More

    ಬರ ಪೀಡಿತ ಪ್ರದೇಶಕ್ಕೆ ಬಿಜೆಪಿ ಅಧ್ಯಯನ ತಂಡ ಭೇಟಿ; ರೈತರಿಂದ ಮಾಹಿತಿ ಸಂಗ್ರಹ

    ರಾಣೆಬೆನ್ನೂರ: ಮಳೆ ಕೊರತೆಯಿಂದ ಉಂಟಾದ ಬರ ಪೀಡಿತ ಪ್ರದೇಶಗಳಿಗೆ ಸೋಮವಾರ ಬಿಜೆಪಿ ರಾಜ್ಯ ಬರ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲಿಸಿತು.
    ತಾಲೂಕಿನ ರಾಹುತನಕಟ್ಟಿ, ಹೂಲಿಹಳ್ಳಿ ಹಾಗೂ ಹಾವೇರಿ ತಾಲೂಕಿನ ನೆಲೋಗಲ್ಲ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿದ ತಂಡ, ಬೆಳೆಹಾನಿ ಕುರಿತು ಪರಿಶೀಲಿಸಿತು. ಬೆಳೆಹಾನಿಯಾದ ರೈತರೊಂದಿಗೆ ಚರ್ಚಿಸಿ ರಾಜ್ಯ ಸರ್ಕಾರದಿಂದ ಪರಿಹಾರ ಬಂದಿದೆಯೋ, ಇಲ್ಲವೋ ಎನ್ನುವ ಕುರಿತು ಮಾಹಿತಿ ಕಲೆಹಾಕಿತು. ನೆಲೋಗಲ್ಲ ಗ್ರಾಮದ ರೈತ ವೀರಪ್ಪ ಎಂಬುವರು ತಂಡದ ಎದುರು ಜಮೀನಿನಲ್ಲಿ ಒಣಗಿ ನಿಂತಿದ್ದ ಮೆಕ್ಕೆಜೋಳ ಬೆಳೆಯನ್ನು ಟ್ರಾೃಕ್ಟರ್‌ನಿಂದ ನಾಶಪಡಿಸಿದರು.
    ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಕೃಷಿ ಮಾಜಿ ಸಚಿವ ಬಿ.ಸಿ. ಪಾಟೀಲ, ರೈತರು ಬೆಳೆದಿರುವ ಮೆಕ್ಕೆಜೋಳ ಸೇರಿ ಇತರ ಎಲ್ಲ ಬೆಳೆಗಳು ಹಾಳಾಗಿ ಹೋಗಿವೆ. ಇಷ್ಟು ಕೆಟ್ಟ ಬರಗಾಲ ಎಂದೂ ಆಗಿಲ್ಲ. ಇದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಸ್ಪಂದಿಸಬೇಕಿತ್ತು. ಆದರೆ, ರೈತರಿಗೆ ಈವರೆಗೂ ಸರ್ಕಾರದಿಂದ ಯಾವುದೇ ಸ್ಪಂದನೆ ದೊರೆತಿಲ್ಲ.
    ಬರಗಾಲದ ಬಗ್ಗೆ ಒಂದೇ ಒಂದು ನಯಾಪೈಸೆ ಕೂಡ ಬಿಡುಗಡೆಯಾಗಿಲ್ಲ. ಕಳೆದ ವರ್ಷ ಅತಿವೃಷ್ಠಿ ಉಂಟಾದ ಸಮಯದಲ್ಲಿ 2100 ಕೋಟಿ ರೂ. ಬಿಡುಗಡೆ ಮಾಡಿದ್ದೇವು. ಕೇಂದ್ರ ಸರ್ಕಾರದ 1 ಹೆಕ್ಟೇರ್‌ಗೆ 6100 ರೂ. ನಿಗದಿ ಪಡಿಸಿದ್ದರೆ ನಾವು ಅದರ ಡಬಲ್ 13 ಸಾವಿರ ರೂ. ಕೊಟ್ಟಿದ್ದೇವು. 12 ಸಾವಿರ ರೂ. ತೋಟಗಾರಿಕೆ ಬೆಳೆಗಿದ್ದರೆ ನಾವು 25 ಸಾವಿರ ರೂ. ಹಾಗೂ 18 ಸಾವಿರ ರೂ. ನೀರಾವರಿ ಬೆಳೆಗಿದ್ದರೆ ನಾವು 28 ಸಾವಿರ ರೂ. ಕೊಟ್ಟಿದ್ದೇವು.
    ಆದರೆ, ಇಂದಿನ ಕಾಂಗ್ರೆಸ್ ಸರ್ಕಾರ ರಾಜ್ಯಾದ್ಯಂತ ಎಲ್ಲಿಯೂ ಒಂದು ರೂ. ಪರಿಹಾರ ಕೊಟ್ಟಿಲ್ಲ. ಅವರು ಕೇವಲ ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ ಎಂದು ಹೇಳಿಕೊಂಡು ಹೋಗುತ್ತಿದ್ದಾರೆ ಹೊರತು ರೈತರ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಯಾಗಲಿ, ಉಪ ಮುಖ್ಯಮಂತ್ರಿಯಾಗಲಿ ಮಾತನಾಡುತ್ತಿಲ್ಲ. ರೈತರಿಗೆ ಬದುಕಿಸುತ್ತೇವೆ ಎನ್ನುವ ಮಾತನ್ನು ಹೇಳುತ್ತಿಲ್ಲ.
    ಹಿರೇಕೆರೂರಿನಲ್ಲಿ ಕಾಡು ಪ್ರಾಣಿಗಳು ಬಂದು 5 ಎಕರೆ ಮೆಕ್ಕೆಜೋಳ ಸಂಪೂರ್ಣ ಹಾಳಾಗಿದೆ. ಅದಕ್ಕೆ ಪರಿಹಾರವಾಗಿ ಸರ್ಕಾರ 2804 ರೂ. ಕೊಟ್ಟಿದ್ದಾರೆ. ಈ ರೀತಿಯಾದರೆ ರೈತರು ಬದುಕೋದು ಹೇಗೆ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರೈತ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿವೆ. ಇವರು ಗ್ಯಾರಂಟಿಗಳನ್ನು ಕೊಡಲಿ ಬೇಡ ಅನ್ನಲ್ಲ. ಆದರೆ, ನಮ್ಮ ರೈತರನ್ನು ಕೈ ಬಿಡದ ರೀತಿಯಲ್ಲಿ ಬರಗಾಲ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
    ಶಿರಹಟ್ಟಿ ಶಾಸಕ ಚಂದ್ರು ಲಮಾಣಿ, ಮಾಜಿ ಶಾಸಕರಾದ ಕಳಕಪ್ಪ ಬಂಡಿ, ಅರುಣಕುಮಾರ ಪೂಜಾರ, ಶಿವರಾಜ ಸಜ್ಜನರ, ವಿರುಪಾಕ್ಷಪ್ಪ ಬಳ್ಳಾರಿ, ಪ್ರಮುಖರಾದ ಗವಿಸಿದ್ದಪ್ಪ, ಬಸವರಾಜ ಹುಲ್ಲತ್ತಿ, ಸಿದ್ದರಾಜ ಕಲಕೋಟಿ, ಭೋಜರಾಜ ಕರೂದಿ, ಭಾರತಿ ಜಂಬಗಿ, ಕೆ. ಶಿವಲಿಂಗಪ್ಪ, ಮಂಜುನಾಥ ಓಲೇಕಾರ, ಎ.ಬಿ. ಪಾಟೀಲ, ದೀಪಕ ಹರಪನಹಳ್ಳಿ, ಸಿದ್ದು ಚಿಕ್ಕಬಿದರಿ, ಪಾಲಾಕ್ಷಗೌಡ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts