More

    ಕಾಡು ಸೇರಬಹುದೇ ಎರಡನೇ ಕಾಡುಕೋಣ?

    ಮಂಗಳೂರು: ನಗರಕ್ಕೆ ಬಂದಿದ್ದ ಎರಡು ಕಾಡುಕೋಣಗಳ ಪೈಕಿ ಒಂದನ್ನು ಹಿಡಿದರೂ ಮೃತಪಟ್ಟ ಹಿನ್ನೆಲೆಯಲ್ಲಿ ಇನ್ನೊಂದು ಕಾಡುಕೋಣವನ್ನು ನಗರದಿಂದ ಸಹಜವಾಗಿಯೇ ಬಜ್ಪೆ ಕಡೆಯ ಅರಣ್ಯ ಭಾಗದತ್ತ ಕಳುಹಿಸಲು ಅರಣ್ಯ ಇಲಾಖೆ ಮುಂದಾಗಿದೆ.

    ಬುಧವಾರ ಸಾಯಂಕಾಲ ಕೂಳೂರಿನಲ್ಲಿ ಫಲ್ಗುಣಿ ನದಿ ದಾಟಿರುವ ಕೋಣ ಪಣಂಬೂರು ಭಾಗದಲ್ಲಿ ವಿಶ್ರಾಂತಿ ಪಡೆಯುತ್ತಿತ್ತು. ಅಲ್ಲಿಂದ ಮುಂದಕ್ಕೆ ಓಡಿಸಿ ಜೋಕಟ್ಟೆ ಮೂಲಕ ಬಜ್ಪೆ, ತೋಕೂರು ಭಾಗದ ಕಾಡಿಗೆ ಅಟ್ಟುವ ಉದ್ದೇಶವನ್ನು ಅರಣ್ಯ ಇಲಾಖೆ ಹೊಂದಿದೆ.

    ಮಂಗಳವಾರ ತಡರಾತ್ರಿ ಅಶೋಕನಗರ ಬಳಿ ಕಾಣಿಸಿಕೊಂಡಿದ್ದ ಕಾಡುಕೋಣ ಬುಧವಾರ ಬೆಳಗ್ಗೆ ಕೋಡಿಕಲ್ ಬಳಿ ಒಮ್ಮೆ ಪ್ರತ್ಯಕ್ಷವಾಗಿ ತಪ್ಪಿಸಿಕೊಂಡಿತ್ತು. ಪತ್ತೆಗಾಗಿ ಅರಣ್ಯ ಇಲಾಖೆ ತಂಡಗಳನ್ನು ರಚಿಸಿ ನಗರದ ವಿವಿಧೆಡೆ ಹುಡುಕಾಟ ನಡೆಸಿತು. ಮಧ್ಯಾಹ್ನ 2 ಗಂಟೆ ವೇಳೆಗೆ ಕೂಳೂರು ರಾಷ್ಟ್ರೀಯ ಹೆದ್ದಾರಿ ಸೇತುವೆ ಬಳಿ ಅರಣ್ಯ ಇಲಾಖೆ ಸಿಬ್ಬಂದಿಗೆ ಕಾಣಸಿಕ್ಕಿದೆ. ಫಲ್ಗುಣಿ ನದಿಯಲ್ಲಿ ಕೂಳೂರು ಕಡೆಯಿಂದ ಪಣಂಬೂರು ಕಡೆಗೆ ಈಜುತ್ತಾ ದಾಟಿ ಹೋಗಿದೆ. ಮತ್ತೆ ನಗರಕ್ಕೆ ಪ್ರವೇಶಿಸದಂತೆ ತಡೆಯುವ ಪ್ರಯತ್ನ ಇಲಾಖೆಯದ್ದಾಗಿದೆ.

    ಅರಣ್ಯ ಇಲಾಖೆ ವಿರುದ್ಧ ದೂರು
    ಎರಡು ಕಾಡುಕೋಣಗಳ ಪೈಕಿ ಒಂದು ಕೋಣ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ವಿರುದ್ಧ ಪ್ರಾಣಿ ಪ್ರಿಯರು, ಸಾರ್ವಜನಿರು, ಪರಿಸರ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಹೋರಾಟಗಾರ ಜೆರಾರ್ಡ್‌ ಟವರ್ಸ್‌ ಎಂಬುವರು, ಅರಣ್ಯ ಇಲಾಖೆ ಬೇಜವಾಬ್ದಾರಿಯಿಂದ ಕಾಡುಕೋಣ ಸಾವನ್ನಪ್ಪಿದೆ. ಅದನ್ನು ಸೆರೆಹಿಡಿಯಲು ಇಲಾಖೆ ಅವೈಜ್ಞಾನಿಕ ಮಾರ್ಗವನ್ನು ಅನುಸರಿಸಿತ್ತು. ಟ್ರಾಂಕ್ವಿಲೈಸರ್ ಡೋಸ್ ಹೆಚ್ಚಾಗಿರುವುದು, ಮೈಮೇಲೆ ಇದ್ದ ಗಾಯಗಳು ಇಲಾಖೆಯ ಬೇಜವಾಬ್ದಾರಿಯನ್ನು ತೋರಿಸುತ್ತದೆ ಎಂದು ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಆಮ್ಲಜನಕ ಪೂರೈಕೆ ಕಡಿಮೆಯಾಗಿ ಸಾವು?
    ಕಾಡುಕೋಣ ಗುಂಪಿನಿಂದ ಬೇರೆಯಾದ ಒತ್ತಡ ಮತ್ತು ಒಂಟಿಯಾಗಿದ್ದುದರಿಂದ ಬೆದರಿದ್ದು, ಅರ್ಧದಿನ ಓಡಾಟ ನಡೆಸಿ ಸುಸ್ತಾಗಿರುವುದರಿಂದ ಹೃದಯಕ್ಕೆ ಆಮ್ಲಜನಕ ಪೂರೈಕೆ ಕಡಿಮೆಯಾಗಿ ಮೃತಪಟ್ಟಿರಬಹುದು ಎಂದು ಪಿಲಿಕುಳ ಜೈವಿಕ ಉದ್ಯಾನವನದ ಹಿರಿಯ ವೈಜ್ಞಾನಿಕ ಅಧಿಕಾರಿ ವಿಕ್ರಮ್ ಅಭಿಪ್ರಾಯಪಟ್ಟಿದ್ದಾರೆ. ವನ್ಯಜೀವಿಗಳಿಗೆ ಅವುಗಳ ದೇಹತೂಕದ ಆಧಾರದಲ್ಲಿ ಅರಿವಳಿಕೆ ಮದ್ದನ್ನು ನೀಡಲಾಗುತ್ತದೆ. ಡೋಸ್ ಕಡಿಮೆಯಾದರೆ ಪ್ರಾಣಿ ಪ್ರಜ್ಞೆ ತಪ್ಪದು ಹಾಗೂ ಹೆಚ್ಚಾದರೆ ಅದು ಸಹಜ ಸ್ಥಿತಿಗೆ ಬರಲು ತುಂಬಾ ಸಮಯವಾಗುತ್ತದೆ. ಇನ್ನು ಪ್ರಾಣಿ ಸಹಜ ಸ್ಥಿತಿಗೆ ಬಂದ ನಂತರ ಮೈಮೇಲೆ ನೀರು ಸಿಂಪಡಿಸುವುದು, ಕುಡಿಯಲು ನೀರು ಕೊಡುವುದು ರೂಢಿ. ಈ ಪ್ರಕರಣದಲ್ಲಿ ಅಂತಹ ಕ್ರಮ ಪಾಲಿಸಲು ಸಾಧ್ಯವಿರಲಿಲ್ಲ. ಅರಿವಳಿಕೆ ನೀಡಿದ ನಂತರ ಸಾಗಾಟ ಆರಂಭಿಸುವ ವೇಳೆ ಉಸಿರಾಟ ಸರಿಯಾಗಿತ್ತು ಎನ್ನುತ್ತಾರೆ.

    ಮರಣೋತ್ತರ ವರದಿ ನಾಳೆ
    ಮಂಗಳವಾರ ಮೃತಪಟ್ಟ ಕಾಡುಕೋಣದ ಪೋಸ್ಟ್‌ಮಾರ್ಟಂ ಚಾರ್ಮಾಡಿ ಬಳಿಯ ಅರಣ್ಯ ಇಲಾಖೆ ನರ್ಸರಿಯಲ್ಲಿ ನಡೆಸಲಾಗಿದ್ದು, ಬಳಿಕ ಕಳೇಬರದ ದಹನ ಪ್ರಕ್ರಿಯೆ ಕಲ್ಮಂಜ ಗ್ರಾಮದ ನಿಡಿಗಲ್ ಅರಣ್ಯದಲ್ಲಿ ನಡೆಸಲಾಯಿತು. ಶುಕ್ರವಾರ ವರದಿ ಸಿಗಲಿದೆ ಎಂದು ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಕರಿಕಾಳನ್ ವಿಜಯವಾಣಿಗೆ ತಿಳಿಸಿದ್ದಾರೆ.

    ಕಾಡುಕೋಣವನ್ನು ಹಿಡಿಯುವ ಬದಲು ನಗರದಿಂದ ಹೊರಕ್ಕೆ ಓಡಿಸುವ ಪ್ರಯತ್ನ ಅರಣ್ಯ ಇಲಾಖೆ ನಡೆಸುತ್ತಿದೆ. ಇದರಲ್ಲಿ ಸ್ವಲ್ಪ ಯಶಸ್ಸು ಸಾಧಿಸಿದ್ದು, ಕೂಳೂರು ಸೇತುವೆ ದಾಟಿದೆ. ಅಲ್ಲಿಂದ ಮುಂದಕ್ಕೆ ಜೋಕಟ್ಟೆಯಾಗಿ ತೋಕೂರು ಅಥವಾ ಬಜ್ಪೆ ಕಡೆ ಅಟ್ಟಲು ಉದ್ದೇಶಿಸಲಾಗಿದೆ.
    ಶ್ರೀಧರ್, ವಲಯ ಅರಣ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts