More

    ಸುಲಭ ಅಲ್ಲ ಬಾಡಿಬಿಲ್ಡಿಂಗ್!; ಸ್ವಲ್ಪ ಯಾಮಾರಿದರೂ ಅಪಾಯ ತಪ್ಪಿದ್ದಲ್ಲ..

    ಕಟ್ಟುಮಸ್ತಾದ ಅಂಗಸೌಷ್ಟವ, ದೇಹದಾರ್ಢ್ಯ ಹೊಂದುವುದು ಬಹುತೇಕ ಯುವಜನರ ಆಸೆ. ಆದರೆ, ಎಲ್ಲರಿಗೂ ಅದನ್ನು ಸಾಧಿಸುವುದು ಕಷ್ಟವಾಗುತ್ತದೆ. ಅದಕ್ಕೆ ನಿಯಮಿತ ವ್ಯಾಯಾಮ ಬೇಕು, ಕಟ್ಟುನಿಟ್ಟಾದ ಪಥ್ಯವೂ ಅವಶ್ಯ. ಬಾಡಿಬಿಲ್ಡಿಂಗ್ ಜತೆಗೆ ಪವರ್​ಲಿಫ್ಟಿಂಗ್ ಕೂಡ ಮಾಡಲು ಅನೇಕರು ಮುಂದಾಗುತ್ತಾರೆ. ಆದರೆ ಅದರಲ್ಲಿ ಸ್ವಲ್ಪ ಯಾಮಾರಿದರೂ ಅಪಾಯ ತಪ್ಪಿದ್ದಲ್ಲ.

    | ಉಮೇಶ್ ಕುಮಾರ್ ಶಿಮ್ಲಡ್ಕ

    ಜಗತ್ತಿನ ಅತ್ಯಂತ ಜನಪ್ರಿಯ ಬಾಡಿಬಿಲ್ಡರ್, ಪವರ್​ಲಿಫ್ಟರ್ ಲ್ಯಾರಿ ವ್ಹೀಲ್ಸ್ ರೀತಿ ಆಗಬೇಕು ಎಂದು ಕನಸು ಕಾಣುತ್ತಿರುವ ಯುವಜನರು ಸಾಕಷ್ಟಿದ್ದಾರೆ. ಅಂತಹ ಯುವಕರ ಪೈಕಿ ಬ್ರಿಟನ್​ನ 23 ವರ್ಷದ ರಿಯಾನ್ ಕ್ರೌಲೆ, ಅಭಿಮಾನಿ ಬಳಗದಲ್ಲಿ ‘ಬಿಗ್ ರಿಗ್’ ಎಂದೇ ಗುರುತಿಸಿಕೊಂಡಿದ್ದ. ಅವನಿಗೆ ಇನ್​ಸ್ಟಾಗ್ರಾಮ್ಲ್ಲಿ 1.57 ಲಕ್ಷ ಫಾಲೋಯರ್ಸ್! ಬಾಡಿಬಿಲ್ಡಿಂಗ್ ಮತ್ತು ಪವರ್​ಲಿಫ್ಟಿಂಗ್ ತರಬೇತಿಯನ್ನು ಲ್ಯಾರಿ ವ್ಹೀಲ್ಸ್ ಬಳಿಯೇ ಪಡೆಯಲು ದುಬೈಗೆ ತೆರಳಿದ್ದ. ಅಲ್ಲಿ ಎರಡು ವಾರದ ಹಿಂದೆ ಲ್ಯಾರಿ ಸಮ್ಮುಖದಲ್ಲಿ 220 ಕಿಲೋ ಬೆಂಚ್ ಪವರ್​ಲಿಫ್ಟ್ ಮಾಡುತ್ತಿದ್ದಾಗ ಅನಾಹುತ ನಡೆದುಹೋಯಿತು. ರಿಯಾನ್ ಕ್ರೌಲೆಯ ಎದೆಯ ಸ್ನಾಯು ಎಲುಬಿನಿಂದಲೇ ಕಿತ್ತುಕೊಂಡು ಮೇಲೆದ್ದು ಬಂತು. ಭಯಾನಕ ದೃಶ್ಯ ವಿಡಿಯೋದಲ್ಲೂ ಸೆರೆಯಾಗಿತ್ತು. ಇದನ್ನು ಕ್ರೌಲೆ ತನ್ನ ಇನ್​ಸ್ಟಾಗ್ರಾಮ್ಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಸಣ್ಣ ತಪು್ಪ ನಡೆದರೂ ಆಗುವ ಅನಾಹುತದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಲ್ಯಾರಿ ವ್ಹೀಲ್ಸ್ ಕೂಡ ಇನ್​ಸ್ಟಾಗ್ರಾಂ ಖಾತೆಯಲ್ಲಿ ಕ್ರೌಲೆಯ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

    ಪ್ರಯೋಜನ

    • ಆತ್ಮವಿಶ್ವಾಸ ಹೆಚ್ಚಳ
    • ಸ್ಟ್ರೆಸ್ ಕಡಿಮೆ ಮಾಡುತ್ತದೆ
    • ಹೊಸ ಸ್ನೇಹಿತರ, ಗೆಳೆಯರ ಬಳಗ ಸೃಷ್ಟಿ
    • ಸ್ವಯಂ ಅಭಿವೃದ್ಧಿ ಮತ್ತು ಸುಧಾರಣೆ
    • ಆಲೋಚನೆಯಲ್ಲಿ ಸ್ಪಷ್ಟತೆ
    • ಉತ್ತಮ ನಿರ್ಧಾರ ಸಾಮರ್ಥ್ಯ
    • ಮನಸ್ಸಿಗೆ ನೆಮ್ಮದಿ
    • ಇತರರಿಗೆ ಪ್ರೇರಣಾದಾಯಿ

    ಅಪಾಯಗಳು

    ಭಾರ ಎತ್ತುವಲ್ಲಿ ಅಜಾಗರೂಕತೆ, ಕ್ಷಣದ ಮೈಮರೆವು ಭಾರಿ ಅಪಾಯ ತಂದೊಡ್ಡಬಲ್ಲದು. ಬಾಡಿಬಿಲ್ಡರ್/ಪವರ್​ಲಿಫ್ಟರ್​ನ ಸ್ನಾಯುಗಳು ಹರಿದುಬಿಡಬಹುದು. ಭಾರ ಮೈಮೇಲೆ ಬಿದ್ದು ಎಲುಬುಗಳು ಮುರಿಯಬಹುದು. ಭಾರ ಎತ್ತುವ ಮಿತಿಯನ್ನು ಹೆಚ್ಚಿಸುತ್ತ ಸಾಗುವುದರಿಂದ ಹೃದಯದ ಮೇಲಿನ ಒತ್ತಡ ಹೆಚ್ಚಾಗುತ್ತದೆ. ಹೃದಯಾಘಾತ ಮತ್ತು ಇತರ ಅಪಾಯಗಳೂ ಎದುರಾಗಬಹುದು. ಬಾಡಿಬಿಲ್ಡರ್​ಗಳು ಸ್ನಾಯುವನ್ನು ಉಬ್ಬಿಸಲು ಪ್ರೊಟೀನ್ ಪೌಡರ್, ಗುಳಿಗೆ ಮುಂತಾದವುಗಳನ್ನು ಸೇವಿಸುತ್ತಾರೆ. ಇದು ಅಲ್ಪಾವಧಿ ಪ್ರಯೋಜನ ನೀಡಿದರೂ, ದೀರ್ಘಾವಧಿಯಲ್ಲಿ ಆಸ್ಟಿಯೋಪೊರೊಸಿಸ್ ಅಥವಾ ಎಲುಬುಗಳ ನಾಶ, ಕಿಡ್ನಿ ಸಮಸ್ಯೆಗಳನ್ನು ತಂದೊಡ್ಡಬಹುದು.

    ಮುಂಜಾಗ್ರತೆ ಏನು?: ಬಾಡಿಬಿಲ್ಡಿಂಗ್/ಪವರ್​ಲಿಫ್ಟಿಂಗ್ ಅಪಾಯ ತಗ್ಗಿಸುವುದಕ್ಕೆ ಸುರಕ್ಷಿತ ವ್ಯಾಯಾಮ ಮುಂಜಾಗ್ರತೆಗಳನ್ನು ತೆಗೆದುಕೊಳ್ಳಬೇಕು. ಯಾವಾಗಲೂ ವ್ಯಾಯಾಮ ಆರಂಭಿಸುವುದಕ್ಕೆ ಮುನ್ನ 5ರಿಂದ 10 ನಿಮಿಷ ವಾಮ್ರ್ ಅಪ್ ಮತ್ತು ಕೂಲ್ ಡೌನ್ ಮಾಡಬೇಕು. ಇದಕ್ಕಾಗಿ ವಾಕಿಂಗ್, ಸ್ಟ್ರೆಚಿಂಗ್ ಮುಂತಾದ ಮೈಲ್ಡ್ ವ್ಯಾಯಾಮಗಳನ್ನು ಮಾಡಬೇಕು. ನಂತರ ನಿಧಾನವಾಗಿ ಸಾಮರ್ಥ್ಯಕ್ಕೆ ಅನುಗುಣವಾಗಿ ಭಾರ ಎತ್ತುವ ವ್ಯಾಯಾಮ ಮಾಡಬೇಕು. ಈ ರೀತಿ ಮಾಡುವುದರಿಂದ ಸಹಜವಾಗಿಯೇ ಶರೀರ ಬಲಿಷ್ಠವಾಗುತ್ತ ಸಾಗುತ್ತದೆ.

    ಬಾಡಿಬಿಲ್ಡಿಂಗ್ 2 ವಿಧ: ನ್ಯಾಚುರಲ್ – ಯಾವುದೇ ರೀತಿಯ ಪರ್ಫಾಮೆನ್ಸ್. ಎನ್​ಹಾನ್ಸಿಂಗ್ ಡ್ರಗ್ಸ್ ಬಳಸದೆಯೇ ಸಹಜವಾಗಿ ದೇಹದಾರ್ಢ್ಯ ಬೆಳೆಸಿಕೊಳ್ಳುವುದು ಇದರ ವಿಧಾನ. ಇದರಲ್ಲೂ ವಿವಿಧ ಸ್ಪರ್ಧೆಗಳಿದ್ದು, ಡೋಪಿಂಗ್ ಟೆಸ್ಟ್ ಕೂಡ ಇರುತ್ತದೆ. ಪ್ರೊಫೆಷನಲ್​- ಐಎಫ್​ಬಿಬಿ (ಇಂಟರ್​ನ್ಯಾಷನಲ್ ಫೆಡರೇಶನ್ ಆಫ್ ಬಾಡಿಬಿಲ್ಡರ್ಸ್ ) ಪ್ರಮಾಣ ಪತ್ರವೂ ಇರುತ್ತದೆ. ಅಥವಾ ವಾಬ್ಬಾ ಇಂಟರ್​ನ್ಯಾಷನಲ್ ಪ್ರೊ ಕಾರ್ಡ್ ಕೂಡ ಸಿಗುತ್ತದೆ.

    ಬಾಡಿಬಿಲ್ಡರ್ಸ್ v/s ಪವರ್​ಲಿಫ್ಟರ್ಸ್

    ಸಾಮ್ಯ

    • ಬಾಡಿ ಬಿಲ್ಡ್ ಮಾಡಲು, ಪವರ್ ಲಿಫ್ಟ್ ಮಾಡಲು ಭಾರಿ ಪ್ರಮಾಣದ ಭಾರ ಎತ್ತಬೇಕಾಗುತ್ತದೆ, ವಿಪರೀತ ವ್ಯಾಯಾಮವನ್ನೂ ಮಾಡಬೇಕಾಗುತ್ತದೆ.
    • ಹೆಚ್ಚಿನ ಶಕ್ತಿ, ಪ್ರೊಟೀನ್ ಮತ್ತು ಇತರ ಪೌಷ್ಟಿಕಾಂಶ ಗಳಿಸುವುದಕ್ಕಾಗಿ ಭಾರಿ ಪ್ರಮಾಣದಲ್ಲಿ ಕಾರ್ಬೆಹೈಡ್ರೇಟ್, ಪ್ರೊಟೀನ್, ಕೊಬ್ಬಿನಂಶ ಇರುವ ಆಹಾರ ಸೇವಿಸಬೇಕಾಗುತ್ತದೆ.
    • ವಿವಿಧ ಮಾದರಿಯ ವ್ಯಾಯಾಮ ಮಾಡಬೇಕಾಗುತ್ತದೆ. ಕಾಂಪೌಂಡ್ ವ್ಯಾಯಾಮಗಳೆಂದು ಕರೆಯಲ್ಪಡುವ ಡೆಡ್​ಲಿಫ್ಟ್, ಸ್ಕಾ್ವಟ್ಸ್, ಬೆಂಚ್​ಪ್ರೆಸ್, ಮಿಲಿಟರಿ ಪ್ರೆಸ್​ಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ.

    ವೈರುಧ್ಯ

    • ಬಾಡಿಬಿಲ್ಡಿಂಗ್ ದೇಹಸೌಷ್ಟವ ಅಥವಾ ಸೌಂದರ್ಯಕ್ಕೆ ಸಂಬಂಧಿಸಿದ್ದು. ಪವರ್​ಲಿಫ್ಟಿಂಗ್ ಸಂಪೂರ್ಣವಾಗಿ ಭಾರ ಎತ್ತುವುದಕ್ಕೆ ಸಂಬಂಧಿಸಿದ್ದು.
    • ಬಾಡಿಬಿಲ್ಡಿಂಗ್​ನಲ್ಲಿ ಕಟಿಂಗ್ ಹಂತ ಮುಖ್ಯವಾದುದು. ಸೇವಿಸಿದ ಆಹಾರವನ್ನು ಕರಗಿಸುವುದು ಅಗತ್ಯ. ಕ್ಯಾಲೊರಿ ಲೆಕ್ಕಾಚಾರ ಇಲ್ಲಿ ಬಾಡಿಬಿಲ್ಡಿಂಗ್​ನ ತಪಸ್ಸಿನಂತೆ ಇರುತ್ತದೆ. ಬಲ್ಕಿಂಗ್ ಫೇಸ್ ಕೂಡ ಇದ್ದು, ಇದರಲ್ಲಿ ಭಾರ ಎತ್ತುವ ಕೆಲಸಕ್ಕೆ ಮಹತ್ವ ನೀಡಲಾಗುತ್ತದೆ.
    • ಪವರ್​ಲಿಫ್ಟಿಂಗ್ ತರಬೇತಿಯ ಪ್ರತಿ ಹಂತದಲ್ಲೂ ವ್ಯಕ್ತಿಯ ಭಾರ ಎತ್ತುವ ಸಾಮರ್ಥ್ಯದ ಮಿತಿಯನ್ನು ಹೆಚ್ಚಿಸುತ್ತ ಹೋಗುವಂಥದ್ದು. ಬಾಡಿಬಿಲ್ಡಿಂಗ್ ಕೇವಲ ಶರೀರದ ಅವಯವಗಳಿಗೆ ಸೌಷ್ಟವ ಒದಗಿಸುವುದಷ್ಟೇ ಇರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts