More

    ಸಮುದಾಯದ ನಡುವೆ ಕಾಂಗ್ರೆಸ್‌ನಿಂದ ಕಂದಕ ಸೃಷ್ಟಿ: ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ವಾಗ್ದಾಳಿ

    ಮಂಡ್ಯ: ಬೇಡಿಕೆ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಮೀಸಲಾತಿ ಸ್ವರೂಪವನ್ನು ಬದಲಿಸುವ ಮೂಲಕ ಎಲ್ಲರಿಗೂ ಅನುಕೂಲ ಕಲ್ಪಿಸಿದೆ. ಆದರೆ ಕಾಂಗ್ರೆಸ್ ಸಮುದಾಯಗಳನ್ನು ಒಂದರ ವಿರುದ್ಧ ಇನ್ನೊಂದನ್ನು ಎತ್ತಿಕಟ್ಟಿ ರಾಜಕೀಯ ಲಾಭ ಪಡೆದುಕೊಳ್ಳುವ ಹುನ್ನಾರ ನಡೆಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಹೇಳಿದರು.
    2018ರಲ್ಲಿ ಲಿಂಗಾಯತ ಸಮುದಾಯವನ್ನು ಗುರಿಯಾಗಿಸಿಕೊಂಡು ಹಿಂದು ಸಮಾಜವನ್ನು ಒಡೆಯಲು ಯತ್ನಿಸಿ ಜನರಲ್ಲಿ ಗೊಂದಲ ಸೃಷ್ಠಿಸಿದ್ದರು. ಆಗ ಅವರಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಿದರು. ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಲಿಂಗಾಯತರ ಅನೇಕ ವರ್ಷಗಳ ಮೀಸಲಾತಿ ಬೇಡಿಕೆಯನ್ನು ಪರಿಶೀಲಿಸಿ ದೀರ್ಘಕಾಲದವರೆಗೂ ಸಮುದಾಯದ ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲಿ ಪ್ರತ್ಯೇಕ ಮೀಸಲಾತಿ ಪ್ರವರ್ಗ ಸೃಷ್ಠಿ ಮಾಡಿ ಬೆಂಬಲವಾಗಿದೆ ನಿಂತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
    ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದ ಬಹುದಿನದ ಬೇಡಿಕೆ ಈಡೇರುವುದು ಒಂದೆಡೆಯಾದರೆ, ದಲಿತ ಸಮುದಾಯಕ್ಕೆ ಒಳ ಮೀಸಲಾತಿ ತರುವ ಆಲೋಚನೆಯೂ ಅತ್ಯಂತ ಕಠಿಣ ನಿರ್ಣಯವಾಗಿತ್ತು. ಆದರೂ ಸಮಸ್ಯೆಯನ್ನು ಸರಳವಾಗಿ ಪರಿಹರಿಸುವ ಮೂಲಕ ಎಲ್ಲ ವರ್ಗದವರಿಗೂ ಸಾಮಾಜಿಕ ನ್ಯಾಯ ನೀಡುವಲ್ಲಿ ಮಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಫಲವಾಗಿದ್ದಾರೆ. ರಾಜ್ಯ ಸರ್ಕಾರ ತೆಗೆದುಕೊಂಡ ಐತಿಹಾಸಿಕ ನೀತಿ, ಯೋಜನೆಗಳನ್ನು ನಿರ್ಣಯಿಸಿ ಘೋಷಿಸಿದಲ್ಲಿ ಅದು ದೃಢವಾಗಿ ಜಾರಿ ಆಗುವ ನಿಟ್ಟಿನಲ್ಲಿ ಬದ್ಧತೆಯಿಂದ ಶ್ರಮಿಸುತ್ತದೆ. ಇದರಲ್ಲಿ ಯಾವುದೇ ಅನುಮಾನವೂ ಬೇಡ. ದೇಶದಲ್ಲಿ ಬಲವಾದ ನಾಯಕತ್ವ, ದೃಢ ಸಂಕಲ್ಪವಿದ್ದಲ್ಲಿ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಮೀಸಲಾತಿ ವಿಚಾರವೇ ಸಾಕ್ಷಿ ಎಂದರು.
    ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಮಾತನಾಡಿ, ಲಿಂಗಾಯತ ಪಂಚಮಸಾಲಿಗಳು ಶೇ.15ರಷ್ಟು ಮೀಸಲಾತಿ ಇರುವ 2ಎ ಪ್ರವರ್ಗದಲ್ಲಿ ಸೇರಿಸುವಂತೆ ಒತ್ತಾಯಿಸಿದ್ದರು. ಆದರೆ, ಮೊದಲಿದ್ದ 3ಬಿ ಪ್ರವರ್ಗವನ್ನು ರದ್ದುಪಡಿಸಿ ಸಮುದಾಯಕ್ಕೆ ವಿಶೇಷವಾದ ಪ್ರತ್ಯೇಕ 2ಡಿ ಎಂಬ ಹೊಸ ಪ್ರವರ್ಗವನ್ನು ಸೃಷ್ಟಿಸಲಾಗಿದೆ. ಇದರಿಂದ ಪಂಚಮಸಾಲಿ ಲಿಂಗಾಯತರು ಹಾಗೂ ಎಲ್ಲ ಉಪ ಪಂಗಡಗಳನ್ನೂ ಒಂದೇ ಮೀಸಲಾತಿಯಡಿಯಲ್ಲಿ ಸೇರಿಸಿ ಸಮಾನತೆಯನ್ನು ಪಾಲಿಸಲಾಗಿದೆ ಎಂದು ತಿಳಿಸಿದರು.
    ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಎಲ್ಲ ಸಮುದಾಯದ ಮಠಾಧೀಶರು ಒಪ್ಪಿಕೊಂಡಿದ್ದಾರೆ. ಇನ್ನು ರಾಜಕೀಯವಾಗಿ ಒಕ್ಕಲಿಗ ಸಮುದಾಯ ಜೆಡಿಎಸ್ ಪರವಾಗಿ ನಿಲ್ಲುತ್ತದೆ ಎನ್ನಲಾಗುತ್ತಿದ್ದರೂ, ಆ ಪಕ್ಷ ಅನೇಕ ವರ್ಷಗಳಿಂದ ಒಕ್ಕಲಿಗರ ಮೀಸಲಾತಿ ಬೇಡಿಕೆ ಈಡೇರಿಸಲಿಲ್ಲ. ಬದಲಾಗಿ ಒಕ್ಕಲಿಗರಿಗೆ ಯಾವುದೇ ಸಾಮಾಜಿಕ, ರಾಜಕೀಯ ಸ್ಥಾನಮಾನಗಳನ್ನೂ ನೀಡಲು ವಿಫಲವಾಗಿದೆ ಎಂದು ಆರೋಪಿಸಿದ ಅವರು, ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಪಕ್ಷ ಅವಮಾನ ಮಾಡಿದೆ. ಅವರಿಗೆ ಕೊಡಬೇಕಾದ ಘನತೆ-ಗೌರವಗಳನ್ನು ಕೊಡಲಿಲ್ಲ. ಸ್ವಂತ ಪರಿಶ್ರಮದಿಂದ ಮೇಲೆ ಬಂದಂತಹ ಒಬ್ಬ ಶ್ರಮಜೀವಿ ನಾಯಕನನ್ನು ಉತ್ತರ ಮುಂಬೈಯಲ್ಲಿ ಪರಾವಗೊಳಿಸಿದ್ದರು. ನೆಹರು, ಇಂದಿರಾ ಪ್ರಧಾನಿಯಾಗಿದ್ದಾಗ ತಮಗೆ ತಾವೇ ಭಾರತರತ್ನ ಕೊಟ್ಟುಕೊಳ್ಳುತ್ತಾರೆ. ಪಿ.ವಿ.ನರಸಿಂಹರಾವವ ಅವರು ರಾಜೀವ್‌ಗಾಂಧಿಗೆ ಭಾರತರತ್ನ ಕೊಡುತ್ತಾರೆ. ಅಂಬೇಡ್ಕರ್ ಅವರಿಗೆ ಮಾತ್ರ ನೀಡದೆ ಅಪಮಾನ ಮಾಡಿದ್ದಾರೆ ಎಂದರು.
    ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮಾಧ್ಯಮ ವಕ್ತಾರ ನಾಗಾನಂದ್, ವಸಂತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts