More

    ಮೂಲ್ಕಿ ನಪಂ ಬಿಜೆಪಿ ತೆಕ್ಕೆಗೆ, ಅಧ್ಯಕ್ಷರಾಗಿ ಸುಭಾಶ್ ಶೆಟ್ಟಿ ಅವಿರೋಧ ಆಯ್ಕೆ

    ಮೂಲ್ಕಿ: ನಗರ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸುಭಾಶ್ ಶೆಟ್ಟಿ ಅವಿರೋಧ ಆಯ್ಕೆಯಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಒಂದು ಮತದ ಅಂತರದಲ್ಲಿ ಬಿಜೆಪಿಯ ಸತೀಶ್ ಅಂಚನ್ ಗೆಲುವು ಪಡೆದಿದ್ದಾರೆ.

    ನಪಂನಲ್ಲಿ ಕಾಂಗ್ರೆಸ್ 9, ಬಿಜೆಪಿ 8 ಹಾಗೂ ಜೆಡಿಎಸ್ 1 ಸ್ಥಾನ ಪಡೆದಿತ್ತು. ಅಧ್ಯಕ್ಷ ಸ್ಥಾನ ಹಿಂದುಳಿದ ಬಿ ವರ್ಗಕ್ಕೆ ಮೀಸಲಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ವಿಜೇತರಲ್ಲಿ ಬಿ ವರ್ಗದವರಿಲ್ಲದ ಕಾರಣ ಬಿಜೆಪಿಯ ಸುಭಾಶ್ ಶೆಟ್ಟಿ ಹಾಗೂ ಹರ್ಷರಾಜ್ ಶೆಟ್ಟಿ ಅವರಿಗೆ ಅವಕಾಶ ಲಭಿಸಿತ್ತು. ಇವರಲ್ಲಿ ಹರ್ಷರಾಜ್ ಶೆಟ್ಟಿ ಅವರಿಗೆ ಉಂಟಾದ ತಾಂತ್ರಿಕ ಅಡಚಣೆಯಿಂದ ಸುಭಾಶ್ ನಾಮಪತ್ರ ಸಲ್ಲಿಸಿ ಅವಿರೋಧ ಆಯ್ಕೆಯಾದರು.

    ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ಉಪಾಧ್ಯಕ್ಷ ಈಶ್ವರ ಕಟೀಲ್, ಕ್ಷೇತ್ರ ಅಧ್ಯಕ್ಷ ಸುನೀಲ್ ಆಳ್ವ, ಮೂಲ್ಕಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಜಯಾನಂದ ಮೂಲ್ಕಿ, ಸುಕೇಶ್ ಶಿರ್ತಾಡಿ, ಮುಖಂಡರಾದ ಕಸ್ತೂರಿ ಪಂಜ, ವಿನೋದ್ ಬೊಳ್ಳೂರು, ಜೀವನ್ ಪ್ರಕಾಶ್ ಕಾಮೆರೊಟ್ಟು, ವಿನೋದ್ ಸಾಲ್ಯಾನ್, ಶರತ್ ಕುಬೆವೂರು, ಶೈಲೇಶ್ ಕುಮಾರ್, ಕೆ.ಭುವನಾಭಿರಾಮ ಉಡುಪ, ದೇವಪ್ರಸಾದ್ ಪುನರೂರು ಮತ್ತಿತರರು ಅಭಿನಂದನೆ ಸಲ್ಲಿಸಿದರು.

    ಬಿಜೆಪಿ ಕಾರ್ಯಕರ್ತರು ಮೆರವಣಿಗೆ ನಡೆಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಎಸಿಪಿ ಬೆಳ್ಳಿಯಪ್ಪ ಹಾಗೂ ಮೂಲ್ಕಿ ಇನ್‌ಸ್ಪೆಕ್ಟರ್ ಜಯರಾಂ ಗೌಡ ಬಂದೋಬಸ್ತ್ ನೀಡಿದ್ದರು. ತಹಸೀಲ್ದಾರ್‌ಗಳಾದ ಗುರುಪ್ರಸಾದ್ ಮತ್ತು ಮಾಣಿಕ್ಯ ಚುನಾವಣೆ ಪ್ರಕ್ರಿಯೆ ನಡೆಸಿದರು.

    ಜೆಡಿಎಸ್ ಸದಸ್ಯೆ ಗೈರು: ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಸತೀಶ್ ಅಂಚನ್ ಹಾಗೂ ಕಾಂಗ್ರೆಸ್‌ನಿಂದ ಪುತ್ತುಬಾವ ಸ್ಪರ್ಧಿಸಿದ್ದರು. ಚುನಾವಣಾ ಪ್ರಕ್ರಿಯೆಗೆ ಜೆಡಿಎಸ್‌ನ ಓರ್ವ ಸದಸ್ಯೆ ಲಕ್ಷ್ಮಿ ಗೈರುಹಾಜರಾಗಿದ್ದ ಕಾರಣ ಹಾಗೂ ಬಿಜೆಪಿಗೆ ಸಂಸದ ಮತ್ತು ಶಾಸಕರ ಮತಗಳಿಂದ 10 ಮತ ಹಾಗೂ ಕಾಂಗ್ರೆಸ್ 9 ಮತ ಪಡೆದುದರಿಂದ ಸತೀಶ್ ಅಂಚನ್ ಉಪಾಧ್ಯಕ್ಷ ಸ್ಥಾನಕ್ಕೆ ಚುನಾಯಿತರಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts