More

    ಫುಟ್‌ಪಾತ್ ಅತಿಕ್ರಮಣಕ್ಕೆ ತಿಂಗಳೊಳಗೆ ಬ್ರೇಕ್: ಮಾಯಣ್ಣ ಗೌಡ

    ಶಿವಮೊಗ್ಗ: ಫುಟ್‌ಪಾತ್ ವ್ಯಾಪಾರಿಗಳಿಗೆ ಪರ್ಯಾಯ ಸ್ಥಳ ಗುರುತಿಸಿ ಇನ್ನೊಂದು ತಿಂಗಳೊಳಗೆ ಫುಟ್‌ಪಾತ್ ಅತಿಕ್ರಮಣಕ್ಕೆ ಬ್ರೇಕ್ ಹಾಕಲಾಗುವುದು ಎಂದು ನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ಭರವಸೆ ನೀಡಿದ್ದಾರೆ.

    ಕಾರಣಾಂತರದಿಂದ ಪಾಲಿಕೆಯಿಂದಲೇ ಹಲವು ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿ ಆ ಸ್ಥಳಗಳಲ್ಲಿ 127 ಮಳಿಗೆಗಳನ್ನು ನಿರ್ಮಿಸಲಾಗಿದೆ. ಮಳಿಗೆ ಹಂಚಿಕೆಗಾಗಿ ಇ-ಟೆಂಡರ್ ಕರೆಯಲಾಗಿದೆ. ಜ.17ರಂದು ಮಳಿಗೆ ಹಂಚಿಕೆ ಮಾಡಲಾಗುವುದು. ಇದರಿಂದ ಸಮಸ್ಯೆ ತಕ್ಕ ಮಟ್ಟಿಗೆ ಪರಿಹಾರ ದೊರೆಯಲಿದೆ ಎಂದು ಹೇಳಿದರು.
    ವಿವಿಧ ಸಂಘಟನೆಗಳು, ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಸಾರ್ವಜನಿಕರೊಂದಿಗೆ ಗುರುವಾರ ಏರ್ಪಡಿಸಿದ್ದ ಪಾಲಿಕೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡುವವರು, ತಳ್ಳುವ ಗಾಡಿಗಳಿಗೆ ಕಾಯಂ ವ್ಯಾಪಾರ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ವೆಂಡರ್ ಜೋನ್ ನಿರ್ಮಿಸಲಾಗಿದೆ. ಕನ್ಸರ್ವೆನ್ಸಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲಿ ಅವರಿಗೆ ಅವಕಾಶ ನೀಡಲಾಗುವುದು ಎಂದರು.
    ಒಂದು ಕಡೆ ಫುಟ್‌ಪಾತ್ ವ್ಯಾಪಾರಿಗಳಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಇನ್ನೊಂದೆಡೆ ಫುಟ್‌ಪಾತ್ ಮೇಲೆಯೇ ಕೆಲವರು ಅಂಗಡಿಗಳ ನಾಮಫಲಕ, ವ್ಯಾಪಾರದ ವಸ್ತುಗಳನ್ನು ಇರಿಸುತ್ತಿದ್ದಾರೆ. ಇದನ್ನು ತೆರವು ಮಾಡುವಂತೆ ಆರಂಭಿಕವಾಗಿ ನೋಟಿಸ್ ನೀಡಲಾಗುವುದು. ಅವರು ತೆಗೆಯದೇ ಇದ್ದರೆ ಪಾಲಿಕೆಯಿಂದಲೇ ಕಾರ್ಯಾಚರಣೆ ನಡೆಸಲಾಗುವುದು ಎಂದು ಎಚ್ಚರಿಸಿದರು.
    ಗಾಂಧಿ ಬಜಾರ್, ದುರ್ಗಿಗುಡಿ ಮುಂತಾದ ಕಡೆಗಳಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವು ಮಾಡುವುದು ನಿರಂತರ ಪ್ರಕ್ರಿಯೆಯಾಗಬೇಕು. ಇದಕ್ಕಾಗಿ ಒಂದು ತಂಡ ರಚಿಸಿ, ಅವರಿಗೆ ಗಸ್ತು ವಾಹನ ನೀಡಲಾಗುವುದು. ಇನ್ನೊಂದು ತಿಂಗಳಲ್ಲಿ ಈ ಸಮಸ್ಯೆಗೆ ಪರಿಹಾರ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಗಾಂಧಿ ಬಜಾರ್ ವರ್ತಕರ ಸಂಘದ ಅಧ್ಯಕ್ಷ ವಿಜಯಕುಮಾರ್ ದಿನಕರ್, ಗಾಂಧಿ ಬಜಾರ್‌ನಲ್ಲಿ ಸಂಚರಿಸಲು ಗ್ರಾಹಕರಿಗೇ ಜಾಗವಿಲ್ಲದಂತಾಗಿದೆ. ನಾಲ್ಕು ಚಕ್ರಗಳ ವಾಹನಕ್ಕಂತೂ ಪ್ರವೇಶವಿಲ್ಲ. ಈಗ ದ್ವಿಚಕ್ರ ವಾಹನಗಳೂ ಗಾಂಧಿ ಬಜಾರ್‌ನೊಳಕ್ಕೆ ಹೋಗದಷ್ಟು ಪ್ರಮಾಣದಲ್ಲಿ ಫುಟ್‌ಪಾತ್ ಒತ್ತುವರಿಯಾಗಿದೆ. ಅಂಗಡಿಗಳೊಳಗೆ ಗ್ರಾಹಕರು ಹೋಗುವುದೇ ಕಷ್ಟ ಎನ್ನುವಂತಾಗಿದೆ ಎಂದು ಹೇಳಿದರು.
    ಕಂದಾಯ ಇಲಾಖೆ ಉಪ ಆಯುಕ್ತ ಡಿ.ನಾಗೇಂದ್ರ, ಮುಖ್ಯ ಲೆಕ್ಕಾಧೀಕ್ಷಕ ಟಕಣಾನಾಯ್ಕ, ಅಭಿವೃದ್ಧಿ ಉಪ ಆಯುಕ್ತ ಲಿಂಗನಗೌಡ, ಆಳಿತ ಉಪ ಆಯುಕ್ತ ತುಷಾರ್‌ಹೊಸೂರ್ ಉಪಸ್ಥಿತರಿದ್ದರು. ಬೀದಿಬದಿ ವ್ಯಾಪಾರಿಗಳ ಸಂಘ, ಗಾಂಧಿ ಬಜಾರ್ ವರ್ತಕರ ಸಂಘ, ಪ್ರವಾಸಿ ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರ ಸಂಘ, ನಾಗರಿಕ ಹಿತರಕ್ಷಣಾ ವೇದಿಕೆ, ಗೆಳೆಯರ ಬಳಗ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts