More

    ಗಡಿಯಲ್ಲಿ ಹೈ ಅಲರ್ಟ್‌ಗೆ ಸೂಚನೆ

    ಬೆಳಗಾವಿ: ನೆರೆಯ ಮಹಾರಾಷ್ಟ್ರದಲ್ಲಿ ಕರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದ ಗಡಿ ಗ್ರಾಮಗಳಲ್ಲಿ ಹೈ ಅಲರ್ಟ್ ಆಗಿರಲು ಬೆಳಗಾವಿ ಜಿಲ್ಲಾಡಳಿತಕ್ಕೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

    ಕಳೆದ ನಾಲ್ಕೈದು ವಾರಗಳಲ್ಲಿ ಮುಂಬೈ, ಪೂನಾ, ಕೊಲ್ಲಾಪುರ, ಸೊಲ್ಲಾಪುರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೊರನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಬೆಳಗಾವಿ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರ ರಾಜ್ಯದ ಕೆಲ ಜಿಲ್ಲೆಗಳ ಗ್ರಾಮಗಳಲ್ಲಿ ಮಹಾ ಸರ್ಕಾರ ಮತ್ತೆ ಲಾಕ್‌ಡೌನ್ ಘೋಷಣೆ ಮಾಡಿದೆ. ಇದರಿಂದಾಗಿ ಬೆಳಗಾವಿ ಜಿಲ್ಲೆಯ ಕಾಗವಾಡ, ನಿಪ್ಪಾಣಿ, ಅಥಣಿ, ಚಿಕ್ಕೋಡಿ, ಖಾನಾಪುರ, ಬೆಳಗಾವಿ ನಗರ ಸೇರಿದಂತೆ ಕೆಲ ಪ್ರದೇಶಗಳಲ್ಲೂ ಮತ್ತೆ ಲಾಕ್‌ಡೌನ್ ಆತಂಕದ ಗಾಳಿ ಬೀಸುತ್ತಿದೆ.

    ಮಹಾರಾಷ್ಟ್ರದೊಂದಿಗೆ ನಂಟು: ಬೆಳಗಾವಿ ಗಡಿಭಾಗದ ಜನರು ವ್ಯಾಪಾರ ಹಾಗೂ ಕೌಟುಂಬಿಕ ಕಾರಣದಿಂದಾಗಿ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳೊಂದಿಗೆ ಒಡನಾಟ ಹೊಂದಿದ್ದಾರೆ. ಹೀಗಾಗಿ ರಾಜ್ಯದ ಗಡಿಭಾಗದ ತಾಲೂಕುಗಳಲ್ಲಿ ಕರೊನಾ ಸೋಂಕು ಮತ್ತೆ ಉಲ್ಬಣವಾಗುವ ಸಾಧ್ಯತೆಯಿಂದ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಜಿಲ್ಲೆಯಲ್ಲಿ ಗಂಟಲು ದ್ರವ ಮಾದರಿ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು 50ಕ್ಕೆ ಹೆಚ್ಚಿಸಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಬರುವ ಪ್ರತಿ ವಾಹನ ಮತ್ತು ಪ್ರಯಾಣಿಕರನ್ನು ಪರೀಕ್ಷೆ ಮಾಡಲು ಸರ್ಕಾರದಿಂದ ಅನುಮತಿ ಕೇಳಿದೆ.

    ನಿಯಮ ಪಾಲಿಸಲು ಸೂಚನೆ: ನೆರೆಯ ಮಹಾರಾಷ್ಟ್ರದೊಂದಿಗೆ ಬೆಳಗಾವಿ ಜಿಲ್ಲೆಯ ಜನರು ನೇರವಾಗಿ ಸಂಪರ್ಕ ಹೊಂದಿರುವುದರಿಂದ ಇಲ್ಲಿನ ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳಿಗೆ ಮಾರ್ಚ್ 31ರ ವರೆಗೆ ಕೋವಿಡ್-19 ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಬಸ್ ನಿಲ್ದಾಣ, ದೇವಸ್ಥಾನ ಸೇರಿದಂತೆ ಜನಜಂಗುಳಿ ಪ್ರದೇಶಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಆರಂಭಿಸಲಾಗುತ್ತಿದೆ. ನಿತ್ಯ 3 ಸಾವಿರಕ್ಕೂ ಅಧಿಕ ಜನರನ್ನು ಕರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈಗಾಗಲೇ ಜಿಲ್ಲಾಡಳಿತಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ಸೂಚಿಸಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಬಿ. ಮುನ್ಯಾಳ ಮಾಹಿತಿ ನೀಡಿದ್ದಾರೆ.

    ಸವದತ್ತಿ ಯಲ್ಲಮ್ಮ ದೇವಿ ದರ್ಶನ ಮತ್ತೆ ಬಂದ್?

    ನೆರೆಯ ಮಹಾರಾಷ್ಟ್ರದಿಂದ ನಿತ್ಯವೂ ಭಕ್ತರನ್ನು ತುಂಬಿಕೊಂಡು ನೂರಾರು ವಾಹನಗಳು ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಬರುತ್ತಿವೆ. ದಿನವೂ ಲಕ್ಷಾಂತರ ಭಕ್ತರು ದೇವಿ ದರ್ಶನ ಮಾಡಿ ಹೋಗುತ್ತಿದ್ದಾರೆ. ಇದರಿಂದ ದೇವಸ್ಥಾನದ ಮೂಲಕವಾಗಿ ಕರೊನಾ ಸೋಂಕು ಹರಡುವ ಸಾಧ್ಯತೆ ಇದೆ. ಅಲ್ಲದೆ, ದೇವಸ್ಥಾನಕ್ಕೆ ಬರುತ್ತಿರುವ ಬಹುತೇಕ ಭಕ್ತರು ಕರೊನಾ ಸೋಂಕು ನಿಯಂತ್ರಣ ನಿಯಮ ಪಾಲಿಸುತ್ತಿಲ್ಲ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಯಲ್ಲಮ್ಮ ದೇವಸ್ಥಾನ ಮತ್ತೆ ಬಂದ್ ಮಾಡುವ ಕುರಿತು ಜಿಲ್ಲಾಡಳಿತ ಸ್ಥಳೀಯ ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದೆ.

    ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕರೊನಾ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿದೆ. ಹೀಗಾಗಿ ಸರ್ಕಾರ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಿದೆ. ಹೀಗಾಗಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಗಡಿ ಭಾಗಗಳಲ್ಲಿ ಯಾವ ರೀತಿಯಲ್ಲಿ ಕ್ರಮ ಜರುಗಿಸಬೇಕೆಂಬ ಕುರಿತು ಹಾಗೂ ಸವದತ್ತಿ ಯಲ್ಲಮ್ಮ ದೇವಸ್ಥಾನ ಬಂದ್ ಮಾಡುವುದು ಸೇರಿದಂತೆ ಇನ್ನಿತರ ಕ್ರಮ ಕುರಿತು ಚರ್ಚಿಸಲಾಗುತ್ತಿದೆ.
    | ಎಂ.ಜಿ.ಹಿರೇಮಠ. ಜಿಲ್ಲಾಧಿಕಾರಿ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts