More

    ಅಧಿಕಾರಕ್ಕಾಗಿ ರಾಜಕಾರಣ ಮಾಡಲ್ಲ ; ಬಿಜೆಪಿ ಮುಖಂಡರ ಮನವಿ

    ರಾಮನಗರ: ನಗರಸಭೆ 4ನೇ ವಾರ್ಡಿನ ಉಪಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕ ಸಂಪಂಗಿ ಮತ್ತು ಇತರ ಮುಖಂಡರು ಬಿಜೆಪಿ ಅಭ್ಯರ್ಥಿ ಎಸ್. ಸವಿತಾ ಪರ ಮಂಗಳವಾರ ಪ್ರಚಾರ ನಡೆಸಿದರು.

    ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. ಏಪ್ರಿಲ್‌ನಲ್ಲಿ ನಡೆದ ಚುನಾವಣೆಯಲ್ಲೂ ಬಿಜೆಪಿ ನಿರೀಕ್ಷಿತ ಮತಗಳು ಲಭಿಸಲಿಲ್ಲ. ಆದರೂ ಪಕ್ಷದ ಕಾರ್ಯಕರ್ತರ ಉತ್ಸಾಹ ಕುಂದಿಲ್ಲ. ಅಧಿಕಾರಕ್ಕಾಗಿಯೇ ರಾಜಕಾರಣ ಮಾಡುವ ಜಾಯಮಾನ ಬಿಜೆಪಿಯದ್ದಲ್ಲ. ಸೇವೆ ಮತ್ತು ಅಭಿವೃದ್ಧಿಯೇ ಪಕ್ಷದ ಗುರಿಯಾಗಿದೆ. ಪಕ್ಷದ ಅಭ್ಯರ್ಥಿ ಗೆದ್ದರೆ ಅಭಿವೃದ್ಧಿಗೆ ಶ್ರಮಿಸಲು ಶಕ್ತಿ ಬಂದಂತಾಗುತ್ತದೆ. 7 ದಶಕಗಳ ಕಾಲ ನಾಡನ್ನು ಆಳಿದ ಕಾಂಗ್ರೆಸ್ ದಲಿತರನ್ನು ಕಾಲನಿ, ಸ್ಲಂಗಳಲ್ಲೇ ವಾಸಿಸುವಂತೆ ಮಾಡಿದೆ ಎಂದು ದೂರಿದರು.

    ಕಾಂಗ್ರೆಸ್ ನೆಹರು ಕಾಲದಿಂದ ಇಂದಿನ ರಾಹುಲ್‌ಗಾಂಧಿವರೆಗೂ ಗರೀಬಿ ಹಠಾವೋ ಎಂಬ ಸ್ಲೋಗನ್ ಮೊಳಗುತ್ತಲೇ ಇದೆ. ಇದು ಗರೀಬಿ ಹಠಾವೋ ಅಲ್ಲ, ಗರೀಬೋಂಕೋ ಹಟಾವೋ ಎಂಬುದು ಅದರ ಒಳ ಉದ್ದೇಶ. ಹೀಗಾಗಿ ದಲಿತರು ಇಂದು ಕಾಂಗ್ರೆಸ್ ಹಠಾವೋ ಮಾಡಲು ನಿರ್ಧರಿಸಿದ್ದಾರೆ ಎಂದರು.

    ದಲಿತರಿಗೆ ಬಿಜೆಪಿ ಹುಟ್ಟಿದ ಮನೆ: ಮಾಜಿ ಶಾಸಕ ವೈ. ಸಂಪಂಗಿ ಮಾತನಾಡಿ, ದಲಿತ ವಿರೋಧಿ ಎಂದು ಅನ್ಯಪಕ್ಷಗಳು ದಾರಿ ತಪ್ಪಿಸಿದ್ದರಿಂದ ದಲಿತ ಸಮುದಾಯಗಳು ಬಿಜೆಪಿಯಿಂದ ದೂರ ಉಳಿದಿದ್ದವು. ಆದರೆ, ಈಗ ಸತ್ಯದ ಅರಿವಾಗಿದೆ. ದಲಿತರಿಗೆ ಬಿಜೆಪಿ ಹುಟ್ಟಿದ ಮನೆಯಂತಿದೆ ಎಂದರು.

    ಸಿದ್ದರಾಮಯ್ಯ ಅವರಿಂದ ದಲಿತರ ಸರ್ವನಾಶ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್‌ನಲ್ಲಿ ದಲಿತರು ಬೆಳೆಯಲು ಅವಕಾಶ ಕೊಡಲಿಲ್ಲ. ಕೆ.ಎಚ್.ಮುನಿಯಪ್ಪ, ಶ್ರೀನಿವಾಸ್ ಪ್ರಸಾದ್, ಧ್ರುವನಾರಾಯಣ್, ಎಚ್.ಸಿ.ಮಹದೇವಪ್ಪ ಅವರನ್ನು ರಾಜಕೀಯವಾಗಿ ಮುಗಿಸುವ ಮೂಲಕ ಸಿದ್ದರಾಮಯ್ಯ ದಲಿತರನ್ನು ಸರ್ವನಾಶ ಮಾಡಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

    4ನೇ ವಾರ್ಡ್‌ನ ಅರ್ಭರ್ಥಿ ಎಸ್.ಸವಿತಾ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿ ದೇವರಾಜ್, ಪ್ರಾಧಿಕಾರ ಮಾಜಿ ಅಧ್ಯಕ್ಷ ಎಸ್.ಆರ್.ನಾಗರಾಜ್, ನಗರಸಭೆ ಮಾಜಿ ಸದಸ್ಯ ಬಿ.ನಾಗೇಶ್, ಪ್ರಧಾನ ಕಾರ್ಯದರ್ಶಿ ರುದ್ರದೇವರು, ಉಪಾಧ್ಯಕ್ಷ ಸುರೇಶ್, ನಗರ ಘಟಕದ ಅಧ್ಯಕ್ಷ ಪಿ. ಶಿವಾನಂದ, ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಪುಷ್ಪಲತಾ, ಜಿಲ್ಲಾ ಎಸ್ಸಿ ಮೊರ್ಚಾದ ಅಧ್ಯಕ್ಷ ಚಂದ್ರು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts