More

    ಬೇಕಾಬಿಟ್ಟಿ ಬೋರ್‌ವೆಲ್‌ಗೆ ಅಂಕುಶ

    – ಶ್ರವಣ್ ಕುಮಾರ್ ನಾಳ ಪುತ್ತೂರು
    ಇನ್ನು ಮುಂದೆ ಬೇಕಾಬಿಟ್ಟಿ ಬೋರ್‌ವೆಲ್ ಕೊರೆಯುವಂತಿಲ್ಲ. ಕೊಳವೆ ಬಾವಿ ಕೊರೆಯಲು ಅಂತರ್ಜಲ ನಿರ್ದೇಶನಾಲಯದ ಅನುಮತಿ ಕಡ್ಡಾಯ. ಜತೆಗೆ 7ಎ ಫಾರ್ಮ್ ರಹಿತ ವಾಹನ ಹಾಗೂ ಅನಧಿಕೃತ ಬೋರ್‌ವೆಲ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲೂ ಸರ್ಕಾರ ಸೂಚನೆ ನೀಡಿದೆ.

    ಇತ್ತೀಚಿನವರೆಗೆ ಯಾವುದೇ ವ್ಯಕ್ತಿ ಕೃಷಿ ಹಾಗೂ ಕೃಷಿಯೇತರ ಉದ್ದೇಶಗಳಿಗೆ ಬೋರ್‌ವೆಲ್ ಕೊರೆಯಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸ್ಥಳೀಯಾಡಳಿತದ ಮುಖ್ಯಸ್ಥರ ನಿರಾಕ್ಷೇಪಣಾ ಪತ್ರ ಅಗತ್ಯವಿತ್ತು. ಆದರೆ ಇಲ್ಲಿ ಅವ್ಯವಹಾರಗಳು ಹೆಚ್ಚಿದ ಕಾರಣಕ್ಕಾಗಿ ನಿರಾಕ್ಷೇಪಣಾ ಪತ್ರ ನೀಡುವ ಜವಾಬ್ದಾರಿಯನ್ನು ಅಂತರ್ಜಲ ನಿರ್ದೇಶನಾಲಯಕ್ಕೆ ನೀಡಲಾಗಿದೆ.

    ಸರ್ಕಾರದ ಹೊಸ ನಿಯಮದ ಪ್ರಕಾರ ಬೋರ್‌ವೆಲ್ ಹೊಂದುವ ವ್ಯಕ್ತಿ ಕೊಳವೆ ಬಾವಿ ಕೊರೆಯುವ ಸ್ಥಳದ 500 ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಬೋರ್‌ವೆಲ್, ಸರ್ಕಾರಿ ನೀರಿನ ಮೂಲ ಇಲ್ಲ ಎಂಬ ಗ್ರಾಪಂನ ನಿರಾಕ್ಷೇಪಣಾ ಪತ್ರ ಪಡೆಯುವುದು ಅಗತ್ಯ. ನಂತರ ಅಂತರ್ಜಲ ನಿರ್ದೇಶನಾಲಯದ ಅನುಮತಿ ಪಡೆದ (7ಎ ಫಾರ್ಮ್) ಬೋರ್‌ವೆಲ್ ವಾಹನದಿಂದ ಕೊಳವೆ ಕೊರೆಯುವ ಬಗ್ಗೆ ಹಾಗೂ ಗ್ರಾಪಂನ ನಿರಾಕ್ಷೇಪಣಾ ಪತ್ರವನ್ನು ಜಿಲ್ಲಾ ಅಂತರ್ಜಲ ವಿಭಾಗದ ಹಿರಿಯ ಭೂ ವಿಜ್ಞಾನಿಗಳಿಗೆ ಅರ್ಜಿ ಸಲ್ಲಿಸಬೇಕು.

    ದಾಖಲೆ ಪರಿಶೀಲಿಸಿ ಅಂತರ್ಜಲ ನಿರ್ದೇಶನಾಲಯದ ಪರವಾಗಿ ಅಂತರ್ಜಲ ಕಚೇರಿಯ ಭೂವಿಜ್ಞಾನಿ ಬೋರ್‌ವೆಲ್ ಕೊರೆಯಲು ಅನುಮತಿ ಪತ್ರ ನೀಡುತ್ತಾರೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕೊಳವೆ ಬಾವಿ ಹಾಗೂ ವಾಹನ ಮುಟ್ಟುಗೋಲು ಹಾಕುವ ಅಧಿಕಾರ ತಹಸೀಲ್ದಾರ್‌ಗೆ ನೀಡಲಾಗಿದೆ.
    ಬಹುತೇಕ ಕಡೆಗಳಲ್ಲಿ ನಿಯಮ ಮೀರಿ, ಅಧಿಕಾರಿಗಳ ಕಣ್ತಪ್ಪಿಸಿ ಬೋರ್‌ವೆಲ್ ಕೊರೆತ ಹೆಚ್ಚಾಗಿ ನಡೆಯುತ್ತಿದೆ. ಸೇವಾಸಿಂಧು ಜಾಲತಾಣದ ಮೂಲಕ ಅರ್ಜಿ ಸಲ್ಲಿಸಿ ಅಂತರ್ಜಲ ಕಚೇರಿ/ ಹಿರಿಯ ಭೂ ವಿಜ್ಞಾನಿಗಳಿಂದ ಬೋರ್‌ವೆಲ್ ಕೊರೆಯಲು ಎನ್‌ಒಸಿ ಪಡೆಯಬಹುದು. ಅನಧಿಕೃತ ಬೋರ್‌ವೆಲ್ ಕೊರೆತ ಕಂಡುಬಂದರೆ ತಾಲೂಕು ದಂಡಾಧಿಕಾರಿಗಳಿಗೆ ಮಾಹಿತಿ ನೀಡಬಹುದು ಎಂದು ದ.ಕ ಜಿಲ್ಲಾ ಅಂತರ್ಜಲ ಕಚೇರಿಯ ಹಿರಿಯ ಭೂ ವಿಜ್ಞಾನಿ ಜಾನಕಿ ವಿಜಯವಾಣಿಗೆ ತಿಳಿಸಿದ್ದಾರೆ.

    ಬೇಕಾಬಿಟ್ಟಿ ವಿದ್ಯುತ್ ಸಂಪರ್ಕಕ್ಕೂ ಅಂಕುಶ
    ಹಿಂದಿನ ನಿಯಮದ ಪ್ರಕಾರ ಬೋರ್‌ವೆಲ್‌ಗೆ ವಿದ್ಯುತ್ ಸಂಪರ್ಕ ಪಡೆಯಲು ಗ್ರಾಪಂನಿಂದ ಬೋರ್‌ವೆಲ್ ಕೊರೆಯಲು ನಿರಾಕ್ಷೇಪಣಾ ಪತ್ರ ಮಾತ್ರ ಮಾನದಂಡವಾಗಿತ್ತು. ಹೊಸ ನಿಯಮದ ಪ್ರಕಾರ ವಿದ್ಯುತ್ ಸಂಪರ್ಕ ಪಡೆಯಲು ಬೋರ್‌ವೆಲ್ ಕೊರೆದ ಸ್ಥಳದ 500 ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಬೋರ್‌ವೆಲ್, ಸರ್ಕಾರಿ ನೀರಿನ ಮೂಲ ಇಲ್ಲ ಎಂಬ ಗ್ರಾಪಂನ ನಿರಾಕ್ಷೇಪಣಾ ಪತ್ರ, 7ಎ ಫಾರ್ಮ್ ದಾಖಲೆ, ಅಂತರ್ಜಲ ಕಚೇರಿಯ ಭೂವಿಜ್ಞಾನಿ ನೀಡಿದ ಅನುಮತಿ ಪತ್ರ ಅಗತ್ಯವಾಗಿ ಮೆಸ್ಕಾಂಗೆ ಸಲ್ಲಿಸಬೇಕು.

    ಕುಡಿಯುವ ನೀರು, ಕೃಷಿ ಹಾಗೂ ಕೃಷಿಯೇತರ ಬಳಕೆಗಾಗಿ ಬೋರ್‌ವೆಲ್ ಕೊರೆಯಲು ಅನುಮತಿಗಾಗಿ ಅರ್ಜಿ ಸಲ್ಲಿಸಿದರೆ ಸೂಕ್ತ ದಾಖಲೆ ಪರಿಶೀಲಿಸಿ ನಿರಾಕ್ಷೇಪಣಾ ಪತ್ರ ನೀಡಲಾಗುವುದು. ಈ ಬಗ್ಗೆ ಯಾವುದೇ ಗೊಂದಲ ಬೇಡ.
    – ದಿನಕರ್ ಶೆಟ್ಟಿ, ಹಿರಿಯ ಭೂ ವಿಜ್ಞಾನಿ, ಉಡುಪಿ ಜಿಲ್ಲಾ ಅಂತರ್ಜಲ ಕಚೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts