More

    ಶಾಮನೂರು ಆಶೀರ್ವದಿಸಿರುವುದು ನನ್ನ ಪುಣ್ಯ: ಬಿವೈಆರ್

    ಶಿವಮೊಗ್ಗ:ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಶಾಸಕರಾಗಿದ್ದರೂ ಪಕ್ಷ ರಾಜಕೀಯವನ್ನೂ ಮೀರಿ ನನ್ನ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡು ಆಶೀರ್ವದಿಸಿರುವುದು ನನ್ನ ಪುಣ್ಯ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

    ಬೆಕ್ಕಿನಕಲ್ಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗುರುಬಸವಶ್ರೀ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರ ಉತ್ತಮ ಕೆಲಸ ಮಾಡಿದ್ದಾರೆ. ಅವರನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಕರೆ ನೀಡಿದ್ದರ ಬಗ್ಗೆ ಶನಿವಾರ ಬಿವೈಆರ್ ಹೀಗೆ ಪ್ರತಿಕ್ರಿಯಿಸಿದ್ದಾರೆ.
    ಶಾಮನೂರು ಶಿವಶಂಕರಪ್ಪ ನೇರವಾಗಿ ಮಾತನಾಡುವವರು. ಸರಿ-ತಪ್ಪನ್ನು ಅಂಜಿಕೆಯಿಲ್ಲದೆ ಹೇಳುವವರು. ಅವರು ನನ್ನನ್ನು ಹಾರೈಸಿದ್ದಾರೆ ಎನ್ನುವುದಕ್ಕಿಂತ ನನ್ನ ಕೆಲಸವನ್ನು ಗಮನಿಸಿದ್ದಾರೆ ಎಂಬುದು ಹೆಮ್ಮೆಯ ಸಂಗತಿ. ಎದುರಾಳಿ ಪಕ್ಷದವರ ಉತ್ತಮ ಕೆಲಸಗಳನ್ನೂ ಮೆಚ್ಚುವ ಅವರ ಗುಣವನ್ನು ನಾನೂ ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದರು.
    ಕಾಂಗ್ರೆಸ್ ಶಾಸಕರಾಗಿ ಶಾಮನೂರು ಮಾತನಾಡಿಲ್ಲ. ಸಮಾಜದ ಹಿರಿಯರ ಸ್ಥಾನದಲ್ಲಿ ಕುಳಿತು ಮಾತನಾಡಿದ್ದಾರೆ. ಈ ಹಿಂದೆ ಯಡಿಯೂರಪ್ಪ ಪರವಾಗಿಯೂ ಶಾಮನೂರು ಮಾತನಾಡಿದ್ದರು ಎಂದು ಬಿವೈಆರ್ ತಿಳಿಸಿದರು.
    ಆಪರೇಷನ್ ಅವಶ್ಯಕತೆಯಿಲ್ಲ: ಈಗ ನಮ್ಮ ಪಕ್ಷದವರು ಆಪರೇಷನ್ ಮಾಡುವ ಅವಶ್ಯಕತೆಯಿಲ್ಲ. ಕೇಂದ್ರ ಸರ್ಕಾರಕ್ಕೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಜನರ ಬಿಜೆಪಿ ಪರ ಇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಬಿ.ವೈ.ರಾಘವೇಂದ್ರ, ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದಿಂದ ಒಂದೊಂದೇ ಪಕ್ಷಗಳು ಹೊರಬರುತ್ತಿವೆ. ಬಿಜೆಪಿಗೆ ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದರು. ರಾಜ್ಯ ಸರ್ಕಾರ ಗ್ಯಾರಂಟಿ ಮೇಲೆ ನಡೆಯುತ್ತಿದೆ. ಬರ ಸಂದರ್ಭದಲ್ಲಿ ರೈತರ ಖಾತೆಗೆ ಎರಡು ಸಾವಿರ ರೂ. ಪರಿಹಾರ ಹಾಕಿದ್ದಕ್ಕೆ ಸಮಾಧಾನಪಟ್ಟುಕೊಳ್ಳಬೇಕಾದ ಸ್ಥಿತಿಯಿದೆ. ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರದ ಗ್ಯಾರಂಟಿಗಳ ಬಣ್ಣ ಬಯಲಾಗಲಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts