More

    ಗಡಿ ನಿರ್ಬಂಧ ತುಸು ಸಡಿಲಿಕೆ

    ಉಳ್ಳಾಲ: ಕರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಕೇರಳದಿಂದ ಕರ್ನಾಟಕ ಪ್ರವೇಶ ಮಾಡುವವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ಟೆಸ್ಟ್ ವರದಿ ಹೊಂದಿ, ನಿಗದಿತ ಐದು ಗಡಿ ಪ್ರದೇಶಗಳಿಂದ ಮಾತ್ರ ಕರ್ನಾಟಕ ಪ್ರವೇಶಸಬೇಕು ಎಂಬ ನಿಯಮವನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಮಂಗಳವಾರ ಕೊಂಚ ಸಡಿಲಿಸಿದೆ.

    ಇದರ ಪರಿಣಾಮ, ವಿದ್ಯಾರ್ಥಿಗಳು, ಉದ್ಯೋಗಿಗಳು, ಇತರ ಅಗತ್ಯಗಳಿಗೆ ಸಂಚರಿಸುವವರು ಈ ದಿನ ಗಡಿ ಪ್ರದೇಶ ಮೂಲಕ ಬಹುತೇಕ ಸಹಜ ಓಡಾಟ ನಡೆಸಿದ್ದಾರೆ. ಈ ಬಗ್ಗೆ ‘ವಿಜಯವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸದ್ಯದ ಮಟ್ಟಿಗೆ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ತುರ್ತು ಅಗತ್ಯಗಳಿಗಾಗಿ ಉಭಯ ರಾಜ್ಯಗಳ ನಡುವೆ ಪ್ರಯಾಣಿಸುವವರಿಗೆ ಸ್ವಲ್ಪ ರಿಯಾಯಿತಿ ನೀಡಿದ್ದೇವೆ.

    ಕೋವಿಡ್ ನಿಯಂತ್ರಣ ದೃಷ್ಟಿಯಿಂದ ಸಾರ್ವಜನಿರಿಗೆ ತೊಂದರೆಯಾಗದಂತೆ ಏನು ಕ್ರಮ ಕೈಗೊಳ್ಳಬಹುದು ಎನ್ನುವ ಕುರಿತು ಜಿಲ್ಲಾಧಿಕಾರಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
    ಗಡಿ ಪ್ರವೇಶ ನಿರ್ಬಂಧದ ಪ್ರಥಮ ದಿನವಾದ ಸೋಮವಾರ ತಲಪಾಡಿಯಲ್ಲಿ ಕೇರಳಿಗರು ಕರ್ನಾಟಕದಿಂದ ಹೋಗುವ ಎಲ್ಲ ವಾಹನಗಳನ್ನೂ ತಡೆದಿದ್ದು, ಆ ರಾಜ್ಯದ ಪೊಲೀಸರ ಮಧ್ಯ ಪ್ರವೇಶದಿಂದ ಪ್ರತಿಭಟನೆ ಕೈಬಿಟ್ಟಿದ್ದರು.

    ಮಂಗಳವಾರವೂ ನಿಯಮ ಜಾರಿಗೆ ತಂದಲ್ಲಿ ಪ್ರತಿಭಟನೆ ಮುಂದುವರಿಸುವ ಎಚ್ಚರಿಕೆ ನೀಡಿದ್ದರು. ಅದರಂತೆ ಮಂಗಳವಾರ ಬೆಳಗ್ಗೆಯೇ ಕೇರಳಿಗರು ತಲಪಾಡಿಯಲ್ಲಿ ಜಮಾಯಿಸಿದ್ದರು. ಆದರೆ ವರದಿಯ ತಪಾಸಣೆ ಇರದ ಕಾರಣ ಪ್ರತಿಭಟನೆ ಕೈಬಿಟ್ಟಿದ್ದಾರೆ. ಇದೆ ವೇಳೆ ಗಡಿಭಾಗಕ್ಕೆ ಆಗಮಿಸಿದ್ದ ತಾಲೂಕು ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

    ಯಾಕೆ ನಿಯಮ ಸಡಿಲಿಕೆ?
    ಆರ್‌ಟಿ ಪಿಸಿಆರ್ ಪರೀಕ್ಷೆ ಸೌಲಭ್ಯವಿರುವ ಕಾಸರಗೋಡು ಜಿಲ್ಲೆ ಹಾಗೂ ಮಂಗಳೂರು ಸರ್ಕಾರಿ ಆಸ್ಪತ್ರೆಗಳಲ್ಲಿ ಜನದಟ್ಟಣೆ ಅಧಿಕ ಕಂಡುಬಂದಿರುವ ಹಿನ್ನೆಲೆಯಲ್ಲಿ ಗಡಿ ಪ್ರದೇಶ ಮೂಲಕ ಕರ್ನಾಟಕ ಪ್ರವೇಶಕ್ಕೆ ಇಲ್ಲಿಯ ತನಕ ಹೆಚ್ಚಿನ ನಿರ್ಬಂಧ ವಿಧಿಸಿಲ್ಲ ಎಂದು ಇಲಾಖೆ ಮೂಲ ತಿಳಿಸಿದೆ.

    ಸಾವಿರ ಮಂದಿಯ ಪರೀಕ್ಷೆ: ಗಡಿ ನಿರ್ಬಂಧ ಪ್ರಕಟಿಸಿದ್ದ ಪ್ರಥಮ ದಿನ ಕೇರಳ- ಕರ್ನಾಟಕದ ಐದು ಗಡಿ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆಯಿಂದ ಸುಮಾರು 1000 ಮಂದಿಯ ಪರೀಕ್ಷೆ ಮಾಡಲಾಗಿದ್ದು, ರ‌್ಯಾಪಿಡ್ ಆ್ಯಂಟಿಜನ್ ಪರೀಕ್ಷೆಗೆ ಒಳಗಾದವರಲ್ಲಿ ಯಾರೊಬ್ಬರಲ್ಲೂ ಪಾಸಿಟಿವ್ ಪತ್ತೆಯಾಗಿಲ್ಲ. ಆರ್‌ಟಿ ಪಿಸಿಆರ್ ವರದಿ ಇನ್ನು ಬರಬೇಕಾಗಿದೆ. ಮಂಗಳವಾರ ತಲಪಾಡಿ ಗಡಿಯಲ್ಲಿ 287 ಮಂದಿಯ ಪರೀಕ್ಷೆ ನಡೆಸಲಾಗಿದೆ.

    ಗಡಿಯಲ್ಲಿ ಪ್ರತಿಭಟನಾ ಜಾಥಾ, ಧರಣಿ
    ಮಂಜೇಶ್ವರ: ದ.ಕ.ಜಿಲ್ಲಾಡಳಿತದ ನಿರ್ಬಂಧ ಆದೇಶ ವಿರುದ್ಧ ಮಂಗಳವಾರ ಎಡರಂಗದ ಯುವ ಸಂಘಟನೆ ಎಲ್‌ಡಿವೈಎಫ್ ನೇತೃತ್ವದಲ್ಲಿ ಗಡಿ ಪ್ರದೇಶಕ್ಕೆ ಪ್ರತಿಭಟನಾ ಜಾಥಾ ಹಾಗೂ ಧರಣಿ ಹಮ್ಮಿಕೊಳ್ಳಲಾಯಿತು. ತಲಪಾಡಿ ಗಡಿಯಿಂದ ಆರಂಭಗೊಂಡ ಪ್ರತಿಭಟನಾ ಜಾಥಾವನ್ನು ಟೋಲ್‌ಗೇಟ್ ಪರಿಸರದಲ್ಲಿ ಕರ್ನಾಟಕ ಪೊಲೀಸರು ತಡೆದರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts