More

    ಪಟೇಲರ ಹುಟ್ಟೂರಲ್ಲಿ ಬಿಜೆಪಿಯತ್ತ ಒಲವೇಕೆ?: ಗುಜರಾತ್ ಕಣ, ವಿಜಯವಾಣಿ ಪ್ರತ್ಯಕ್ಷ ಚಿತ್ರಣ..

    | ರಾಘವ ಶರ್ಮ ನಿಡ್ಲೆ ದೆಹಲಿ
    ಗುಜರಾತಿನ ಖೇಡಾ ಜಿಲ್ಲೆಯ ನಡಿಯಾದ್​ಗೆ ಭಾರತದ ಇತಿಹಾಸದಲ್ಲಿ ವಿಶೇಷ ಸ್ಥಾನವಿದೆ. 1875ರಲ್ಲಿ ಭಾರತದ ಉಕ್ಕಿನ ಮನುಷ್ಯ, ಮಾಜಿ ಉಪಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಜನಿಸಿದ್ದು ಇದೇ ಪಟ್ಟಣದಲ್ಲಿ. ಸೋದರಮಾವ ದುಂಗರ್​ಭಾಯಿ ಪಟೇಲ್ ಮನೆಯಲ್ಲಿ ಜನಿಸಿದ ವಲ್ಲಭರು, ಪ್ರಾಥಮಿಕ ಶಿಕ್ಷಣವನ್ನು ಇಲ್ಲೇ ಪೂರ್ಣಗೊಳಿಸಿ, ನಂತರ ಕುಟುಂಬದೊಂದಿಗೆ ಸುಮಾರು 30 ಕಿಮೀ ದೂರದಲ್ಲಿರುವ ಆನಂದ್ ಜಿಲ್ಲೆ (ವಿಧಾನಸಭೆ) ವ್ಯಾಪ್ತಿಯ ಕರಮ್ದ್​ನಲ್ಲಿ ನೆಲೆಸಿದ್ದರು.

    ಗುಜರಾತ್ ರಾಜಕಾರಣಿಗಳಿಗೆ ನಡಿಯಾದ್ ಅಚ್ಚುಮೆಚ್ಚಿನ ಸ್ಥಳ. ಪ್ರತಿ ಚುನಾವಣೆ ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೆ ಭೇಟಿ ನೀಡುವಾಗಲೆಲ್ಲಾ ನಡಿಯಾದ್​ನ ಸರ್ದಾರರ ಮನೆಗೆ ಬಂದು, ಅವರ ಚಿತ್ರಕ್ಕೆ ನಮಿಸಿ ತೆರಳುವ ಕಾರ್ಯಕ್ರಮವಿರುತ್ತದೆ. ಕಾಂಗ್ರೆಸ್, ಬಿಜೆಪಿ ಮತ್ತು ಈಗ ಆಮ್ ಆದ್ಮಿ ಮುಖಂಡರೂ ಇಲ್ಲಿಗೆ ಎಡತಾಕುತ್ತಿರುತ್ತಾರೆ.

    ಪಟೇಲರ ಹುಟ್ಟೂರಲ್ಲಿ ಬಿಜೆಪಿಯತ್ತ ಒಲವೇಕೆ?: ಗುಜರಾತ್ ಕಣ, ವಿಜಯವಾಣಿ ಪ್ರತ್ಯಕ್ಷ ಚಿತ್ರಣ..
    ಸರ್ದಾರ್ ಪಟೇಲ್ ಮಗುವಾಗಿದ್ದಾಗ ಇದೇ ತೊಟ್ಟಿಲಲ್ಲಿ ಮಲಗಿಸಲಾಗುತ್ತಿತ್ತು

     

    ಕಳೆದೈದು ಚುನಾವಣೆಗಳಿಂದ ನಡಿಯಾದ್ ಕ್ಷೇತ್ರದ ಮತದಾರ ಬಿಜೆಪಿಗೆ ಹತ್ತಿರವಾಗಿದ್ದಾನೆ. 1998ರಿಂದ 2017ರವರೆಗೆ ಐದೂ ಚುನಾವಣೆಗಳಲ್ಲಿ ಗೆದ್ದು ಬೀಗಿರುವ ಬಿಜೆಪಿ ಶಾಸಕ ಪಂಕಜ್ ಕುಮಾರ್ ದೇಸಾಯ್, ಈ ಬಾರಿ ಸತತ 6ನೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ದಿನ್​ಶಾ ಪಟೇಲ್ ನಡಿಯಾದ್ ಕ್ಷೇತ್ರದಿಂದ ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ, 98ರ ಬಳಿಕ ಬಿಜೆಪಿ ಪಾರಮ್ಯಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್​ಗೆ ಸಾಧ್ಯವಾಗಿಲ್ಲ.

    2014ರಲ್ಲಿ ಎನ್​ಡಿಎ ಅಧಿಕಾರಕ್ಕೆ ಬಂದ ನಂತರದಿಂದ ಗುಜರಾತಿಗರ ಹೆಮ್ಮೆಯ ನಾಯಕನ ವರ್ಚಸ್ಸನ್ನು ವಿಶ್ವಮಟ್ಟದಲ್ಲಿ ವೃದ್ಧಿಸಿದ ಹೆಗ್ಗಳಿಕೆ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಸರ್ದಾರರ ಕೆಲಸಗಳನ್ನು ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಮುಚ್ಚಿಹಾಕಿತು. ಒಂದು ಕುಟುಂಬವನ್ನು ಬಿಂಬಿಸುವ ಸಲುವಾಗಿ, ನೈಜ ನಾಯಕರನ್ನು ಕಡೆಗಣಿಸಲಾಯಿತು ಎನ್ನುತ್ತಾರೆ ನಡಿಯಾದ್ ನಿವಾಸಿ ವಿಕಾಸ್​ಭಾಯ್ ಶಾ. ಬಿಜೆಪಿಯ ಪಂಕಜ್ ಕುಮಾರ್ ವಿರುದ್ಧ ಕಾಂಗ್ರೆಸ್ ಈ ಬಾರಿ ಸ್ಥಳೀಯ ನಾಯಕ ಧ್ರುವಲ್ ಸಾಧುಭಾಯ್ ಪಟೇಲ್​ರನ್ನು ಕಣಕ್ಕಿಳಿಸಿದ್ದರೆ, ಆಮ್ ಆದ್ಮಿಯಿಂದ ಹರ್ಷದ್ ವಘೕಲಾ ಸ್ಪರ್ಧಿಸಿದ್ದಾರೆ. ಆಮ್ ಆದ್ಮಿ ಪಾರ್ಟಿ ನೆಪಮಾತ್ರಕ್ಕೆ ಸ್ಪರ್ಧಿಸುತ್ತಿದೆ, ಇಲ್ಲಿ ಫೈಟ್ ಇರುವುದು ಬಿಜೆಪಿ-ಕಾಂಗ್ರೆಸ್ ನಡುವೆ ಮಾತ್ರ ಎಂದು ಅನೇಕರು ಒಪ್ಪಿಕೊಳ್ಳುತ್ತಾರೆ.

    ಪಟೇಲರ ಹುಟ್ಟೂರಲ್ಲಿ ಬಿಜೆಪಿಯತ್ತ ಒಲವೇಕೆ?: ಗುಜರಾತ್ ಕಣ, ವಿಜಯವಾಣಿ ಪ್ರತ್ಯಕ್ಷ ಚಿತ್ರಣ..
    ಸರ್ದಾರ್ ಪಟೇಲ್ ಸೋದರ ಮಾವ

    ನಡಿಯಾದ್ ಮೂಲಕ ವಡೋದರಾ-ಅಹ್ಮದಾಬಾದ್ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದ್ದ ಸಣ್ಣ ಹೋಟೆಲ್ ಒಂದರಲ್ಲಿ ಮಾತಿಗೆ ಸಿಕ್ಕ ಉದ್ಯಮಿ ಸುದರ್ಶನ್ ನಾಗ್, ‘ನಾನು ವಿದ್ಯಾರ್ಥಿಯಾಗಿದ್ದಾಗ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಅಭಿಮಾನಿಯಾಗಿದ್ದೆ. ಈಗಲೂ ಅವರ ಬಗ್ಗೆ ಅಷ್ಟೇ ಗೌರವವಿದೆ. ಆದರೆ, ಹಾಲಿ ಕಾಂಗ್ರೆಸ್ ನಾಯಕರನ್ನು ನೋಡಿದಾಗ ಮತ ಹಾಕಬೇಕೆಂದು ಅನಿಸುವುದೇ ಇಲ್ಲ. ಎಲ್ಲಿಯ ಮೋದಿ, ಎಲ್ಲಿಯ ರಾಹುಲ್? ಈ ರಾಷ್ಟ್ರೀಯ ಹೆದ್ದಾರಿ ರಿಪೇರಿ ಕೆಲಸ 2004ರಿಂದ ಬಾಕಿ ಉಳಿದಿತ್ತು. 2014ರಲ್ಲಿ ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕಾಮಗಾರಿ ಪೂರ್ಣಗೊಂಡಿತು. ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗುತ್ತಿರುವಾಗ ಬಿಜೆಪಿಯನ್ನೇಕೆ ವಿರೋಧಿಸಬೇಕು?’ಎಂದರು.

    ಕಾರ್ಪೆಟ್ ಬಾಂಬಿಂಗ್ ತಂತ್ರ!

    ಗುಜರಾತ್ ಚುನಾವಣೆಗೆ ಬಿಜೆಪಿ ‘ಕಾರ್ಪೆಟ್ ಬಾಂಬಿಂಗ್’ ಎಂಬ ಹೊಸ ತಂತ್ರ ಪ್ರಯೋಗಿಸಿದೆ. ಎಲ್ಲಾ 182 ಕ್ಷೇತ್ರಗಳಿಗೆ ಆಯ್ದ ಕೇಂದ್ರ ಸಚಿವರು ಮತ್ತು ರಾಷ್ಟ್ರೀಯ ಪದಾಧಿಕಾರಿಗಳು ತಮಗೆ ನೀಡಲಾದ ಕ್ಷೇತ್ರದಲ್ಲಿ ನವೆಂಬರ್ 22-24ರವರೆಗೆ ಮೂರು ದಿನ ಕಾರ್ಪೆಟ್ ಬಾಂಬಿಂಗ್ ಸಭೆಗಳನ್ನು ನಡೆಸಿದ್ದಾರೆ. ಅಂದರೆ, ಮೊದಲಿಗೆ ಒಂದು ದೊಡ್ಡ ಸಭೆ, ನಂತರ ಅಲ್ಲಲ್ಲಿ ಸಣ್ಣಸಣ್ಣ ಸಭೆಗಳನ್ನು ಆಯೋಜಿಸಿ ಜನರನ್ನು ಬಿಜೆಪಿ ಕಡೆ ಸೆಳೆಯುವುದು. ಸದ್ಯ ಆನಂದ್ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿ ಹೊತ್ತಿರುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮೂರು ದಿನಗಳ ಕಾಲ ಸಿಎಂ ಭೂಪೇಂದ್ರ ಪಟೇಲ್ ಅವರ ಘಾಟ್ಲೋಡಿಯಾ ಕ್ಷೇತ್ರದಲ್ಲಿ ‘ಕಾರ್ಪೆಟ್ ಬಾಂಬ್’ ಹಾಕಿ ಬಂದಿದ್ದಾರೆ. ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಪಠಾಣ್ ಕ್ಷೇತ್ರದಲ್ಲೂ ಸಭೆ ನಡೆಸಿದ್ದಾರೆ. ವಾಸ್ತವದಲ್ಲಿ ‘ಕಾರ್ಪೆಂಟ್ ಬಾಂಬಿಂಗ್’ ಪದವನ್ನು ಯುದ್ಧಕಾಲದಲ್ಲಿ ಪ್ರಯೋಗಿಸಲಾಗುತ್ತದೆ. ಆಯ್ದ ಪ್ರದೇಶದ ಪ್ರತಿಯೊಂದು ಪ್ರತಿಯೊಂದು ಭಾಗಕ್ಕೂ ಹಾನಿಯನ್ನುಂಟು ಮಾಡುವುದು ಇದರ ಉದ್ದೇಶ.

    ಪಟೇಲರ ಹುಟ್ಟೂರಲ್ಲಿ ಬಿಜೆಪಿಯತ್ತ ಒಲವೇಕೆ?: ಗುಜರಾತ್ ಕಣ, ವಿಜಯವಾಣಿ ಪ್ರತ್ಯಕ್ಷ ಚಿತ್ರಣ..
    ನಡಿಯಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಂಕಜ್ ದೇಸಾಯಿ

    ಎನ್​ಆರ್​ಐಗಳೇ ಹೆಚ್ಚು

    ಅಹ್ಮದಾಬಾದ್ ಮತ್ತು ವಡೋಧರಾ ಮಧ್ಯದ ಖೇಡಾ ಮತ್ತು ಆನಂದ್ ಜಿಲ್ಲೆಗಳಲ್ಲಿ ಅನಿವಾಸಿ ಭಾರತೀಯ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಮೇಲ್ಮಧ್ಯಮ, ಸಿರಿವಂತ ವರ್ಗದ ಬಹುಪಾಲು ಕುಟುಂಬಗಳ ಸದಸ್ಯರು ವಿದೇಶದಲ್ಲಿದ್ದಾರೆ. ಅವರಲ್ಲಿ ಪಟೇಲ್ ಸಮುದಾಯದವರೇ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಖೇಡಾದ ನಡಿಯಾದ್, ಆನಂದ್ ಜಿಲ್ಲೆಯ ಧರ್ಮಜ್ ಪಟ್ಟಣಗಳಲ್ಲಿ (ಹಿಂದೆ ಸಣ್ಣ ಗ್ರಾಮಗಳಂತಿದ್ದವು) ದೊಡ್ಡ ದೊಡ್ಡ ಹವೇಲಿಗಳು ಕಾಣಸಿಗುತ್ತವೆ. ಈ ಹವೇಲಿಗಳ ಮಾಲೀಕರು ಅಮೆರಿಕ, ಕೆನಡಾ, ಬ್ರಿಟನ್…ಹೀಗೆ ಹಲವೆಡೆ ನೆಲೆಸಿದ್ದು, ಡಿಸೆಂಬರ್, ಜನವರಿಯ ಚಳಿಗಾಲದಲ್ಲಿ ಹುಟ್ಟೂರಿಗೆ ಬರುತ್ತಾರೆ. ಡಿಸೆಂಬರ್-ಜನವರಿಯಲ್ಲಿ ಮದುವೆ ಕಾರ್ಯಕ್ರಮಗಳಿರುವುದೂ ಒಂದು ಕಾರಣ. ಬಿಜೆಪಿಯ ಅನಿವಾಸಿ ಭಾರತೀಯ ಕೋಶ (ಎನ್​ಆರ್​ಐ ಸೆಲ್) ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವುದರಿಂದ ವಿದೇಶದಿಂದಲೇ ಇಲ್ಲಿನ ಗ್ರಾಮ, ಪಟ್ಟಣಗಳ ಪರಿಚಯಸ್ಥ ಮತದಾರರಿಗೆ ಎನ್​ಆರ್​ಐ ಸೆಲ್​ನಿಂದ ದೂರವಾಣಿ ಕರೆ ಮೂಲಕ ಬಿಜೆಪಿ ಬೆಂಬಲಿಸುವಂತೆ ಮನವೊಲಿಸಲಾಗುತ್ತದೆ ಎಂದು ನಡಿಯಾದ್ ನಿವಾಸಿ ಶಂಕರ್​ಭಾಯಿ ಪಟೇಲ್ ಹೇಳುತ್ತಾರೆ. ಸರ್ದಾರ್ ಪಟೇಲರ ಕುಟುಂಬಸ್ಥರೂ ಅಮೆರಿಕದಲ್ಲಿ ನೆಲೆಸಿದ್ದು, ಡಿಸೆಂಬರ್ ತಿಂಗಳಲ್ಲಿ ಬರುತ್ತಿರುತ್ತಾರೆ. ಆದರೆ, ರಾಜಕೀಯ, ರಾಜಕಾರಣಿಗಳಿಂದ ಸದಾ ದೂರ ಎನ್ನುತ್ತಾರೆ ಸರ್ದಾರರ ನಡಿಯಾದ್ ಮನೆಯ ಪಕ್ಕದ ನಿವಾಸಿ ಕಲ್ಪೇಶ್ ಚೌಹಾನ್. ಸರ್ದಾರರ ಸೋದರಮಾವ ದುಂಗರ್​ಭಾಯ್ ದೇಸಾಯಿಯವರ ಎರಡನೇ ಮಗನ ಹೆಸರು ದಿನುಭಾಯ್ ವಿಠಲ್​ಭಾಯ್ ದೇಸಾಯ್. ಸೂರತ್​ನಲ್ಲಿ ಜವಳಿ ಉದ್ಯಮಿಯಾಗಿರುವ ಅವರ ಪುತ್ರ ಪ್ರದೀಪ್ ಧಿನುಭಾಯ್ ಪಟೇಲ್, ನಡಿಯಾದ್ ಮನೆಗೆ ಆಗಾಗ ಭೇಟಿ ನೀಡಿ, ಮನೆ ಸುರಕ್ಷತೆ ಬಗ್ಗೆ ಎಚ್ಚರವಹಿಸುತ್ತಾರೆ. ‘ಸರ್ದಾರರು ಕಾಂಗ್ರೆಸ್ಸಿಗರಾಗಿದ್ದರೂ, ನಾನು ಬಿಜೆಪಿ ಬೆಂಬಲಿಗ’ ಎನ್ನುತ್ತಾರೆ ಪ್ರದೀಪ್ ಪಟೇಲ್. ಅವರ ಕುಟುಂಬಸ್ಥರಲ್ಲೂ ಹಲವರು ವಿದೇಶದಲ್ಲಿದ್ದಾರಂತೆ. ಪಂಜಾಬಿನ ಸರ್ದಾರ್ಜಿಗಳಂತೆ, ಗುಜರಾತ್​ನ ಈ ಭಾಗದ ಜನರೂ ಉದ್ಯೋಗಕ್ಕಾಗಿ ವಿದೇಶಗಳನ್ನು ಅರಸಿ, ಅಲ್ಲೇ ಸಿರಿವಂತ ಉದ್ಯಮಿಗಳಾಗಿ ಬದಲಾಗಿದ್ದಾರೆ.

    ಹೆಂಡ್ತಿ ಜತೆ ಜಗಳವಾಡಿ ಬಂದವನ ಕಂಡು ನಾಯಿ ಬೊಗಳಿತು; ಸಿಟ್ಟಾದ ಆತ ಅದರ ಒಡತಿಯನ್ನೇ ಕೊಂದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts