More

    ಮೂರು ದಶಕಗಳ ಕನಸು ನನಸು: ಭೋವು ಬೈತಾರು ತೋಡಿಗೆ ಕಿರುಸೇತುವೆ

    ಉಪ್ಪಿನಂಗಡಿ: ಹಲವು ಶಿಲಾನ್ಯಾಸಗಳ ಹೊರತಾಗಿಯೂ ಭರವಸೆಯಲ್ಲಿಯೇ ಉಳಿದಿದ್ದ ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿಯ ಭೋವು ಬೈತಾರು ತೋಡಿಗೆ 75 ಲಕ್ಷ ರೂ. ವೆಚ್ಚದಲ್ಲಿ ಕಿರುಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ.

    ತಣ್ಣೀರುಪಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಬೋವು- ಬೈತ್ತಾರು ಪರಿಸರದ ಜನತೆಯ ಮಳೆಗಾಲದ ಬವಣೆ ನಿವಾರಿಸಲು ಸತತ 30 ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಹಿಂದೆ ಚುನಾವಣೆ ಸನಿಹದಲ್ಲಿ ಶಿಲಾನ್ಯಾಸಗಳನ್ನು ಮಾಡುತ್ತಾ ಬಳಿಕ ಮರೆಯುತ್ತಿದ್ದ ಈ ಕಿರು ಸೇತುವೆಯ ಬೇಡಿಕೆಗಾಗಿ ಇಲ್ಲಿನ ಜನತೆ ಚುನಾವಣಾ ಬಹಿಷ್ಕಾರದ ಬೆದರಿಕೆಯನ್ನೂ ಹಾಕಿದ್ದರು.

    ಈ ಬಾರಿಯ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಚುನಾವಣಾ ಸಂದರ್ಭ ನೀಡಿದ್ದ ಭರವಸೆಯಂತೆ ಗ್ರಾಪಂ ಚುನಾವಣಾ ಸಂದರ್ಭ ಶಿಲಾನ್ಯಾಸ ನೇರವೇರಿಸಿದ್ದು, ಲೋಕೋಪಯೋಗಿ ಇಲಾಖೆ ಯೋಜನೆಯಡಿ 75 ಲಕ್ಷ ರೂ. ವೆಚ್ಚದ ಅನುದಾನ ಮಂಜೂರುಗೊಳಿಸಿದ್ದಾರೆ. 3 ಮೀಟರ್ ಅಗಲ, 30 ಮೀಟರ್ ಉದ್ದದ ಕಿರು ಸೇತುವೆಯ ಕಾಮಗಾರಿ ಭರದಿಂದ ಸಾಗುತ್ತಿದ್ದು ಜೂನ್‌ನಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಗುತ್ತಿಗೆದಾರರು ವ್ಯಕ್ತಪಡಿಸಿದ್ದಾರೆ.

    ಅಂದು ವ್ಯಂಗ್ಯ, ಇಂದು ಶ್ಲಾಘನೆ: ಶಾಸಕರಾಗಿ ಆಯ್ಕೆಯಾದ ಬೆನ್ನಲ್ಲೇ ಆ ಭಾಗದ ಕುಟುಂಬಗಳ ಜನಸಂಖ್ಯೆ ಹಾಗೂ ಶಾಲಾ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳ ಕುರಿತಂತೆ ವರದಿ ಸಿದ್ಧಪಡಿಸಿ ಸರ್ಕಾರದ ಗಮನಕ್ಕೆ ತಂದು ಅನುದಾನ ಬಿಡುಗಡೆಗೊಳಿಸಿದ್ದರು. ಗ್ರಾಪಂ ಚುನಾವಣೆಗೆ ಮುನ್ನ ಹಲವಾರು ಕಾರ್ಯಕ್ರಮಗಳ ಒತ್ತಡದ ನಡುವೆ ಯಾವುದೇ ಪ್ರಚಾರಪಡಿಸದೆ ರಾತ್ರಿ ವೇಳೆ ಸರಳ ಸಮಾರಂಭದ ಮೂಲಕ ಶಿಲಾನ್ಯಾಸ ನೇರವೇರಿಸಿದ್ದರು. ಈ ಹಿಂದಿನ ಘಟನಾವಳಿಗಳನ್ನು ಕಂಡು ರೋಸಿ ಹೋಗಿದ್ದ ಇಲ್ಲಿನ ಜನತೆ ಇದೊಂದು ಚುನಾವಣೆ ಗಿಮಿಕ್ ಎಂದು ವ್ಯಂಗ್ಯವಾಡಿದ್ದರು.

    ಮಳೆಗಾಲವೆಂದರೆ ನಡುಕ: ಬೋವು- ಬಾಯ್ತರೆ ಪ್ರದೇಶದ ಜನರಿಗೆ ಈ ಪರಿಸರದಲ್ಲಿ ತೋಡಿಗೆ ಕಿರು ಸೇತುವೆ ಇಲ್ಲದ ಕಾರಣ ಸಂಕಷ್ಟಕ್ಕೆ ತುತ್ತಾಗುತ್ತಿದ್ದರು. ಸ್ಥಳೀಯರು ನಿರ್ಮಿಸಿದ್ದ ಅಡಕೆ ಸಲಾಕೆ ಅಳವಡಿಸಿ ನಿರ್ಮಿಸುವ ಕಾಲುಸಂಕವೇ ಏಕೈಕ ಆಧಾರವಾಗಿದ್ದು, ಹಲವು ಬಾರಿ ಅವಘಡಗಳು ಸಂಭವಿಸಿರುವುದು ಜನರನ್ನು ಭೀತಿಗೆ ತುತ್ತಾಗಿಸಿತ್ತು. ಈ ಎಲ್ಲ ಸಂಕಷ್ಟಗಳು ಶಾಸಕರ ಕಾಳಜಿಯುತ ನಡೆಯಿಂದಾಗಿ ಮುಂದಿನ ಮಳೆಗಾಲದಲ್ಲಿ ನಿವಾರಣೆಯಾಗುವುದು ಖಚಿತವೆನಿಸಿದೆ.

    ಇಲ್ಲಿನ ಜನತೆ ಮಳೆಗಾಲದಲ್ಲಿ ಎದುರಿಸುವ ಸಮಸ್ಯೆಗಳ ಬಗ್ಗೆ ಶಾಸಕ ಹರೀಶ್ ಪೂಂಜರಿಗೆ ವಾಟ್ಸಾೃಪ್ ಮೂಲಕ ವಿಡಿಯೋವೊಂದನ್ನು ಕಳುಹಿಸಿದ್ದೆ. ತಕ್ಷಣ ಈ ಬಗ್ಗೆ ವಿಸ್ತೃತ ಮಾಹಿತಿ ಪಡೆದುಕೊಂಡು ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಕಿರು ಸೇತುವೆಯ ರಚನೆಗೆ ಅಗತ್ಯವಾದ ಕ್ರಮ ಕೈಗೊಂಡಿರುವುದಲ್ಲದೆ, ಡಿಸೆಂಬರ್‌ನಲ್ಲಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಈಗ ಕಾಮಗಾರಿ ವೇಗವಾಗಿ ನಡೆಯುತ್ತಿರುವಂತಾಗಲು ಶಾಸಕರು ವಹಿಸಿದ ಮುತುವರ್ಜಿ ನಿಜಕ್ಕೂ ಅಭಿನಂದನೀಯ.
    ರೋಹಿತ್ ಶೆಟ್ಟಿ, ತಣ್ಣೀರುಪಂತ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೆಶಕ

    ಈ ಭಾಗದ ಜನತೆಯ 30 ವರ್ಷಗಳ ಬೇಡಿಕೆಗೆ ಪೊಳ್ಳು ಭರವಸೆಗಳು ದೊರೆಯುತ್ತಿತ್ತೇ ವಿನಾ ಯಾವುದೇ ಸ್ಪಂದನೆ ಲಭಿಸಿರಲಿಲ್ಲ. ಸಹಜವಾಗಿ ಇಲ್ಲಿನ ಜನರಿಗೆ ವ್ಯವಸ್ಥೆಯ ಬಗ್ಗೆ ಭ್ರಮನಿರಸನವಾಗಿತ್ತು. ಆದರೆ ಈಗಿನ ಶಾಸಕರು ತಾನು ನೀಡಿದ ಭರವಸೆಯಂತೆ ಶಿಲಾನ್ಯಾಸ ಮಾಡಿದ ಕಿರು ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ನಡೆಸುವಂತೆ ಕ್ರಮ ಕೈಗೊಂಡಿರುವುದು ವ್ಯವಸ್ಥೆಯ ಮೇಲೆ ಮತ್ತೆ ಭರವಸೆ ಮೂಡಿಸಿದೆ.
    ಯಶೋದಾ, ಸಾಮಾಜಿಕ ಕಾರ್ಯಕರ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts