More

    ಹುಬ್ಬಳ್ಳಿ ತೋಳನಕೆರೆಯಲ್ಲಿ ದೋಣಿ ಯಾನ

    ತಿಪ್ಪಣ್ಣ ಅವಧೂತ ಹುಬ್ಬಳ್ಳಿ
    ಹುಬ್ಬಳ್ಳಿಯ ಪ್ರತಿಷ್ಠಿತ ಉದ್ಯಾನಗಳಲ್ಲಿ ಒಂದಾದ ತೋಳನಕೆರೆ ಉದ್ಯಾನದ ಕೆರೆಯಲ್ಲಿ ಇನ್ಮುಂದೆ ದೋಣಿ ಯಾನದ ಸಂತಸ ಅನುಭವಿಸಬಹುದು. ಅದಕ್ಕೆ ಹುಬ್ಬಳ್ಳಿ- ಧಾರವಾಡ ಸ್ಮಾರ್ಟ್ ಸಿಟಿ ಕಂಪನಿ ಅನುಕೂಲ ಕಲ್ಪಿಸಿಕೊಡುತ್ತಿದೆ.
    ಹೊಸ ವರ್ಷಕ್ಕೆ ಹೊಸ ಹೊಸ ಯೋಜನೆಗಳೊಂದಿಗೆ ಸ್ಮಾರ್ಟ್ ಸಿಟಿ ಕಂಪನಿ ಜನರ ಆಶೋತ್ತರಗಳಿಗೆ ಸ್ಪಂದಿಸಲು ಮುಂದಾಗಿದೆ. ಜನವರಿ ಮೊದಲ ವಾರದಲ್ಲಿಯೇ ದೋಣಿ ಯಾನ ಆರಂಭವಾಗಲಿದೆ. ಸಣ್ಣ ಸಣ್ಣ ಪೆಡಲ್ ಬೋಟ್ ಹಾಗೂ ಯಾಂತ್ರಿಕ ದೋಣಿಗಳು ಕೆರೆಯ ಆವರಣ ತಲುಪಲು ಸಿದ್ಧಗೊಂಡಿವೆ.
    ಕಣ್ಣು ಹಾಯಿಸಿದ ಕಡೆ ಅಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಈ ಉದ್ಯಾನ ರಾಜ್ಯದ ಸ್ಮಾರ್ಟ್ ಉದ್ಯಾನಗಳಲ್ಲಿ ಒಂದಾಗಿರುವುದು ವಿಶೇಷ. ಸೂರ್ಯೋದಯ ಹಾಗೂ ಸೂರ್ಯಾಸ್ತದ ನೋಟ ನೋಡುವುದೇ ಚಂದ. ಕೆರೆ ಪ್ರದೇಶದಲ್ಲಿ ಉದ್ಯಾನ ನಿರ್ವಿುಸಲಾಗಿದೆ. ಬಗೆ ಬಗೆಯ ಗಿಡ- ಮರಗಳನ್ನು ಬೆಳೆಸಲಾಗಿದ್ದು, ತಂಪು ವಾತಾವರಣದಲ್ಲಿ ಪ್ರವಾಸಿಗರಿಗೆ ಇಂಪು ನೀಡುವ ತಾಣವಾಗಿದೆ. ಬೆಳಗ್ಗೆ ಮತ್ತು ಸಂಜೆ ಹಕ್ಕಿಗಳ ಇಂಪಾದ ನೀನಾದ ಮನಸಿಗೆ ನೆಮ್ಮದಿ ನೀಡುವುದಂತೂ ಸತ್ಯ.

    ಒಟ್ಟು 32.64 ಎಕರೆ ವಿಸ್ತೀರ್ಣದ ಈ ಕೆರೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ. ಈ ಹಿಂದೆ ಕೊಳಚೆ ನೀರು ಸೇರುತ್ತಿದ್ದ ಈ ಕೆರೆ ಈಗ ಮಾಲಿನ್ಯಮುಕ್ತವಾಗಿ ಸ್ಮಾರ್ಟ್ ಆಗಿ ಕಂಗೊಳಿಸುತ್ತಿದೆ. ಮಕ್ಕಳು ಹಾಗೂ ಹಿರಿಯರಿಗಾಗಿ ಪ್ರತ್ಯೇಕವಾಗಿ 3 ಕಡೆ ಜಿಮ್ ನಿರ್ವಿುಸಲಾಗಿದೆ. ಮಕ್ಕಳಿಗಾಗಿ ಜೋಕಾಲಿ, ಜಾರುಬಂಡಿ, ಹಾರ್ಸ್ ರೈಡ್, ಡಾಗ್ ರೈಡ್ ಇನ್ನೂ ಹಲವು ರೀತಿಯ ಆಟೋಪಕರಣಗಳಿವೆ. ಯುವಜನರಿಗಾಗಿ ಫುಟ್​ಬಾಲ್, ವಾಲಿಬಾಲ್, ಬ್ಯಾಡ್ಮಿಂಟನ್ ಮೈದಾನ ನಿರ್ವಿುಸಲಾಗಿದೆ. ಇನ್ನು ಹಿರಿಯರಿಗಾಗಿ 1.5 ಕಿ.ಮೀ. ವಾಕಿಂಗ್ ಪಥ, ಆಮ್ರ್ ಆಂಡ್ ಪೆಡಲ್ ಬೈಕ್, ಬಿಗ್ ಶೋಲ್ಡರ್ ವ್ಹಿಲ್, ಡಬಲ್ ಸ್ಕೀ ವಾಕರ್, ಡಬಲ್ ಸಿಟ್ ಅಪ್ ಬೋರ್ಡ್ಸ್, ಸೆಲ್ಪ್ ವೇಟೆಟ್ ರೋವರ್, ಸಿಟಡ್ ಚೆಸ್ ಪ್ರೆಸ್, ಸ್ಟ್ರೆಂಥ್ ಟ್ರೇನರ್, ಟೈ, ಸ್ಟ್ರೀ ಸ್ಪಿನ್ನರ್, ಟ್ವಿಸ್ಟ್ ಸ್ಟೆಪ್ಪರ್ ಹೀಗೆ ವಿವಿಧ ಬಗೆಯ ಉಪಕರಣದಿಂದ ಕೂಡಿದ ಮಿನಿ ಜಿಮ್ ನಿರ್ವಿುಸಲಾಗಿದೆ.

    ಮಕ್ಕಳಿಗಾಗಿ ಮಿನಿ ರೈಲು :
    ಚುಕುಬುಕು ರೈಲು ಎಂದರೆ ಯಾವ ಮಕ್ಕಳಿಗೆ ತಾನೇ ಇಷ್ಟವಾಗುವುದಿಲ್ಲ. ಮಕ್ಕಳ ಆಸಕ್ತಿಗೆ ತಂಕ್ಕಂತೆ ಇಲ್ಲಿ ಮಿನಿ ರೈಲು ತರಲಾಗಿದೆ. ಕೆರೆಯ ಒಂದು ಭಾಗದಿಂದ ಮಕ್ಕಳನ್ನು ಕೂರಿಸಿಕೊಂಡು ತೆರಳುವ ಈ ರೈಲು ಸುಮಾರು 8-10 ನಿಮಿಷಗಳವರೆಗೆ ಅಂದರೆ ಒಂದು ಬದಿಯ ರೌಂಡ್ ಹಾಕಿಸಿ ಮತ್ತೆ ಹತ್ತಿಸಿಕೊಂಡು ಹೋದ ಜಾಗಕ್ಕೆ ಕರೆತರುತ್ತದೆ.

    ಹುಬ್ಬಳ್ಳಿ ತೋಳನಕೆರೆಯಲ್ಲಿ ದೋಣಿ ಯಾನ

    ಸಣ್ಣ ಈಜುಗೊಳ ನಿರ್ಮಾಣ
    1ರಿಂದ 10 ವರ್ಷದ ಮಕ್ಕಳಿಗಾಗಿ ಸಣ್ಣ ಈಜುಗೊಳ ನಿರ್ವಿುಸಲಾಗಿದೆ. ಅದರಲ್ಲಿ ಐದಾರು ಮಿನಿ ಪೆಡಲ್ ಬೋಟ್ ಬಿಟ್ಟು ಮಕ್ಕಳಿಗೆ ಬೋಟಿಂಗ್ ಅನುಭವ ನೀಡಲಾಗುತ್ತಿದೆ. ಜತೆಗೆ ಜಪಿಂಗ್ ನಟ್, ಮಿನಿ ಕಾರುಗಳು ಕೂಡ ಇಲ್ಲಿವೆ.


    ಫೋಟೋಗ್ರಫಿ, ವಿಡಿಯೋಗ್ರಫಿಗೆ ಪ್ರಶಸ್ತ ಸ್ಥಳ
    ಮದುವೆ ನಿಕ್ಕಿಯಾದವರು ಪ್ರಿ ವೆಡ್ಡಿಂಗ್ ಶೂಟ್​ಗಾಗಿ ಗೋವಾ ಅಥವಾ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕುಮಟಾದ ಪ್ರವಾಸಿ ತಾಣಗಳಿಗೆ ತೆರಳುವ ಬದಲು ಕಡಿಮೆ ಬಜೆಟ್​ನಲ್ಲೇ ಉತ್ತಮ ತಾಣ ಎನಿಸುವ ಹುಬ್ಬಳ್ಳಿಯ ತೋಳನಕೆರೆ ಉದ್ಯಾನಕ್ಕೆ ಆಗಮಿಸಿದರೆ ಬೇರೆಲ್ಲೂ ಸಿಗದ ವಿಡಿಯೋಗ್ರಫಿಗಳನ್ನು ಇಲ್ಲಿ ಸೆರೆಹಿಡಿಯಬಹುದು.

    ಹುಬ್ಬಳ್ಳಿ ತೋಳನಕೆರೆಯಲ್ಲಿ ದೋಣಿ ಯಾನ


    ಆದಾಯದಲ್ಲೂ ಮುಂದು
    ಹುಬ್ಬಳ್ಳಿಯಲ್ಲಿರುವ ಉಣಕಲ್ಲ ಕೆರೆ, ನೃಪತುಂಗ ಬೆಟ್ಟ ಹಾಗೂ ಸಂಜೀವಿನಿ ಪಾರ್ಕ್​ನ ಆದಾಯಕ್ಕೆ ಹೋಲಿಕೆ ಮಾಡಿದರೆ ತೋಳನಕೆರೆ ಉದ್ಯಾನ ಹೆಚ್ಚು ಆದಾಯ ಹೊಂದಿದೆ. 12 ವರ್ಷ ಮೇಲ್ಪಟ್ಟವರಿಗೆ 20 ರೂ. ಹಾಗೂ 3 ವರ್ಷ ಮೇಲ್ಪಟ್ಟ ಮಕ್ಕಳಿಗೆ 15 ರೂ. ಶುಲ್ಕ ನಿಗದಿ ಮಾಡಲಾಗಿದೆ. ಬೆಳಗ್ಗೆ 7ರಿಂದ 9 ಗಂಟೆಯವರೆಗೆ ವಾಯುವಿಹಾರಿಗಳಿಗೆ ಉಚಿತ ಪ್ರವೇಶವಿದೆ ಎನ್ನುತ್ತಾರೆ ಸ್ಮಾರ್ಟ್ ಸಿಟಿ ಎಇಇ ಚನ್ನಬಸವರಾಜ ಧರ್ಮಂತಿ.

    ಹುಬ್ಬಳ್ಳಿ ತೋಳನಕೆರೆಯಲ್ಲಿ ದೋಣಿ ಯಾನ



    ತೋಳನಕೆರೆಯಲ್ಲಿ ಇದೇ ವಾರದಲ್ಲೇ ದೋಣಿ ಯಾನ ಆರಂಭವಾಗಲಿದೆ. ಕ್ರೀಡಾ ಚಟುವಟಿಕೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಲಾಗುವುದು. ಎರಡು ವರ್ಷದಿಂದ 80 ವರ್ಷ ವಯೋಮಾನದವರಿಗೂ ಅನುಕೂಲವಾಗುವಂತಹ ಕ್ರೀಡಾ ಸಾಮಗ್ರಿ ಇಲ್ಲಿವೆ. ಪರಿವಾರ, ಆರೋಗ್ಯ ಹಾಗೂ ಕ್ರೀಡೋತ್ಸಾಹ ಮೂಡಿಸುವ ಉದ್ದೇಶ ಹೊಂದಿದ್ದೇವೆ. | ಅರವಿಂದ ಬೆಲ್ಲದ ವಿಧಾನಸಭೆ ಪ್ರತಿಪಕ್ಷದ ಉಪನಾಯಕ


    ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿಯೇ ತೋಳನಕೆರೆಯಲ್ಲಿ ವಾಟರ್ ಸ್ಪೋರ್ಟ್ಸ್ ಆರಂಭಿಸಲಾಗುತ್ತಿದೆ. ಹೊಸ ವರ್ಷಕ್ಕೆ ಪ್ರವಾಸಿಗರ ಬಳಕೆಗೆ ದೋಣಿ ವಿಹಾರ ಲಭ್ಯವಾಗಲಿದೆ. | ರುದ್ರೇಶ ಗಾಳಿ ಎಂಡಿ ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts