More

    ಬಂಡೆ ಸೀಳುವಾಗ ಕಲ್ಲು ಕುಟುಕ ಸಾವು

    ಓಲೇರಹಳ್ಳಿಯಲ್ಲಿ ದುರ್ಟನೆ : ಅಕ್ರಮ ಗಣಿಗಾರಿಕೆ ಕಡಿವಾಣಕ್ಕೆ ಎಸ್ಪಿ ಭರವಸೆ

    ವಿಜಯವಾಣಿ: ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಲ್ಲಿ ಬಂಡೆ ಸೀಳುವ ವೇಳೆ ಬೃಹತ್​ ಗಾತ್ರದ ಬಂಡೆ ಉರುಳಿ ಕಲ್ಲು ಕುಟುಕನೋರ್ವ ಮೃತಪಟ್ಟಿರುವುದು ಮಾಲೂರು ತಾಲೂಕಿನ ಮಾಸ್ತಿ ಹೋಬಳಿಯ ಓಲೇರಹಳ್ಳಿಯಲ್ಲಿ ಬುಧವಾರ ನಡೆದಿದೆ.
    ಬಂಗಾರಪೇಟೆ ತಾಲೂಕಿನ ಕಲ್ಲುಕುಟುಕ ನಾರಾಯಣಪ್ಪ(52) ಮೃತ. ಓಲೇರಹಳ್ಳಿಯ ನಾರಾಯಣಸ್ವಾಮಿ ಎಂಬುವವರು ಹುಣಸೀಕೋಟೆಯ ಗೋಮಾಳದಲ್ಲಿನ ಬೆಟ್ಟದಲ್ಲಿ ಕಾರ್ಮಿಕರಿಂದ ಕಲ್ಲು ಕೂಚಗಳನ್ನು ಸೀಳಿಸುವ ಕೆಲಸಕ್ಕಾಗಿ ಬುಧವಾರ ಜೆಸಿಬಿಯಿಂದ ಕಲ್ಲು ಬಂಡೆಗಳನ್ನು ತೆಗೆಯುತ್ತಿದ್ದರು. ಈ ಸಂದರ್ಭ ನಾರಾಯಣಪ್ಪನ ಮೇಲೆ ದೊಡ್ಡಗಾತ್ರದ ಕಲ್ಲು ಬಂಡೆ ಉರುಳಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
    ಹುಣಸಿಕೋಟೆ ಸುತ್ತಮುತ್ತ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇತ್ತೀಚೆಗೆ ಕಲ್ಲು ಬಂಡೆಗಳನ್ನು ಸ್ಫೋಟಿಸುವ ಸಂದರ್ಭ ಈ ವರ್ಷದಲ್ಲಿ ಅಂದಾಜು 3 ರಿಂದ 4 ಕಾರ್ಮಿಕರು ಸ್ಫೋಟಕ ಸಿಡಿದು ಮೃತಪಟ್ಟಿದ್ದಾರೆ. 5 ವರ್ಷಗಳ ಹಿಂದೆ ಅಕ್ರಮ ಗಣಿಗಾರಿಕೆಗೆ ಅಂದಿನ ಜಿಲ್ಲಾಧಿಕಾರಿ ಕಡಿವಾಣ ಹಾಕಿದ್ದರು. ಆದರೆ ಕಳೆದ ಮೂರು ನಾಲ್ಕು ವರ್ಷಗಳಿಂದ ಮತ್ತೆ ಎಗ್ಗಿಲ್ಲದೆ ನಡೆಯುತ್ತಿದ್ದರೂ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಮಾತ್ರ ಜಾಣಮೌನ ವಹಿಸಿದ್ದಾರೆ ಎಂಬುದು ಸಾರ್ವಜನಿಕರ ಆರೋಪ. ಓಲೇರಹಳ್ಳಿ ಸುತ್ತಮುತ್ತಲಿನ ಸುಮಾರು 18 ಗ್ರಾಮಗಳಲ್ಲಿ ಕಲ್ಲು ಕುಟಿಕರೇ ಕಲ್ಲನ್ನು ಒಡೆದು ಮಾರಾಟ ಮಾಡುತ್ತಿದ್ದರು. ಇತ್ತೀಚೆಗೆ ಬಲಾಢ್ಯರ ಪ್ರವೇಶದಿಂದ ಅವು ಗಣಿಗಾರಿಕೆಗೆ ಜೆಸಿಬಿಗಳನ್ನು ಬಳಸಿ ದೊಡ್ಡಮಟ್ಟದಲ್ಲಿ ಗಣಿಗಾರಿಕೆಗಳನ್ನು ಆರಂಭಿಸಿ ಬಂಡೆಗಳನ್ನು ಸ್ಫೋಟಿಸುವುದು ಮತ್ತು ಅವುಗಳನ್ನು ವಿಂಗಡಣೆ ಮಾಡಲು ಜೆಸಿಬಿಗಳನ್ನು ಬಳಸಿ ಕಲ್ಲು ಕುಟುಕರಿಂದ ಕೂಚಗಳನ್ನು ತಯಾರಿಸಿ ತಮಿಳುನಾಡು, ಆಂಧ್ರಪ್ರದೇಶಕ್ಕೆ ಮಾರಾಟ ಮಾಡುವ ಕೆಲಸ ನಡೆಸುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಕಣ್ಣು ಮುಚ್ಚಿ ಕುಳಿತಿದ್ದಾರೆ.

    ಸ್ಥಳ ಪರಿಶೀಲನೆ: ಕಲ್ಲು ಕುಟುಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಂ.ನಾರಾಯಣ್​ ಹಾಗೂ ಮಾಲೂರು ಮತ್ತು ಮಾಸ್ತಿ ಪೊಲೀಸ್​ ಠಾಣೆಗಳ ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಗಣಿಗಾರಿಕೆ ನಡೆಸುತ್ತಿದ್ದ ವ್ಯಕ್ತಿ ಬಗ್ಗೆ ಮಾಹಿತಿ ಪಡೆದಿದ್ದಾರೆ.

    ಓಲೇರಹಳ್ಳಿ ಮತ್ತು ಮತ್ತು ಸುತ್ತಮುತ್ತಲಿನ 18 ಗ್ರಾಮಗಳಲ್ಲಿ ಸುಮಾರು ವರ್ಷಗಳಿಂದ ಕಲ್ಲು ಕುಟುಕರು ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಇತ್ತೀಚೆಗೆ ಗಣಿಗಾರಿಕೆಯಾಗಿ ಮಾರ್ಪಟ್ಟಿದೆ. ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೂಚನೆ ನೀಡಲಾಗಿದೆ. ಕಲ್ಲು ಕುಟುಕ ನಾರಾಯಣಪ್ಪ ಸಾವಿನ ಬಗ್ಗೆ ಸರ್ಕಾರ ಜಿಲ್ಲಾಧಿಕಾರಿಗಳಿಂದ ಪರಿಹಾರಕ್ಕೆ ಶಿಫಾರಸು ಮಾಡಲಾಗುವುದು. ಮಾಲೂರು ತಾಲೂಕು ಮಾಸ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ಕ್ರಮ ಜರುಗಿಸಲಾಗುವುದು

    .ಎಂ.ನಾರಾಯಣ್​
    ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts