More

    ಕಾಂಗ್ರೆಸ್‌ ಸರ್ಕಾರ ಬಂದಾಗಿನಿಂದ ಮತಾಂಧ ಶಕ್ತಿಗಳ ಆಟಾಟೋಪ ಹೆಚ್ಚಳ:ರಾಜ್ಯದ ಜನತೆಗೆ ಅಭದ್ರತೆ ಕಾಡುತ್ತಿದೆ-ಹರಿಪ್ರಕಾಶ ಕೋಣೆಮನೆ

    ಯಲ್ಲಾಪುರ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣ ಸೇರಿದಂತೆ ; ರಾಜ್ಯದೆಲ್ಲೆಡೆ‌ ಮತಾಂಧ ಶಕ್ತಿಗಳ ಆಟಾಟೋಪ ಮಿತಿ ಮೀರಿ ಸಂಭವಿಸುತ್ತಿರುವುದು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ನಿದರ್ಶನವಾಗಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಆರೋಪಿಸಿದರು.

    ಪಟ್ಟಣದಲ್ಲಿ ನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದಾಗಿನಿಂದ, ಮತಾಂಧ ಶಕ್ತಿಗಳು ರಾಜ್ಯದ ಉದ್ದಗಲಕ್ಕೂ ತಮ್ಮ ದುಷ್ಕೃತ್ಯಗಳನ್ನು ಮೆರೆಯಲು ಆರಂಭಿಸಿವೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ರಾಜ್ಯದ ವಿವಿದೆಡೆ ಪಾಕಿಸ್ತಾನದ ಧ್ವಜ ಹಾರಾಡುವುದು, ಪಾಕಿಸ್ತಾನದ ಪರ ಘೋಷಣೆ ಕೂಗುವ ಘಟನೆ ನೋಡಿದ್ದೇವೆ. ಕಾಂಗ್ರೆಸ್ ಸರ್ಕಾರ ಕ್ಷೋಭೆ ಉಂಟುಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದ ಆರೋಪಿಗಳನ್ನು ನಮ್ಮ “ಬ್ರದರ್ಸ್‌” ಎಂದು ರಾಜ್ಯದ ಉಪ ಮುಖ್ಯಮಂತ್ರಿಗಳು ಕರೆಯುತ್ತಾರೆ. ವಿಧಾನ ಸೌಧದ ಆವರಣದಲ್ಲೇ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದರೂ, ಅದನ್ನು ಸಾಬೀತು ಪಡಿಸುವ ಎಫ್‌ಎಸ್‌ಎಲ್‌ ವರದಿ ಬಂದಾಗಲೂ, ಈವರೆಗೂ ಅಂತಹ ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗುತ್ತಿಲ್ಲ. ಬದಲಾಗಿ ವರದಿ ನೀಡಿದ ಪೊಲೀಸ್‌ ಇಲಾಖೆಯನ್ನೇ ರಾಜ್ಯದ ಮುಖ್ಯ ಮಂತ್ರಿಗಳು ತರಾಟೆಗೆ ತೆಗೆದುಕೊಳ್ಳುತ್ತಿರುವದು ವಿಪರ್ಯಾಸವಾಗಿದೆ ಎಂದರು.

    ಇದನ್ನೂ ಓದಿ: ಬಾಂಬ್‌ಗೆ ಬೆಚ್ಚಿದ ಬೆಂಗಳೂರು: ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್‌! 10 ಮಂದಿಗೆ ಗಾಯ

     ಇಂದಿನ ಸರ್ಕಾರವು ಮತಾಂಧರಿಗೆ ಕುಮ್ಮಕ್ಕು ನೀಡುತ್ತಿರುವುದು ಅತ್ಯಂತ ಸ್ಪಷ್ಟವಾಗಿ ಕಾಣುತ್ತಿದೆ. ಇದರಿಂದಾಗಿ ಕರ್ನಾಟಕದ ಜನತೆಗೆ ಅಭದ್ರತೆ ಎದುರಾಗಿದೆ. ಕೇವಲ ಮತಕ್ಕಾಗಿ ರಾಜ್ಯದಲ್ಲಿ ಆತಂಕದ ಸನ್ನಿವೇಶವನ್ನು ಹುಟ್ಟುಹಾಕುವ, ಬಾಂಬ್‌ ಬ್ಲಾಸ್ಟ್‌ ಮಾಡುವ, ದೇಶದ್ರೋಹಿಗಳ ಪರವಾಗಿ ಕಾಂಗ್ರೆಸ್‌ ಸರ್ಕಾರ ನಿಂತಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದ ಅವರು, ಶುಕ್ರವಾರ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಸ್ಫೋಟದಲ್ಲಿ ಐಇಡಿ ಬಳಕೆಯ ಕುರಿತು ಪ್ರಾಥಮಿಕ ವರದಿ ಇದ್ದಾಗಲೂ ಕೂಡ, ರಾಜ್ಯ ಸರ್ಕಾರ ಇದು ವ್ಯಾಪಾರದ ವೈಷಮ್ಯದ ಕಾರಣದಿಂದ ಆಗಿರುವ ಘಟನೆ ಎಂಬ ಶಂಕೆ ವ್ಯಕ್ತಪಡಿಸಿ, ಘಟನೆಯ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಲಾಗುತ್ತಿದೆ. ಈ ಮೂಲಕ ಇಂತಹ ವಿದ್ವಂಸಕ ಕೃತ್ಯ ನಡೆಸುವವರಿಗೆ ಸರ್ಕಾರ ನೇರವಾಗಿ ಖುಮ್ಮಕ್ಕು ನೀಡುತ್ತಿದೆ ಎಂದರು.

    ಇಂತಹ ಘಟನೆಗಳು ನಡೆದಾಗ, ಘಟನೆಯ ಕುರಿತು ಸಮರ್ಪಕ ತನಿಖೆ ಕೈಗೊಂಡು, ಅದರ ಹಿಂದಿನ ಕಾರಣೀಕರ್ತರು ಯಾವ ಧರ್ಮಕ್ಕೆ ಸೇರಿದವರು ಎನ್ನುವ ಆರಂಭಿಸಿದೆಗೆ ಹೋಗದೆ ಕಠಿಣ ಶಿಕ್ಷೆ ನೀಡಬೇಕು. ಉಪ ಮುಖ್ಯಮಂತ್ರಿಗಳು ಬ್ರ್ಯಾಂಡ್‌ ಬೆಂಗಳೂರು ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು, ಆದರೆ ಈಗ ಅದು ಬಾಂಬ್‌ ಬೆಂಗಳೂರಾಗಿ ಮಾರ್ಪಾಡಾಗುತ್ತಿರುವುದು ವಿಷಾದನೀಯ. ಜಗತ್ತಿನ ವಿವಿಧ ಉದ್ಯಮಗಳು ಬೆಂಗಳೂರಿನಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡಿರುವು ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಿದೆ. ಆದರೆ ಭಯದ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವುದು, ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಫಲ್ಯತೆಯನ್ನು ತೋರುತ್ತದೆ ಎಂದರು.

     ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಹಾಗೂ ಹತ್ಯೆಯಾಗುತ್ತಿದೆ. ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.  ಯಲ್ಲಾಪುರದಲ್ಲಿ ಕಳೆದ ವಾರ ನಡೆದ ಸಿದ್ದಿ ಜನಾಂಗದ ಯುವಕನ ಕೊಲೆ ಪ್ರಕರಣವನ್ನೂ ಸಹ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎನ್ನುವ ಶಂಕೆ ಮೂಡುತ್ತಿದೆ. ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ. ಪೊಲೀಸ್‌ ಇಲಾಖೆಯೂ ಸಹ ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ. ಪೊಲೀಸ್‌ ಇಲಾಖೆಯು ಜವಾಬ್ದಾರಿಯುತ ಕ್ರಮ ಕೈಗೊಳ್ಳದೆ ಸರ್ಕಾರದ ಕೈಗೊಂಬೆಯಾಗುತ್ತ ಹೋಗಿ ಭಯೋತ್ಪಾದಕರ, ಕೊಲೆಗಡುಕರ ರಕ್ಷಣೆಗೆ ನಿಂತಲ್ಲಿ ಮುಂದೊಂದು ದಿನ ಪೊಲೀಸರ ರಕ್ಷಣೆಗೂ ಯಾರೂ ಇರುವುದಿಲ್ಲ. ಜನಸಾಮಾನ್ಯರು ಕಾನೂನನ್ನು ಕೈಗೆತ್ತುಕೊಳ್ಳುವ ಪರಿಸ್ಥಿತಿ ಎದುರಾಗದಂತೆ ಪೊಲೀಸ್‌ ಇಲಾಖೆ ನೋಡಿಕೊಳ್ಳಬೇಕಿದೆ ಎಂದರು.

     ಸರ್ಕಾರದ ಇತ್ತೀಚಿನ ವಿವಿಧ ನಿಲುವು ಮತ್ತು ನಿರ್ಣಯಗಳು ತೀರಾ ಅಸಮಂಜಸವಾಗಿವೆ. ಜನವಿರೋಧಿ ನೀತಿಯ ಕೃತ್ಯಗಳನ್ನು ಮಾಡಿದವರ ವಿರುದ್ಧ ಸಮರ್ಪಕ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಇತ್ತೀಚಿನ ಭಯೋತ್ಪಾದನೆಯ ಕಾರ್ಯಗಳು ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಹಿನ್ನೆಲೆಯಲ್ಲಿ ನಡೆಯುತ್ತಿದ್ದು, ಅಮಾಯಕರ ಕೊಲೆ ಯತ್ನದಿಂದಾಗಿ ಸಮಾಜದ ನಡುವೆ ವೈಷಮ್ಯ ಉಂಟಾಗುತ್ತಿದೆ. ಈ ಎಲ್ಲ ಸಂಗತಿಗಳ ಬಗೆಗೆ ಸಂಬಂಧಿಸಿದ ಇಲಾಖೆಗಳು ಸರ್ಕಾರದ ಕೈಗೊಂಬೆಯಾಗಿರದೇ ಪ್ರಾಮಾಣಿಕವಾಗಿ ತನಿಖೆ ಮಾಡಬೇಕೆಂದು ಆಗ್ರಹಿಸಿದರು. ಪಕ್ಷದ ಪ್ರಮುಖರಾದ ಗೋಪಾಲಕೃಷ್ಣ ಗಾಂವ್ಕರ್, ಗಣಪತಿ ಮಾನಿಗದ್ದೆ, ಮಾಧ್ಯಮ ಪ್ರಕೋಷ್ಠದ ಸಂಚಾಲಕ ಕೆ.ಟಿ.ಹೆಗಡೆ ಆನಗೋಡ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts