More

    ಉಭಯ ಜಿಲ್ಲೆಗಳು ಬಹುತೇಕ ಸ್ತಬ್ಧ, ಅಂಗಡಿ ಮುಂಗಟ್ಟುಗಳನ್ನು ಗುರುವಾರವೇ ಬಂದ್ ಮಾಡಿಸಿದ ಅಧಿಕಾರಿಗಳು

    ಮಂಗಳೂರು/ಉಡುಪಿ: ಕರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಕಾರಣ ಗುರುವಾರ ಮಧ್ಯಾಹ್ನ ಕೋವಿಡ್ -19 ಹೊಸ ಮಾರ್ಗಸೂಚಿ ಜಾರಿಗೊಳಿಸಲಾಗಿದ್ದು, ಮಂಗಳೂರು ಮತ್ತು ಉಡುಪಿ ನಗರಗಳು ಇನ್ನೊಂದು ಲಾಕ್‌ಡೌನ್ ಸಮೀಪದಲ್ಲಿದೆಯೇನೋ ಅನಿಸುವಷ್ಟು ಸ್ತಬ್ಧವಾದವು. ದ.ಕ, ಉಡುಪಿ ಜಿಲ್ಲೆಗಳ ಇತರ ಪಟ್ಟಣಗಳಲ್ಲಿ ಆದೇಶ ಕಟ್ಟುನಿಟ್ಟಾಗಿ ಗುರುವಾರ ಜಾರಿಗೆ ಬಂದಿಲ್ಲವಾದರೂ, ಶುಕ್ರವಾರ ಬಿಸಿ ತಟ್ಟಬಹುದು ಎಂದು ನಿರೀಕ್ಷಿಸಲಾಗಿದೆ.

    ಮಂಗಳೂರು ಮಹಾನಗರ ಪಾಲಿಕೆ ಹಾಗೂ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಅಧಿಕಾರಿಗಳು ಮೈಕ್ ಮೂಲಕ ಅನೌನ್ಸ್ ಮಾಡಿ, ಜನ ಮತ್ತು ವ್ಯಾಪಾರ ಕೇಂದ್ರ ಮಾಲೀಕರಿಗೆ ಹೊಸ ಮಾರ್ಗಸೂಚಿಯ ಬಗ್ಗೆ ಜಾಗೃತಿ ಮೂಡಿಸಿದರು. ಜನನಿಬಿಡವಾಗಿರುತ್ತಿದ್ದ ಮಾಲ್, ಮಾರ್ಕೆಟ್ ಪ್ರದೇಶಗಳಲ್ಲೂ ಹೆಚ್ಚಿನ ಜನ ಕಂಡುಬರಲಿಲ್ಲ. ಸಾಯಂಕಾಲ ತುರ್ತು ಸೇವೆ ಹೊರತುಪಡಿಸಿ ತೆರೆದಿದ್ದ ಇತರ ವ್ಯಾಪಾರ/ ವ್ಯವಹಾರ ಕೇಂದ್ರ (ಬಟ್ಟೆ, ಚಿನ್ನದ ಮಳಿಗೆ, ಟೈರ್, ಮೊಬೈಲ್ ಅಂಗಡಿ, ಫೋಟೋ ಸ್ಟುಡಿಯೋ, ಪಾನಿಪೂರಿ ಗಾಡಿ), ಕಚೇರಿಗಳನ್ನು ಅಧಿಕಾರಿಗಳು ಮುಚ್ಚಿಸಿದರು. ಹೋಟೆಲ್‌ಗಳಿಗೆ ತೆರಳಿ ಪಾರ್ಸೆಲ್ ಸೇವೆ ಮಾತ್ರ ನೀಡುವಂತೆ ಸೂಚಿಸಿದರು. ದಿನಸಿ ಅಂಗಡಿ, ಹಣ್ಣು, ತರಕಾರಿ, ಕಟ್ಟಡ ನಿರ್ಮಾಣ ಸಂಬಂಧಿತ ಪರಿಕರಗಳ ಅಂಗಡಿಗಳನ್ನು ಕೋವಿಡ್ ಮಾರ್ಗಸೂಚಿ ಅನುಸರಿಸಿ ವ್ಯಾಪಾರ ಮಾಡುವಂತೆ ಸೂಚನೆ ನೀಡಿದರು. ಸರ್ಕಾರದ ದಿನಕ್ಕೊಂದು ನಿಯಮಾವಳಿಗೆ ವರ್ತಕರು ಅಸಮಾಧಾನ ವ್ಯಕ್ತಪಡಿಸಿದರು.

    ದ.ಕ. ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯೂ ಕೊನೇ ಕ್ಷಣದಲ್ಲಿ ರದ್ದಾಯಿತು.

    ಬಸ್ ಸಂಚಾರ ಕ್ಷೀಣ?: ಸಾರ್ವಜನಿಕರ ಓಡಾಟ ವಿರಳಗೊಂಡ ಬೆನ್ನಲ್ಲೇ ಕೆಲವು ಬಸ್‌ಗಳೂ ಸಂಚಾರ ನಿಲ್ಲಿಸಿವೆ. ಕನಿಷ್ಠ ಸಂಖ್ಯೆಯ ಬಸ್‌ಗಳು ಇರುವ ಕೆಲವು ಮಾರ್ಗಗಳಲ್ಲಿ ಪ್ರಯಾಣಿಕರು ಸಮಸ್ಯೆ ಎದುರಿಸಿದರು. ಶುಕ್ರವಾರದಿಂದ ಬಹುತೇಕ ಬಸ್‌ಗಳು ರಸ್ತೆಗಿಳಿಯುವ ಸಾಧ್ಯತೆ ಕಡಿಮೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ, ‘ಜಿಲ್ಲಾಡಳಿತ ಮಧ್ಯಾಹ್ನ ಬಳಿಕ ಅಂಗಡಿ, ವ್ಯಾಪಾರ ಕೇಂದ್ರಗಳನ್ನು ದಿಢೀರ್ ಮುಚ್ಚಿಸಿದ್ದು, ನಾವು ಯಾರಿಗಾಗಿ ಬಸ್ ಓಡಿಸುವುದು’ ಎಂದು ಪ್ರಶ್ನಿಸಿದ್ದಾರೆ. ‘ಪ್ರಯಾಣಿಕರ ಸಂಖ್ಯೆ ಕಡಿಮೆಯಾದಾಗ ಬಸ್ ಓಡಾಟ ಕಷ್ಟ, ಹೀಗಾಗಿ ಕೆಲವು ಮಾರ್ಗಗಳಲ್ಲಿ ಸಂಚಾರ ಸ್ಥಗಿತ ಅನಿವಾರ್ಯ’ ಎಂದು ಉಡುಪಿ ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ತಿಳಿಸಿದ್ದಾರೆ.

    ಗಡಿಯಲ್ಲಿ ಮತ್ತೆ ನಿರ್ಬಂಧ: ಕೇರಳ – ಕರ್ನಾಟಕ ಗಡಿ ಪ್ರದೇಶದಲ್ಲಿ ಜನರ ಓಡಾಡಕ್ಕೆ ಮತ್ತೆ ನಿರ್ಬಂಧ ವಿಧಿಸಲಾಗಿದೆ. ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ಇಲ್ಲದವರು ಗಡಿ ಪ್ರದೇಶದ ಆರೋಗ್ಯ ಇಲಾಖೆಯ ಟೆಂಟ್‌ನಲ್ಲಿ ಉಚಿತವಾಗಿ ಆರ್‌ಟಿ ಪಿಸಿಆರ್ ಪರೀಕ್ಷೆ ಮಾಡಿಸಿಕೊಂಡು ಕರ್ನಾಟಕ ಪ್ರವೇಶಿಸಬೇಕಿದೆ.

    ಮದ್ಯದಂಗಡಿ ಮುಂದೆ ಸಾಲು: ಸರ್ಕಾರ ಸಂಪೂರ್ಣ ಲಾಕ್‌ಡೌನ್ ಮಾಡಲು ಸಜ್ಜಾಗಿದೆ ಎಂದು ಭಾವಿಸಿ ಬಾರ್, ವೈನ್ ಶಾಪ್‌ಗಳು ಬಂದ್ ಆಗುವ ಆತಂಕದಲ್ಲಿ ಪಾನಪ್ರಿಯರು ಗುರುವಾರ ಮಧ್ಯಾಹ್ನ ಬಳಿಕ ಮದ್ಯದಂಗಡಿಗೆ ಮುಗಿಬಿದ್ದರು. ಹಲವರು ಬಾಕ್ಸ್‌ಗಟ್ಟಲೆ ಮದ್ಯ ಕೊಂಡೊಯ್ದರು. ಮಂಗಳೂರು, ಉಡುಪಿ ನಗರದ ಎಲ್ಲ ಮದ್ಯದಂಗಡಿಗಳಲ್ಲಿ ಜನರು ಸಾಲಿನಲ್ಲಿ ನಿಂತು ಖರೀದಿಸಿದರು. ಕಾರು, ಬೈಕ್‌ಗಳಲ್ಲಿ ಬಂದು ಸಾಮರ್ಥ್ಯಕ್ಕನುಗುಣವಾಗಿ ಮದ್ಯದ ಬಾಟಲಿಗಳನ್ನು ಖರೀದಿಸಿ ಕೊಂಡೊಯ್ಯುತ್ತಿರುವುದು ಕಂಡು ಬಂತು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts