More

    ಬಿಜೆಪಿ ಪದಾಧಿಕಾರಿಗಳ ಸಭೆ; ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳ ಆಯ್ಕೆಗೆ ಚಾಲನೆ

    ಬೆಂಗಳೂರು:
    ರಾಜ್ಯ ಬಿಜೆಪಿ ಪದಾಧಿಕಾರಿಗಳ ಪಟ್ಟಿ ಪ್ರಕಟವಾದ ಬೆನ್ನಲ್ಲಿಯೇ ಜಿಲ್ಲಾ ಪದಾಧಿಕಾರಿಗಳ ಆಯ್ಕೆಗೂ ಪಕ್ಷದ ಅಧ್ಯಕ್ಷ ವೈ.ಬಿ.ವಿಜಯೇಂದ್ರ ಕಸರತ್ತು ಪ್ರಾರಂಭಿಸಿದ್ದಾರೆ.
    ಇದಕ್ಕೆ ಪೂರಕವಾಗಿ ಮೊದಲ ಹಂತವಾಗಿ ಡಿ.27ರಂದು ಬೆಳಿಗ್ಗೆ ಪದಾಧಿಕಾರಿಗಳ ಸಭೆ ಮತ್ತು ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧ್ಯಕ್ಷರು ಮತ್ತು ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಸಂಬಂಧ ಪ್ರಮುಖರ ಪ್ರಕ್ರಿಯೆಗೆ ಚಾಲನೆ ಕೊಡುವ ಸಭೆ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ತಿಳಿಸಿದ್ದಾರೆ.
    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆಯ ಬಳಿಕ ಆ ಪ್ರಮುಖರು ಎಲ್ಲ ಜಿಲ್ಲೆಗಳಿಗೆ ತೆರಳಿ ಜಿಲ್ಲೆಯ ಎಲ್ಲ ಪ್ರಮುಖರಿಂದ ಅಭಿಪ್ರಾಯ ಸಂಗ್ರಹಿಸಿ ಜಿಲ್ಲಾಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಿದ್ದಾರೆ ಎಂದರು.
    ಎಲ್ಲರ ಅಭಿಪ್ರಾಯದೊಂದಿಗೆ ಪಕ್ಷವನ್ನು ಮುನ್ನಡೆಸುವ ತೀರ್ಮಾನ ಬಿಜೆಪಿ ಅಧ್ಯಕ್ಷರದ್ದಾಗಿದೆ. ಈ ನಿಟ್ಟಿನಲ್ಲಿ ಡಿ.28ರಂದು ರಾಜ್ಯ ಪ್ರಮುಖರ ಸಭೆಯನ್ನು ರಾಜ್ಯಾಧ್ಯಕ್ಷರು ಕರೆದಿದ್ದಾರೆ ಎಂದರು.
    ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಬಸವರಾಜ ಬೊಮ್ಮಾಯಿ, ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯದ ಮಾಜಿ ಸಚಿವರು, ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
    ಎಲ್ಲರ ಅಭಿಪ್ರಾಯ ಪಡೆದು ರಾಜ್ಯ ಸರಕಾರದ ವೈಫಲ್ಯದ ವಿರುದ್ಧ ಹೋರಾಟ, ಪಕ್ಷದ ಸಂಘಟನೆ ಮಾಡಲು ಉದ್ದೇಶಿಸಿದ್ದಾರೆ. ಹಾಗೆಯೇ ಲೋಕಸಭಾ ಚುನಾವಣೆ ಎದುರಿಸುವುದರ ಕುರಿತು ಎಲ್ಲರ ಸಲಹೆ ಪಡೆಯಲಿದ್ದಾರೆ. ರಾಜ್ಯದಲ್ಲಿ ತಳಮಟ್ಟಕ್ಕೆ ಸಂಘಟನೆ, ಹೋರಾಟ ಮತ್ತು ಪ್ರತಿಭಟನೆಯ ರೂಪು ರೇಷೆ ಕೈಗೊಳ್ಳಲಾಗುತ್ತದೆ ಎಂದರು.
    ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಇರುವಾಗಲೆಲ್ಲ ಆತ್ಮಹತ್ಯೆಗಳು ಹೆಚ್ಚಾಗುತ್ತವೆ. ಈಗಲಾದರೂ, ಸರಕಾರ ರೈತರಿಗೆ ತಕ್ಷಣವೇ ಪರಿಹಾರವನ್ನು ವಿತರಿಸಬೇಕು ಎಂದು ಒತ್ತಾಯಿಸಿದರು.
    ಇಲ್ಲಿನವರೆಗೆ ರೈತರಿಗೆ ಭರವಸೆ ಮೂಡಿಸುವ ಯಾವ ಹೇಳಿಕೆಯನ್ನೂ ಸರಕಾರ ಕೊಟ್ಟಿಲ್ಲ. ಸಚಿವರು ರೈತರ ಜೀವ, ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ದೂರಿದರು.
    ರಾಜ್ಯದಲ್ಲಿ ರೈತರ ಸಾವಿನ ಸುದ್ದಿಗಳು ಕೇಳಿಬರುತ್ತಿರುವುದು ಆಘಾತಕಾರಿ. ರೈತ ಸಮುದಾಯ ಧೈರ್ಯ ವಹಿಸಬೇಕು. ಬಿಜೆಪಿ, ರೈತ ಸಮುದಾಯಕ್ಕೆ ಆತ್ಮವಿಶ್ವಾಸವನ್ನು ತುಂಬಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts