More

    ಸವ್ಯಸಾಚಿ: ಅನ್ನದ ಋಣ, ದೇಹದ ಋಣ, ಬಾಲಿವುಡ್ ಗುಣ

    ಅನ್ನದ ಋಣ, ನೆಲದ ಋಣ, ದೇಹದ ಋಣ…

    ಋಣವೆನ್ನುವುದು ಬಹಳ ದೊಡ್ಡ ಮಾತು. ಜಗತ್ತಿನಲ್ಲಿ ಎಲ್ಲವನ್ನೂ ಪಡೆದುಕೊಳ್ಳುವುದು, ಏನೆಲ್ಲವನ್ನೂ ಕಳೆದುಕೊಳ್ಳುವುದು ಎಲ್ಲವೂ ಋಣದಿಂದಲೇ. ಋಣವಿದ್ದಷ್ಟೇ ಲಭ್ಯ, ಋಣವಿದ್ದಷ್ಟೇ ಭಾಗ್ಯ. ಅದರಲ್ಲೂ ಅನ್ನ, ನೆಲ, ದೇಹ ಇವುಗಳ ಋಣ ಹಣೆಬರಹದಲ್ಲಿರುವಷ್ಟೇ. ಯಾರ ಅನ್ನದ ಋಣ ಎಲ್ಲಿ ಬರೆದಿಹುದೋ, ಹರಿಚಿತ್ತ ಎಂದರು ಬಲ್ಲವರು.

    ಸವ್ಯಸಾಚಿ: ಅನ್ನದ ಋಣ, ದೇಹದ ಋಣ, ಬಾಲಿವುಡ್ ಗುಣ

    ಕೆಲವರು ಶತಾಯುಷಿಗಳಾಗಿರುತ್ತಾರೆ. ಹಲವು ತಲೆಮಾರುಗಳನ್ನು ಕಂಡಿರುತ್ತಾರೆ. ಇನ್ನು ಹಲವರಿಗೆ ಅಲ್ಪಾಯುಷ್ಯ. ಪ್ರಪಂಚವನ್ನು ಸರಿಯಾಗಿ ನೋಡುವ ಮೊದಲೇ ಅವರ ಆಯಸ್ಸು ಮುಗಿದಿರುತ್ತದೆ. ಜಗತ್ತಿನ ದೃಷ್ಟಿಯಲ್ಲಿ ಅಯ್ಯೋ, ಅಕಾಲಮರಣ… ಎಂಥ ಸಾವು… ಬದುಕಿಬಾಳಬೇಕಾದ ಜೀವ… ಏನೀ ದುರ್ವಿಧಿ ಎಂಬ ನೋವು. ಆದರೆ, ಆ ಜೀವಕ್ಕೆ ಆ ದೇಹದ ಋಣ ಇದ್ದಿದ್ದೇ ಅಷ್ಟು. ಅಕಾಲಿಕ, ಅಕಾಲ ಎನ್ನುವುದು ನಮ್ಮ ದೃಷ್ಟಿ. ಕೆಲವರಿಗೆ ಕುಳಿತಲ್ಲೇ ಸಾವು, ಕೆಲವರಿಗೆ ನಿದ್ರೆಯಲ್ಲಿ, ಕೆಲವರಿಗೆ ಅಪಘಾತ, ಆಘಾತ, ಹೃದಯಾಘಾತ, ಕೆಲವರದು ಆತ್ಮಹತ್ಯೆ, ಕೆಲವರಿಗೆ ಯುದ್ಧಭೂಮಿಯಲ್ಲಿ, ಶತ್ರುಗಳ ಕೈಯಲ್ಲಿ, ದುಷ್ಟರ ಕೈಯಲ್ಲಿ… ಜಗತ್ತಿನ ದೃಷ್ಟಿಯಲ್ಲಿ ಸಾವಿನ ರೀತಿಗಳು ಸಾವಿರ. ಆದರೆ, ಆಯುಷ್ಯ ಮುಗಿಯದೆ ಇದ್ದರೆ, ಸೇತುವೆಯಿಂದ ನದಿಗೆ ಜಿಗಿದರೂ ಬಂಡೆಯ ಮೇಲೆ ಬಿದ್ದು ಕಾಲು ಮುರಿಯುತ್ತದೆ ವಿನಾ ಜೀವ ಹೋಗುವುದಿಲ್ಲ!

    ಅವನೊಬ್ಬ ಜನಾನುರಾಗಿ ರಾಜ. ಹತ್ತುದಿಕ್ಕಿನಲ್ಲಿ ಪ್ರಖ್ಯಾತನಾದವನು. ಅದೊಂದು ರಾತ್ರಿ ಗಾಢನಿದ್ರೆಯಲ್ಲಿ ಅವನಿಗೊಂದು ಕನಸು. ಉದ್ಯಾನದಲ್ಲಿ ತಂಗಾಳಿಗೆ ಮೈಮನವೊಡ್ಡಿ ನಿಂತ ಗಳಿಗೆಯಲ್ಲಿ ಹೆಗಲ ಮೇಲೆ ಯಾರದೋ ಕೈಸ್ಪರ್ಶ. ಯಾರೆಂದು ತಿರುಗಿನೋಡುವಾಗ ಕಂಡಿದ್ದು ನೆರಳ ಆಕೃತಿ. ‘ಯಾರು ನೀನು’ ಎಂಬ ಪ್ರಶ್ನೆಗೆ, ‘ನಿನ್ನ ಮೃತ್ಯು’ ಎಂಬ ಉತ್ತರ ಎದೆ ನಡುಗಿಸಿತ್ತು. ‘ಸಾವು ಯಾರಿಗೂ ಮುನ್ಸೂಚನೆ ಕೊಟ್ಟು ಬರುವುದಿಲ್ಲ. ಆದರೆ, ನೀನು ಜನಪ್ರೀತಿ ಗಳಿಸಿರುವ ಪರೋಪಕಾರಿ, ಶ್ರೇಷ್ಠ ರಾಜ. ಹಾಗಾಗಿ ನಿನಗೆ ಮಾಹಿತಿ ಕೊಡಲು ಬಂದಿದ್ದೇನೆ. ನಾಳೆ ಸೂರ್ಯಾಸ್ತದ ಒಳಗೆ ನಿನ್ನ ಸಾವು ನಿಶ್ಚಿತ’ ಎಂಬ ಸಂದೇಶ ನೀಡಿ ನೆರಳು ಮಾಯವಾದರೆ, ದಿಢೀರ್ ಎಚ್ಚರಗೊಂಡ ರಾಜ ಭಯಭೀತನಾಗಿ ಮೈಬೆವೆತಿದ್ದ. ಇದೊಂದು ಕನಸು ಎಂದು ಕಡೆಗಣಿಸಲೇ ಅಥವಾ ನಿಜಕ್ಕೂ ಇದೊಂದು ಮುನ್ಸೂಚನೆಯೇ? ರಾಜ ಆ ಕ್ಷಣದಲ್ಲೇ ಆಸ್ಥಾನದ ಎಲ್ಲ ಪ್ರಮುಖರು, ಜ್ಯೋತಿಷಿಗಳು, ಶಾಸ್ತ್ರಜ್ಞರನ್ನು ಕರೆಸಿ ತನ್ನ ಕನಸನ್ನು ವಿವರಿಸಿದ. ಅವರೆಲ್ಲರೂ ಗಂಟೆಗಟ್ಟಲೆ ಕನಸಿನ ಅರ್ಥವನ್ನು, ನೆರಳಿನ ಪ್ರತಿಮೆಯನ್ನು, ಹುಟ್ಟುಸಾವಿನ ಮರ್ಮವನ್ನು ರ್ಚಚಿಸಿದರೇ ವಿನಾ ರಾಜನ ಆತಂಕ ನಿವಾರಣೆ ಆಗುವಂಥ ಪರಿಹಾರ, ಸಮಾಧಾನ ಸಿಗಲಿಲ್ಲ. ಆಗ ಆ ರಾಜನ ಬಾಲ್ಯದಿಂದಲೂ ಸಾಕಿಸಲಹಿ ಜೊತೆಯಲ್ಲೇ ಇದ್ದ ವೃದ್ಧನೊಬ್ಬ ಸಲಹೆ ನೀಡಿದ. ‘ಈ ಚರ್ಚೆ, ಇವತ್ತಿಗೆ ಬಗೆಹರಿಯದು. ನೀನು ರಾಜನಾಗಿರುವ ಕಾರಣ ನಿನ್ನ ಕನಸಿನ ಅರ್ಥವನ್ನು ಇದಮಿತ್ಥಂ ಎಂದು ಹೇಳುವುದು ಅವರಲ್ಲಿ ಯಾರಿಗೂ ಸಾಧ್ಯವಿಲ್ಲ. ಏಕೆಂದರೆ, ಸುಳ್ಳಾದರೆ ತಲೆಹೋದೀತು ಎಂಬ ಭಯ. ನಿನಗೆ ಅರಮನೆಯಲ್ಲಿ ಕನಸು ಬಿದ್ದಿರುವ ಕಾರಣ, ಈ ಸ್ಥಳ ನಿನಗೆ ಅಪಾಯಕಾರಿ. ಈಗಿಂದೀಗಲೇ ನಿನ್ನ ಪಟ್ಟದ ಕುದುರೆಯನ್ನೇರಿ ಎಲ್ಲಾದರೂ ದೂರಪ್ರದೇಶಕ್ಕೆ ತೆರಳಿಬಿಡು. ಸೂರ್ಯಾಸ್ತ ಕಳೆಯುವವರೆಗೂ ಅರಮನೆಯಲ್ಲಿ ಕಾಣಿಸಿಕೊಳ್ಳಲೇಬೇಡ’ ಎಂದು ಸಲಹೆ ನೀಡಿದ. ಅದೇ ಸರಿ ಎಂದು ನಿರ್ಧರಿಸಿದ ರಾಜ, ತನ್ನ ನೆಚ್ಚಿನ ಅಂಗರಕ್ಷಕರೊಂದಿಗೆ ಕುದುರೆಯೇರಿ ನಾಗಾಲೋಟದಲ್ಲಿ ಹೊರಟ. ದೂರದ ಡಮಸ್ಕಸ್ ಪಟ್ಟಣವನ್ನು ಸಂಜೆಯ ಒಳಗೆ ಸೇರಿಬಿಟ್ಟರೆ ತಾನು ಸುರಕ್ಷಿತ ಎಂಬ ಭಾವನೆಯಿಂದ ಒಂದು ಕ್ಷಣ ವಿಶ್ರಾಂತಿಗೂ ಕಾಯದೇ ದೌಡಾಯಿಸಿದ. ಇನ್ನೇನು ಸೂರ್ಯಾಸ್ತಕ್ಕೆ ಕೆಲವೇ ಕ್ಷಣಗಳಿರುವಾಗ ಡಮಸ್ಕಸ್ ಪಟ್ಟಣ ತಲುಪಿದಾಗ ರಾಜನಿಗೆ ಯುದ್ಧಗೆದ್ದ ಸಂತೃಪ್ತಿ. ಕುದುರೆಯನ್ನು ಮರಕ್ಕೆ ಕಟ್ಟಿ ಹುಲ್ಲು, ನೀರು ಹಾಕಿ ಪ್ರೀತಿಯಿಂದ ಮೈದಡವಿದ ರಾಜ, ‘ಸಕಾಲದಲ್ಲಿ ತಲುಪುವೆನೊ ಇಲ್ಲವೋ ಎಂಬ ಆತಂಕವಿತ್ತು ನನಗೆ. ನಿನ್ನಿಂದಾಗಿ ಸುರಕ್ಷಿತವಾಗಿ ತಲುಪಿದೆ’ ಎಂದು ಕುದುರೆಯನ್ನು ಉಪಚಾರ ಮಾಡಿದ. ಅಷ್ಟರಲ್ಲೇ ರಾಜನ ಹೆಗಲ ಮೇಲೆ ಮತ್ತೆ ಹಿಂದಿನಿಂದ ಕೈಸ್ಪರ್ಶವಾಗಿತ್ತು. ತಿರುಗಿನೋಡಿದರೆ ಅದೇ ಮೃತ್ಯು. ‘ರಾಜ ನಿನ್ನ ಸಾವು ಈ ನೆಲದಲ್ಲಿ ಬರೆದಿತ್ತು. ನೀನು ಸಕಾಲದಲ್ಲಿ ಇಲ್ಲಿ ಬಂದು ತಲುಪುವ ಬಗ್ಗೆ ನನಗೂ ಅನುಮಾನವಿತ್ತು’ ಎಂದು ಮೃತ್ಯು ಹೇಳುವ ಹೊತ್ತಿಗೆ ರಾಜನ ಪ್ರಾಣಪಕ್ಷಿ ಹಾರಿಹೋಗಿತ್ತು… ‘ಸಾವೆನ್ನುವುದು ಜೀವದ ಅಂತ್ಯ ಎನ್ನುವುದೇ ಬಹುದೊಡ್ಡ ತಪ್ಪುಗ್ರಹಿಕೆ’ ಎಂದವರು ಓಶೋ. ಸಾವೆನ್ನುವುದು ಜೀವದ ಎರಡು ಘಟ್ಟಗಳ ನಡುವಿನ ಬಾಗಿಲು. ಒಂದು ನಾವು ಹಿಂದೆ ಬಿಟ್ಟಿರುವಂಥದ್ದು. ಇನ್ನೊಂದು ಮುಂದಿರುವಂಥದ್ದು. ಈ ರಾಜನ ಕಥೆ ಓಶೋ ಹೇಳಿದ ಸಾವಿನ ವ್ಯಾಖ್ಯಾನ.

    ಬಾಲಿವುಡ್​ನ ಬೆರಗುಗಣ್ಣಿನ ತರುಣ, ಗುಳಿಕೆನ್ನೆಯ ಹೀರೋ, ಸದಾ ಹಸನ್ಮುಖಿ ಸುಶಾಂತ್ ಸಿಂಗ್ ರಜಪೂತ್ 34ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಎನ್ನುವುದು ಎಲ್ಲರ ಪ್ರಶ್ನೆ. ಆಯಸ್ಸು ಮುಗಿದಿತ್ತು, ಸಾವು ಬರೆದಿತ್ತು. ಆತ್ಮಹತ್ಯೆ ಎನ್ನುವುದೊಂದು ನಿಮಿತ್ತ ಎನ್ನುವುದು ಸುಲಭ ವ್ಯಾಖ್ಯಾನ.

    ಸುಶಾಂತ್ ಸಾವಿಗೆ ನಿಜವಾದ ಕಾರಣವೇನೋ? ಅದು ಅವರಿಗೆ ಮಾತ್ರ ಗೊತ್ತು. ಸಾವಿನ ಆ ಕ್ಷಣದಲ್ಲಿ ಅವರ ಮನಸ್ಸಿನಲ್ಲೇನಿತ್ತು? ಇದ್ದು ಹೋರಾಡುವುದಕ್ಕಿಂತ ಸತ್ತು ಪಾರಾಗುವುದೇ ಸುಲಭ ಎಂದು ಅವರಿಗೆ ಅನಿಸಿದ್ದಾದರೂ ಏಕೆ? ಆತ್ಮಹತ್ಯೆ ಎನ್ನುವುದು ದುರ್ಬಲ ಮನಸ್ಸಿನ ಅನಾಹುತ ಎನ್ನುತ್ತಾರಲ್ಲ? ಒಂದು ಸಣ್ಣ ಗಾಯಕ್ಕೆ, ಸೂಜಿಗೆ, ಹನಿರಕ್ತಕ್ಕೆ ಬೆಚ್ಚುವ ಮನುಷ್ಯರು ಮನಸ್ಸಿನ ದುರ್ಬಲ ಕ್ಷಣದಲ್ಲಿ ಸಾಯಲು ಸಾಧ್ಯವೇ? ಅದಕ್ಕೂ ಗಟ್ಟಿಮನಸ್ಸು ಬೇಕಲ್ಲವೇ? ಅಂಥ ಗಟ್ಟಿ ನಿರ್ಧಾರಕ್ಕೂ ಅದೇನಿತ್ತು ಅಂಥ ಕಾರಣ?

    ಮನೆಯಲ್ಲಿ ಮುದ್ದಿನ ಮಗನಾಗಿ, ಬುದ್ಧಿವಂತ ವಿದ್ಯಾರ್ಥಿಯಾಗಿ, ಇನ್ನೊಂದೆರಡು ಸೆಮಿಸ್ಟರ್ ಕಳೆದಿದ್ದರೆ ಇಂಜಿನಿಯರ್ ಎನಿಸಿಕೊಂಡು, ಮುಂದೆ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ತೇರ್ಗಡೆಗೊಂಡು ಐಎಎಸ್ ಅಥವಾ ಐಪಿಎಸ್ ಅಥವಾ ಇನ್ನೇನೋ ಆಗಬಹುದಾಗಿದ್ದ ಸುಶಾಂತ್, ಬಾಲಿವುಡ್ ಸೆಳೆತ, ನಟನಾಗಬೇಕೆಂಬ ತುಡಿತದಿಂದ ಬದುಕಿನ ಪ್ರಯಾಣದಲ್ಲಿ ದಿಢೀರ್ ದಿಕ್ಕು ಬದಲಿಸಿದವರು. ಅವರ ಕನಸು, ಶ್ರಮ, ದುಡಿಮೆ, ಪ್ರಯತ್ನ ಕೊನೆಗೆ ಯೋಗ ಕೈಗೂಡಿದ ಕ್ಷಣದಲ್ಲಿ ಅವರೊಬ್ಬ ಸೂಪರ್​ಸ್ಟಾರ್ ಸಹ ಆದರು. ‘ಅವಾರ್ಡ್ ಫಂಕ್ಷನ್​ಗಳಲ್ಲಿ ಶಾರುಖ್ ಖಾನ್, ಶಾಹಿದ್ ಕಪೂರ್ ಮೊದಲಾದವರು ನೃತ್ಯಪ್ರದರ್ಶನ ನೀಡುವಾಗ ಸಹನರ್ತಕನಾಗಿ ನಾನೂ ಪಾಲ್ಗೊಳ್ಳುತ್ತಿದ್ದೆ. ಆ ನೃತ್ಯವೇದಿಕೆಯಲ್ಲಿ ನೃತ್ಯಗಾರನಾಗಿ ನಾನು ನಿಂತ ಜಾಗಕ್ಕೂ, ಶಾರುಖ್ ಖಾನ್ ನಿಂತ ಜಾಗಕ್ಕೂ ಇರುತ್ತಿದ್ದುದು ಮೂರೇ ಹೆಜ್ಜೆ ಅಂತರ. ಆ ಮೂರು ಹೆಜ್ಜೆ ಕ್ರಮಿಸುವುದೇ ನನ್ನ ಮಹತ್ವಾಕಾಂಕ್ಷೆಯಾಗಿತ್ತು’ ಎಂದು ಐಐಟಿ ವಿದ್ಯಾರ್ಥಿಗಳ ಎದುರು ಭಾಷಣ ಮಾಡುವಾಗೊಮ್ಮೆ ಸುಶಾಂತ್ ಹೇಳಿಕೊಂಡಿದ್ದರು. ಆ ಮೂರು ಹೆಜ್ಜೆಯನ್ನು ಅವರು ಯಶಸ್ವಿಯಾಗಿ ಕ್ರಮಿಸಿದ್ದರು ಕೂಡ. ಇಂಥ ಸುಶಾಂತ್ ನಿರ್ಗಮನದಿಂದ ಬಾಲಿವುಡ್ ಎಂಬ ಪಾಪಕೂಪದ ಅನೇಕ ಒಳಸುಳಿಗಳು ಮತ್ತೆ ಚರ್ಚೆಯಾಗುವಂತಾಗಿದೆ.

    ಜನಸಾಮಾನ್ಯರಿಗೆ ಬಾಲಿವುಡ್ ಎಂದರೆ ಬಣ್ಣಬಣ್ಣದ ಲೋಕ, ಕನಸುಗಳ ಭವ್ಯ ಸಾಮ್ರಾಜ್ಯ. ಆದರೆ, ಅಲ್ಲಿ ಬದುಕುವವರ ಬಣ್ಣಮಾಸಿದ ಕಥೆಗಳು ಸಾವಿರ. ಅಲ್ಲಿ ಯಶಸ್ವಿಯಾಗುವುದಕ್ಕೆ ಕೇವಲ ಹಣ, ಸ್ಪುರದ್ರೂಪ, ಕನಸು, ಪ್ರತಿಭೆ ಇದ್ದರೆ ಸಾಲದು. ಏಕೆಂದರೆ, ಬಾಲಿವುಡ್​ನಲ್ಲಿ ಗಾಡ್​ಫಾದರ್​ಗಳಿರಲೇಬೇಕು. ಸದ್ಯದ ಬಾಲಿವುಡ್​ನ ಚಿತ್ರಗಳು, ಸೂಪರ್​ಸ್ಟಾರ್​ಗಳು, ನಟ, ನಟಿ, ನಿರ್ದೇಶಕ, ನಿರ್ವಪಕರು, ನಿರ್ವಣಸಂಸ್ಥೆಗಳು, ಪ್ರದರ್ಶಕ, ವಿತರಕ ವ್ಯವಸ್ಥೆ ಹೀಗೆ ಎಲ್ಲದರಲ್ಲೂ ಒಂದು ಒಡಂಬಡಿಕೆಯ ಚಕ್ರವ್ಯೂಹವನ್ನು ಕಾಣುತ್ತೇವೆ. ಹೊಸ ಸಿನಿಮಾಗಳಲ್ಲಿ, ವೆಬ್​ಸರಣಿಗಳಲ್ಲಿ, ಪ್ರಶಸ್ತಿ ಸಮಾರಂಭಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ, ಅಷ್ಟೇಕೆ ಮಾಧ್ಯಮಗಳಲ್ಲೂ ಕೆಲವೇಕೆಲವರ ವೈಭವೀಕರಣ ಕಾಣುತ್ತದೆ. ಯಾವುದೋ ನಿರ್ದೇಶಕರ ಮಗಳು, ನಿರ್ವಪಕನ ಮಗ, ದೊಡ್ಡ ಕುಟುಂಬದ ಕುಡಿ, ಯಾರಿಗೋ ಗಂಡ, ಹೆಂಡತಿ, ಗರ್ಲ್​ಫ್ರೆಂಡ್, ಸ್ನೇಹಿತ, ಸಂಬಂಧಿಗಳೇ ಎಲ್ಲ ಅವಕಾಶಗಳನ್ನು, ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿರುತ್ತಾರೆ. ಪ್ರಚಾರದಲ್ಲಿರುತ್ತಾರೆ. ವಿಚಿತ್ರವೆಂದರೆ, ದಶಕಗಳ ಹಿಂದೆ ಗಾಡ್​ಫಾದರ್​ಗಳಿಲ್ಲದೆ ಸ್ಟಾರ್​ಗಳಾದವರು ಇಂದು ತಮ್ಮದೇ ಆಪ್ತವಲಯ ಸೃಷ್ಟಿಸಿಕೊಂಡು ಹೊರಗಿನವರು ಯಾರೊಬ್ಬರೂ ಚಕ್ರವ್ಯೂಹದೊಳಗೆ ಪ್ರವೇಶಿಸದಂತೆ ಅಡ್ಡಗಟ್ಟಿಬಿಡುತ್ತಿದ್ದಾರೆ.

    ಸುಶಾಂತ್ ಸಹ ಬಾಲಿವುಡ್​ನ ಇಂಥ ಪಟ್ಟಭದ್ರ ಲಾಬಿಯನ್ನು ಎದುರುಹಾಕಿಕೊಂಡಿದ್ದರಿಂದಲೇ ಅವರಿಗೆ ಕಳೆದ ಕೆಲವು ವರ್ಷಗಳಿಂದ ಒಳ್ಳೆಯ ಚಿತ್ರಗಳು ಸಿಗಲಿಲ್ಲ, ರಾಮಲೀಲಾ, ಬೇಫಿಕ್ರೆಯಂಥ ಸಿಕ್ಕಿದ ಚಿತ್ರಗಳು ಕೈತಪ್ಪಿಹೋದವು, ಕೈಗೆ ಬಂದಿದ್ದು ಶುರುವೇ ಆಗಲಿಲ್ಲ, ಶುರುವಾಗಿದ್ದು ಮುಗಿಯಲಿಲ್ಲ, ಮುಗಿದಿದ್ದು ತೆರೆಕಾಣಲಿಲ್ಲ. ಎಂಎಸ್ ಧೋನಿ ಚಿತ್ರದ ಬಳಿಕ ಅವರಲ್ಲಿ ಹಣ, ಸ್ಟೇಟಸ್ಸು, ಜನಪ್ರೀತಿ ಎಲ್ಲವೂ ಇದ್ದರೂ, ಖಾನ್​ದಾನ್, ಕಪೂರ್, ಬಚ್ಚನ್, ಚೋಪ್ರಾ, ಜೋಹರ್, ಅಖ್ತರ್, ಭಟ್ ಎಂಬ ಹಿನ್ನೆಲೆ ಇಲ್ಲವೆಂಬ ಕಾರಣಕ್ಕೆ ಬಾಲಿವುಡ್ ಮಂದಿ ಪರಕೀಯನಂತೆ ನಡೆಸಿಕೊಂಡಿದ್ದು, ದೂರವಿಟ್ಟಿದ್ದು ನೋವು ತಂದಿತ್ತೆನ್ನಲಾಗಿದೆ. ಧೋನಿಯ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದರೂ, ಪ್ರಶಸ್ತಿ ಸಮಾರಂಭಗಳಲ್ಲಿ ಅವರನ್ನು ಕಡೆಗಣಿಸಲಾಗಿತ್ತು. ಸ್ಟಾರ್ಕಿಡ್​ಗಳಿಗೆ ಉದಯೋನ್ಮುಖ ಪ್ರಶಸ್ತಿ ಕರೆದುಕೊಡುವ ಕಾಲದಲ್ಲಿ ಸುಶಾಂತ್​ಗೆ ಬಾಲಿವುಡ್​ನ ಥಳಕುಬಳುಕಿನ ಪಾರ್ಟಿಗಳಿಗೆ ಆಹ್ವಾನವೂ ಇರುತ್ತಿರಲಿಲ್ಲವಂತೆ. ವಿವೇಕ್ ಒಬೆರಾಯ್ ಎಂಬ ಪ್ರತಿಭಾವಂತ ನಟ ಖಾನ್​ದಾನ್ ಎದುರುಹಾಕಿಕೊಂಡು ಬಾಲಿವುಡ್​ನಲ್ಲಿ ಹೇಳಹೆಸರಿಲ್ಲದಂತಾದರು. ಅರಿಜಿತ್ ಸಿಂಗ್ ಎಂಬ ಪ್ರತಿಭಾವಂತ ಗಾಯಕ ಸಹ ಖಾನ್​ದಾನ್ ಅವಕೃಪೆಗೆ ತುತ್ತಾಗಿ ಅನೇಕ ಅವಕಾಶ ಕಳೆದುಕೊಂಡರು. ಸೋನು ನಿಗಮ್ಂಥ ಶ್ರೇಷ್ಠ ಗಾಯಕ, ಕಂಗನಾ ರಣಾವತ್​ರಂಥ ಮೋಹಕ ನಟಿ ಸಹ ಇಂಥ ತಾರತಮ್ಯ, ಪಕ್ಷಪಾತದ ಕಹಿ ಉಂಡವರೇ. ಆದರೆ, ಪ್ರವಾಹಕ್ಕೆ ಎದೆಯೊಡ್ಡಿ ಈಜುವ ಛಾತಿ ಪ್ರದರ್ಶಿಸಿದ್ದರಿಂದ ಅವರಿನ್ನೂ ಉದ್ಯಮದಲ್ಲಿ ಉಳಿದುಕೊಂಡಿದ್ದಾರೆ. ಅಕ್ಷಯ್ಕುಮಾರ್ ಎಂಬ ನಟ ಸೂಪರ್​ಸ್ಟಾರ್ ಆಗದಂತೆ ತಡೆಯಲು ಬಾಲಿವುಡ್ ಲಾಬಿ ಯಾವ ಮಟ್ಟಕ್ಕೆ ಇಳಿದಿತ್ತು ಎಂಬ ವಿಚಾರವೂ ಅನೇಕರಿಗೆ ತಿಳಿದಿದೆ. ಇಂಥ ವಾತಾವರಣ ಸುಶಾಂತ್​ಗೆ ಜೀವನವೇ ಸಾಕೆನಿಸುವಂತೆ ಒತ್ತಡ ಹೇರಿತ್ತೋ ಇಲ್ಲವೋ ತಿಳಿದಿಲ್ಲ, ಆದರೆ, ಸುಶಾಂತ್​ರಷ್ಟೇ ಕಷ್ಟ, ಸವಾಲು, ಪಕ್ಷಪಾತದ ನೋವು ಉಣ್ಣುತ್ತಿರುವ ಸಾಕಷ್ಟು ನಟ, ನಟಿಯರು ಬಾಲಿವುಡ್​ನಲ್ಲಿದ್ದಾರೆ. ಬಾಲಿವುಡ್ ಮಾತ್ರವಲ್ಲ, ಎಲ್ಲ ಭಾಷಾ ಚಿತ್ರರಂಗಗಳು, ವಿವಿಧ ವೃತ್ತಿ, ಕ್ಷೇತ್ರ, ಉದ್ಯಮ, ಸಮಾಜದ ವಿವಿಧ ಸ್ತರಗಳಲ್ಲಿ ಇಂಥ ಶೋಷಣೆ ಇದ್ದೇ ಇದೆ. ಹಾಗೆಂದು ನನ್ನವರು ಯಾರೂ ಇಲ್ಲ, ಯಾರಿಗೆ ಯಾರೂ ಇಲ್ಲ ಎಂಬ ಯಾತನೆಗೆ ಸಾಯುವುದು ಪರಿಹಾರವೇ? ಮಾನವ ಜನ್ಮ ಬಲು ದೊಡ್ಡದು. ಬದುಕೆಂಬ ಸಮುದ್ರದಲ್ಲಿ ಈಜಬೇಕು, ಈಜಿ ಜೈಸಬೇಕು.

    ಅಷ್ಟಾದ ಮೇಲೂ ಯಾರ ಸಾವು ಯಾವಾಗ, ಹೇಗೆ ಎನ್ನುವುದು ವಿಧಿಬರಹ ಎಂದು ನಂಬುವುದೇ ಆದಲ್ಲಿ, ದೇಹದ ಋಣ ಇರುವಷ್ಟು ಸಾರ್ಥಕವಾಗಿ ಬದುಕೋಣ.

    ಹೆಣ್ಣು ಹೊನ್ನು ಮಣ್ಣು ಮೂರು ನಿನ್ನದೇನಲೋ

    ಅನ್ನದಿಂದ ಬಂದ ಕಾಮ ನಿನ್ನದೇನಲೋ

    ಕರ್ಣದಿಂದ ಬರುವ ದೋಷ ನಿನ್ನದೇನಲೋ

    ನಿನ್ನ ಬಿಟ್ಟು ಹೋಹ ದೇಹ ನಿನ್ನದೇನಲೋ (ಕನಕದಾಸರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts