More

    52.32 ಎಕರೆ ಅತಿಕ್ರಮಣ ತೆರವು

    ಬೀಳಗಿ: ತಾಲೂಕಿನ ಸೊನ್ನ ಗ್ರಾಮದ ಪುನರ್ವಸತಿ ಕೇಂದ್ರಕ್ಕೆ ಹೊಂದಿಕೊಂಡ ಸರ್ಕಾರಿ ಸ್ವಾಮ್ಯದ 52.32 ಎಕರೆ ಪ್ರದೇಶದಲ್ಲಿ ನಿರ್ಮಿಸಿದ್ದ ಕಟ್ಟಡ ಹಾಗೂ ಬೆಳೆದಿದ್ದ ಬೆಳೆಯನ್ನು ಜಮಖಂಡಿ ಉಪ ವಿಭಾಗಾಧಿಕಾರಿ ಡಾ. ಸಿದ್ದು ಹುಲ್ಲೊಳ್ಳಿ, ತಹಸೀಲ್ದಾರ್ ಭೀಮಪ್ಪ ಆಜೂರ, ಗ್ರೇಡ್-2 ಪುನರ್ವಸತಿ ವಿಭಾಗದ ವಿಶೇಷ ತಹಸೀಲ್ದಾರ್ ಎಂ.ಎಂ. ಜಮಖಂಡಿ ಅವರು ಪೊಲೀಸ್ ಸಿಬ್ಬಂದಿ ಸಹಾಯದಿಂದ ಶುಕ್ರವಾರ ತೆರವುಗೊಳಿಸಿದರು.

    ಬೆಳಗ್ಗೆ 10 ಗಂಟೆಯಿಂದಲೇ ಪ್ರಾರಂಭವಾದ ತೆರವು ಕಾರ್ಯಾಚರಣೆ ಮೂಲ ಮಾಲೀಕರ ಪ್ರತಿರೋಧದ ನಡುವೆಯೂ ಪೊಲೀಸ್ ಬಿಗಿ ಬಂದೋಬಸ್ತಿನಲ್ಲಿ ನಡೆಯಿತು.

    ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಮುಳುಗಡೆಯಾದ ಢವಳೇಶ್ವರ ಗ್ರಾಮದ ಪುನರ್ವಸತಿ ಕೇಂದ್ರದ ನಿರ್ಮಾಣಕ್ಕಾಗಿ ಸೊನ್ನ ಗ್ರಾಮದ ಪುನರ್ವಸತಿ ಕೇಂದ್ರದ ಪಕ್ಕದಲ್ಲಿನ 52.32 ಎಕರೆ ಜಮೀನನ್ನು 1988ರಲ್ಲಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಮಾಲೀಕರಿಗೆ ಪರಿಹಾರ ಧನವನ್ನೂ ನೀಡಲಾಗಿದೆ. ಆದರೆ, ಢವಳೇಶ್ವರ ಗ್ರಾಮದ ಜನರು ಸದರಿ ಜಮೀನು ಎರೆಮಣ್ಣಿನದ್ದಾಗಿದ್ದು, ಅಲ್ಲಿ ಮನೆಗಳನ್ನು ನಿರ್ಮಾಣ ಮಾಡಲು ತಳಪಾಯ ಸರಿಯಾಗಿಲ್ಲವೆಂದು ನಿರಾಕರಿಸಿದ ಕಾರಣ ಅವರಿಗೆ ಬೇರೊಂದು ಕಡೆ ಮತ್ತೆ ಜಮೀನು ಸ್ವಾಧೀನಪಡಿಸಿಕೊಂಡ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಮತ್ತು ಮರು ನಿರ್ಮಾಣ ಇಲಾಖೆ ಅವರಿಗೆ ಪುನರ್ವಸತಿ ಕಲ್ಪಿಸಿತು.

    ಈ ಮೊದಲು ಸ್ವಾಧೀನವಾಗಿದ್ದ ಜಮೀನಿನಲ್ಲಿ ಪುನರ್ವಸತಿಗೆ ಸಂಬಂಧಪಟ್ಟ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯಲಿಲ್ಲ. ಆದ್ದರಿಂದ ಮೂಲ ಭೂಮಾಲೀಕರು ಅದೇ ಜಮೀನಿನಲ್ಲಿ ಮೊದಲಿನಂತೆ ಜಮೀನುಗಳಲ್ಲಿ ವ್ಯವಸಾಯ ಮುಂದುವರಿಸಿದ್ದರು. ಪಕ್ಕದ ಸೊನ್ನ ಗ್ರಾಮಕ್ಕೆ ಇದೇ ಭೂಸ್ವಾಧೀನಗೊಂಡ 52 ಎಕರೆ ಜಮೀನಿನಲ್ಲಿಯೇ 8 ಎಕರೆ ಪ್ರದೇಶವನ್ನು ಹಿಂದು ರುದ್ರಭೂಮಿಗೆ, 4 ಎಕರೆಯಷ್ಟು ಖಬರಸ್ತಾನಕ್ಕೂ ಹಸ್ತಾಂತರಿಸಲಾಯಿತು. ಸ್ಮಶಾನಕ್ಕೆ ಕೊಟ್ಟರೂ ಮೂಲ ಮಾಲೀಕರು ಅಲ್ಲಿ ವ್ಯವಸಾಯ ಮುಂದುವರಿಸಿದ್ದರು.

    ಸೊನ್ನ ಗ್ರಾಮದಲ್ಲಿ ಹಿಂದು-ಮುಸ್ಲಿಂ ಸಮಾಜದ ಯಾವುದೇ ವ್ಯಕ್ತಿ ತೀರಿಕೊಂಡರೂ ಅವರಿಗೆ ಅಂತಿಮ ಸಂಸ್ಕಾರ ಮಾಡಲು ಸ್ಥಳದ ಸಮಸ್ಯೆ ಎದುರಾಗತೊಡಗಿತು. ಈ ವಿಷಯವಾಗಿ ಪರಿಹಾರ ಪಡೆದು ಕಳೆದ 30 ವರ್ಷಗಳಿಂದ ಅದೇ ಜಮೀನುಗಳಲ್ಲಿ ಸಾಗುವಳಿ ಮುಂದುವರಿಸಿದ ಮೂಲ ಭೂಮಾಲೀಕರಿಗೂ ಗ್ರಾಮಸ್ಥರಿಗೂ ತಿಕ್ಕಾಟಗಳು ಪ್ರಾರಂಭವಾದವು.

    ಬೇಸತ್ತ ಗ್ರಾಮಸ್ಥರು ಸಮಸ್ಯೆಯ ಗಂಭೀರತೆಯನ್ನು ಜಿಲ್ಲಾಡಳಿತ ಮೂಲಕ ಸರ್ಕಾರದ ಗಮನಕ್ಕೆ ತಂದರು. ಪರಿಣಾಮವಾಗಿ ಜಮಖಂಡಿ ವಿಭಾಗಾಧಿಕಾರಿ ಮೇಲಧಿಕಾರಿ ಸೂಚನೆಯಂತೆ ಸಂಬಂಧಪಟ್ಟ ಇಲಾಖೆಗಳ ಸಹಾಯದಿಂದ ಪೊಲೀಸ್ ಬಿಗಿ ಬಂದೋಬಸ್ತಿನಲ್ಲಿ ತೆರವು ಕಾರ್ಯಾಚರಣೆ ನಡೆಸಿದರು.

    ಗ್ರೇಡ್-2 ತಹಸೀಲ್ದಾರ್ ಆನಂದ ಕೊಲ್ಲಾರ, ಶಿರಸ್ತೆದಾರರಾದ ಎಸ್.ಎಸ್. ಆಯೇರಿಕರ, ಆರ್.ಜಿ. ಪಾತ್ರದ, ಯುಕೆಪಿ ಎಇಇ ವಿಜಯನಾಗರಾಜ, ಮಂಜುನಾಥ ಧಿಗೊಂಡ ಮುಂತಾದ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸಿಪಿಐ ಸಂಜಯ ಬಳಿಗಾರ, ಪಿಎಸ್‌ಐ ಕೆ.ಪಿ. ಮಾನೆ ಸಿಬ್ಬಂದಿಯೊಂದಿಗೆ ಭದ್ರತೆ ಒದಿಗಿಸಿದ್ದರು.

    ಬೆಳೆಗಳು ಆಹುತಿ
    ಇನ್ನೊಂದು ತಿಂಗಳಿನಲ್ಲಿ ಕಟಾವಾಗಬಹುದಾಗಿದ್ದ ಕಬ್ಬಿನ ಬೆಳೆಗಳು, ಹತ್ತು, ಹನ್ನೆರಡು ದಿನಗಳಲ್ಲಿ ಕೈಗೆ ಬರಬಹುದಾಗಿದ್ದ ಈರುಳ್ಳಿ, ತಾಳೇಮರದ ಸಸಿಗಳು ಕಾರ್ಯಾಚರಣೆಗೆ ಆಹುತಿಯಾದವು. ಬೆಳೆ ತೆರವು ಕಾರ್ಯಾಚರಣೆ ಸುದ್ದಿ ತಿಳಿದ ನೂರಾರು ಗ್ರಾಮಸ್ಥರು ಬೆಳೆದು ನಿಂತ ಕಬ್ಬನ್ನು ತಮ್ಮ ತಮ್ಮ ದನಕರುಗಳಿಗಾಗಿ ಕತ್ತರಿಸಿಕೊಂಡು ಪೆಂಡಿ ಕಟ್ಟಿಕೊಂಡು ಸಾಗಿಸಿದರು. ಮೂಲ ಮಾಲೀಕರು ಇನ್ನಷ್ಟು ಕಾಲಾವಕಾಶ ಕೊಡಿ ಎಂದು ಕೇಳಿದರಾದರೂ ಈ ಮೊದಲೇ ಸಾಕಷ್ಟು ಸಲ ನಿಮಗೆ ಹೇಳಲಾಗಿತ್ತು ಎಂದು ಅವರ ಮನವಿಯನ್ನು ಅಧಿಕಾರಿಗಳು ತಳ್ಳಿಹಾಕಿದರು.

    ನೋಟಿಸ್ ನೀಡದೆ ಯಾವುದೇ ಮುನ್ಸೂಚನೆ ಕೊಡದೆ ಏಕಾಏಕಿ ಜೆಸಿಬಿ ತಂದು ಕಟ್ಟಡ ನೆಲಸಮ ಮಾಡಿದ್ದು ಆಘಾತ ತಂದಿದೆ. ಸ್ವಲ್ಪ ಕಾಲಾವಕಾಶ ಕೊಡಿ ಎಂದರೂ ಅಧಿಕಾರಿಗಳು ಕೇಳಲಿಲ್ಲ.
    ಸೋಮಪ್ಪ ಜಿದ್ದಿಮನಿ, ಕಟ್ಟಡದ ಮೂಲ ಮಾಲೀಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts