More

    ಪಾರ್ಕಿಂಗ್ ವಿಚಾರದಲ್ಲಿ ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ

    ಶಿವಮೊಗ್ಗ: ಬೈಕ್‌ಗಳ ಪಾರ್ಕಿಂಗ್ ವಿಚಾರದಲ್ಲಿ ಜ್ಯೂಸ್ ಅಂಗಡಿ ಮಾಲೀಕನ ಕೊಲೆ ಮಾಡಿದ್ದ ಯುವಕನಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
    ಶಿಕಾರಿಪುರ ತಾಲೂಕಿನ ಉಡುಗಣಿಯ ಜಾವಿದ್ ಬೇಗ್ (20) ಶಿಕ್ಷೆಗೆ ಗುರಿಯಾದವ. ಈತ 2019ರಲ್ಲಿ ಶಿರಾಳಕೊಪ್ಪದ ಸೈಯದ್ ಜಾಫರ್ ಮುಲ್ಲಾ (26)ಗೆ ಹೊಟ್ಟೆ ಮತ್ತು ಎದೆ ಭಾಗಕ್ಕೆ ಚಾಕು ಇರಿದು ಕೊಲೆ ಮಾಡಿದ್ದನು.
    ಸೈಯದ್ ಜಾಫರ್ ಮುಲ್ಲಾ ಶಿರಾಳಕೊಪ್ಪದ ಶ್ರೀ ಜಯಕರ್ನಾಟಕ ರೈಸ್‌ಮಿಲ್ ಎದುರು ಕಬ್ಬಿನ ಹಾಲಿನ ಜ್ಯೂಸ್ ಅಂಗಡಿ ಹಾಕಿಕೊಂಡಿದ್ದ. ಈ ಅಂಗಡಿಗೆ ಬರುವ ಗ್ರಾಹಕರು ಬೈಕ್‌ಗಳನ್ನು ಜಾವಿದ್ ಬೇಗ್‌ನ ಕುಷನ್ ಅಂಗಡಿ ಮುಂಭಾಗ ನಿಲ್ಲಿಸುತ್ತಿರುವುದ್ದರಿಂದ ಸರಿಯಾಗಿ ವ್ಯಾಪಾರ ಆಗುತ್ತಿರಲಿಲ್ಲ. ಅಂಗಡಿಯನ್ನು ಇಲ್ಲಿಂದ ತೆಗಿ ಎಂದು ಜಾವಿದ್ ಹಲವು ಬಾರಿ ಜಾಫರ್ ಜತೆ ಗಲಾಟೆ ಮಾಡಿದ್ದ. ಇದೇ ವಿಚಾರವಾಗಿ 2019ರ ನವೆಂಬರ್ 11ರಂದು ಸಂಜೆ ಜಾವಿದ್ ಮತ್ತು ಸೈಯದ್ ಜಾಫರ್ ನಡುವೆ ಮತ್ತೆ ಜಗಳ ನಡೆದಿತ್ತು. ಈ ವೇಳೆ ಜಾವಿದ್ ತನ್ನ ಬಳಿಯಿದ್ದ ಚಾಕುವಿನಿಂದ ಸೈಯದ್ ಜಾಫರ್ ಹೊಟ್ಟೆ, ಎದೆ ಮತ್ತು ಕುತ್ತಿಗೆಗೆ ಹಲ್ಲೆ ಮಾಡಿ ಕೊಲೆ ಮಾಡಿದ್ದನು.
    ಸೈಯದ್ ಜಾಫರ್ ಸಹೋದರ ನೀಡಿದ ದೂರಿನ ಮೇರೆಗೆ ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಾವಿದ್‌ನನ್ನು ಬಂಧಿಸಿದ್ದ ಶಿಕಾರಿಪುರದ ಅಂದಿನ ವೃತ್ತ ನಿರೀಕ್ಷಕ ಬಸವರಾಜ್ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಗುರುವಾರ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶ ಎಸ್.ಎ.ಮುಸ್ತಫಾ ಹುಸೇನ್ ಅವರು ಜಾವಿದ್‌ಗೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ಕಟ್ಟದಿದ್ದರೆ ಹೆಚ್ಚುವರಿಯಾಗಿ 6 ತಿಂಗಳು ಜೈಲು ಶಿಕ್ಷೆ ಹಾಗೂ ದಂಡದ ಮೊತ್ತದಲ್ಲಿ 45 ಸಾವಿರ ರೂ. ಅವಲಂಬಿತರಿಗೆ ಪರಿಹಾರವಾಗಿ ನೀಡಲು ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಸುರೇಶ್‌ಕುಮಾರ್ ವಾದ ಮಂಡಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts