More

    ಬಾಂಬ್​ಗೆ ಬೆಚ್ಚಿದ ಬೆಂಗಳೂರು: ವೈಟ್​ಫೀಲ್ಡ್​ನ ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ | 10 ಮಂದಿಗೆ ಗಾಯ

    ಬೆಂಗಳೂರು: ರಾಜಧಾನಿಯ ರಾಮೇಶ್ವರಂ ಕೆಫೆಯಲ್ಲಿ ಐಇಡಿ ಬಳಸಿದ ಬಾಂಬ್ ಸ್ಪೋಟಗೊಂಡಿದ್ದು, ಮಹಿಳೆಯರು ಸೇರಿ 10 ಮಂದಿ ಗಾಯಗೊಂಡಿದ್ದಾರೆ. ಇದೊಂದು ಭಯೋತ್ಪಾದಕರ ಕೃತ್ಯವೆಂಬುದು ಮೇಲ್ನೋಟಕ್ಕೆ ಕಂಡುಬಂದಿದ್ದು, ತನಿಖೆ ಮುಂದುವರಿದಿದೆ. ದುಷ್ಕರ್ವಿುಗಳು ಹೆಚ್ಚು ಜನ ಸೇರುವ ಹೋಟೆಲ್ ಗುರುತಿಸಿ, ಬಾಂಬ್ ಸ್ಪೋಟಿಸಿದ್ದು, ಆತಂಕಕ್ಕೆ ಕಾರಣವಾಗಿದೆ.

    ವೈಟ್​ಫೀಲ್ಡ್ ಸಮೀಪದ ಕುಂದಲಹಳ್ಳಿಯಲ್ಲಿರುವ ‘ದಿ ರಾಮೇಶ್ವರಂ ಕೆಫೆ’ಯಲ್ಲಿ ಶುಕ್ರವಾರ ಮಧ್ಯಾಹ್ನ 12.55ರಲ್ಲಿ ಬಾಂಬ್ ಸ್ಪೋಟಗೊಂಡಿದೆ. ಕೇವಲ 10 ಸೆಕೆಂಡ್​ಗಳಲ್ಲಿ ಕೆಫೆಯ ಕೈತೊಳೆಯುವ ಸ್ಥಳದಲ್ಲಿ ಮತ್ತು ಕಿಚನ್ ಹೊರಗೆ ಪ್ಲೇಟ್​ಗಳನ್ನು ಇಡುವ ಸ್ಥಳದಲ್ಲಿ ಎರಡು ಬಾಂಬ್ ಸಿಡಿದಿವೆ. ಈ ಹಿಂದೆ 2014ರ ಡಿಸೆಂಬರ್ 28ರಂದು ಚರ್ಚ್ ಸ್ಟ್ರೀಟ್​ನಲ್ಲಿ ಉಗ್ರರು ಇದೇ ರೀತಿ ಕೃತ್ಯ ಎಸಗಿದ್ದರು. 10 ವರ್ಷಗಳ ಬಳಿಕ ಮತ್ತೆ ಬಾಂಬ್ ಸದ್ದು ಮಾಡಿದೆ.

    ಗಾಯಗೊಂಡವರು: ರಾಮೇಶ್ವರ ಕೆಫೆ ಹೋಟೆಲ್ ನೌಕರ ಫಾರುಖ್ (19), ಅಮೆಜಾನ್ ಕಂಪನಿ ನೌಕರ ದೀಪಾಂಶು (23), ಸ್ವರ್ಣಾಂಬ (49), ಮೋಹನ್ (41), ನಾಗಶ್ರೀ (35), ಮೋಮಿ (30), ಬಲರಾಮ್ ಕೃಷ್ಣನ್ (31), ನವ್ಯಾ (25), ಶ್ರೀನಿವಾಸ್ (67) ಮತ್ತು ಶಂಕರ್ (41). ಈ ಪೈಕಿ ಸ್ವರ್ಣಾಂಬ ಅವರಿಗೆ ಗಂಭೀರ ಗಾಯವಾಗಿದೆ. ಕಿವಿ ತಮಟೆಗೆ ಹಾನಿ ಉಂಟಾಗಿದೆ. ಬಲಭಾಗದ ಕೈಕಾಲು, ದೇಹಕ್ಕೆ ಸುಟ್ಟ ಗಾಯಗಳಾಗಿವೆ. ಪ್ಲಾಸ್ಟಿಕ್ ಸರ್ಜರಿ ನಡೆದಿದೆ. ಉಳಿದವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಭಾರಿ ಪ್ರಮಾಣದ ಸ್ಪೋಟಕ ಸದ್ದಿನ ಪರಿಣಾಮ ಗಾಯಾಳುಗಳ ಕಿವಿ ತಮಟೆಗೆ ಹಾನಿಯಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

    ರಾಮೇಶ್ವರಂ ಕೆಫೆ ದೊಡ್ಡ ಹೋಟೆಲ್ ಆಗಿದ್ದು, ನಿತ್ಯ ನೂರಾರು ಗ್ರಾಹಕರು ಭೇಟಿ ನೀಡುತ್ತಾರೆ. ಮಧ್ಯಾಹ್ನವಾದ್ದರಿಂದ ಸುತ್ತಮುತ್ತಲ ಉದ್ಯೋಗಿಗಳು, ಸ್ಥಳೀಯರು ಊಟಕ್ಕೆಂದು ಬಂದಿದ್ದರು. ಗ್ರಾಹಕರ ಸೋಗಿನಲ್ಲಿ ಹೋಟೆಲ್​ಗೆ ನುಸುಳಿರುವ ಆಗಂತುಕರು, ಬ್ಯಾಗ್​ನಲ್ಲಿ ಸ್ಪೋಟಕ ವಸ್ತುಗಳನ್ನು ತಂದು ಕೈ ತೊಳೆಯುವ ಸಿಂಕ್ ಬಳಿ ಇಟ್ಟು ಹೋಗಿದ್ದಾರೆ. ಮಧ್ಯಾಹ್ನ 12.55ಕ್ಕೆ 10 ಸೆಕೆಂಡ್​ಗಳ ಅಂತರದಲ್ಲಿ ಎರಡು ಬಾರಿ ಸ್ಪೋಟಗೊಂಡಿವೆ. ಗ್ರಾಹಕರು, ಹೋಟೆಲ್ ನೌಕರರು ಆತಂಕದಲ್ಲಿ ಓಡಿಹೋಗಿದ್ದಾರೆ. ಆರಂಭದಲ್ಲಿ ಕೆಲವರು ಸಿಲಿಂಡರ್ ಸ್ಫೋಟ ಎಂದುಕೊಂಡರೆ ಮತ್ತೆ ಕೆಲವರು ಬೇರೇನೋ ಸ್ಪೋಟಿಸಿರಬೇಕೆಂದು ಅಂದಾಜಿಸಿದ್ದರು.

    ಸ್ಥಳೀಯರು ಮತ್ತು ಹೋಟೆಲ್ ನೌಕರರು ತಕ್ಷಣ ಗಾಯಾಳುಗಳನ್ನು ರಕ್ಷಣೆ ಮಾಡಿ ಆಂಬುಲೆನ್ಸ್​ನಲ್ಲಿ ಬ್ರೂಕ್​ಫೀಲ್ಡ್, ವೈದೇಹಿ ಮತ್ತು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿದ ಸುತ್ತಮುತ್ತಲ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪ್ರಾಥಮಿಕ ಮಾಹಿತಿ ಕಲೆ ಹಾಕಿದರು. ಇದೇ ವೇಳೆಗೆ ಅಗ್ನಿಶಾಮಕ ಅಧಿಕಾರಿ, ಸಿಬ್ಬಂದಿ ವರ್ಗ ಸಹ ಸ್ಥಳಕ್ಕೆ ಬಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರು. ಸಿಲಿಂಡರ್ ಸ್ಪೋಟವಲ್ಲ ಎಂಬುದು ದೃಢವಾಗುತ್ತಿದ್ದಂತೆ ಸಮಾಜಘಾತುಕ ಶಕ್ತಿಗಳ ಕೈವಾಡದ ಸುಳಿವು ಸಿಕ್ಕಿದೆ. ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ನೇತೃತ್ವದಲ್ಲಿ ನಗರ ಉಗ್ರ ನಿಗ್ರಹ ಪಡೆ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು, ಬಾಂಬ್ ಪತ್ತೆ ದಳ ಮತ್ತು ಬಾಂಬ್ ನಿಷ್ಕಿಯ ದಳ ದೌಡಾಯಿಸಿ ಘಟನಾ ಸ್ಥಳವನ್ನು ವಶಕ್ಕೆ ಪಡೆದರು.

    ಸ್ಪೋಟಕ ಮಾದರಿ ಸಂಗ್ರಹ: ಮಾಹಿತಿ ತಿಳಿಯುತ್ತಿದ್ದಂತೆ ಎಫ್​ಎಸ್​ಎಲ್ ತಜ್ಞರು ಹೋಟೆಲ್​ಗೆ ಭೇಟಿ ನೀಡಿ ಸ್ಪೋಟಕ ವಸ್ತುಗಳ ಮಾದರಿಗಳನ್ನು ಸಂಗ್ರಹಿಸಿದರು. ಕೆಫೆಯ ಎಲ್ಲ ಜಾಗವನ್ನು ಪರಿಶೀಲನೆ ನಡೆಸಿದರು. ಉಗ್ರರ ಕೃತ್ಯವೇ ಆಗಿದ್ದರೆ ಯಾವ ಸಂಘಟನೆಗಳು ಈ ಮಾದರಿ ಸ್ಪೋಟಕ ವಸ್ತುಗಳನ್ನು ಬಳಸುತ್ತಾರೆ ಎಂಬುದಕ್ಕೆ ಎಫ್​ಎಸ್​ಎಲ್ ವರದಿ ಬಹುಮುಖ್ಯವಾಗಲಿದೆ. ಆದರಿಂದ ತಡರಾತ್ರಿವರೆಗೂ ಕೆಫೆಯನ್ನು ಜಾಲಾಡಿದ ಎಫ್​ಎಸ್​ಎಲ್ ತಜ್ಞರು ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ.

    ಸಿಸಿ ಕ್ಯಾಮರಾ ಜಾಲಾಡಿದ ಖಾಕಿ: ಹೋಟೆಲ್ ಒಳಗೆ ಮತ್ತು ಹೊರಗೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಇರುವ ಸಿಸಿ ಕ್ಯಾಮರಾಗಳ ದೃಶ್ಯಾವಳಿಯನ್ನು ಪೊಲೀಸರು ಜಾಲಾಡುತ್ತಿದ್ದಾರೆ. ಇದಕ್ಕಾಗಿ ಪ್ರತ್ಯೇಕ ತಂಡ ರಚನೆ ಮಾಡಿದ್ದು, ಶುಕ್ರವಾರ ಬೆಳಗ್ಗೆ ಹೋಟೆಲ್ ತೆರೆದ ಸಮಯದಿಂದ ಸ್ಪೋಟಗೊಂಡ ಸಮಯ ದವರೆಗೂ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಇದಲ್ಲದೆ, ಕುಂದಲಹಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ಸೇಫ್ ಸಿಟಿ ಯೋಜನೆಯಡಿ ಅಳವಡಿಸಿರುವ ಕ್ಯಾಮರಾಗಳ ದೃಶ್ಯಗಳ ಮೇಲೂ ನಿಗಾ ವಹಿಸಿದ್ದು, ಶಂಕಿತರ ಚಲನವಲದ ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಕೇಂದ್ರ ತನಿಖಾಗಳ ತಂಡ ಅಲರ್ಟ್: ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಮತ್ತು ಕೇಂದ್ರ ಗುಪ್ತಚರ ದಳ (ಐಬಿ) ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪ್ರತ್ಯೇಕ ತನಿಖೆ ಕೈಗೊಂಡಿದ್ದಾರೆ. ಈ ಹಿಂದೆ ಯಾವ ಯಾವ ಪ್ರದೇಶದಲ್ಲಿ ಇಂತಹ ಸ್ಪೋಟಗಳು ಸಂಭವಿಸಿವೆ. ಆ ಕೃತ್ಯಗಳಲ್ಲಿ ಯಾವ ಸಂಘಟನೆಗಳು ಹೊಣೆ ಹೊತ್ತಿಕೊಂಡಿವೆ ಅಥವಾ ತನಿಖೆಯಲ್ಲಿ ಸಂಘಟನೆ ಹೆಸರು ಬೆಳಕಿಗೆ ಬಂದಿವೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಅಪರಿಚಿತ ಯುವಕನ ಎಂಟ್ರಿ: ಮಧ್ಯಾಹ್ನ 12 ಗಂಟೆಯಲ್ಲಿ 25 ರಿಂದ 30 ವರ್ಷದ ಯುವಕನೊಬ್ಬ ಸ್ಪೋಟಕ ವಸ್ತುಗಳನ್ನು ಒಳಗೊಂಡ ಬ್ಯಾಗ್​ನೊಂದಿಗೆ ಕೆಫೆಗೆ ಭೇಟಿ ನೀಡಿದ್ದಾನೆ. ಮೊದಲು ಕೌಂಟರ್​ನಲ್ಲಿ ರವೆ ಇಡ್ಲಿ ಪಡೆದು ಸೇವಿಸಿದ್ದಾನೆ. ಬಳಿಕ ಕೈ ತೊಳೆಯುವ ಸೋಗಿನಲ್ಲಿ ಹೋಗಿ ಬ್ಯಾಗ್ ಇಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇದಾದ 55 ನಿಮಿಷಗಳ ಬಳಿಕ ಸ್ಪೋಟಗೊಂಡಿದೆ. ಆದರಿಂದ ಇದೊಂದು ಟೈಮರ್ ಬಾಂಬ್ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಎಷ್ಟೊತ್ತಿಗೆ ಏನಾಯ್ತು?

    • 12.00- 25 ರಿಂದ 30 ವರ್ಷದ ಯುವಕ ಸ್ಪೋಟಕವಿದ್ದ ಬ್ಯಾಗ್​ನೊಂದಿಗೆ ಹೋಟೆಲ್​ಗೆ ಪ್ರವೇಶ.
    • 12.15- ಕೌಂಟರ್​ನಲ್ಲಿ ಟೋಕನ್ ಪಡೆದು ರವೆ ಇಡ್ಲಿ ಸೇವನೆ. ಕೈ ತೊಳೆವ ಜಾಗದಲ್ಲಿ ಬ್ಯಾಗ್ ಇಟ್ಟು ಪರಾರಿ.
    • 12.55- ಸ್ಪೋಟ, 10 ಸೆಕೆಂಡ್ ಅಂತರದಲ್ಲಿ ಎರಡನೇ ಬಾರಿ ಸ್ಪೋಟ.
    • 1.00- ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಕೊಟ್ಟು, ಆಸ್ಪತ್ರೆ ಸಾಗಿಸಿದ ಗ್ರಾಹಕರು
    • 1.15- ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ದೌಡು
    • 1.30- ವೈಟ್​ಫೀಲ್ಡ್ ಡಿಸಿಪಿ ಭೇಟಿ
    • 2.10- ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಆಗಮನ
    • 2.50- ಎಫ್​ಎಸ್​ಎಲ್ ತಜ್ಞರಿಂದ ಸಾಕ್ಷ್ಯ ಸಂಗ್ರಹ.
    • 3.30- ನಗರ ಪೊಲೀಸ್ ಆಯುಕ್ತರ, ಕೇಂದ್ರ ತನಿಖಾ ತಂಡಗಳು ಆಗಮನ
    • 4.00- ಡಿಜಿಪಿ ಡಾ.ಅಲೋಕ್ ಮೋಹನ್ ಸ್ಥಳ ಪರಿಶೀಲನೆ
    • 7.45- ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಭೇಟಿ
    • 9.00- ರಾಜ್ಯಪಾಲರು ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

    ಸ್ಫೋಟ ಪ್ರಕರಣ ಕುರಿತು ಪೊಲೀಸರು ಸ್ಥಳ ಪರಿಶೀಲಿಸಿ ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಸ್ಪೋಟಕ ಭಾರಿ ಪ್ರಮಾಣದಲ್ಲಿ ನಡೆದಿಲ್ಲವಾದರೂ ಹಲವರಿಗೆ ಗಾಯವಾಗಿದೆ. ಯಾರೇ ಈ ಕೃತ್ಯವೆಸಗಿದ್ದರೂ ಕಠಿಣ ಕ್ರಮಕೈಗೊಳ್ಳಲಾಗುವುದು.

    | ಸಿದ್ದರಾಮಯ್ಯ. ಸಿಎಂ

    ಕಡಿಮೆ ತೀವ್ರತೆ ಇರುವ ಬಾಂಬ್ ಸ್ಪೋಟಗೊಂಡಿದೆ. ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಏಳೆಂಟು ತಂಡ ರಚನೆ ಆಗಿದ್ದು, ಜನರು ಭಯಪಡುವ ಅಗತ್ಯ ಇಲ್ಲ. ಸಂತ್ರಸ್ತರಿಗೆ ಪರಿಹಾರ ಸರ್ಕಾರ ನೀಡಲಿದೆ.

    | ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ

    ಬ್ರ್ಯಾಂಡ್​​ ಬೆಂಗಳೂರು ಮಾಡದಿದ್ದರೂ ಪರವಾಗಿಲ್ಲ. ಬಾಂಬ್ ಬೆಂಗಳೂರು ಸೃಷ್ಟಿಸಬೇಡಿ ಎಂದು ಸಿಎಂ, ಡಿಸಿಎಂಗೆ ಕೈಮುಗಿದು ಬೇಡುವೆ.

    | ಆರ್. ಅಶೋಕ್ ವಿಪಕ್ಷ ನಾಯಕ

    ಬಾಂಬ್ ಸ್ಪೋಟವಾಗಿದ್ದು, 10 ಮಂದಿಗೆ ಗಾಯವಾಗಿದೆ. ಶಂಕಿತರ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದು, ಕೇಂದ್ರ ತನಿಖಾ ತಂಡಗಳು ತನಿಖೆಗೆ ಕೈಜೋಡಿಸಿವೆ.

    | ಡಾ. ಅಲೋಕ್ ಮೋಹನ್,  ಡಿಜಿಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts