More

    ಪುತ್ತೂರಿನಲ್ಲಿ ಬಯೋಗ್ಯಾಸ್ ಘಟಕ

    ಪುತ್ತೂರು: ಪುತ್ತೂರಿನ ಪರಿಸರಕ್ಕೆ ಮಾರಕವಾಗಿದ್ದ ಬನ್ನೂರಿನ ಡಂಪಿಂಗ್ ಯಾರ್ಡ್ ಸಮಸ್ಯೆಗಳಿಗೆ ಮುಂದಿನ ಒಂದೂವರೆ ವರ್ಷದೊಳಗೆ ಮುಕ್ತಿ ದೊರೆಯುವ ನಿರೀಕ್ಷೆ ಇದೆ. ಬನ್ನೂರು ಡಂಪಿಂಗ್ ಯಾರ್ಡ್‌ನಲ್ಲಿ ಸರ್ಕಾರಿ- ಖಾಸಗಿ ಸಹಭಾಗಿತ್ವದಲ್ಲಿ ಜೈವಿಕ ಅನಿಲ ಘಟಕ ನಿರ್ಮಾಣ ಯೋಜನೆಗೆ ಸರ್ಕಾರದಿಂದ ಅನುಮತಿ ದೊರಕಿದೆ.

    ಸುಮಾರು 30 ವರ್ಷಗಳ ಹಿಂದೆ ಬನ್ನೂರು ಸಮೀಪದ ನೆಲದಲ್ಲಿ ನಿರ್ಮಿಸಲಾದ ಬ್ಯಾಂಡ್ ಫಿಲ್ ಸೈಟ್ ಕ್ರಮೇಣ ಸಮಸ್ಯೆಯ ಆಗರವಾಗಿ ಬೆಳೆದಿದೆ. ಅವೈಜ್ಞಾನಿಕ ತ್ಯಾಜ್ಯ ಸಂಗ್ರಹ, ನಿರ್ವಹಣೆ, ಸಂಸ್ಕರಣೆಯಿಲ್ಲದ ವ್ಯವಸ್ಥೆ, ಪಾಳುಬಿದ್ದಿರುವ ಎರೆಗೊಬ್ಬರ ತಯಾರಿ ವ್ಯವಸ್ಥೆ, ಸ್ಥಳೀಯರಿಗೆ ಪದೇಪದೆ ಕಾಡುತ್ತಿರುವ ಅನಾರೋಗ್ಯ ಸಮಸ್ಯೆ ಹೀಗೆ ಸಮಸ್ಯೆಗಳ ಸರಮಾಲೆಯೇ ಇದರ ಹಿಂದೆ ಬೆಳೆದು ನಗರಾಡಳಿತಕ್ಕೂ ತಲೆನೋವಾಗಿ ಪರಿಣಮಿಸಿತ್ತು. ಈಗ ಪುತ್ತೂರು ರೋಟರಿ ಕ್ಲಬ್ ಪೂರ್ವ ಸಂಸ್ಥೆ ಬಯೋಗ್ಯಾಸ್ ಪ್ಲಾಂಟ್ ನಿರ್ಮಿಸಿ ತ್ಯಾಜ ಮರುಬಳಕೆಗೆ ಮುಂದಾಗಿದೆ.

    ರೋಟರಿ ಕ್ಲಬ್ ಪುತ್ತೂರು ಪೂರ್ವ ನೇತೃತ್ವದಲ್ಲಿ 4.15 ಕೋಟಿ ರೂ. ವೆಚ್ಚದ ಬಯೋಗ್ಯಾಸ್ ಘಟಕ ನಿರ್ಮಾಣಕ್ಕೆ ಒಪ್ಪಂದ ಆಗಿದೆ. ಎರಡು ಎಕರೆ ಜಾಗದಲ್ಲಿ ಮುಂದಿನನ 18 ತಿಂಗಳೊಳಗೆ ಯೋಜನೆ ಅನುಷ್ಠಾನಗೊಳ್ಳಲಿದೆ. ಆಹಾರ ಮತ್ತು ತರಕಾರಿ, ಶೌಚಗೃಹ, ಕೋಳಿ ಮತ್ತು ಮಾಂಸ ಹಸಿ ಹುಲ್ಲು ತ್ಯಾಜ್ಯವನ್ನು ಸಂಸ್ಕರಿಸಿ ಬಯೋಗ್ಯಾಸ್ ಉತ್ಪಾದಿಸಲಾಗುತ್ತದೆ. ಸಂಗ್ರಹಿತ ತ್ಯಾಜ್ಯದಲ್ಲಿ ಹಸಿ ಮತ್ತು ಕೊಳೆಯುವ ತ್ಯಾಜ್ಯ ಬಹುಪಾಲು ಇದ್ದು, ಇದನ್ನು ಸೂಕ್ತ ಪ್ರಮಾಣದಲ್ಲಿ ವ್ಯವಸ್ಥೆಗೊಳಿಸಿ ಸಂಕುಚಿತ ಜೈವಿಕ ಅನಿಲ ಉತ್ಪಾದಿಸಲಾಗುತ್ತದೆ.

    ದಿನಂಪ್ರತಿ 8 ಟನ್ ತ್ಯಾಜ್ಯ: ನಗರದ 15 ಸಾವಿರಕ್ಕೂ ಮಿಕ್ಕಿದ ಮನೆ, ಕಟ್ಟಡಗಳಿಂದ ದಿನಂಪ್ರತಿ 8 ಟನ್ ಅಧಿಕ ಹಸಿತ್ಯಾಜ್ಯ ಬನ್ನೂರು ಯಾರ್ಡ್ ಸೇರುತ್ತಿದೆ. ಒಣ ಕಸದ ರಾಶಿ ಶೌಚಗೃಹ ತಾಜ್ಯ ಸೇರಿ ಯಾರ್ಡ್ ಅವ್ಯವಸ್ಥೆ ಕೊಂಪೆಯಾಗಿ ಬದಲಾಗಿತ್ತು. ವೈಜ್ಞಾನಿಕ ಮಾದರಿಯಲ್ಲಿ ವಿಲೇವಾರಿ ಪದ್ಧತಿ ಇಲ್ಲದ ಕಾರಣ ಇಡೀ ಪರಿಸರವೇ ಗಬ್ಬೆದ್ದು ನಾರುತಿತ್ತು. ಮಳೆಗಾಲದಲ್ಲಿ ಕೊಳೆತ, ಬೇಸಿಗೆಯಲ್ಲಿ ಬೆಂಕಿಯಿಂದ ಪರಿಸರದಲ್ಲಿ ಅನಾರೋಗ್ಯ ಸಮಸ್ಯೆ ಎದುರಾಗಿತ್ತು.

    ಬನ್ನೂರು ಡಂಪಿಂಗ್ ಯಾರ್ಡ್ ತ್ಯಾಜ್ಯವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಬಯೋಗ್ಯಾಸ್ ಪ್ಲಾಂಟ್ ಅನುಷ್ಠಾನಗೊಳ್ಳಲಿದೆ. ಯೋಜನೆ ಯಶಸ್ವಿಯಾದರೆ ಸರ್ಕಾರಿ- ಖಾಸಗಿ ಸಹಭಾಗಿತ್ವದ ರಾಜ್ಯದ ಮೊದಲ ಜೈವಿಕ ಅನಿಲ ಘಟಕ ಯೋಜನೆ ಎಂಬ ಹೆಗ್ಗಳಿಕೆಗೆ ಬನ್ನೂರು ಬಯೋಗ್ಯಾಸ್ ಪ್ಲಾಂಟ್ ಪಾತ್ರವಾಗಲಿದೆ.
    ಸಂಜೀವ ಮಠಂದೂರು, ಪುತ್ತೂರು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts