More

    ನೊಳಂಬ ಅಧ್ಯಯನ ಪೀಠ ಸ್ಥಾಪಿಸಿ ; ರಾಜ್ಯ ನೊಳಂಬ ಲಿಂಗಾಯತ ಸಂಘದ ಅಧ್ಯಕ್ಷ ಎಸ್.ಆರ್. ಪಾಟೀಲ್ ಮನವಿ

    ತುಮಕೂರು : ತುಮಕೂರು ವಿಶ್ವವಿದ್ಯಾಲಯದಲ್ಲಿ ನೊಳಂಬ ಅಧ್ಯಯನ ಪೀಠ ಸ್ಥಾಪನೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ನೊಳಂಬ ಲಿಂಗಾಯತ ಸಂಘದ ಅಧ್ಯಕ್ಷ ಎಸ್.ಆರ್.ಪಾಟೀಲ್ ಹೇಳಿದರು.

    ನಗರದ ಶ್ರೀಸಿದ್ಧಗಂಗಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಶ್ರೀ ಗುರುಸಿದ್ದರಾಮೇಶ್ವರ ಸಾಹಿತ್ಯ ಸಂಪದ ವತಿಯಿಂದ ಭಾನುವಾರ ಆಯೋಜಿಸಿದ್ದ ಸಂಶೋಧಕ ಡಾ.ಡಿ.ಎನ್.ಯೋಗೀಶ್ವರಪ್ಪ ಅವರ ‘ನೊಳಂಬ ವಂಶದ ಅರಸು ಮನೆತನಗಳು’ ಕೃತಿ ಬಿಡುಗಡೆ  ಸಮಾರಂಭದಲ್ಲಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯಲ್ಲೇ ನೊಳಂಬ ಲಿಂಗಾಯತ ಸಮುದಾಯದವು ಅತಿ ಹೆಚ್ಚಿದ್ದು, ಇಲ್ಲಿನ ವಿವಿಯಲ್ಲಿ ನೊಳಂಬ ಅಧ್ಯಯನ ಪೀಠ ಸ್ಥಾಪಿಸಿದರೆ ಉತ್ತಮ ಎಂದು ಅಭಿಪ್ರಾಯಪಟ್ಟರು.

    ರಾಜ್ಯದಲ್ಲಿ 8ನೇ ಶತಮಾನದಿಂದ 11ನೆಯ ಶತಮಾನದ ಮಧ್ಯಭಾಗದವರೆಗೆ ನೊಳಂಬ ಅರಸರು ಆಳ್ವಿಕೆ ನಡೆಸಿದ್ದು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅಂತಹ ಅರಸರ ಮನೆತನದ ಇತಿಹಾಸ ಮುಂದಿನ ಪೀಳಿಗೆಗೆ ತಲುಪಿಸಲು ಅಧ್ಯಯನ ಪೀಠ ಸ್ಥಾಪನೆ ಅಗತ್ಯವಿದೆ. ವರ್ತಮಾನದಲ್ಲಿರುವ ನೊಳಂಬ ಸಮುದಾಯವನ್ನು ಭವಿಷ್ಯದೆಡೆಗೆ ಕೊಂಡೊಯ್ಯುವ ಕೆಲಸವನ್ನು ಜನಪ್ರತಿನಿಧಿಗಳು ಮಾಡಬೇಕಿದೆ ಎಂದರು.

    ನೊಳಂಬರ ಶಾಸನಗಳು ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ, ಕೋಲಾರ, ತುಮಕೂರು, ಬೆಂಗಳೂರು ಜಿಲ್ಲೆಗಳಲ್ಲೂ ಆಂಧ್ರಪ್ರದೇಶದ ಅನಂತಪುರ, ಚಿತ್ತೂರು ಜಿಲ್ಲೆಗಳಲ್ಲೂ ತಮಿಳು ನಾಡಿನ ಧರ್ಮಪುರಿ ಜಿಲ್ಲೆಯಲ್ಲೂ ದೊರೆತಿವೆ. ಇವರ ಶಾಸನಗಳು ಸುಮಾರು ಕ್ರಿ.ಶ. 800 ರಿಂದ 1100ರ ವರೆಗಿನ ಕಾಲಕ್ಕೆ ಸೇರಿದವು. ಇವರ ಶಾಸನಗಳ ಭಾಷೆ ಮುಖ್ಯವಾಗಿ ಸಮಕಾಲೀನ ಕನ್ನಡ. ಸಂಸ್ಕೃತ ಕನ್ನಡ ಬೆರಕೆ ಇರುವ ಶಾಸನಗಳೂ ವಿರಳವಲ್ಲ. ಇವುಗಳಲ್ಲಿ ಗದ್ಯ, ಪದ್ಯ, ಮತ್ತು ಇವೆರಡರ ಮಿಶ್ರಣ ಇರುತ್ತವೆ ಎಂದು ತುಮಕೂರು ವಿವಿ ಡೀನ್ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದರು.

    ಎಲ್ಲ ಶಾಸನಗಳೂ ಸಮಕಾಲೀನ ಕನ್ನಡ-ತೆಲುಗು ಲಿಪಿಯಲ್ಲಿ ಬರೆಯಲ್ಪಟ್ಟಿವೆ. ಇವರ ಶಾಸನಗಳನ್ನು ಕಲ್ಲಿನ ಚಪ್ಪಡಿಗಳ ಮೇಲೆ, ಕಂಬಗಳ ಮೇಲೆ ಮತ್ತು ದೇವಾಲಯದ ತಳಪಾದಿಯೇ ಮುಂತಾದ ಸ್ಥಳಗಳಲ್ಲಿ ಕೊರೆಯಲಾಗಿದೆ ಎಂದ ಅವರು, ನೊಳಂಬರು ಅಚ್ಚ ಕನ್ನಡಿಗರು, ನೊಳಂಬರ ಇತ್ತೀಚಿನ ಆಚರಣೆಗಳು, ಮದುವೆಗಳು, ಹಬ್ಬ ಹರಿದಿನಗಳು ಇವೆಲ್ಲವೂ ಕನ್ನಡಿಗರ ಸಂಸ್ಕೃತಿಯನ್ನು ಬಿಂಬಿಸುತ್ತವೆ ಎಂದು ತಿಳಿಸಿದರು.

    ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜ್, ಪದವಿಪೂರ್ವ ಶಿಕ್ಷಣ ಇಲಾಖೆೆ ಉಪನಿರ್ದೇಶಕ ಎಚ್.ಕೆ.ನರಸಿಂಹಮೂರ್ತಿ, ಸಿದ್ಧಗಂಗಾ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಪಿ.ವೀರಭದ್ರಸ್ವಾಮಿ, ಡಾ.ದಿನೇಶ್‌ಕುಮಾರ್, ಡಾ.ಸೌಮ್ಯಶ್ರೀ, ಜಯರಾಮು, ಡಾ.ಬಿ.ಆರ್. ಚಂದ್ರಶೇಖರಯ್ಯ ಮುಂತಾದವರು ಭಾಗವಹಿಸಿದ್ದರು.

    ನೊಳಂಬ ರಾಜರ ಕೊಡುಗೆ : ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಆಂಧ್ರ ಹಾಗೂ ತಮಿಳುನಾಡುಗಳಲ್ಲಿ ಆಳ್ವಿಕೆ ನಡೆಸಿದ ನೊಳಂಬ ರಾಜಮನೆತನದ ಕೊಡುಗೆ ಅಪಾರ. ಅಂದು ರಾಜರು ಕೊಟ್ಟ ಕೊಡುಗೆಗಳು, ಉತ್ತಮ ಕಾರ್ಯಗಳನ್ನು ನಾವು ಇಂದಿಗೂ ಸ್ಮರಿಸಿಕೊಳ್ಳುತ್ತಿದ್ದೇವೆ. ಇಂತಹ ಸಂಶೋಧನಾತ್ಮಕ ಲೇಖನ, ಶಾಸನಗಳ ಸಂಗ್ರಹದ ಮೂಲಕ ಇತಿಹಾಸದ ಸತ್ಯಶೋಧನೆ ಮಾಡಲು ಸಾಧ್ಯವಾಗಲಿದೆ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ ಹೇಳಿದರು.
    ಜಾತಿಗಳಲ್ಲಿ ಒಳಜಾತಿ, ಉಪಪಂಗಡಗಳು ಹೆಚ್ಚುತ್ತಿವೆ. ಇದರ ವ್ಯಾಮೋಹವನ್ನು ಬಿಟ್ಟು, ಇತಿಹಾಸವನ್ನು ಅರಿತುಕೊಳ್ಳಬೇಕಿದೆ. ಸಾಂಸ್ಕೃತಿಕವಾಗಿ ಸಮುದಾಯದ ಬಗ್ಗೆ ತಿಳಿದುಕೊಳ್ಳುವದರ ಬಗ್ಗೆ ಗಮನ ಕೊಡಬೇಕು. ಈ ಸಂಶೋಧನಾ ಕೃತಿಯಿಂದ ಅಧ್ಯಯನಕಾರರಿಗೆ ಆಕರ ಗ್ರಂಥ ಸಿಕ್ಕಂತಾಗಿದೆ. ಈ ರೀತಿಯ ಕೃತಿಗಳು ಮುಂದಿನ ಪೀಳಿಗೆಗೆ ಸಂಪತ್ತು ಇದ್ದಂತೆ ಎಂದು ತಿಳಿಸಿದರು.

    ಅಚ್ಚ ಕನ್ನಡದ ದೇಸೀ ಅರಸರು ನೊಳಂಬರು. ಇವರು ಮೂಲ ಕೃಷಿಕರಾಗಿದ್ದು, ಕೃಷಿ ಮೂಲದಿಂದ ಬಂದು ರಾಜಮನೆತನದಲ್ಲಿ ಹುದ್ದೆ ಪಡೆದುಕೊಂಡು ನಾಡಗೌಡರಾಗಿ ರಾಜಮನೆತ ಕಟ್ಟಿಕೊಂಡು 8ನೇ ಶತಮಾನದಿಂದ 11ನೇ ಶತಮಾನದ ಮಧ್ಯಭಾಗದವರೆಗೂ ಆಳ್ವಿಕೆ ನಡೆಸಿದ್ದಾರೆ. 328 ಶಾಸನಗಳನ್ನು ಸಂಗ್ರಹ ಮಾಡಿ ಅಧ್ಯಯನ ನಡೆಸಿದ ನಂತರ ಈ ಬಗ್ಗೆ ಕೃತಿ ಬರೆಯುವ ಆಲೋಚನೆ ಮೂಡಿತು.
    ಡಾ.ಡಿ.ಎನ್.ಯೋಗೀಶ್ವರಪ್ಪ ಸಂಶೋಧಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts