More

    ದುಷ್ಟ ವರ್ತನೆಗೆ ಧಿಕ್ಕಾರ; ವಿಧಾನ ಪರಿಷತ್, ಪ್ರಜಾತಂತ್ರದ ಘನತೆಗೆ ಕಪ್ಪುಚುಕ್ಕೆ…

    ಮೊದಲೇ ಜನರ ನಂಬಿಕೆ, ವಿಶ್ವಾಸ ಕಳೆದುಕೊಳ್ಳುತ್ತಿರುವ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು ತಮ್ಮ ವರ್ತನೆಯನ್ನು ಸುಧಾರಿಸಿಕೊಂಡು, ಮೌಲ್ಯಯುತ ರಾಜನೀತಿ ನಡೆಸುವ ಬದಲು ಇನ್ನಷ್ಟು ಅಧಃಪತನದತ್ತ ಸಾಗಿರುವುದು ರಾಜ್ಯದ ದುರಂತವೇ ಸರಿ. ಅಧಿಕಾರದ ಹಪಾಹಪಿ ಎಲ್ಲ ಚೌಕಟ್ಟು, ಸೀಮೆಗಳನ್ನು ಮೀರಿದಾಗ ಎಂಥ ಅವಮಾನ ಮತ್ತು ಅಸಹ್ಯಕರ ಘಟನೆ ನಡೆಯುತ್ತದೆ ಎಂಬುದಕ್ಕೆ ಮಂಗಳವಾರ ಮೇಲ್ಮನೆಯಲ್ಲಿ ನಡೆದ ಬೆಳವಣಿಗೆಗಳೇ ಸಾಕ್ಷಿ. ಇದರಿಂದ ಇಡೀ ರಾಜ್ಯದ ಜನತೆಯೇ ತಲೆತಗ್ಗಿಸುವಂತಾಗಿದ್ದು, ಈ ಘಟನೆ ಬಳಿಕ ವಿಧಾನ ಪರಿಷತ್ ಬೇಕೆ? ಬೇಡವೇ? ಎಂಬ ಬಗ್ಗೆ ಹೊಸ ಆಯಾಮದಲ್ಲಿ ಚರ್ಚೆ ನಡೆದಿದೆ. ಮೇಲ್ಮನೆಯ ಸಂಪ್ರದಾಯ, ಪರಂಪರೆ, ಘನತೆಯನ್ನು ಅರಿಯದ, ಅರಿಯಲು ಪ್ರಯತ್ನವನ್ನೂ ಮಾಡದ ಬಹುತೇಕ ಸದಸ್ಯರು ತೋರಿರುವ ವರ್ತನೆ ಮಾತ್ರ ನಿಜಕ್ಕೂ ಅಕ್ಷಮ್ಯ. ಈ ಘಟನೆ ಕುರಿತಂತೆ ಯಾವುದೋ ಒಂದು ರಾಜಕೀಯ ಪಕ್ಷದತ್ತ ಬೊಟ್ಟು ಮಾಡಲು ಸಾಧ್ಯವಿಲ್ಲ. ಮೂರೂ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ.

    ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ ಪಡೆಯಲು ಕರೆಯಲಾಗಿದ್ದ ವಿಶೇಷ ಅಧಿವೇಶನದ ವೇಳೆ ಸಭಾಪತಿಯವರು ಬಾರದಂತೆ ತಡೆದಿದ್ದು, ಅವರಿಗೆ ಪ್ರವೇಶ ದೊರಕಿಸಲು ಬಾಗಿಲನ್ನೇ ಮುರಿಯಲು ಯತ್ನಿಸಿದ್ದು, ಉಪಸಭಾಪತಿಯವರನ್ನು ಹಿಡಿದೆಳೆದು, ಪೀಠದಿಂದ ಕೆಳಗಿಳಿಸಿ ಅಸಭ್ಯ ವರ್ತನೆ ತೋರಿದ್ದು, ಮಾರ್ಷಲ್​ಗಳ ಮೇಲೆ ಹಲ್ಲೆಗೆ ಯತ್ನಿಸಿದ್ದು ಈ ಎಲ್ಲ ಬೆಳವಣಿಗೆಗಳು ಪ್ರಜಾತಂತ್ರದ ಘನತೆಗೆ ಕಪು್ಪಚುಕ್ಕೆ. ರಾಜ್ಯದ ಶಾಸಕಾಂಗ ದೇಶದಲ್ಲಿಯೇ ಮಾದರಿ ಎಂಬ ಹೆಸರು ಪಡೆದುಕೊಂಡಿತ್ತು. ಮೇಲ್ಮನೆಯ ಆಶಯವೇ ಚಿಂತಕರು, ಸಾಧಕರು ಆರೋಗ್ಯಕರ ಚರ್ಚೆಗಳನ್ನು ನಡೆಸಿ, ಪ್ರಜಾತಂತ್ರ ಮೌಲ್ಯಗಳನ್ನು ಸಶಕ್ತಗೊಳಿಸಲು ಮಾರ್ಗದರ್ಶನ ಮಾಡಬೇಕೆಂಬುದು. ಈ ಹಿಂದೆ ಅಂಥ ಶ್ರೇಷ್ಠ ಪರಂಪರೆಗೂ ಸಾಕ್ಷಿಯಾದ ವಿಧಾನ್ ಪರಿಷತ್ ವಿದ್ವತ್​ಪೂರ್ಣ ಚರ್ಚೆ ಮೂಲಕ ಗಮನ ಸೆಳೆಯುತ್ತಿತ್ತು. ವಿಧಾನಸಭೆಯಲ್ಲಿ ಕೆಲವು ಬಾರಿ ಅಹಿತಕರ ಘಟನೆ ನಡೆದರೂ, ವಿಧಾನ ಪರಿಷತ್ ತನ್ನ ಘನತೆ ಕಾಯ್ದುಕೊಂಡಿತ್ತು. ವಿವಿಧ ರಾಜಕೀಯ ಪಕ್ಷಗಳಿಂದಲೇ ಬಂದ ಅಬ್ದುಲ್ ನಜೀರ್ ಸಾಬ್, ಡಾ. ವಿ.ಎಸ್. ಆಚಾರ್ಯ, ಅಪ್ಪಣ್ಣ ಹೆಗ್ಡೆ, ಡಾ.ಎಂ.ಆರ್. ತಂಗಾ, ರಾಮಕೃಷ್ಣ ಹೆಗಡೆ, ಡಾ. ವಿಜಯ ಸಂಕೇಶ್ವರ, ಎಂ.ಪಿ. ಪ್ರಕಾಶ್ ಸೇರಿ ಹಲವರು ಪಕ್ಷದ ಚೌಕಟ್ಟನ್ನೂ ಮೀರಿ ನಾಡಿನ ಗಂಭೀರ ಸಮಸ್ಯೆಗಳಿಗೆ ದನಿಯಾದ ನಿದರ್ಶನವನ್ನು ಮರೆಯಲುಂಟೆ? ಹಾಗೆಯೇ, ವಿವಿಧ ಕ್ಷೇತ್ರದ ಗಣ್ಯರು ನಾಮನಿರ್ದೇಶನಗೊಂಡು ವಿಧಾನ ಪರಿಷತ್​ಗೆ ಗೌರವ ತಂದುಕೊಟ್ಟಿದ್ದರು. ಇಂಥ ಮುಖಂಡರ ಮಾತುಗಳಿಗೆ ನಾಡು ಕಾದು ಕುಳಿತಿರುತ್ತಿತ್ತು. ಅಂತಹ ಮೌಲ್ಯಯುತ ಚರ್ಚೆ ಮೇಲ್ಮನೆಯಲ್ಲಿ ನಡೆಯುತ್ತಿತ್ತು.

    ಸದ್ಯದ ಪ್ರಕರಣವನ್ನು (ಸಭಾಪತಿ ವಿರುದ್ಧ ಅವಿಶ್ವಾಸ) ಸುಲಭವಾಗಿ ಬಗೆಹರಿಸಿಕೊಳ್ಳಲು ಅವಕಾಶವಿತ್ತಾದರೂ ಒಣಪ್ರತಿಷ್ಠೆಯಿಂದಾಗಿ ಅದು ಹಾಳಾಗಿ ಮೂರು ಪಕ್ಷಗಳ ಸದಸ್ಯರ ವರ್ತನೆಗೆ ಜನತೆ ನಾಚಿಕೆ ಪಡುವಂತಾಗಿದೆ. ಇನ್ನಾದರೂ, ಅಧಿಕಾರ ಲಾಲಸೆ, ಬರೀ ಪಕ್ಷದ ಹಿತದೃಷ್ಟಿಯನ್ನಷ್ಟೆ ಗಮನದಲ್ಲಿ ಇರಿಸಿಕೊಳ್ಳದೆ ಮೌಲ್ಯಯುತ ರಾಜನೀತಿಗೆ ಮರಳುವ ಇಚ್ಛಾಶಕ್ತಿಯನ್ನು ಎಲ್ಲ ರಾಜಕೀಯ ಪಕ್ಷಗಳು ತೋರಬೇಕು. ಈ ಬದ್ಧತೆಯನ್ನು ತೋರದಿದ್ದಲ್ಲಿ ಜನರು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂಬುದನ್ನು ಮರೆಯಬಾರದು. ಮುಂದಿನ ದಿನಗಳಲ್ಲಿ ಇಂಥ ಅಹಿತಕರ ಘಟನೆಗಳು ನಡೆಯದಂತೆ ಎಲ್ಲ ರಾಜಕೀಯ ಪಕ್ಷಗಳು ಪ್ರಜ್ಞಾವಂತಿಕೆ ಮೆರೆಯಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts