More

    ಬಿಲ್ಲವ ಸಮುದಾಯ ಬೇಡಿಕೆ ಈಡೇರಿಕೆಗೆ ಜ.29ರಂದು ಬೃಹತ್ ಸಮಾವೇಶ ನಿರ್ಧಾರ

    ಮಂಗಳೂರು: ರಾಜ್ಯ ಸರ್ಕಾರ ಬಿಲ್ಲವ- ಈಡಿಗ ಸಮುದಾಯಕ್ಕಾಗಿ ಸ್ಥಾಪಿಸಿರುವ ಅಭಿವೃದ್ಧಿ ಕೋಶವನ್ನು ಬಿಲ್ಲವ ಸಮಾಜ ಒಪ್ಪುವುದಿಲ್ಲ. ಬಿಲ್ಲವರ ಬಹು ವರ್ಷಗಳ ಬೇಡಿಕೆಯಾದ ನಿಗಮ ಸ್ಥಾಪನೆ ಮಾಡಿ ಕನಿಷ್ಠ 500 ಕೋಟಿ ರೂ. ಅನುದಾನ ಮೀಸಲಿಡದಿದ್ದರೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿರುವ ಬಿಲ್ಲವ ಮುಖಂಡರು, ಸಮುದಾಯದ ಬೇಡಿಕೆ ಈಡೇರಿಕೆಗಾಗಿ ಕನಿಷ್ಠ 1 ಲಕ್ಷ ಸಮುದಾಯದ ಜನರನ್ನು ಸೇರಿಸಿ ಜ.29ರಂದು ಬೃಹತ್ ಸಮಾವೇಶ ನಡೆಸಲು ನಿರ್ಧಾರ ಕೈಗೊಂಡಿದ್ದಾರೆ.

    ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವಿವಿಧ ಬಿಲ್ಲವ ಸಂಘಟನೆಗಳ ಮುಖಂಡರ ಜತೆ ಸಭೆ ನಡೆಸಿದ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್, ಸರ್ಕಾರವು ನಾರಾಯಣ ಗುರುಕೋಶಕ್ಕೆ ಅನುದಾನ ಎಷ್ಟು ಮೀಸಲಿಟ್ಟಿದೆ ಎನ್ನುವುದನ್ನು ತಿಳಿಸಿಲ್ಲ. ಸರ್ಕಾರಕ್ಕೆ ನಿಜವಾದ ಇಚ್ಛಾಶಕ್ತಿ ಇದ್ದರೆ ಬಿಲ್ಲವರ ಅಭಿವೃದ್ಧಿ ನಿಗಮ ಮಾಡಿ. ಇಲ್ಲದಿದ್ದರೆ ಮುಂದೆ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

    ಅಭಿವೃದ್ಧಿ ಕೋಶ ಎಂದರೆ ಹಲ್ಲಿಲ್ಲದ ಹಾವು. ಅದಕ್ಕೊಬ್ಬರು ಅಧಿಕಾರಿ ಇದ್ದರೂ ಅವರಿಗೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಅಧಿಕಾರವಿಲ್ಲ. ಸರ್ಕಾರದ ಕಾರ್ಯದರ್ಶಿ ಅನುಮತಿ ಪಡೆಯಬೇಕು. ಇದು ಇಲಾಖೆ ಅಧೀನದಲ್ಲಿ ಬರುವುದರಿಂದ ಯಾವತ್ತು ಬೇಕಾದರೂ ವಾಪಸ್ ಪಡೆಯಬಹುದು. ಆದರೆ ನಿಗಮ ರಚನೆ ಮಾಡಿದರೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಅಧಿಕಾರ ಇರುವ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಲಿದೆ. ಇಷ್ಟು ವರ್ಷ ನಿಗಮಕ್ಕಾಗಿ ಬೇಡಿಕೆ ಇರಿಸಿದ್ದರೂ ಇನ್ನೂ ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.

    ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ರಾಜ್ಯದಲ್ಲಿ 45 ಲಕ್ಷದಷ್ಟು ಜನಸಂಖ್ಯೆ ಇರುವ 26 ಪಂಗಡಗಳ ಬಿಲ್ಲವ ಈಡಿಗ ಸಮುದಾಯವನ್ನು ಅವಗಣನೆ ಮಾಡಿರುವುದು ಸರಿಯಲ್ಲ. ಸಮುದಾಯದ ಬೇಡಿಕೆಗಳನ್ನು ಮುಂದಿರಿಸಿ ಬೃಹತ್ ಸಮಾವೇಶದ ಮೂಲಕ ಸ್ಪಷ್ಟ ಸಂದೇಶ ರವಾನಿಸಲಿದ್ದೇವೆ ಎಂದರು.

    ಬಿಲ್ಲವ ಮಹಾಮಂಡಳ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಉಭಯ ಜಿಲ್ಲೆಗಳ ಬಿಲ್ಲವ ಮುಖಂಡರಾದ ಶಂಕರ ಪೂಜಾರಿ, ಚಿದಾನಂದ, ಮಹಾಬಲ, ದೇವೇಂದ್ರ ಪೂಜಾರಿ, ಸತೀಶ್, ಅಚ್ಯುತ ಕಲ್ಮಾಡಿ, ಜಗನ್ನಾಥ್ ಕೋಟೆ, ದೀಪಕ್ ಪೂಜಾರಿ, ಧರ್ಮರಾಜ್ ವಾಮಂಜೂರು, ನಿತೀಶ್ ವೇಣೂರು, ಲೀಲಾಕ್ಷ ಕರ್ಕೇರ, ಕರುಣಾಕರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts