More

    ಗಡಿ ಭಾಗಕ್ಕೆ ಮತ್ತೆ ‘ಮಹಾ’ ಭೀತಿ!

    ಬೆಳಗಾವಿ: ನೆರೆಯ ರಾಜ್ಯ ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಗಡಿ ಭಾಗಗಳಲ್ಲಿ ಸರ್ಕಾರ ಮುನ್ನೆಚ್ಚರಿಕೆಯ ಕಠಿಣ ಕ್ರಮ ಕೈಗೊಳ್ಳದ್ದರಿಂದ ಬೆಳಗಾವಿ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದಾರೆ.

    ಮಹಾರಾಷ್ಟ್ರದಲ್ಲಿ ಕಳೆದ ನಾಲ್ಕೈದು ದಿನಗಳಲ್ಲಿ 9,927 ಕರೊನಾ ಪ್ರಕರಣ ದಾಖಲಾಗಿದ್ದು, 24 ಗಂಟೆಯ ಅವಧಿಯಲ್ಲಿ 56 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಆದರೂ ಜಿಲ್ಲೆಯ ಗಡಿ ಭಾಗಗಳಲ್ಲಿ ಕರೊನಾ ನಿಯಂತ್ರಣಕ್ಕಾಗಿ ಆರಂಭಿಸಿರುವ ಚೆಕ್ ಪೋಸ್ಟ್‌ಗಳಲ್ಲಿ ಸಮರ್ಪಕವಾಗಿ ಜನರ ತಪಾಸಣೆ ನಡೆಸುತ್ತಿಲ್ಲ. ಅಲ್ಲದೆ, ಕಳ್ಳ ಮಾರ್ಗದಿಂದಲೂ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಜನರು ಆಗಮಿಸುತ್ತಿರುವುದೂ ಸಹ ಜಿಲ್ಲೆಯ ಜನರಲ್ಲಿ ಭಯ ಉಂಟಾಗಲು ಕಾರಣವಾಗಿದೆ.

    ಪಾಲನೆಯಾಗದ ಆದೇಶ?: ಗಡಿ ಭಾಗಕ್ಕೆ ಹೊಂದಿರುವ ಬೆಳಗಾವಿ, ಖಾನಾಪುರ, ಅಥಣಿ, ನಿಪ್ಪಾಣಿ, ಕಾಗವಾಡ, ಚಿಕ್ಕೋಡಿ ತಾಲೂಕು ವ್ಯಾಪ್ತಿಯಲ್ಲಿ ಕೋವಿಡ್-19 ಪರೀಕ್ಷೆಗಾಗಿಯೇ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು 14 ಚೆಕ್‌ಪೋಸ್ಟ್ ತೆರೆಯಲಾಗಿದೆ. ಇಲ್ಲಿ ಜನರ ತಪಾಸಣೆ ನಡೆಸಲು ವೈದ್ಯಕೀಯ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಆದರೆ, ವಾಸ್ತವದಲ್ಲಿ ಕರೊನಾ ತಡೆಗೆ ಸರ್ಕಾರ ಸೂಚಿಸಿದ ಆದೇಶ ಇಲ್ಲಿ ಪಾಲನೆಯಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

    ಎಲ್ಲಿಂದ ಬಂದಿದ್ದೀರಿ..? ಎಲ್ಲಿಗೆ ಹೋಗುತ್ತಿದ್ದೀರಿ..?

    ಗಡಿ ಭಾಗಗಳಲ್ಲಿ ತೆರೆದಿರುವ ಚೆಕ್‌ಪೋಸ್ಟ್‌ಗಳಲ್ಲಿ ಮಹಾರಾಷ್ಟ್ರದಿಂದ ಬೆಳಗಾವಿ ಜಿಲ್ಲೆ ಪ್ರವೇಶಿಸುವವರಿಗೆ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಮಾಡುವಂತೆ ಹಾಗೂ ಕೋವಿಡ್-19 ಲಕ್ಷಣ ಕಂಡು ಬಂದರೆ ಅವರಿಗೆ ಕ್ವಾರಂಟೈನ್ ಮಾಡುವಂತೆ ಜಿಲ್ಲಾಡಳಿತ ಆದೇಶಿಸಿದೆ. ಆದರೆ, ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್‌ಪೋಸ್ಟ್‌ನಲ್ಲಿ ಮಹಾರಾಷ್ಟ್ರ ಕಡೆಯಿಂದ ವಾಹನಗಳ ಮೂಲಕ ಆಗಮಿಸುವ ಜನರ ತಪಾಸಣೆ ಮಾಡುತ್ತಿಲ್ಲ. ಮಹಾರಾಷ್ಟ್ರದಿಂದ ರಾಜ್ಯದ ಗಡಿ ಪ್ರವೇಶಿಸುವವರು ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ರಿಪೋರ್ಟ್ ತೋರಿಸಬೇಕೆಂದು ಕರ್ನಾಟಕ ಸರ್ಕಾರ ಸೂಚಿಸಿದೆ. ಆದರೆ, ಇಲ್ಲಿರುವ ಸಿಬ್ಬಂದಿ, ‘ಎಲ್ಲಿಂದ ಬಂದಿದ್ದೀರಿ.. ? ಎಲ್ಲಿಗೆ ಹೋಗುತ್ತಿದ್ದೀರಿ..?’ ಎಂದಷ್ಟೇ ಕೇಳಿ ಜನರನ್ನು ಕಳುಹಿಸುತ್ತಿದ್ದಾರೆ. ರಾತ್ರಿ ಸಮಯದಲ್ಲಂತೂ ಯಾವುದೇ ವಾಹನವನ್ನೂ ತಡೆದು ಇಲ್ಲಿನ ಸಿಬ್ಬಂದಿ ಪರಿಶೀಲಿಸುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಸ್ಥಳೀಯರು ದೂರಿದ್ದಾರೆ.

    ಕರೊನಾ ನಿಯಂತ್ರಣಕ್ಕಾಗಿ ಮದುವೆ, ಸಭೆ-ಸಮಾರಂಭಗಳಲ್ಲಿ ಹೆಚ್ಚು ಜನ ಸೇರದಂತೆ ಸೂಚಿಸಲಾಗಿದೆ. ಅಲ್ಲದೆ, ಪಕ್ಕದ ರಾಜ್ಯ ಮಹಾರಾಷ್ಟ್ರ, ಕೇರಳದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ರಾಜ್ಯದಲ್ಲಿ ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಆದರೆ, ಗಡಿ ಭಾಗಗಳಲ್ಲಿ ಪ್ರಯಾಣಕ್ಕೆ ನಿರ್ಬಂಧ ಹೇರಿಲ್ಲ.
    | ಡಾ.ಕೆ. ಸುಧಾಕರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts