More

    ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್​ ವಿರುದ್ಧ ಬೌನ್ಸರ್!

    ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ನಾಲ್ಕು ವಿಭಿನ್ನ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಈ ಪೈಕಿ ಮೂರು ಪ್ರಕರಣಗಳಲ್ಲಿ ಮಧ್ಯಂತರ ಜಾಮೀನು ದೊರೆತಿದೆ. ತೋಶಾಖಾನಾ ಪ್ರಕರಣದಲ್ಲಿ ಅವರ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಲಾಗಿದೆ

    ಇಸ್ಲಾಮಾಬಾದ್ ಸೆಷನ್ಸ್ ನ್ಯಾಯಾಲಯವು ಮಂಗಳವಾರ (ಫೆಬ್ರವರಿ 28) ತೋಶಾಖಾನಾ (ನಿಧಿ ನಿವಾಸ ಎಂಬರ್ಥದ ಪರ್ಷಿಯಾ ಭಾಷೆಯ ಪದವಾಗಿದೆ) ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ನಿರಂತರ ಗೈರುಹಾಜರಿ ಹಿನ್ನೆಲೆಯಲ್ಲಿ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಿದೆ. ಏತನ್ಮಧ್ಯೆ, ವಿವಿಧ ನ್ಯಾಯಾಲಯಗಳಲ್ಲಿ ಇತರ ಮೂರು ಪ್ರಕರಣಗಳಿಗೆ ಒಂದೇ ದಿನ ಅವರಿಗೆ ಜಾಮೀನು ದೊರೆತಿದೆ.

    ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖ್ಯಸ್ಥರಾಗಿರುವ ಇಮ್ರಾನ್ ತೋಶಾಖಾನಾ, ನಿಷೇಧಿತ ನಿಧಿ ಪ್ರಕರಣ, ಭಯೋತ್ಪಾದನೆ ಮತ್ತು ಕೊಲೆ ಪ್ರಕರಣ ಸೇರಿದಂತೆ ನಾಲ್ಕು ವಿಭಿನ್ನ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿತ್ತು. ಮಂಗಳವಾರ ತೋಶಾಖಾನಾ ಪ್ರಕರಣದಲ್ಲಿ ದೋಷಾರೋಪಣೆ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ, ಇತರ ಪ್ರಕರಣಗಳಲ್ಲಿ ಅನೇಕ ನ್ಯಾಯಾಲಯಗಳಿಗೆ ಹೋಗಬೇಕಾಗಿರುವುದರಿಂದ ಅವರಿಗೆ ಹಾಜರಾತಿಯಿಂದ ವಿನಾಯಿತಿ ನೀಡುವಂತೆವಕೀಲರು ವಿನಂತಿಸಿದರು. ಆದರೆ, ನ್ಯಾಯಾಧೀಶರು ಈ ಮನವಿ ತಿರಸ್ಕರಿಸಿ ಇಮ್ರಾನ್ ಖಾನ್ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಿದ್ದಾರೆ. ಇಮ್ರಾನ್ ವಿರುದ್ಧ ದೋಷಾರೋಪಣೆ ಪ್ರಕ್ರಿಯೆಯನ್ನು ಈ ಹಿಂದೆ ಎರಡು ಬಾರಿ ಈ ನ್ಯಾಯಾಲಯದಲ್ಲಿ ಮುಂದೂಡಲಾಗಿತ್ತು ಎಂದು ಪಾಕಿಸ್ತಾನದ ಪತ್ರಿಕೆಗಳು ವರದಿ ಮಾಡಿವೆ.

    ಐದು ವರ್ಷ ಅನರ್ಹ: ಈ ತೋಶಾಖಾನಾ ಪ್ರಕರಣದಲ್ಲಿಯೇ ಇಮ್ರಾನ್ ಪಾಕಿಸ್ತಾನದ ಚುನಾವಣಾ ಆಯೋಗ ದಿಂದ ನಿಷೇಧಕ್ಕೆ ಒಳಗಾಗಿದ್ದಾರೆ. ಅನೈತಿಕ ನಡವಳಿಕೆ, ಸುಳ್ಳು ಸಮರ್ಥನೆ ಮತ್ತು ತಪ್ಪಾದ ಘೊಷಣೆಗಳನ್ನು ಮಾಡಿದ್ದಾರೆಂದು 2022ರ ಅಕ್ಟೋಬರ್ 21ರಂದು ಅವರನ್ನು ಐದು ವರ್ಷಗಳ ಅವಧಿಗೆ ಸಾರ್ವಜನಿಕ ಹುದ್ದೆಯಿಂದ ಅನರ್ಹಗೊಳಿಸಿದೆ.

    ಏನಿದು ತೋಶಾಖಾನಾ ಪ್ರಕರಣ?: ಸಾರ್ವಜನಿಕ ಅಧಿಕಾರಿಗಳು ಸ್ವೀಕರಿಸಿದ ಉಡುಗೊರೆಗಳು ಮತ್ತು ಇತರ ದುಬಾರಿ ವಸ್ತುಗಳನ್ನು ಸಂಗ್ರಹಿಸುವ ಇಲಾಖೆಯೇ ತೋಶಾಖಾನಾ. ಪಾಕಿಸ್ತಾನದ ಅಧಿಕಾರಿಗಳು ತಮ್ಮ ಉಡುಗೊರೆಗಳನ್ನು ತೋಶಾಖಾನಾಗೆ ಸಲ್ಲಿಸುವುದು ಕಡ್ಡಾಯ. ತೋಶಾಖಾನಾಗೆ ನೀಡಿದ ಉಡುಗೊರೆಗಳ ಮಾಹಿತಿಯನ್ನು ಬಹಿರಂಗಪಡಿಸಿಲ್ಲ ಹಾಗೂ ಪ್ರಧಾನಿಯಾಗಿದ್ದಾಗ ಅಧಿಕೃತವಾಗಿ ವಿವಿಧ ರಾಷ್ಟ್ರಗಳ ಮುಖ್ಯಸ್ಥರಿಂದ ಪಡೆದ ಉಡುಗೊರೆಗಳ ಮಾರಾಟದಿಂದ ಪಡೆದ ಆದಾಯವನ್ನು ತಿಳಿಸಿಲ್ಲ ಎಂದು ವಿರೋಧ ಪಕ್ಷಗಳ ಮುಖಂಡರು ಇಮ್ರಾನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 2018ರಲ್ಲಿ ಪ್ರಧಾನಿಯಾದ ಇಮ್ರಾನ್ ಖಾನ್ ಉಡುಗೊರೆಗಳ ಮಾಹಿತಿ ಬಹಿರಂಗ ವಿರೋಧಿಸಿದ್ದರು. ಹಾಗೆ ಮಾಡುವುದರಿಂದ ಇತರ ದೇಶಗಳೊಂದಿಗಿನ ಸಂಬಂಧಕ್ಕೆ ಧಕ್ಕೆ ಉಂಟಾಗುತ್ತದೆ ಎಂಬುದು ಅವರ ಪ್ರತಿಪಾದನೆಯಾಗಿತ್ತು.

    ಇದನ್ನೂ ಓದಿ: ಎರಡನೇ ಪತಿಯೂ ಸಾವಿಗೀಡಾದ್ದರಿಂದ ನೊಂದು ಹೆಣ್ಣುಮಕ್ಕಳಿಬ್ಬರ ಜತೆ ಒಂದೇ ಕುಣಿಕೆಗೆ ಕೊರಳೊಡ್ಡಿದ ತಾಯಿ!

    25 ಜನರ ಬಂಧನ: ತೋಶಾಖಾನಾ ಪ್ರಕರಣದ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಮಂಗಳವಾರ ಇಮ್ರಾನ್ ಬೆಂಬಲಿಗರು ಇಸ್ಲಾಮಾಬಾದ್​ನ ನ್ಯಾಯಾಂಗ ಸಂಕೀರ್ಣದ ಮುಂದೆ ಜಮಾಯಿಸಿದ್ದರು. ಈ ಪೈಕಿ 25 ಜನರನ್ನು ವಿಧ್ವಂಸಕ ಕೃತ್ಯ ನಡೆಸಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

    ಭಯೋತ್ಪಾದನೆ ಪ್ರಕರಣ: ತೋಶಾಖಾನಾ ಪ್ರಕರಣದಲ್ಲಿ ಚುನಾವಣಾ ಆಯೋಗವು ಇಮ್ರಾನ್ ಖಾನ್​ರನ್ನು ಅನರ್ಹಗೊಳಿಸಿ ನೀಡಿದ ತೀರ್ಪು ವಿರೋಧಿಸಿ ದೇಶಾದ್ಯಂತ ಚುನಾವಣಾ ಆಯೋಗದ ಕಚೇರಿಗಳ ಹೊರಗೆ ಪಿಟಿಐ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸಿದಾಗ ಹಲವಾರು ವಿಧ್ವಂಸಕ ಘಟನೆಗಳು ಜರುಗಿದವು. ಪಿಟಿಐ ನಾಯಕತ್ವವು ಈ ವಿಧ್ವಂಸಕ ಘಟನೆಗಳಿಗೆ ಪೋ›ತ್ಸಾಹ ನೀಡಿದೆ ಎಂದು ಇಮ್ರಾನ್ ಖಾನ್ ವಿರುದ್ಧ ಭಯೋತ್ಪಾದನೆ ಪ್ರಕರಣ ದಾಖಲಿಸಲಾಯಿತು. ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಮಾರ್ಚ್ 9ರವರೆಗೆ ಇಮ್ರಾನ್​ಗೆ ಮಧ್ಯಂತರ ಜಾಮೀನಿಗೆ ಅನುಮೋದನೆಯನ್ನು ಮಂಗಳವಾರ ನೀಡಿದೆ.

    ಕೊಲೆ ಯತ್ನ ಆರೋಪ: ಇಸ್ಲಾಮಾಬಾದ್​ನ ಚುನಾವಣಾ ಆಯೋಗದ ಕಚೇರಿಯ ಹೊರಗೆ ಅಕ್ಟೋಬರ್​ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಖೈಬರ್ ಪಖ್ತುನ್​ಖ್ವಾ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ಇಮ್ರಾನ್ ಖಾನ್ ಸೂಚನೆ ಮೇರೆಗೆ ತಮ್ಮನ್ನು ಹತ್ಯೆಗೈಯಲು ಯತ್ನಿಸಿದರು ಎಂದು ಆರೋಪಿಸಿ ಪಾಕಿಸ್ತಾನ ಮುಸ್ಲಿಂ ಲೀಗ್ (ಎನ್) ನಾಯಕ ಮೊಹ್ಸಿನ್ ಶಹನವಾಜ್ ರಂಝಾ ಎಂಬುವವರು ಕೊಲೆ ಯತ್ನದ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲೂ ಇಮ್ರಾನ್​ಗೆ ಮಾರ್ಚ್ 9ರವರೆಗೆ ಮಧ್ಯಂತರ ಜಾಮೀನು ದೊರೆತಿದೆ.

    ಇದನ್ನೂ ಓದಿ: ಮಹಿಳೆಗೆ ಹೃದಯಾಘಾತ: ಶವದ ಮೇಲಿದ್ದ 2 ಚಿನ್ನದ ಬಳೆ ನಾಪತ್ತೆ; ಆಗಿದ್ದೇನು?

    ನಿಷೇಧಿತ ನಿಧಿ ಪ್ರಕರಣ: ಇಮ್ರಾನ್ ಖಾನ್ ಮತ್ತು ಅವರ ಪಕ್ಷವು ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ (ಯುಎಇಯ ಸಂಸ್ಕೃತಿ ಸಚಿವಾಲಯದ ಮುಖ್ಯಸ್ಥರು) ಅವರಿಂದ ಹಾಗೂ ಸಾಗರೋತ್ತರ ಪಾಕಿಸ್ತಾನಿಗಳು ಮತ್ತು ಅವರ ಕಂಪನಿಗಳಿಂದ ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ದಾಖಲಿಸಲಾಗಿರುವುದೇ ನಿಷೇಧಿತ ನಿಧಿ ಪ್ರಕರಣ. ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಚುನಾವಣೆ ಆಯೋಗವು ಪಿಟಿಐ ಪಕ್ಷವು ನಿಜವಾಗಿಯೂ ನಿಷೇಧಿತ ಹಣವನ್ನು ಸ್ವೀಕರಿಸಿದೆ ಎಂದು ಹೇಳಿದೆ. ಈ ಪ್ರಕರಣದಲ್ಲಿ ಕೂಡ ಇಮ್ರಾನ್​ಗೆ ಮಂಗಳವಾರ ಮಧ್ಯಂತರ ಜಾಮೀನು ಮಂಜೂರಾಗಿದೆ.

    ಅಕ್ರಮವಾಗಿ ಉಡುಗೊರೆ ಮಾರಾಟ: ವಿದೇಶಿ ಗಣ್ಯರು ಉಡುಗೊರೆಯಾಗಿ ನೀಡಿದ ಮೂರು ವಾಚ್​ಗಳನ್ನು ಇಮ್ರಾನ್ ಖಾನ್ ಸ್ಥಳೀಯ ವಾಚ್ ಡೀಲರ್​ಗೆ ಅಕ್ರಮವಾಗಿ ಮಾರಾಟ ಮಾಡಿ 3.6 ಕೋಟಿ ರೂಪಾಯಿ ಲಾಭ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅವರು ಪ್ರಧಾನಿಯಾಗಿದ್ದಾಗ 15.4 ಕೋಟಿ ರೂಪಾಯಿಗಿಂತಲೂ ಹೆಚ್ಚು ಬೆಲೆಬಾಳುವ ಆಭರಣ ರೂಪದ ಈ ಕೈಗಡಿಯಾರಗಳನ್ನು ಮಾರಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದ ಕಾನೂನಿನ ಪ್ರಕಾರ, ವಿದೇಶಿ ಗಣ್ಯರು ನೀಡುವ ಉಡುಗೊರೆಗಳನ್ನು ತೋಶಾಖಾನಾಗೆ ಹಸ್ತಾಂತರಿಸಬೇಕಾಗುತ್ತದೆ. ಆದರೆ, ಇಮ್ರಾನ್ ಅಧಿಕಾರದಲ್ಲಿದ್ದಾಗ ಈ ಕಾನೂನಿಗೆ ತಿದ್ದುಪಡಿ ತಂದು, ಉಡುಗೊರೆಯ ಶೇ. 20ರಷ್ಟು ಪಾವತಿಸಿ ತಾವು ಖರೀದಿಸುವ ಅವಕಾಶ ಮಾಡಿಕೊಂಡಿದ್ದರು. ಅಲ್ಲದೆ, ಮುಂಚಿತವಾಗಿಯೇ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ, ತದನಂತರ ಶೇ. 20ರಷ್ಟು ಹಣವನ್ನು ತೋಶಾಖಾನಾಗೆ ಪಾವತಿಸಿದ್ದರು. ಇಮ್ರಾನ್ ಖಾನ್ ಮತ್ತು ಪತ್ನಿ ಬುಶ್ರಾ ಬೀಬಿ ಅವರು ತೋಶಾಖಾನಾದಿಂದ 14.2 ಕೋಟಿ ಮೌಲ್ಯದ 112 ಉಡುಗೊರೆಗಳನ್ನು ಕೇವಲ 4 ಕೋಟಿ ರೂಪಾಯಿ ಪಾವತಿಸುವ ಮೂಲಕ ಉಳಿಸಿಕೊಂಡಿದ್ದಾರೆ ಎಂದೂ ಆಪಾದಿಸಲಾಗಿದೆ.

    ಗೃಹ ಸಚಿವರ ಬೆಂಗಾವಲು​ ವಾಹನ ಡಿಕ್ಕಿ, ಬೈಕ್ ಸವಾರ ಸಾವು; ಅಪಘಾತದ ಬಗ್ಗೆ ತಿಳಿದೂ ಹಾಗೇ ಹೋದ್ರಾ ಹೋಂ​ ಮಿನಿಸ್ಟರ್​?

    16 ಸಲ ಚುಚ್ಚಿಕೊಂದ ಹುಚ್ಚುಪ್ರೇಮಿ; ಪ್ರೇಯಸಿಯ ಕೊಲ್ಲಲೆಂದೇ 2 ಚಾಕುಗಳನ್ನು ಖರೀದಿಸಿದ್ದ: ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts