More

    ಕಾಡುಕೋಣ ನಗರದಿಂದ ದೂರ

    ಮಂಗಳೂರು: ನಗರಕ್ಕೆ ಬಂದು ಜನರ ಆತಂಕಕ್ಕೆ ಕಾರಣವಾಗುವ ಜತೆಗೆ ತಾನೇ ಸ್ವತಃ ದಿಗಿಲುಗೊಂಡಿದ್ದ ಎರಡನೇ ಕಾಡುಕೋಣವನ್ನು ಕಾಡಂಚಿಗೆ ತಲುಪಿಸುವ ಪ್ರಯತ್ನ ಅರಣ್ಯ ಇಲಾಖೆಯಿಂದ ನಡೆಯುತ್ತಿದೆ.
    ಕೂಳೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಕೋಣ ಗುರುವಾರ ಮುಂಜಾನೆ 5.30ರ ವೇಳೆಗೆ ಎಂಸಿಎಫ್ ಸಂಸ್ಥೆಯ ಹಿಂಭಾಗದಲ್ಲಿರುವ ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆ ಪಕ್ಕದಲ್ಲಿರುವ ಎನ್‌ಎಂಪಿಟಿಗೆ ಸೇರಿದ ಜೋಕಟ್ಟೆ ಸಮೀಪದ ಕಾಂಡ್ಲಾ ಕಾಡುಗಳಿಂದ ತುಂಬಿರುವ ಜಾಗಕ್ಕೆ ತಲುಪಿದೆ. ಬೆಳಗ್ಗೆ 7 ಗಂಟೆಗೆ ರಸ್ತೆಗಳಲ್ಲಿ ಜನ ಸಂಚಾರ ಆರಂಭವಾದ್ದರಿಂದ ಓಡಿಸುವ ಪ್ರಯತ್ನ ಮಾಡದೆ ವಿಶ್ರಾಂತಿ ಪಡೆಯಲು ಬಿಟ್ಟು, ಅದರ ಮೇಲೆ ಕಣ್ಣಿಡಲು ಹಾಗೂ ವಾಪಸ್ ಬಾರದಂತೆ ಇಲಾಖಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ರಾತ್ರಿ ವೇಳೆ ಮತ್ತೆ ಕಾರ್ಯಾಚರಣೆ ನಡೆಸಿ ಅಲ್ಲಿಂದ ಮುಂದಕ್ಕೆ ತೋಕೂರು ಕಡೆಗೆ ಕಳುಹಿಸುವ ಪ್ರಯತ್ನ ಇಲಾಖೆ ಸಿಬ್ಬಂದಿಯಿಂದ ನಡೆದಿದೆ.
    ತೋಕೂರು ಕಾಡು, ಬಯಲು, ಕುರುಚಲು ಪೊದೆಗಳಿಂದ ಕೂಡಿದ ಪ್ರದೇಶವಾಗಿದ್ದು, ಕೋಣ ತಾನಾಗಿಯೇ ಮುಂದಕ್ಕೆ ಹೋಗುವ ಸಾಧ್ಯತೆಯಿದೆ. ಕೋಣ ಹಾದು ಹೋಗಿರುವ ಕೆಲವು ಜಾಗಗಳಲ್ಲಿ ಕ್ಯಾಮರಾ ಆಳವಡಿಸಲು ಉದ್ದೇಶಿಸಲಾಗಿದೆ. ಕೋಣ ಸುರಕ್ಷಿತ ಪ್ರದೇಶ ಸೇರುವಂತೆ ನೋಡಿಕೊಳ್ಳಲಾಗುವುದು ಎಂದು ವಲಯ ಅರಣ್ಯ ಅಧಿಕಾರಿ ಶ್ರೀಧರ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ದಾರಿತಪ್ಪಿ ಮಂಗಳವಾರ ನಗರಕ್ಕೆ ಬಂದಿದ್ದ ಎರಡು ಕಾಡುಕೋಣಗಳ ಪೈಕಿ ಒಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದು ಚಾರ್ಮಾಡಿ ಬಳಿ ಕಾಡಿಗೆ ಬಿಡುವ ಪ್ರಯತ್ನ ಮಾಡಿದರೂ, ವಿಫಲವಾಗಿ ಅದು ಮೃತಪಟ್ಟಿತ್ತು. ಇದರಿಂದ ಎಚ್ಚೆತ್ತ ಇಲಾಖೆ ಈ ಕೋಣವನ್ನು ಹಿಡಿಯುವ ಬದಲು ಅದರಷ್ಟಕ್ಕೇ ಕಾಡಿನತ್ತ ಹೋಗುವಂತೆ ಮಾಡುವ ಕಾರ್ಯಾಚರಣೆ ನಡೆಸುತ್ತಿದೆ.

    ಬಜ್ಪೆ ಕಡೆಯಿಂದ ಬಂದಿರಬಹುದು: ಬಡಗ ಎಕ್ಕಾರು, ಬಜ್ಪೆ ಭಾಗದಲ್ಲಿ ಕಾಡುಕೋಣ, ಕಾಡೆಮ್ಮೆಗಳಿದ್ದು, ಸಾರ್ವಜನಿಕರಿಗೆ ಕಾಣಿಸಿಕೊಂಡಿರುವ ಕುರಿತು ಕರೆಗಳು ಬರುತ್ತವೆ. ಗುಡ್ಡಗಾಡು ಪ್ರದೇಶವಾಗಿರುವುದರಿಂದ ಯಾವುದೇ ಅಳುಕಿಲ್ಲದೆ ಅವುಗಳು ಅಲ್ಲಿ ವಾಸವಿದ್ದು, ಅಲ್ಲಿಂದಲೇ ದಾರಿತಪ್ಪಿ ನಗರಕ್ಕೆ ಬಂದಿರುವ ಸಾಧ್ಯತೆಯಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts