More

    ಬಿಜೆಪಿ ಅಧ್ಯಕ್ಷಗಿರಿಗೆ ವಯೋಮಿತಿ

    ಪಿ.ಬಿ.ಹರೀಶ್ ರೈ ಮಂಗಳೂರು
    ಬಿಜೆಪಿ ಅಧ್ಯಕ್ಷಗಿರಿಗೆ ಈ ಬಾರಿ ವಯೋಮಿತಿ ನಿಗದಿಯಾಗಿದೆ. ಹಿಂದಿನ ಅಧ್ಯಕ್ಷರ ಪುನರಾಯ್ಕೆಗೆ ಅವಕಾಶ ಇಲ್ಲ ಎಂದು ರಾಜ್ಯ ಸಮಿತಿ ಸೂಚಿಸಿದ್ದು, ಇದು ಕೆಲವು ಹಿರಿಯ ಆಕಾಂಕ್ಷಿಗಳಲ್ಲಿ ನಿರಾಸೆ ಮೂಡಿಸಿದ್ದರೆ, ಯುವಕರಿಗೆ ಅವಕಾಶ ತೆರೆದಿದೆ.
    ಮಂಡಲ(ಕ್ಷೇತ್ರ) ಸಮಿತಿ ಅಧ್ಯಕ್ಷ ಸ್ಥಾನಕ್ಕೆ 50 ಹಾಗೂ ಜಿಲ್ಲಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ವಯಸ್ಸಿನ ಮಿತಿ 55 ವರ್ಷ ಎಂದು ನಿಗದಿ ಮಾಡಲಾಗಿದೆ.

    ದ.ಕ. ಜಿಲ್ಲಾ ಬಿಜೆಪಿಯ ಆಂತರಿಕ ಚುನಾವಣೆ ಆರಂಭವಾಗಿದ್ದು, 9 ಮಂಡಲ ಸಮಿತಿಗಳ ಪೈಕಿ 6 ಸಮಿತಿಗಳಿಗೆ ಈಗ ಅಧ್ಯಕ್ಷರ ಆಯ್ಕೆ ನಡೆದಿದೆ. ರಾಜ್ಯ ಸಮಿತಿ ಸೂಚನೆ ಮೇರೆಗೆ ಎಲ್ಲ ಸಮಿತಿಗಳಿಗೆ 50 ವರ್ಷ ಒಳಗಿನವರನ್ನೇ ಆಯ್ಕೆ ಮಾಡಲಾಗಿದೆ. ಉಳಿದ ಮೂರು ಮಂಡಲ ಸಮಿತಿಗಳಿಗೆ ಶೀಘ್ರ ಅಧ್ಯಕ್ಷರ ಆಯ್ಕೆ ನಡೆಯಲಿದ್ದು, ಬಳಿಕ ಜಿಲ್ಲಾಧ್ಯಕ್ಷರ ಆಯ್ಕೆ ನಡೆಯಲಿದೆ.
    ಸುಳ್ಯ ಕ್ಷೇತ್ರ ಸಮಿತಿಗೆ ಜಿಪಂ ಸದಸ್ಯ ಹರೀಶ್ ಕಂಜಿಪಿಲಿ, ಪುತ್ತೂರು ಗ್ರಾಮಾಂತರ ಸಮಿತಿಗೆ ಮಾಜಿ ಜಿಪಂ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ನಗರ ಸಮಿತಿಗೆ ಪುತ್ತೂರು ಪುರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಬೆಳ್ತಂಗಡಿ ಕ್ಷೇತ್ರ ಸಮಿತಿಗೆ ತಾಪಂ ಮಾಜಿ ಅಧ್ಯಕ್ಷ ಜಯಂತ ಕೋಟ್ಯಾನ್, ಮಂಗಳೂರು ದಕ್ಷಿಣ ಕ್ಷೇತ್ರ ಸಮಿತಿಗೆ ಮಾಜಿ ಕಾರ್ಪೋರೇಟರ್ ವಿಜಯಕುಮಾರ್ ಶೆಟ್ಟಿ, ಮಂಗಳೂರು ಕ್ಷೇತ್ರ ಸಮಿತಿಗೆ ಚಂದ್ರಹಾಸ ಪಂಡಿತ್‌ಹೌಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಪೈಕಿ ಬೆಳ್ತಂಗಡಿ ಸಮಿತಿ ಅಧ್ಯಕ್ಷ ಜಯಂತ ಕೋಟ್ಯಾನ್ ಅವರ 3 ವರ್ಷ ಅವಧಿ ಪೂರ್ಣವಾಗದ ಕಾರಣ ಪುನರಾಯ್ಕೆ ಅವಕಾಶ ನೀಡಲಾಗಿದೆ.

    ಜಿಲ್ಲಾಧ್ಯಕ್ಷರಾಗಿ ಸುದರ್ಶನ್ ಆಯ್ಕೆ ಸಾಧ್ಯತೆ
    ದ.ಕ. ಜಿಲ್ಲಾ ಬಿಜೆಪಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಜ.12ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಹಾಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಮೂಡುಬಿದಿರೆ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ ಕುಮಾರ್ ಸುರಾನಾ ವೀಕ್ಷಕರಾಗಿ ಆಗಮಿಸಲಿದ್ದು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿಂದ ನಾಮಪತ್ರ ಸ್ವೀಕರಿಸಲಿದ್ದಾರೆ. ಜಿಲ್ಲಾ ಸಮಿತಿಯಿಂದ ಮೂವರ ಹೆಸರುಗಳನ್ನು ರಾಜ್ಯ ಸಮಿತಿಗೆ ಶಿಫಾರಸು ಮಾಡಲಾಗಿದ್ದು, ಈ ಪೈಕಿ ಸುದರ್ಶನ ಮೂಡುಬಿದಿರೆ ಹೆಸರು ಅಂತಿಮವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಅಧ್ಯಕ್ಷರಿಗೆ ಶಾಸಕರಾಗುವ ಯೋಗ: ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮಾನಾಥ ಕೋಟ್ಯಾನ್, ಮಂಗಳೂರು ಉತ್ತರ ಕ್ಷೇತ್ರ ಸಮಿತಿ ಅಧ್ಯಕ್ಷ ಡಾ.ವೈ.ಭರತ್ ಶೆಟ್ಟಿ, ಮಂಗಳೂರು ದಕ್ಷಿಣ ಕ್ಷೇತ್ರ ಸಮಿತಿ ಅಧ್ಯಕ್ಷ ವೇದವ್ಯಾಸ ಕಾಮತ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ, 2018ರ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮಂಗಳೂರು ಕ್ಷೇತ್ರ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಬಳಿಕ ಲೋಕಸಭೆ ಚುನಾವಣೆ ಬಂದ ಕಾರಣ ಅಧ್ಯಕ್ಷರ ಬದಲಾವಣೆ ಮಾಡಿರಲಿಲ್ಲ.

    ಉಡುಪಿಗೆ ಸುರೇಶ್ ನಾಯಕ್?: ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪ್ರಾರಂಭದಲ್ಲಿ 4 ಹೆಸರು ರಾಜ್ಯ ಸಮಿತಿಗೆ ಶಿಫಾರಸು ಮಾಡಲಾಗಿದ್ದರೂ ಅಂತಿಮವಾಗಿ ಸಾರಿಗೆ ಉದ್ಯಮಿ ಸುರೇಶ್ ನಾಯಕ್ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ವಾರದೊಳಗೆ ಆಯ್ಕೆ ನಡೆಯುವ ನಿರೀಕ್ಷೆಗಳಿವೆ. ಜಿಲ್ಲೆಯ 1,111 ಬೂತ್ ಸಮಿತಿಗೆ ಅಧ್ಯಕ್ಷರ ನೇಮಕ ನಡೆದಿದೆ. ಕಾಪು ಮಂಡಲಕ್ಕೆ ಅಲೆವೂರು ಶ್ರೀಕಾಂತ್ ನಾಯಕ್, ಉಡುಪಿ ನಗರಕ್ಕೆ ಮಹೇಶ್ ಠಾಕೂರ್, ಗ್ರಾಮೀಣ ವಿಭಾಗಕ್ಕೆ ವೀಣಾ ನಾಯ್ಕ, ಕುಂದಾಪುರಕ್ಕೆ ಅಂಕದಕಟ್ಟೆ ಶಂಕರ್, ಬೈಂದೂರಿಗೆ ದೀಪಕ್ ಶೆಟ್ಟಿ, ಕಾರ್ಕಳಕ್ಕೆ ಮಹಾವೀರ ಹೆಗ್ಡೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

    ಪಕ್ಷ ಸಂಘಟನೆಯಲ್ಲಿ ಯುವಕರಿಗೆ ಆದ್ಯತೆ ನೀಡಲಾಗುತ್ತಿದೆ. ಜಿಲ್ಲಾಧ್ಯಕ್ಷ ಹಾಗೂ ಮಂಡಲ ಅಧ್ಯಕ್ಷ ಸ್ಥಾನಗಳಿಗೆ ವಯೋಮಿತಿ ನಿಗದಿ ಪಡಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಯೋಮಿತಿ ಆಧಾರದಲ್ಲಿ ಆಯ್ಕೆ ನಡೆಸಲು ಸೂಚಿಸಲಾಗಿದೆ.
    – ಎನ್.ರವಿಕುಮಾರ್, ಪ್ರಧಾನ ಕಾರ್ಯದರ್ಶಿ, ರಾಜ್ಯ ಬಿಜೆಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts