ದಾರೆ. ಅದನ್ನೇ ಬಂಡವಾಳವನ್ನಾಗಿಸಿಕೊಂಡ ಅಧಿಕಾರಿಗಳು, ಯಾವುದೇ ಪರಿಶೀಲನೆ ನಡೆಸದೆ ಹಣಕ್ಕಾಗಿ ಪರವಾನಗಿ ನೀಡುತ್ತಿರುವುದರಿಂದ ಪರಿಸರವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಸಹಾಯಕನ ಅವವ್ಯಹಾರ ಹಿಡನ್ ಕ್ಯಾಮರಾದಲ್ಲಿ ಸೆರೆ

    ಇಲಾಖೆ ಹಿರಿಯ ಅಧಿಕಾರಿಗಳು ನೇರವಾಗಿ ಭ್ರಷ್ಟಾಚಾರದಲ್ಲಿ ಭಾಗಿಯಾಗದೆ ತಮ್ಮ ಸಹಾಯಕರ ಮೂಲಕ ಹಣ ಬಾಚಿಕೊಳ್ಳುತ್ತಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಬೆಳಗಾವಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಅನಿಲಕುಮಾರ ಸಂಗಳ ಅವರೇ ಅಕ್ರಮ ಗಣಿಗಾರಿಕೆಗೆ ಮುಖ್ಯ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಇತರ ಅಧಿಕಾರಿಗಳಿಗೂ ಲಂಚದ ಹಣ ಹಂಚಿಕೆ ಮಾಡಬೇಕು ಇನ್ನಷ್ಟು ನೀಡಿ’ ಎಂದು ಹಣದ ಕಂತೆ ಎಣಿಸಿರುವ, ಲಂಚಕ್ಕಾಗಿ ಬೇಡಿಕೆ ಇಟ್ಟು, ಮುಂದಿನ ತಿಂಗಳು ತಪ್ಪದೆ ತಂದು ಕೊಡಿ ಎನ್ನುವ ದೃಶ್ಯಾವಳಿ ಹಿಡನ್ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಗಣಿಗಾರಿಕೆಗೆ ಪರವಾನಗಿ ನಾವಷ್ಟೇ ನೀಡುವುದಿಲ್ಲ, ಪರಿಸರ ಅಧಿಕಾರಿಗಳೂ ಪರಿಶೀಲನೆ ಮಾಡುತ್ತಾರೆ. ಅದರಲ್ಲಿ ಯಾರೂ ಸಾಚಾಗಳಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿ ಲಂಚ ಸ್ವೀಕರಿಸಲ್ಲ ಎಂದು ಹೇಗೆ ಹೇಳಲು ಸಾಧ್ಯ. ಆರೋಪ ಸಾಬೀತಾದರೆ ಕಾನೂನು ಕ್ರಮ ಜರುಗಿಸಲಾಗುವುದು.
    | ಸಿ.ಎಸ್. ದಿವಾಕರ್. ಉಪ ನಿದೇರ್ಶಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts