More

    ಮಾಗಡಿಯಲ್ಲಿ ವಿದೇಶಿ ಅತಿಥಿಗಳ ಕಲರವ

    ಶಿರಹಟ್ಟಿ: ಆಕಾಶದತ್ತ ಕಣ್ಣು ಹಾಯಿಸಿದರೆ ರಫೇಲ್ ಯುದ್ಧ ವಿಮಾನಗಳು ಶಿಸ್ತಿನಿಂದ ಸಾಗುತ್ತಿವೆಯೇನೋ ಎನ್ನುವ ಭಾವ. ನೀರಿನತ್ತ ದೃಷ್ಟಿ ನೆಟ್ಟರೆ ಬಣ್ಣ-ಬಣ್ಣದ ಜಲಚರಗಳ ಚೆಲ್ಲಾಟದ ನೋಟ. ಮಗುವಿನಂತೆ ಮೆಲ್ಲಮೆಲ್ಲನೆ ನಡೆಯುವ ಹಂಸ ಜಾತಿ ಪಕ್ಷಿಗಳು. ಮೇಲಿಂದ ಸರ್ರನೆ ಹಾರಿ ಹಾರಿ ಬರುವ ಹೆಬ್ಬಾತುಗಳು. ಹೊಂಚು ಹಾಕಿ ಗಕ್ಕನೆ ಮೀನು ನುಂಗುವ ಕೊಕ್ಕರೆಗಳು. ಹಿಂಡು ಹಿಂಡಾಗಿ ಶಿಸ್ತಿನ ಸಿಪಾಯಿಗಳಂತೆ ಸಾಗುವ ಬಾತುಕೋಳಿ.

    ಇದು ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಯಲ್ಲಿ ಸೃಷ್ಟಿಯಾಗಿರುವ ಪಕ್ಷಿಗಳ ಲೋಕದ ಸುಂದರ ದೃಶ್ಯ ವೈಭವ. ಅಂಡಮಾನ್, ಟಿಬೆಟ್, ಲಡಾಕ್, ನೇಪಾಳ, ಮಂಗೋಲಿಯಾ, ಬಾಂಗ್ಲಾದೇಶ, ಹಿಮಾಲಯ ಸೇರಿದಂತೆ ದೂರದ ಪ್ರದೇಶದಿಂದ ಹಾರಿ ಬಂದ ವಿಭಿನ್ನ ಜಾತಿಯ ಹಕ್ಕಿಗಳು ಬಾನಾಡಿಪ್ರಿಯರ ಮನತಣಿಸುತ್ತಿವೆ.

    ಬಾರ್​ಹೆಡೆಡ್ ಗೀಸ್ (ಪಟ್ಟೆ ತಲೆಯ ಬಾತುಕೋಳಿಗಳು), ಪೇಂಟೆಡ್ ಸ್ಟ್ಪಾರ್ಕ್ (ಬಣ್ಣಬಣ್ಣದ ಕೊಕ್ಕರೆಗಳು), ಗ್ಯಾಡವಾಲ್, ಇಬೀಸ್ (ಕೆಂಬರಲು), ಬ್ಲಾಕ್ ನೆಕ್, ಸ್ಪಾಟ್​ಬಿಲ್, ಸ್ಕಾಪ್​ಡಕ್ ಮೊದಲಾದ ಹಂಸಗಳ ಜಾತಿಗೆ ಸೇರಿದ ಬಗೆ ಬಗೆಯ ಪಕ್ಷಿಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಇವುಗಳ ಜಲಕ್ರೀಡೆ, ಮೇಲಿಂದ ಕೆಳಗೆ ಧುಮುಕುವ ನೋಟ, ಇತರೆ ಹಕ್ಕಿಗಳ ಜತೆಗಿನ ಚೆಲ್ಲಾಟ, ಕಿತ್ತಾಟ ನೋಡುವುದೇ ನಯನ ಮನೋಹರ. ಈ ಸೊಬಗನ್ನು ಕಣ್ತುಂಬಿಸಿಕೊಳ್ಳಲೆಂದೇ ರಾಜ್ಯದ ವಿವಿಧ ಜಿಲ್ಲೆಗಳ ಹಾಗೂ ಹೊರ ರಾಜ್ಯಗಳಿಂದ ಪ್ರವಾಸಿಗರ ದಂಡು ಮಾಗಡಿ ಕೆರೆಗೆ ಲಗ್ಗೆ ಇಡುತ್ತಿದೆ.

    ಪಕ್ಷಿ ತಜ್ಷರು, ಪಕ್ಷಿ ಪ್ರೇಮಿಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು, ವಿಶೇಷವಾಗಿ ಪುಟಾಣಿಗಳು ತಮ್ಮ ಪಾಲಕರೊಂದಿಗೆ ಆಗಮಿಸಿ ಕೆರೆ ಪಕ್ಕದ ಪಕ್ಷಿ ವೀಕ್ಷಣೆ ಗೋಪುರದಲ್ಲಿ ನಿಂತು ಪಕ್ಷಿಗಳ ವಿಹಂಗಮ ನೋಟವನ್ನು ಕಣ್ತುಂಬಿ ಆನಂದಿಸುತ್ತಿದ್ದಾರೆ.

    ಗದಗನಿಂದ 26 ಕಿ.ಮೀ., ಲಕ್ಷ್ಮೇಶ್ವರದಿಂದ 12 ಕಿ.ಮೀ. ಹಾಗೂ ಶಿರಹಟ್ಟಿಯಿಂದ ಕೇವಲ 6 ಕಿ.ಮೀ. ದೂರದಲ್ಲಿರುವ ಉತ್ತರ ಕರ್ನಾಟಕದ ಪ್ರಸಿದ್ಧ ಪಕ್ಷಿಧಾಮ ಮಾಗಡಿ ಕೆರೆ ಸುಮಾರು 134 ಎಕರೆ ವಿಸ್ತೀರ್ಣ ಹೊಂದಿದೆ. ಚಳಿಗಾಲ ಆರಂಭದೊಂದಿಗೆ ಸಾವಿರಾರು ಕಿಮೀ ದೂರ ಕ್ರಮಿಸಿ ನವೆಂಬರ್​ನಲ್ಲಿ ವಲಸೆ ಬರುವ ಹಕ್ಕಿಗಳು ಮಾರ್ಚ್​ವರೆಗೆ ಇಲ್ಲಿಯೇ ಇದ್ದು ಸಂಭ್ರಮಿಸುತ್ತವೆ. ಬಿಸಿಲ ಬೇಗೆ ಶುರುವಾಗುತ್ತಿದ್ದಂತೆಯೇ ಮರಳಿ ತಮ್ಮೂರಿನತ್ತ ಹಾರುತ್ತವೆ. ಈ ವರ್ಷ ಮುಂಗಾರು ಮಳೆ ಸಮೃದ್ಧವಾಗಿರುವುದರಿಂದ ಕೆರೆ ಮೈದುಂಬಿಕೊಂಡಿದ್ದು ಜಲಾಶಯದಂತೆ ಗೋಚರಿಸುತ್ತಿದೆ. ಹೀಗಾಗಿ, ದೂರದ ಅತಿಥಿಗಳ ಸಂತಸ ಇಮ್ಮಡಿಗೊಳಿಸಿದೆ. ವಿಶಾಲ ಕೆರೆಯಲ್ಲಿ ಜಲಕ್ರೀಡೆಯಲ್ಲಿ ತೊಡಗುವ ಪಕ್ಷಿಗಳು ಸುತ್ತಲಿನ ಹೊಲಗಳಿಗೆ ದಾಂಗುಡಿ ಇಟ್ಟು ಭತ್ತ, ಶೇಂಗಾ, ಕಡಲೆ, ಮತ್ತಿತರ ಧಾನ್ಯಗಳನ್ನು ತಿಂದು ಸಂಭ್ರಮಿಸುತ್ತವೆ.

    ಕೆರೆ ಅಭಿವೃದ್ಧಿಯಿಂದ ಪಕ್ಷಿಧಾಮಕ್ಕೆ ಮೆರುಗು: ಸುಮಾರು ಒಂದೂವರೆ ಕೋಟಿ ರೂಪಾಯಿ ಅನುದಾನದಲ್ಲಿ ಕೆರೆ ಅಭಿವೃದ್ಧಿಪಡಿಸಿರುವುದರಿಂದ ವಲಸೆ ಪಕ್ಷಿಗಳಿಗೆ ಹೆಚ್ಚು ಅನುಕೂಲವಾಗಿದೆ. ಕೆರೆ ಸುತ್ತಲೂ ಕಲ್ಲು ಪಿಚ್ಚಿಂಗ್ ಅಳವಡಿಕೆ, ಪಕ್ಷಿ ವೀಕ್ಷಣೆ ಗೋಪುರ ನಿರ್ವಣ, ಪಾದಚಾರಿ ಮಾರ್ಗ ನಿರ್ಮಾಣ ಮುಂತಾದ ಅಭಿವೃದ್ಧಿ ಕಾರ್ಯಗಳು ಪಕ್ಷಿಧಾಮಕ್ಕೆ ಮೆರುಗು ನೀಡಿವೆ. ಈ ವರ್ಷ ಕೆರೆ ಸಂರಕ್ಷಣೆ ಹಾಗೂ ರೋಗಭಾದೆಯಿಂದ ಬಳಲುವ ಪಕ್ಷಿಗಳ ರಕ್ಷಣೆಗೆ ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯ ಸಿಬ್ಬಂದಿ ಹಾಗೂ ವಾಚ್​ವುನ್ ನೇಮಿಸಿದ್ದಾರೆ. ಹೀಗಗಿ, ಪಕ್ಷಿ ವೀಕ್ಷಿಸಲು ಆಗಮಿಸುವ ಸಾರ್ವಜನಿಕರಿಗೆ ಅವರಿಂದ ಮಾಹಿತಿ ದೊರೆಯುತ್ತಿದೆ.

    ಒತ್ತುವರಿಯಾದ ಕೆರೆಯನ್ನು ಸಮೀಕ್ಷೆ ಮಾಡಿದರೆ ಸುತ್ತಲೂ 50-60 ಅಡಿ ಸ್ಥಳ ಕೆರೆಗೆ ಸಿಗುತ್ತದೆ. ಆಗ ಬಾಂಡರಿ ಫಿಕ್ಸ್ ಮಾಡಿ ಪ್ರತಿ ವರ್ಷ ಪಕ್ಷಿ ವೀಕ್ಷಿಸಲು ಆಗಮಿಸುವ ಸಾರ್ವಜನಿಕರ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಬೇಕು. ಸುತ್ತಲೂ ಬೆಂಚ್ ವ್ಯವಸ್ಥೆ, ಶುದ್ಧ ನೀರಿನ ಘಟಕ, ಕ್ಯಾಂಟೀನ್ ಇತ್ಯಾದಿ ಸೌಲಭ್ಯ ಒದಗಿಸಬೇಕು. ಈ ಕುರಿತು ಸಂಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ಗಮನ ಸೆಳೆದರೂ ಸೂಕ್ತ ಕ್ರಮಕ್ಕೆ ಮುಂದಾಗದಿರುವುದು ಬೇಸರದ ಸಂಗತಿಯಾಗಿದೆ. ಈ ಭಾಗದ ಪ್ರಸಿದ್ಧ ಪಕ್ಷಿಧಾಮವಾಗಿ ಗುರುತಿಸಬೇಕಾದರೆ ಅಧಿಕಾರಿಗಳು ಇಚ್ಛಾಶಕ್ತಿ ತೋರಬೇಕಾದ ಅಗತ್ಯವಿದೆ.
    | ಎಚ್.ಎಲ್. ಬಾಲರಡ್ಡಿ , ಡಾ. ವೈ.ಡಿ. ಪಾಟೀಲ, ಬಿ.ಡಿ. ಪಲ್ಲೇದ, ಎನ್.ಕೆ.ಕುಲಕರ್ಣಿ, ಪಕ್ಷಿಧಾಮ ಅರಣ್ಯ ಸಮಿತಿ ಸದಸ್ಯರು

    ರಂಗನತಿಟ್ಟು ಬಿಟ್ಟರೆ ಮಾಗಡಿಯು ಕರ್ನಾಟಕದ ಪ್ರಸಿದ್ಧ ಪಕ್ಷಿಧಾಮವಾಗಿದೆ. ದೇಶ- ವಿದೇಶಗಳಿಂದ ಇಲ್ಲಿಯ ಸ್ವಚ್ಛಂದ ಪರಿಸರ, ಹವಾಗುಣ, ಹಿನ್ನೀರಿಗೆ ಮನಸೋತು ಆಗಮಿಸುವ ಪಕ್ಷಿಗಳ ಸಂರಕ್ಷಣೆ ಹಾಗೂ ಈ ಸ್ಥಳದ ಅಭಿವೃದ್ಧಿಗೆ ಆದ್ಯತೆ ನೀಡಿದರೆ ಒಳ್ಳೆಯ ಪ್ರವಾಸಿ ತಾಣವಾಗಲಿದೆ. ಪಕ್ಷಿ ಪ್ರೇಮಿಗಳಾಗಿದ್ದರಿಂದ ನಾವು ಪ್ರತಿ ವರ್ಷ ಬೆಂಗಳೂರಿಂದ ಇಲ್ಲಿಗೆ ಆಗಮಿಸಿ ವಿಶೇಷ ಬೈನಾಕ್ಯೂಲರ್ ಮೂಲಕ ಪಕ್ಷಿಗಳ ಚಲನವಲನ ವೀಕ್ಷಿಸುತ್ತೇವೆ.
    | ಹಿತೇಶ ಚೌಹಾಣ, ಪಕ್ಷಿ ಪ್ರೇಮಿ, ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts