More

    ಪೊಲೀಸ್ ಪರೀಕ್ಷೆ ನಕಲಿಗೆ ಬೇಲಿ; ಇಲಾಖೆಯಿಂದ ಬಯೋಮೆಟ್ರಿಕ್ ಅಸ್ತ್ರ

    ಬೆಂಗಳೂರು: ಪೊಲೀಸ್ ನೇಮಕಾತಿ ಪರೀಕ್ಷೆಗಳಲ್ಲಿ ನಕಲಿ ಅಭ್ಯರ್ಥಿಗಳ ಕಳ್ಳಾಟ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ ಇದನ್ನು ಮಟ್ಟಹಾಕುವುದಕ್ಕಾಗಿ ಬಯೋಮೆಟ್ರಿಕ್ ಅಸ್ತ್ರ ಹಿಡಿದಿದೆ. ನಕಲಿ ದಾಖಲೆ ಸೃಷ್ಟಿಸಿ ಯಾರದ್ದೋ ಹೆಸರಲ್ಲಿ ಇನ್ಯಾರೋ ಪರೀಕ್ಷೆ ಬರೆದು ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳುವ ಜಾಲ ಸಕ್ರಿಯವಾಗಿದೆ. ಅಧಿಕಾರಿಗಳ ಮಟ್ಟದಲ್ಲೇ ಡೀಲ್ ಕುದುರಿಸಿ ನೌಕರಿ ಗಿಟ್ಟಿಸಿಕೊಳ್ಳುತ್ತಿದ್ದವರೀಗ ಬೇರೆಯವರಿಂದ ಪರೀಕ್ಷೆ ಬರೆಸಿ ಉದ್ಯೋಗ ಪಡೆದುಕೊಳ್ಳುವ ಹೊಸಮಾರ್ಗ ಕಂಡುಕೊಂಡಿದ್ದಾರೆ. ಕೆಲ ಕಾನ್ಸ್​ಸ್ಟೆಬಲ್​ಗಳೇ ಅಕ್ರಮಕ್ಕೆ ಸಹಕರಿಸುತ್ತಿರುವುದು ಇಲಾಖೆಗೆ ತಲೆನೋವು ತಂದಿದೆ. ಹೀಗಾಗಿ ಪ್ರತಿಹಂತದಲ್ಲೂ ಅಭ್ಯರ್ಥಿಯ ಬೆರಳಚ್ಚು ಸಂಗ್ರಹಿಸುವ ಕಡ್ಡಾಯ ನಿಯಮದ ಜತೆಗೆ 8 ಹೊಸ ನಿಯಮ ರೂಪಿಸಲಾಗಿದೆ.

    ಕಳ್ಳಾಟ ಹೇಗೆ?: ಅರ್ಜಿ ಸಲ್ಲಿಕೆ ಸಂದರ್ಭದಲ್ಲೇ ಅಭ್ಯರ್ಥಿಯ ಭಾವಚಿತ್ರ, ಸಹಿ ಬದಲಿಗೆ ಬೇರೆ ವ್ಯಕ್ತಿಯ ಭಾವಚಿತ್ರ ಮತ್ತು ಸಹಿ ಹಾಕಿ ಅಪ್​ಲೋಡ್ ಮಾಡಲಾಗುತ್ತದೆ. ಲಿಖಿತ ಪರೀಕ್ಷೆ, ಪಿಎಸ್​ಟಿ, ಪಿಇಟಿ ಹಾಗೂ ವೈದ್ಯಕೀಯ ಪರೀಕ್ಷೆಗಳಿಗೆ ನಕಲಿ ಅಭ್ಯರ್ಥಿ ಹಾಜರಾಗುವಂತೆ ಮಾಡಿ ಉತ್ತೀರ್ಣರಾಗುತ್ತಾರೆ. ನೇಮಕಾತಿ ಆದೇಶ ಮಾತ್ರ ಅಸಲಿ ಅಭ್ಯರ್ಥಿಯೇ ಪಡೆದು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುತ್ತಾರೆ. ದಾಖಲಾತಿ ಪರಿಶೀಲನೆ ಕಾರ್ಯ ಕಟ್ಟುನಿಟ್ಟಾಗಿ ನಡೆಯದ ಕಾರಣ ನಕಲಿಯಾಟ ಗೊತ್ತಾಗುತ್ತಿರಲಿಲ್ಲ.

    ಸಿಸಿ ಕ್ಯಾಮರಾ ದೃಶ್ಯ ಪರಿಶೀಲನೆ: ಲಿಖಿತ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆ ಪ್ರಕ್ರಿಯೆಯನ್ನು ಸಿಸಿ ಕ್ಯಾಮರಾ ಮೂಲಕ ಸೆರೆಹಿಡಿಯಲಾಗುತ್ತದೆ. ಆ ದೃಶ್ಯಾವಳಿಗಳನ್ನು ತರಿಸಿಕೊಂಡು ಪರಿಶೀಲಿಸಬೇಕು. ಖಚಿತಗೊಂಡ ನಂತರವೇ ಅರ್ಭಯರ್ತೀಗೆ ನೇಮಕಾತಿ ಆದೇಶ ಹೊರಡಿಸಬೇಕು ಎಂದು ನೇಮಕಾತಿ ವಿಭಾಗದ ಎಡಿಜಿಪಿ ಅಮ್ರಿತ್ ಪಾಲ್ ಲಿಖಿತ ಆದೇಶ ಹೊರಡಿಸಿದ್ದಾರೆ.

    ಸಾಧನ ಖರೀದಿಗೆ ಶೀಘ್ರ ಸೂಚನೆ: ಬಯೋಮೆಟ್ರಿಕ್ ಮತ್ತು ತಂತ್ರಾಂಶ ಸಾಧನ ಖರೀದಿಸುವ ಬಗ್ಗೆ ಪ್ರತ್ಯೇಕ ಆದೇಶ ಹೊರಡಿಸಲಾಗುವುದು. ಅದಕ್ಕೂ ಮುನ್ನ ಈ ನಿಯಮಾವಳಿಗಳ ಜಾರಿಗೆ ಸೂಕ್ರಕ್ರಮ ಕೈಗೊಳ್ಳುವಂತೆ ಸೂಚನೆ ಕೊಡಲಾಗಿದೆ.

    ಪೇದೆಗಳೇ ಸಕ್ರಿಯ: ಸೇವೆಯಲ್ಲಿರುವ ಸಬ್ ಇನ್​ಸ್ಪೆಕ್ಟರ್ ಹಾಗೂ ಕಾನ್​ಸ್ಟೆಬಲ್​ಗಳೇ ಈ ಕಳ್ಳಾಟದ ಪಾತ್ರಧಾರಿಗಳು. ಈಗಾಗಲೇ ಪರೀಕ್ಷೆ ಬರೆದು ಆಯ್ಕೆಯಾಗಿರುವುದರಿಂದ ಸುಲಭವಾಗಿ ಪರೀಕ್ಷೆ ಪಾಸ್ ಮಾಡಬಹುದು. 2020-21ನೇ ಸಾಲಿನಲ್ಲಿ ನಡೆದ ಹಲವು ಪರೀಕ್ಷೆಗಳಲ್ಲಿ ಅಸಲಿ ಅಭ್ಯರ್ಥಿಗಳ ಬದಲಾಗಿ ನಕಲಿ ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಹಾಜರಾಗಿ ಸಿಕ್ಕಿಬಿದ್ದಿದ್ದರು. ಈ ಸಂಬಂಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿ, ಇಬ್ಬರು ಪೊಲೀಸ್ ಪೇದೆಗಳು ಸೇರಿ ಹಲವರನ್ನು ಬಂಧಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದಂತೆ ರಾಜ್ಯಾದ್ಯಂತ ಜಾಲ ವಿಸ್ತರಿಸಿರುವುದಕ್ಕೆ ಸಾಕ್ಷ್ಯ ಲಭಿಸಿದೆ.

    ಕಚೇರಿಯಲ್ಲಿ ಪರಿಶೀಲನೆ: ನೇಮಕಾತಿ ಕಚೇರಿಯಿಂದ ಆಯ್ಕೆಯಾದ ಅಭ್ಯರ್ಥಿಗಳ ಅರ್ಜಿಯ ಪ್ರತಿ, ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯ ಕರೆಪತ್ರಗಳನ್ನು ಆಯಾ ಘಟಕದ ಮುಖ್ಯಸ್ಥರಿಗೆ ಕಳುಹಿಸಬೇಕು. ನೇಮಕಾತಿ ಆದೇಶ ಹೊರಡಿಸುವ ಮುನ್ನ ಅಭ್ಯರ್ಥಿಯನ್ನು ಕಚೇರಿಗೆ ಕರೆಸಿ ಅರ್ಜಿಯಲ್ಲಿ, ಕರೆಪತ್ರಗಳಲ್ಲಿ ಹಾಗೂ ನಾಮಿನಲ್ ರೋಲ್​ಗಳಲ್ಲಿರುವ ಭಾವಚಿತ್ರದಲ್ಲಿರುವಂತೆ ಮುಖಚಹರೆ ಹೋಲುತ್ತದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಅದರ ಜತೆಗೆ ದೇಹದಲ್ಲಿನ ಗುರುತುಗಳು ದಾಖಲೆಗಳಲ್ಲಿ ನಮೂದಿಸಿರುವಂತೆ ಹೊಂದಾಣಿಕೆಯಾಗುತ್ತದೆಯೇ ಎಂದು ಅಧಿಕಾರಿಗಳೇ ಖುದ್ದಾಗಿ ಪರಿಶೀಲಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts