More

    ಬಿಲ್ ಕೇಳಿದ್ದಕ್ಕೆ ಕೊಲೆಗೆ ಯತ್ನ

    ರಾಣೆಬೆನ್ನೂರ: ಆತನ ಮೇಲೆ ಈಗಾಗಲೇ ಕಳ್ಳತನ, ದರೋಡೆ ಸೇರಿ 18 ಪ್ರಕರಣಗಳು ದಾಖಲಾಗಿದ್ದು, ಜೈಲು ಕಂಡು ಬಂದಿದ್ದಾನೆ. ಶಹರ ಠಾಣೆಯಲ್ಲಿ ರೌಡಿಶೀಟ್ ಸಹ ತೆರೆಯಲಾಗಿದೆ. ಆದರೂ ಬಡಪಾಯಿ ಎಗ್​ರೈಸ್ ಅಂಗಡಿಯವನ ಮೇಲೆ ವರಸೆ ತೋರಿಸಿ ಇದೀಗ ಮತ್ತೆ ಜೈಲು ಪಾಲಾಗಿದ್ದಾನೆ.

    ಇಲ್ಲಿಯ ನಗರದ ಕೋಟೆ ಓಣಿ ನಿವಾಸಿ ಫಕೀರೇಶ ಹೊನ್ನಪ್ಪ ಅರಬಗೊಂಡ (32) ಜೈಲು ಪಾಲಾದ ಆರೋಪಿ.

    ಘಟನೆ ವಿವರ: ನಗರದ ಮೇಡ್ಲೇರಿ ರಸ್ತೆಯಲ್ಲಿ ಎಗ್​ರೈಸ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿರುವ ಸಿದ್ದಲಿಂಗಪ್ಪ ಗಂಗಾಧರಪ್ಪ ಚಿನ್ನಿಕಟ್ಟಿ ಎಂಬುವರ ಬಳಿ ಕಳೆದ ಎರಡ್ಮೂರು ವರ್ಷದಿಂದ ಆರೋಪಿ ಫಕೀರೇಶ ನಿತ್ಯ ಎಗ್​ರೈಸ್ ತಿನ್ನುತ್ತಿದ್ದ.

    ಸೋಮವಾರ ಮಧ್ಯಾಹ್ನವೂ ಎಗ್​ರೈಸ್ ತಿನ್ನಲು ಬಂದಿದ್ದ. ‘ಅಣ್ಣ ಎರಡ್ಮೂರು ವರ್ಷದಿಂದ ರೈಸ್ ತಿನ್ನುತ್ತ ಬಂದಿದ್ದೀಯಾ. ಒಮ್ಮೆಯಾದರೂ ಹಣ ಕೊಡು’ ಎಂದು ಸಿದ್ದಪ್ಪಲಿಂಗಪ್ಪ ಕೇಳಿದ್ದಾನೆ. ಇದರಿಂದ ಕೋಪಗೊಂಡ ಫಕೀರೇಶ, ಅಂಗಡಿಯಲ್ಲಿನ ಮೊಟ್ಟೆ, ಪಾತ್ರೆ, ಅನ್ನ ಬಿಸಾಡಿದ್ದಲ್ಲದೆ, ಅವಾಚ್ಯವಾಗಿ ಬೈದು ಹೋಗಿದ್ದಾನೆ.

    ಸಿದ್ದಲಿಂಗಪ್ಪ ಸಂಜೆ ವೇಳೆಗೆ ಮತ್ತೆ ಅಂಗಡಿಯನ್ನು ಸರಿ ಮಾಡಿಕೊಂಡು ವ್ಯಾಪಾರ ಶುರು ಮಾಡಿದ್ದಾನೆ. ಅಷ್ಟರಲ್ಲಿಯೇ ಫಕೀರೇಶ ಮನೆಯಿಂದ ಮಚ್ಚಿನೊಂದಿಗೆ ಬಂದು ಏಕಾಏಕಿ ಸಿದ್ದಲಿಂಗಪ್ಪನ ಕುತ್ತಿಗೆಗೆ ಹೊಡೆಯಲು ಯತ್ನಿಸಿದ್ದಾನೆ. ತಕ್ಷಣ ಸಿದ್ದಲಿಂಗಪ್ಪ ಕೈಯನ್ನು ಅಡ್ಡ ಹಿಡಿದು ತಪ್ಪಿಸಿಕೊಂಡಿದ್ದಾನೆ. ಹೀಗಾಗಿ, ಆತನ ಕೈಗೆ ಮಚ್ಚಿನ ಏಟು ಬಿದ್ದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    ಇದೇ ವೇಳೆ ಮೇಡ್ಲೇರಿ ರಸ್ತೆಯಲ್ಲಿ ತೆರಳುತ್ತಿದ್ದ ಪೊಲೀಸರು ಕೂಡಲೆ ಆರೋಪಿ ಫಕೀರೇಶನನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಗಡಿಪಾರು ಮಾಡಲು ಆಗ್ರಹ

    ಫಕೀರೇಶನ ವಿರುದ್ಧ ಕಳ್ಳತನ, ದರೋಡೆ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ರಾಣೆಬೆನ್ನೂರ, ದಾವಣಗೆರೆ ಸೇರಿ ಇತರ ಪೊಲೀಸ್ ಠಾಣೆಗಳಲ್ಲಿ ಒಟ್ಟು 18 ಪ್ರಕರಣ ದಾಖಲಾಗಿವೆ. ಎಲ್ಲ ಪ್ರಕರಣದಲ್ಲೂ ಜೈಲು ಕಂಡು ಬಂದಿದ್ದಾನೆ. ಆದರೂ ಎಗ್​ರೈಸ್ ಅಂಗಡಿಯವರ ಬಳಿ ನಿತ್ಯವೂ ಗಲಾಟೆ ಮಾಡುತ್ತಿದ್ದು, ಅಂಗಡಿಯವರು ಬೇಸತ್ತು ಹೋಗಿದ್ದಾರೆ. ಆದರೆ, ಇಷ್ಟು ದಿನ ಹಣ ನೀಡದ ಈತ ಇದೀಗ ಮಚ್ಚು ತೆಗೆದುಕೊಂಡು ಎಗ್​ರೈಸ್ ಅಂಗಡಿಯವರನ್ನು ಕೊಲ್ಲಲು ಮುಂದಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಪೊಲೀಸರು ಇಂತಹವರನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts