More

    ಕೊರತೆಯಾಗದೆ ಪಡಿತರ ವಿತರಣೆ, ಆಹಾರ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಮಹಮ್ಮದ್ ಇಸಾಕ್ ಆಶಯ

    ಶಿರ್ವ: ಪಡಿತರ ವಿತರಣೆಯಲ್ಲಿ ಯಾವುದೇ ಕುಂದು ಕೊರತೆಯಿರದೆ ಸಮಾಜದ ಕೊನೆಯ ಸ್ತರದಲ್ಲಿರುವ ವ್ಯಕ್ತಿಗೂ ಉತ್ತಮ ಗುಣಮಟ್ಟದ ಪಡಿತರ ಸಾಮಗ್ರಿ ತಲುಪಬೇಕಿದೆ ಎಂದು ಆಹಾರ ಮತ್ತು ಪಡಿತರ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಮಹಮ್ಮದ್ ಇಸಾಕ್ ಹೇಳಿದರು.
    ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ವತಿಯಿಂದ ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಪ್ರಧಾನ ಕಚೇರಿಯ ಆವರಣದಲ್ಲಿ ಆಯೋಜಿಸಲಾದ ಪಡಿತರ ಆಹಾರ ಅದಾಲತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತೀ ತಿಂಗಳ 7ರಂದು ಆಹಾರ ಅದಾಲತ್ ನಡೆಸಲು ಸರ್ಕಾರದ ಆದೇಶವಿದ್ದು, ಪ್ರತಿ ಸಹಕಾರಿ ಸಂಘದಲ್ಲಿ ಮೂವರು ಸದಸ್ಯರ ಜಾಗೃತಿ ಸಮಿತಿ ಜಾರಿಯಲ್ಲಿದೆ ಎಂದರು.

    ರಾಜ್ಯದ ಅನಿಲ ಭಾಗ್ಯ ಮತ್ತು ಕೇಂದ್ರದ ಉಜ್ವಲ ಯೋಜನೆಯಡಿ ಬಿಪಿಎಲ್ ಕಾರ್ಡುದಾರರಿಗೆ 3 ಸಿಲಿಂಡರ್ ಗ್ಯಾಸ್ ವಿತರಿಸಲಾಗುತ್ತಿದೆ. ಗ್ಯಾಸ್ ಬಳಕೆದಾರರಿಗೆ 1ಲೀಟರ್ ಸೀಮೆಎಣ್ಣೆ ವಿತರಿಸಲಾಗುತ್ತಿದ್ದು, ಎಪಿಲ್, ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ ಸರ್ಕಾರದ ನಿಯಮದಂತೆ ಗುಣಮಟ್ಟದ ಪಡಿತರ ವಿತರಿಸಲಾಗುತ್ತಿದೆ ಎಂದರು. ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಉಪಾಧ್ಯಕ್ಷೆ ವಾರಿಜಾ ಪೂಜಾರ್ತಿ ಅಧ್ಯಕ್ಷತೆ ವಹಿಸಿದ್ದರು. ಉಪ ತಹಸೀಲ್ದಾರ್ ಆಹಾರ ಇಲಾಖೆಯ ಪಾರ್ವತಿ, ಗ್ರಾಮ ಕರಣಿಕ ವಿಜಯ್ ಮಾತನಾಡಿದರು.

    ಕಾಪು ತಾಲೂಕು ಆಹಾರ ನಿರೀಕ್ಷಕ ಎಂ.ಟಿ.ಲೀಲಾನಂದ, ಆಹಾಯ ಇಲಾಖೆ ಸಹಾಯಕ ಕಂಪ್ಯೂಟರ್ ಪ್ರೋಗ್ರಾಮರ್ ರಕ್ಷಿತ್, ಜಾಗೃತಿ ಸಮಿತಿ ಸದಸ್ಯರು ಮತ್ತು ಸಂಘದ ಶಿರ್ವ, ಪಿಲಾರು, ಸಾಂತೂರು, ಕುತ್ಯಾರು, ಕಳತ್ತೂರು ಮತ್ತು ಮಟ್ಟಾರು ವ್ಯಾಪ್ತಿಯ ಪಡಿತರ ಗ್ರಾಹಕರು ಉಪಸ್ಥಿತರಿದ್ದರು. ಸಂಘದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಆಚಾರ್ಯ ಸ್ವಾಗತಿಸಿ, ವಂದಿಸಿದರು.

    ಸರ್ವರ್ ಸಮಸ್ಯೆ ಸರಿಪಡಿಸಲು ಆಗ್ರಹ: ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ವ್ಯಾಪ್ತಿಯಲ್ಲಿ ಅಂತ್ಯೋದಯ 454, ಬಿಪಿಎಲ್ 2658, ಎಪಿಎಲ್ 3425 ಸೇರಿ ಒಟ್ಟು 6537 ಕಾರ್ಡುದಾರರಿದ್ದು, ಪಡಿತರ ಮಾರಾಟ ಸಿಬ್ಬಂದಿ ಮತ್ತು ಗ್ರಾಹಕರೊಂದಿಗೆ ಸಂವಾದ ನಡೆಸಲಾಯಿತು. ಸರ್ವರ್ ಸಮಸ್ಯೆ ಸರಿಪಡಿಸಬೇಕು, ಪಡಿತರ ಸಾಮಾಗ್ರಿಯೊಂದಿಗೆ ಸೀಮೆ ಎಣ್ಣೆಯನ್ನೂ ವಿತರಿಸಬೇಕು ಅಲ್ಲದೆ ಉಚಿತ ಪಡಿತರ ಪಡೆದು ಬೇರೆಯವರಿಗೆ ಮಾರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಡಿತರ ಗ್ರಾಹಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts