ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.

3 Min Read
ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.
ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ಆರ್. ಅವರು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಮಂಗಳೂರು: ಲೋಕಸಭೆ ಚುನಾವಣೆಗೆ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ಆರ್. ಅವರು ಬುಧವಾರ ನಾಮಪತ್ರ ಸಲ್ಲಿಸಿದರು.

ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿದ ಅವರು, ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್ ರಾಜ್ಯ ಚುನಾವಣಾ ಉಸ್ತುವಾರಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಜಿಲ್ಲಾ ಚುನಾವಣಾ ಉಸ್ತುವಾರಿ ಬಿ. ರಮಾನಾಥ ರೈ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೊಜಾ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಾಜಿ ಸಚಿವ ಅಭಯಚಂದ್ರ ಜೈನ್, ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ಶಾಸಕ ಜೆ.ಆರ್. ಲೋಬೊ, ವಿಜಯ್ ಕುಮಾರ್ ಶೆಟ್ಟಿ, ಡಾ. ರಘು, ಇನಾಯತ್ ಆಲಿ, ರಕ್ಷಿತ್ ಶಿವರಾಮ್, ಮಿಥುನ್ ರೈ ಮೊದಲಾದವರು ಉಪಸ್ಥಿತರಿದ್ದರು.

*ಮೆರವಣಿಗೆಯಲ್ಲಿ ರಾರಾಜಿಸಿದ ತುಳುನಾಡ ಧ್ವಜ

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರ ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿಯಾಗಿ ಹಮ್ಮಿಕೊಂಡ ಮೆರವಣಿಗೆಗೆ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಚಾಲನೆ ನೀಡಿದರು. ಈ ವೇಳೆ ಕಾಂಗ್ರೆಸ್ ಧ್ವಜದ ಜತೆಗೆ ತುಳುನಾಡ ಧ್ವಜ ರಾರಾಜಿಸಿರುವುದು ಮಾತ್ರವಲ್ಲದೆ ಕಾರ್ಯಕರ್ತರ ಘೋಷಣೆ, ನಡಿಗೆಗೆ ವೇಗ ತುಂಬುವಂತಿತ್ತು.

ಬುಧವಾರ ಬೆಳಿಗ್ಗೆ ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಂಕನಾಡಿ ಶ್ರೀ ಬ್ತಹ್ಮಬೈದರ್ಕಳ ಗರೋಡಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಅರ್ಚನೆ ಸಲ್ಲಿಸಿದ ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಗೊಂಬೆ ಬಳಗ, ಚೆಂಡೆ, ಕೊಂಬು ಸಹಿತ ಮೆರವಣಿಗೆಯಲ್ಲಿ ಕಾರ್ಯಕರ್ತರು ಹೆಜ್ಜೆ ಹಾಕಿದರು. ತೆರೆದ ವಾಹನದಲ್ಲಿ ಅಭ್ಯರ್ಥಿ ಪದ್ಮರಾಜ್ ಆರ್. ಸಹಿತ ಹಲವು ಗಣ್ಯರು ಹಂಪನ್‌ಕಟ್ಟೆ, ಕ್ಲಾಕ್‌ಟವರ್, ಸ್ಟೇಟ್‌ಬ್ಯಾಂಕ್ ಮೂಲಕ ಮೇರವಣಿಗೆಯ ಜತೆ ಸಾಗಿ ನಾಮಪತ್ರ ಸಲ್ಲಿಸಿದರು.

See also  ಮಂಗಗಳ ಕಾಟ ರೈತರಿಗೆ ಪ್ರಾಣಸಂಕಟ

———————–

ಜಾತಿ ರಾಜಕಾರಣ ಮಾಡುವುದಿಲ್ಲ

ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪದ್ಮರಾಜ್, ಕಳೆದ 33 ವರ್ಷಗಳಿಂದ ಈ ಜಿಲ್ಲೆಯ ಮೇಲೆ ಕೋಮು ಸೂಕ್ಷ್ಮ ಪ್ರದೇಶ ಎಂಬ ಕಪ್ಪು ಚುಕ್ಕೆ ಬಿದ್ದಿದೆ. ವಿಶಿಷ್ಟ ಸಂಸ್ಕೃತಿಯ ಜಿಲ್ಲೆಯಲ್ಲಿ ಬಿಜೆಪಿ ಆಡಳಿತದ ಸಂದರ್ಭ ಕೋಮು ಸಾಮರಸ್ಯ ಕದಡಿದ್ದು, ಅದನ್ನು ನಿವಾರಿಸುವುದೇ ನಮ್ಮ ಉದ್ದೇಶ. ಜಾತಿ ಧರ್ಮ ಮೀರಿದ ಬಾಂಧವ್ಯ ಮಾಯವಾಗಿದೆ. ಇದರಿಂದಾಗಿ ಈ ಭಾಗದಲ್ಲಿ ಹೂಡಿಕೆ ಆಗುತ್ತಿಲ್ಲ. ಜನರು ಇದರ ಬಗ್ಗೆ ಅರಿವು ಮೂಡಿಸಿಕೊಂಡಿದ್ದು, ಬದಲಾವಣೆ ಬಯಸಿದ್ದಾರೆ. ನಿರುದ್ಯೋಗ ಹೆಚ್ಚಳದಿಂದಾಗಿ ಜನರು ಕಾಂಗ್ರೆಸಿನತ್ತ ವಾಲಿದ್ದು, ಮತವಾಗಿ ಪರಿವರ್ತನೆಯಾಗಲಿದೆ. ರಾಜ್ಯ ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿ ಯೋಜನೆಗಳಿಂದ ಗೃಹಿಣಿಯ ಮುಖದಲ್ಲಿ ನಗು ಮೂಡಿಸಿದೆ. ಬಡ ಕುಟುಂಬಗಳಿಗೆ ಶಕ್ತಿ ನೀಡಿದೆ. ನಾವು ಯಾರ ಬಗ್ಗೆಯೂ ದ್ವೇಷ ಮಾಡುವುದಿಲ್ಲ. ಟೀಕೆಯನ್ನೂ ಮಾಡುವುದಿಲ್ಲ. ವಾಸ್ತವ ಏನಿದೆಯೋ ಅದನ್ನು ಜನರ ಮುಂದಿಡುತ್ತೇನೆ. ಜಾತಿ ರಾಜಕಾರಣ ಮಾಡುವುದಿಲ್ಲ. ಜನರ ಸ್ಪಂದನೆ ಉತ್ತಮವಾಗಿದ್ದು, ಈ ಬಾರಿ ನೂರಕ್ಕೆ ನೂರು ಕಾಂಗ್ರೆಸ್ ಗೆಲ್ಲಲಿದೆ ಎಂದರು.

————————

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಒಟ್ಟು ಆಸ್ತಿಯ ಶೇ.85ರಷ್ಟು ಸಾಲ!

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್. ಪದ್ಮರಾಜ್ ಅವರ ಬಳಿ ಚರಾಸ್ತಿ, ಸ್ಥಿರಾಸ್ತಿ ಸೇರಿ ಒಟ್ಟು 1,48,01,445 ರೂ. ಮೌಲ್ಯದ ಆಸ್ತಿ ಇದ್ದರೆ, 1,26,50,000 ರೂ. ಸಾಲವೇ ಇದೆ. ಬುಧವಾರ ನಾಮಪತ್ರ ಸಲ್ಲಿಸಿರುವ ಪದ್ಮರಾಜ್, ತಮ್ಮ ಅಫಿದವಿತ್‌ನಲ್ಲಿ ಸಂಪೂರ್ಣ ಆಸ್ತಿ ವಿವರ ಘೋಷಣೆ ಮಾಡಿದ್ದಾರೆ.

ಪದ್ಮರಾಜ್ ತಮ್ಮ ಕೈಯಲ್ಲಿ 1,40,000 ರೂ. ಹಣ ಹೊಂದಿದ್ದರೆ, ಅವರ ಪತ್ನಿ ಬಳಿ 89,000 ರೂ. ಇದೆ. ಪದ್ಮರಾಜ್ 219 ಗ್ರಾಂ ತೂಕದ 12,40,000 ರೂ. ಮೌಲ್ಯದ ಚಿನ್ನ ಹೊಂದಿದ್ದರೆ, ಅವರ ಪತ್ನಿ 33,00,000 ರೂ. ಮೌಲ್ಯದ ಚಿನ್ನಾಭರಣ ಇದೆ. ಒಟ್ಟು 64,91,444 ರೂ. ಚರಾಸ್ತಿಯನ್ನು ಪದ್ಮರಾಜ್ ಹೊಂದಿದ್ದರೆ, ಅವರ ಪತ್ನಿ ಬಳಿ 35,36,141 ರೂ. ಚರಾಸ್ತಿ ಇರುವುದಾಗಿ ಉಲ್ಲೇಖಿಸಿದ್ದಾರೆ. ಉಳಿದಂತೆ ವಾಣಿಜ್ಯ ಕಟ್ಟಡ, ಮನೆ ಸೇರಿ 83,10,000 ರೂ. ಸ್ಥಿರಾಸ್ತಿಯನ್ನು ಪದ್ಮರಾಜ್ ಹೊಂದಿದ್ದರೆ, ಅವರ ಪತ್ನಿ ಹೆಸರಿನಲ್ಲಿ ಯಾವುದೇ ಸ್ಥಿರಾಸ್ತಿ ಇಲ್ಲ. 37 ಲಕ್ಷ ರು. ಮೌಲ್ಯದ ಇನ್ನೋವಾ ಹೈಬ್ರಿಡ್ ಕಾರು ಹೊಂದಿದ್ದಾರೆ. ಕಾರಿನ ಸಾಲ 29,50,000 ರು. ಇದ್ದರೆ, ಉಳಿದ ಸಾಲಗಳು ಸೇರಿ ಒಟ್ಟು 1,26,50,000 ರು. ಸಾಲ ಹೊಂದಿದ್ದಾರೆ. ಬಿಎ, ಎಲ್‌ಎಲ್‌ಬಿ ಪದವೀಧರರಾಗಿರುವ ಪದ್ಮರಾಜ್ ಅವರಿಗೀಗ 53 ವರ್ಷ ವಯಸ್ಸು. ಅಡ್ವೊಕೇಟ್ ಮತ್ತು ನೋಟರಿಯೂ ಆಗಿದ್ದಾರೆ. ಅವರ ಪತ್ನಿ ಶಿಕ್ಷಕಿ.

Share This Article