More

    ಬಿಜೆಪಿ ಅವಧಿಯಲ್ಲೇ ಮೇಕೆದಾಟು ಶತಃಸಿದ್ಧ: ಸಚಿವ ರಮೇಶ್ ಜಾರಕಿಹೊಳಿ ಭರವಸೆ

    ರಾಮನಗರ: ಬಿಜೆಪಿ ಸರ್ಕಾರದ ಅವಧಿಯಲ್ಲೇ ಮೇಕೆದಾಟು ಜಲಾಶಯ ನಿರ್ಮಾಣ ಆರಂಭವಾಗುವುದು ಶತಃಸಿದ್ಧ. ಕೇಂದ್ರ ಜಲ ಸಂಪನ್ಮೂಲ ಮತ್ತು ಅರಣ್ಯ ಸಚಿವರ ಜತೆ ಚರ್ಚಿಸಿ ಅತೀ ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.

    ಮೇಕೆದಾಟು ಯೋಜನೆ ಜಾರಿಗೆ ಗುರ್ತಿಸಿರುವ ಕನಕಪುರ ತಾಲೂಕು ಸಂಗಮ ಅರಣ್ಯ ಪ್ರದೇಶ ವ್ಯಾಪ್ತಿಯ ಒಂಟಿಗುಂಡು ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

    ನಂತರ ಸುದ್ದಿಗಾರರ ಜತೆ ಮಾತನಾಡಿ, ಜಲಾಶಯ ನಿರ್ಮಾಣದಿಂದ ಮಳೆಗಾಲದಲ್ಲಿ ಪೋಲಾಗುವ ನೀರನ್ನು ಸಂಗ್ರಹಿಸಿ ಬೆಂಗಳೂರು ನಗರ ಹಾಗೂ ಇತರ 6 ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಈ ಯೋಜನೆಗಿರುವ ಅಡೆತಡೆ ನಿವಾರಿಸಲು ವಿವಿಧ ಇಲಾಖೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದಷ್ಟು ಬೇಗ ಅಡೆತಡೆಗಳನ್ನು ನಿವಾರಿಸಿ ಜಲಾಶಯ ನಿರ್ಮಾಣಕ್ಕೆ ಅನುಮೋದನೆ ಪಡೆದುಕೊಳ್ಳಲಾಗುವುದು ಎಂದರು.

    ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಈ ಜಲಾಶಯ ನಿರ್ಮಾಣದಿಂದ ಕುಡಿಯಲು 4.75 ಟಿಎಂಸಿ ನೀರು ಬಳಕೆಯಾದರೆ, 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದಾದ್ದರಿಂದ ಸರ್ಕಾರ ಈ ಯೋಜನೆ ಜಾರಿಗೆ ಉತ್ಸುಕತೆ ತೋರಿದೆ ಎಂದರು.

    ಅನುಮಾನ ಬೇಡ: ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ಜನತೆಗೆ ಮುಂದಿನ 30 ವರ್ಷಗಳಿಗೆ ಕುಡಿಯುವ ನೀರು ಒದಗಿಸಲು ಸರ್ಕಾರ ಆಸಕ್ತಿ ಹೊಂದಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈ ಯೋಜನೆ ಸಂಬಂಧ ಹಿಂದಿನ ಸರ್ಕಾರಗಳು ತೆಗೆದುಕೊಂಡು ಕ್ರಮಗಳ ಬಗ್ಗೆ ಈಗ ಪ್ರಸ್ತಾಪಿಸುವುದು ಬೇಡ. ಬಿಎಸ್‌ವೈ ನೇತೃತ್ವದ ಸರ್ಕಾರದಲ್ಲಿ ಮೇಕೆದಾಟು ಯೋಜನೆ ಆರಂಭವಾಗುವುದರಲ್ಲಿ ಅನುಮಾನ ಬೇಕಿಲ್ಲ ಎಂದು ಯೋಜನೆ ಪ್ರಾರಂಭಕ್ಕೆ ಹಾದಿ ಸುಗಮವಾಗಿರಲಿದೆ ಎಂದು ತಿಳಿಸಿದರು.

    ಮನವಿ: ಕನಕಪುರಕ್ಕೆ ಆಗಮಿಸಿದ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಮೇಕೆದಾಟು ಹೋರಾಟ ಸಮಿತಿ, ರೈತಸಂಘ, ಧಮ್ಮದೀವಿಗೆ ಚಾರಿಟಬಲ್ ಟ್ರಸ್ಟ್ ಮತ್ತಿತರ ಸಂಘಟನೆಗಳ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

    ಎಂಎಲ್ಸಿ ಸಿ.ಪಿ. ಯೋಗೀಶ್ವರ್, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ತಾಲೂಕು ಅಧ್ಯಕ್ಷ ವೆಂಕಟೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಂದಿನಿಗೌಡ, ಮುಖಂಡರಾದ ಆನಂದಪೈ, ಮಾಜಿ ಅಧ್ಯಕ್ಷ ಏಳಗಳ್ಳಿ ಶಿವರಾಂ ಹಾಗೂ ಅಧಿಕಾರಿಗಳು ಇದ್ದರು.

    ಕೇಂದ್ರ ಸಚಿವರ ಭೇಟಿ: ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಈಗಾಗಲೇ 9 ಸಾವಿರ ಕೋಟಿ ರೂ. ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಈಗಾಗಲೇ ಕೇಂದ್ರ ಜಲಶಕ್ತಿ ಸಚಿವಾಲಯ ಅನುಮತಿ ನೀಡಿದ್ದು, ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿಗಾಗಿ ಒತ್ತಡ ಹೇರಲು ಗುರುವಾರ ಕೇಂದ್ರ ಸಚಿವರನ್ನು ಭೇಟಿ ಮಾಡುತ್ತಿದ್ದೇವೆ. ಅಂದು ಮುಖ್ಯಮಂತ್ರಿಗಳು ಸಹ ದೆಹಲಿಗೆ ಬರುವುದರಿಂದ ಅವರೂ ಕೂಡ ಸಚಿವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಮುಂದಿನ ವರ್ಷ ತಮಿಳುನಾಡಿನಲ್ಲಿ ಚುನಾವಣೆ ಇರುವುದರಿಂದ ಕಾವೇರಿಯನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳುತ್ತಾರೆ. ಆದರೆ ಯೋಜನೆ ಜಾರಿಯಿಂದ ತಮಿಳುನಾಡು ಪಾಲಿನ 175 ಟಿಎಂಸಿ ನೀರಿಗೆ ಯಾವುದೇ ಧಕ್ಕೆಯಾಗದು. ಅಗತ್ಯ ಬಿದ್ದರೆ ತಮಿಳುನಾಡಿನೊಂದಿಗೆ ಮಾತನಾಡಲೂ ಸಿದ್ಧ ಎಂದು ಜಾರಕಿಹೊಳಿ ತಿಳಿಸಿದರು.

    ತುಟಿ ಬಿಚ್ಚದ ಸಿಪಿವೈ: ಸಚಿವ ರಮೇಶ್ ಜಾರಕಿಹೊಳಿ ಜತೆಯಲ್ಲಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೀಶ್ವರ್ ಯಾರ ಬಳಿಯೂ, ಯಾವುದೇ ವಿಷಯ ಪ್ರಸ್ತಾವನೆ ಮಾಡದೇ ಮೌನ ವಹಿಸಿದ್ದುದು ಕಾರ್ಯಕರ್ತರಲ್ಲಿ ಮತ್ತು ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿತು.

    ಡಿಕೆ ಸಹೋದರರು ಇಲ್ಲ: ರಮೇಶ್ ಜಾರಕಿಹೊಳಿ ಅವರಿಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೂ ರಾಜಕೀಯ ವಿರೋಧವಿದೆ. ಜಲ ಸಂಪನ್ಮೂಲ ಸಚಿವರು ಡಿ.ಕೆ. ಶಿವಕುಮಾರ್ ಅವರ ಕ್ಷೇತ್ರಕ್ಕೆ ಭೇಟಿ ನೀಡಿದ್ದ ವೇಳೆ ಡಿ.ಕೆ. ಶಿವಕುಮಾರ್ ಹೋಂ ಕ್ವಾರಂಟೈನ್ ಆಗಿ ಬೆಂಗಳೂರಿನಲ್ಲಿಯೇ ಉಳಿದಿದ್ದರೆ, ಸಂಸದ ಸುರೇಶ್ ಸಂಸತ್ ಕಲಾಪದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಹಾರಿದ್ದರು. ವಿರ್ಪಯಾಸವೆಂದರೆ ಸಚಿವರ ಪ್ರವಾಸ ಸಂಬಂಧ ಸಚಿವರ ಕಚೇರಿಯಿಂದ ಯಾವುದೇ ಮಾಹಿತಿ ಸಂಸದರಿಗೆ ಇರಲಿಲ್ಲ. ನೀರಾವರಿ ಇಲಾಖೆ ಅಧಿಕಾರಿಗಳು ಮಾತ್ರ ಈ ಬಗ್ಗೆ ಮಾಹಿತಿ ನೀಡಿದ್ದರು.

    ಅಧಿಕಾರಿಗಳ ಸಭೆಯೂ ಇಲ್ಲ: ಮೇಕೆದಾಟು ಸ್ಥಳ ಪರಿಶೀಲನೆ ಕಾರ್ಯಕ್ರಮ ಪಟ್ಟಿಯಲ್ಲಿ ಅಧಿಕಾರಿಗಳ ಸಭೆ ನಡೆಸುವುದಾಗಿ ತಿಳಿಸಲಾಗಿತ್ತು. ಆದರೆ, ಪರಿಶೀಲನೆ ನಂತರ ಕಾರಿನಲ್ಲಿಯೇ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ 2 ನಿಮಿಷ ಮಾತುಕತೆ ನಡೆಸಿದ ಸಚಿವ ರಮೇಶ್ ಜಾರಕಿಹೊಳಿ ಬೆಂಗಳೂರು ಕಡೆಗೆ ಮುಖ ಮಾಡಿದರು.

    ಅಧಿಕಾರಿಗಳು ಇಲ್ಲ: ಜಿಲ್ಲೆಯಲ್ಲಿ ಜಾರಿಯಾಗಲಿರುವ ಮಹತ್ವದ ಯೋಜನೆ ಸ್ಥಳ ಪರಿಶೀಲನೆಗೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಬಂದಾಗ, ಜಿಲ್ಲಾಡಳಿತದ ಪ್ರಮುಖರ‌್ಯಾರೂ ಕಾಣಿಸಲೇ ಇಲ್ಲ. ಜಿಲ್ಲಾಧಿಕಾರಿ, ಜಿಪಂ ಸಿಇಒ, ಜಿಲ್ಲಾ ಪೊಲೀಸ್ ಬಂದಿರಲಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳು, ಕಾವೇರಿ ವನ್ಯಜೀವಿ ಧಾಮದ ಅಧಿಕಾರಿಗಳ ಸಂಖ್ಯೆಯೂ ವಿರಳವಾಗಿತ್ತು. ಆದರೆ ಎಲ್ಲರಿಗಿಂತಲೂ ಹೆಚ್ಚು ಕಂಡು ಬಂದದ್ದು ಬಿಜೆಪಿ ಕಾರ್ಯಕರ್ತರು ಮಾತ್ರ.

     

    ಹಿಂದಿನ ಸಮ್ಮಿಶ್ರ ಸರ್ಕಾರವೇ ಮೇಕೆದಾಟು ಯೋಜನೆ ಸಂಬಂಧ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿದೆ. ಪರಿಶೀಲನೆಗಿಂತ ದೆಹಲಿಯಲ್ಲಿ ಕುಳಿತು ಇಲಾಖೆಗಳಿಂದ ಅನುಮತಿ ಪಡೆಯುವ ನಿಟ್ಟಿನಲ್ಲಿ ಸಚಿವರು ಮತ್ತು ಈಗಿನ ಸರ್ಕಾರ ಪ್ರಯತ್ನ ಮಾಡಲಿ. ಎರಡೂ ಕಡೆ ಬಿಜೆಪಿಯದ್ದೇ ಸರ್ಕಾರವಿದೆ. ಇದರ ಲಾಭ ಪಡೆದು ಯೋಜನೆ ಜಾರಿಗೊಳಿಸಲಿ.
    ಡಿ.ಕೆ. ಸುರೇಶ್ ಸಂಸದ, ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts